ಪಶ್ಚಿಮ ಬಂಗಾಳ ಪೊಲೀಸರ ವಿರುದ್ಧ ತೇಜಸ್ವಿ ಹಕ್ಕುಚ್ಯುತಿ| ಉತ್ತರ ಕೊರಿಯಾ ರೀತಿ ದೀದಿ ಆಳ್ವಿಕೆ: ಕಿಡಿ
ನವದೆಹಲಿ(ನ.10): ಅ.8ರಂದು ಪಶ್ಚಿಮ ಬಂಗಾಳದ ಕೋಲ್ಕತಾ ಹಾಗೂ ಹೌರಾದಲ್ಲಿ ಆಯೋಜಿಸಿದ್ದ ಪ್ರತಿಭಟನಾ ರಾರಯಲಿ ವೇಳೆ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆ ಎರಡೂ ನಗರಗಳ ಪೊಲೀಸ್ ಆಯುಕ್ತರು ಸೇರಿದಂತೆ ಬಂಗಾಳದ ಅಧಿಕಾರಿಗಳ ವಿರುದ್ಧ ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಹಾಗೂ ಬೆಂಗಳೂರು ದಕ್ಷಿಣ ಸಂಸದ ತೇಜಸ್ವಿ ಸೂರ್ಯ ಅವರು ಲೋಕಸಭೆಯ ಸ್ಪೀಕರ್ ಅವರಿಗೆ ಹಕ್ಕುಚ್ಯುತಿ ನೋಟಿಸ್ ನೀಡಿದ್ದಾರೆ.
ಬಿಜೆಪಿಯ ಪ್ರತಿಭಟನೆ ವೇಳೆ ತೃಣಮೂಲ ಕಾಂಗ್ರೆಸ್‌ನ ಗೂಂಡಾಗಳು ಮಹಡಿಗಳ ಮೇಲೆ ನಿಂತು ಬಾಂಬ್ ಎಸೆದಿದ್ದರು. ಬಿಜೆಪಿ ಕಾರ್ಯಕರ್ತರ ಮೇಲೆ ರಾಸಾಯನಿಕ ಮಿಶ್ರಿತ ನೀರು ಸಿಂಪಡಣೆ ಮಾಡಲಾಗಿತ್ತು. ತೃಣಮೂಲ ಕಾಂಗ್ರೆಸ್ ಅಧ್ಯಕ್ಷೆಯ ಪಶ್ಚಿಮ ಬಂಗಾಳದಲ್ಲಿನ ಫ್ಯಾಸಿಸ್ಟ್ ಸರ್ಕಾರ ಭಯೋತ್ಪಾದಕರಂತಿದೆ ಎಂದು ಬಿಜೆಪಿ ಕೇಂದ್ರ ಕಚೇರಿಯಲ್ಲಿ ಸೂರ್ಯ ಹರಿಹಾಯ್ದರು.
undefined
ಪಶ್ಚಿಮ ಬಂಗಾಳದ ಮಮತಾ ಅವರ ಆಡಳಿತ ಉತ್ತರ ಕೊರಿಯಾದ ಸರ್ವಾಧಿಕಾರಿ ಆಳ್ವಿಕೆಯಂತೆಯೇ ಇದೆ. ಪಶ್ಚಿಮ ಬಂಗಾಳದ ಪೊಲೀಸ್ ಠಾಣೆಗಳು ತೃಣಮೂಲ ಕಾಂಗ್ರೆಸ್ಸಿನ ಶಾಖಾ ಕಚೇರಿಗಳಂತೆ ಕಾರ್ಯನಿರ್ವಹಿಸುತ್ತಿವೆ. ಅಧಿಕಾರಿಗಳು ತೃಣಮೂಲ ಸರ್ಕಾರದ ತುತ್ತೂರಿಗಳಾಗಿದ್ದಾರೆ ಎಂದು ಕಿಡಿಕಾರಿದರು.
ಅ.8ರಂದು ಯುವ ಮೋರ್ಚಾ ನಡೆಸಿದ ಪ್ರತಿಭಟನೆ ವೇಳೆ ಪೊಲೀಸರು ಹಾಗೂ ಬಿಜೆಪಿ ಕಾರ್ಯಕರ್ತರ ನಡುವೆ ಘರ್ಷಣೆ ಉಂಟಾಗಿತ್ತು. ಪೊಲೀಸರ ಲಾಠಿ ಪ್ರಹಾರ ಖಂಡಿಸಿ ಬಿಜೆಪಿ ಕಾರ್ಯಕರ್ತರು ಕಲ್ಲು ತೂರಾಟ ನಡೆಸಿ, ರಸ್ತೆಯಲ್ಲಿ ಟೈರ್‌ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಿದ್ದರು.