
ಹೆಂಡ್ತಿ ರೊಟ್ಟಿ ಬಡಿಸುವುದಕ್ಕೆ ಲೇಟ್ ಮಾಡಿದ್ಲು ಅಂತ ಸಿಟ್ಟಿಗೆದ್ದ ಗಂಡನೋರ್ವ ರೊಟ್ಟಿ ಬೇಯಿಸುವ ತವಾದಲ್ಲೇ ಹೆಂಡ್ತಿ ಹಾಗೂ 4 ವರ್ಷದ ಮಗನ ತಲೆಗೆ ಹೊಡೆದಂತಹ ಆಘಾತಕಾರಿ ಘಟನೆ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದೆ. ಮಗನ ತಲೆಗೆ ತವಾದಿಂದ ಹೊಡೆದಿದ್ದರಿಂದ ಬಾಲಕನ ತಲೆಗೆ ಗಂಭೀರವಾದ ಗಾಯವಾಗಿದೆ ಎಂದು ವರದಿಯಾಗಿದೆ. ಉತ್ತರ ಪ್ರದೇಶದ ಗೋರಕ್‌ಪುರದಲ್ಲಿ ಈ ಘಟನೆ ನಡೆದಿದೆ.
ಗೋರಕ್‌ಪುರದ ಶಾಸ್ತ್ರಿನಗರ ಪ್ರದೇಶದಲ್ಲಿ ಡಿಸೆಂಬರ್ 20 ರಂದು ರಾತ್ರಿ ಈ ಘಟನೆ ನಡೆದಿದ್ದು, ಗೋರಕ್‌ಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ರೋಟಿ ನೀಡುವುದಕ್ಕೆ ಲೇಟ್ ಆಯ್ತು ಎಂದು ಗಂಡ ಹೆಂಡ್ತಿ ಮಧ್ಯೆ ಗಲಾಟೆ ನಡೆದಿದೆ. ಈ ವೇಳೆ ಸಿಟ್ಟಿಗೆದ್ದ ಗಂಡ ಹೆಂಡ್ತಿಗೆ ರೊಟ್ಟಿ ಬೇಯಿಸುತ್ತಿದ್ದ ತವಾದಲ್ಲೇ ಹೊಡೆದಿದ್ದಾನೆ. ಗಂಡ ತವಾದಿಂದಲೇ ತಲೆಗೆ ಹೊಡೆದಿದ್ದರಿಂದ ಹೆಂಡ್ತಿ ನೋವಿನಿಂದ ಜೋರಾಗಿ ಕಿರುಚಿಕೊಂಡಿದ್ದಾಳೆ. ಈ ವೇಳೆ ಅಮ್ಮನ ಕಿರುಚಾಟ ಕೇಳಿ 4 ವರ್ಷದ ಮಗ ಅಲ್ಲಿಗೆ ಓಡಿ ಬಂದಿದ್ದಾನೆ. ಈ ವೇಳೆ ಸಿಟ್ಟಿನಲ್ಲಿದ್ದ ಗಂಡ ಮಗನ ಮೇಲೆಯೂ ತವಾದಿಂದ ಹಲ್ಲೆ ಮಾಡಿದ್ದಾನೆ. ಘಟನೆಯ ಬಳಿಕ ಆತ ಪರಾರಿಯಾಗಿದ್ದು, ಆತನಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಈ ರಾಜ್ಯದ ಶೇ.70ರಷ್ಟು ಬಾಂಗ್ಲಾ ಅಕ್ರಮ ವಲಸಿಗರ ಬಳಿ ಇದೆ ವೋಟರ್ ಐಡಿ
ಘಟನೆಗೆ ಸಂಬಂಧಿಸಿದಂತೆ ಪತ್ನಿ 30 ವರ್ಷದ ರಾಧಿಕಾ ಸಹನಿ ಪೊಲೀಸರಿಗೆ ದೂರು ನೀಡಿದ್ದಾರೆ. ಲಾಲ್‌ಚಂದ್ ಸಹನಿ ಹಲ್ಲೆ ಮಾಡಿದ ವ್ಯಕ್ತಿ. ಈತ ಲಕ್ನೋದಲ್ಲಿ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಈತ ಆಗಾಗ ಮದ್ಯಪಾನ ಮಾಡಿ ಮನೆಗೆ ಬಂದು ಹೆಂಡ್ತಿ ಜೊತೆ ಗಲಾಟೆ ಮಾಡ್ತಿದ್ದ. ಅಂದು ಕೂಡ ಆತ ಕಂಠಪೂರ್ತಿ ಕುಡಿದು ಬಂದು ಜಗಳ ತೆಗೆದಿದ್ದು, ತವಾದಿಂದ ಹೆಂಡ್ತಿ ಮಗ ಇಬ್ಬರ ಮೇಲೂ ಹಲ್ಲೆ ಮಾಡಿದ್ದಾನೆ. ಘಟನೆ ನಡೆದಂದು ರಾತ್ರಿ 9 ಗಂಟೆಗೆ ಮನೆಗೆ ಬಂದ ಲಾಲ್‌ಚಂದ್ ಹೆಂಡ್ತಿ ರಾಧಿಕಾಗೆ ರೊಟ್ಟಿ ಮಾಡುವಂತೆ ಹೇಳಿದ್ದಾನೆ. ಈ ಸಮಯದಲ್ಲಿ ಆಕೆ ಮನೆಯ ಬೇರೆ ಕೆಲಸಗಳನ್ನು ಮಾಡುವಲ್ಲಿ ಬ್ಯುಸಿಯಾಗಿದ್ದು, ರೊಟ್ಟಿ ಸಿದ್ಧಪಡಿಸುವಲ್ಲಿ ವಿಳಂಬವಾಗಿದೆ. ಇದರಿಂದ ಸಿಟ್ಟಿಗೆದ್ದ ಲಾಲ್‌ಚಂದ್ ಹೆಂಡ್ತಿ ಮೇಲೆ ತವಾದಿಂದಲೇ ಹೊಡದಿದ್ದಾನೆ.
ಇದನ್ನೂ ಓದಿ: ಮಕ್ಕಳ ಹೆಂಡ್ತಿ ಕಸ್ಟಡಿಗೆ ಕೊಡ್ಬೇಕಾಗುತ್ತೆ ಅಂತ ಇಬ್ಬರು ಮುದ್ದು ಮಕ್ಕಳ ಕೊಂದು ಸಾವಿಗೆ ಶರಣಾದ ಪತಿ, ಆತನ ತಾಯಿ
ಕೋಪದಿಂದ ಅಡುಗೆ ಮನೆಗೆ ಹೋದ ಲಾಲ್‌ಚಂದ್ ಅಲ್ಲಿದ್ದ ತವಾವನ್ನು ತಂದು ತನಗೆ ಹಿಗ್ಗಾಮುಗ್ಗಾ ಥಳಿಸಿದ್ದಾನೆ. ಈ ವೇಳೆ ನನ್ನ ಕಿರುಚಾಟ ಕೇಳಿ ಅಲ್ಲಿಗೆ ಬಂದ 4 ವರ್ಷದ ಮಗನ ಮೇಲೂ ಆತ ಹಲ್ಲೆ ಮಾಡಿದ್ದಾನೆ. ಮಗನ ತಲೆಗೆ ತವಾದಿಂದ ಹೊಡೆದಿದ್ದರಿಂದ ಮಗುವಿಗೆ ಗಂಭೀರ ಗಾಯವಾಗಿದೆ ಎಂದು ಅವರು ಪೊಲೀಸರಿಗೆ ನೀಡಿದ ದೂರಿನಲ್ಲಿ ಹೇಳಿದ್ದಾರೆ. ಕೂಡಲೇ ಬಾಲಕನ್ನು ಸಮೀಪದ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಆತನಿಗೆ ಅಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ವರದಿಯಾಗಿದೆ. ಘಟನೆಯ ಬಳಿಕ ಆರೋಪಿ ರಾಧಿಕಾಳನ್ನು ಕೊಲೆ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾನೆ. ಆದರೆ ಪತ್ನಿ ದೂರು ನೀಡಿದ ನಂತರ ಆತ ಪರಾರಿಯಾಗಿದ್ದಾನೆ. ಆತನ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ