
ಆಸ್ಪತ್ರೆಯ ಬೆಡ್ ಮೇಲಿದ್ದಾಗಲೂ ಲ್ಯಾಪ್‌ಟಾಪ್ ತೆರೆದು ಕೆಲಸ ಮಾಡುವುದು, ಹಬ್ಬ-ಹರಿದಿನಗಳು, ವಾರಾಂತ್ಯ ಹಾಗೂ ಕುಟುಂಬದ ಸಂಭ್ರಮಗಳನ್ನು ಬಲಿ ಕೊಟ್ಟು ಕಂಪನಿಗೆ ನಿಷ್ಠೆಯಿಂದಿರುವುದು. ಇಷ್ಟೆಲ್ಲಾ ತ್ಯಾಗ ಮಾಡಿದ ಮೇಲೆಯೂ ಕಾರ್ಪೊರೇಟ್ ಕಂಪನಿಯೊಂದು ಉದ್ಯೋಗಿಗೆ ನೀಡಿದ 'ಆಫರ್' ಏನು ಗೊತ್ತೇ? ಯಾವುದೇ ಮುನ್ಸೂಚನೆಯೂ ಇಲ್ಲದೆ ಒಂದೇ ಕ್ಷಣದಲ್ಲಿ ಲಾಗಿನ್ ಸೌಲಭ್ಯ ರದ್ದುಗೊಳಿಸಿ ಕೆಲಸದಿಂದ ವಜಾಗೊಳಿಸಿರುವುದು.
ಸಾಫ್ಟ್‌ವೇರ್ ದೈತ್ಯ ಸಂಸ್ಥೆ ‘ಒರಾಕಲ್’ನಲ್ಲಿ 12 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದ ಸೌರಭ್ ಎಂಬ ಉದ್ಯೋಗಿ ಹಠಾತ್ತನೆ ಕೆಲಸ ಕಳೆದುಕೊಂಡಿದ್ದು, ಅವರ ಪತ್ನಿ ಪೂಜಾ ಸಾಹು ಲಿಂಕ್ಡ್‌ಇನ್‌ನಲ್ಲಿ ಬರೆದುಕೊಂಡಿರುವ ಭಾವನಾತ್ಮಕ ವೈರಲ್ ಪೋಸ್ಟ್ ಈಗ ಕಾರ್ಪೊರೇಟ್ ಜಗತ್ತಿನ ಕರಾಳ ಸತ್ಯವನ್ನು ಜಗಜ್ಜಾಹೀರು ಮಾಡಿದೆ.
"ನನ್ನ ಪತಿ ಸೌರಭ್ ಇಂದು ಕೆಲಸ ಕಳೆದುಕೊಂಡಿದ್ದಾರೆ" ಎಂದು ಬರೆದುಕೊಂಡಿರುವ ಪೂಜಾ, ಕಂಪನಿಯು ಸೌರಭ್ ಅವರಿಗೆ ಕನಿಷ್ಠ ಔಪಚಾರಿಕ ಸಂಭಾಷಣೆ ನಡೆಸುವ ಸೌಜನ್ಯವನ್ನೂ ತೋರಲಿಲ್ಲ ಎಂದು ಆಕ್ರೋಶ ಹೊರಹಾಕಿದ್ದಾರೆ. ಬೆಳಿಗ್ಗೆ ಕೆಲಸಕ್ಕೆ ಲಾಗಿನ್ ಆಗಲು ಸಾಧ್ಯವಾಗದಿದ್ದಾಗಷ್ಟೇ ಸೌರಭ್ ತಮ್ಮನ್ನು ಕೆಲಸದಿಂದ ತೆಗೆದು ಹಾಕಲಾಗಿದೆ ಎಂಬ ಘೋರ ಸತ್ಯವನ್ನು ಅರಿತುಕೊಂಡರು. ಸುಮಾರು 2 ದಶಕಗಳ ಐಟಿ ಅನುಭವ ಹೊಂದಿರುವ ಸೌರಭ್, ಒರಾಕಲ್‌ನಲ್ಲಿ 'ಅತ್ಯುತ್ತಮ ಉದ್ಯೋಗಿ' ಪ್ರಶಸ್ತಿಯನ್ನೂ ಪಡೆದಿದ್ದರು.
ಸೌರಭ್ ತಮ್ಮ ವೃತ್ತಿಜೀವನಕ್ಕೆ ನೀಡಿದ್ದ ಅತಿಯಾದ ಆದ್ಯತೆಯನ್ನು ಪೂಜಾ ಹೇಳಿಕೊಂಡಿದ್ದಾರೆ. ಪೂಜಾ ಶಸ್ತ್ರಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿದ್ದಾಗಲೂ ಸೌರಭ್ ಆಸ್ಪತ್ರೆಯ ಬೆಡ್ ಪಕ್ಕದಲ್ಲೇ ಕುಳಿತು ಕಂಪನಿಯ ಕೆಲಸ ಮಾಡುತ್ತಿದ್ದರು. ನ್ಯೂ ಮೆಕ್ಸಿಕೋದಲ್ಲಿ ರಜೆಯಲ್ಲಿದ್ದಾಗ ಪೂಜಾ ಡ್ರೈವಿಂಗ್ ಚಲಾಯಿಸುತ್ತಿದ್ದರೆ, ಸೌರಭ್ ಅಧಿಕೃತ ಕಂಪೆನ ಕರೆಗಳಲ್ಲೇ ಬ್ಯುಸಿಯಾಗಿದ್ದರು.
ಹೋಳಿ, ದೀಪಾವಳಿ, ರಕ್ಷಾಬಂಧನ, ಹುಟ್ಟುಹಬ್ಬ ಹಾಗೂ ವಾರ್ಷಿಕೋತ್ಸವಗಳ ದಿನಗಳಲ್ಲೂ ಅವರು ಕೆಲಸ ನಿಲ್ಲಿಸಿರಲಿಲ್ಲ. ಕೆಲವೊಮ್ಮೆ ಬೆಳಗಿನ ಜಾವ 3 ಗಂಟೆಯವರೆಗೆ ಕೆಲಸ ಮಾಡಿ ಅನಾರೋಗ್ಯಕ್ಕೂ ಒಳಗಾಗಿದ್ದರು. ಇಷ್ಟೆಲ್ಲಾ ಒತ್ತಡವಿದ್ದರೂ ಸೌರಭ್ ಎಂದೂ ದೂರು ಹೇಳದೆ ನಗುಮುಖದಿಂದಲೇ ಎಲ್ಲರಿಗೂ ನೆರವಾಗುತ್ತಿದ್ದರು. ಪೂಜಾ ಅವರು ತಮ್ಮ ಪತಿಗೆ ಸೂಕ್ತವಾದ ಹೊಸ ಉದ್ಯೋಗಾವಕಾಶವನ್ನು ಕಲ್ಪಿಸಿಕೊಡುವಂತೆ ತಮ್ಮ ನೆಟ್‌ವರ್ಕ್‌ನಲ್ಲಿ ವಿನಂತಿಸಿಕೊಂಡಿದ್ದಾರೆ.
ಈ ಪೋಸ್ಟ್ ಲಿಂಕ್ಡ್‌ಇನ್‌ನಲ್ಲಿ ಹಂಚಿಕೊಳ್ಳುತ್ತಿದ್ದಂತೆ ಸಾವಿರಾರು ಐಟಿ ಉದ್ಯೋಗಿಗಳು ಮತ್ತು ನೆಟ್ಟಿಗರು ಕಮೆಂಟ್ ಮಾಡುವ ಮೂಲಕ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಂಸ್ಥೆಗಳು ಬ್ಯಾಲೆನ್ಸ್ ಶೀಟ್ ಬಗ್ಗೆ ಯೋಚಿಸುತ್ತವೆಯೇ ಹೊರತು, ಅದರ ಹಿಂದಿರುವ ಮಾನವ ಸಂಪನ್ಮೂಲದ ಬಗ್ಗೆ ಅಲ್ಲ. ನೀವು ಎಷ್ಟೇ ರಕ್ತ-ಬೆವರು ಹರಿಸಿದರೂ ಕಂಪನಿಗೆ ಅಗತ್ಯವಿಲ್ಲ ಎಂದಾಗ ನಾವು ಕೇವಲ ಹರಿದು ಬಿಸಾಡುವ ಕಾಗದದ ಚೂರು! ಎಂದು ಒಬ್ಬರು ಕಮೆಂಟ್ ಮಾಡಿದ್ದಾರೆ.
ಉದ್ಯೋಗಿಗಳನ್ನು 'ಕುಟುಂಬದ ಸದಸ್ಯರು' ಎಂದು ಕರೆಯುವುದು ಕೇವಲ ನಾಟಕ. ಕಂಪನಿಗಳಿಗೆ ಅವರ ಬಿಸಿನೆಸ್ ಮುಖ್ಯವೇ ಹೊರತು ನಿಮ್ಮ 12 ವರ್ಷಗಳ ನಿಷ್ಠೆಯಲ್ಲ ಎಂದು ಮತ್ತೊಬ್ಬರು ಕಟುವಾಗಿ ಬರೆದಿದ್ದಾರೆ.
ಸೌರಭ್ ಜೊತೆ ಹಿಂದೆ ಕೆಲಸ ಮಾಡಿದ್ದ ವ್ಯಕ್ತಿಯೊಬ್ಬರು, ಸೌರಭ್ ಕಷ್ಟಕರವಾದ RICS ಹಾಗೂ ಇಂಟಿಗ್ರೇಶನ್ ಸಮಸ್ಯೆಗಳನ್ನು ಪರಿಹರಿಸುವಲ್ಲಿ ನಿಪುಣರು. ಅವರಂತಹ ಸಮರ್ಥ ಉದ್ಯೋಗಿಯನ್ನು ಪಡೆಯುವುದು ಯಾವುದೇ ಕಂಪನಿಗೆ ಹೆಮ್ಮೆ ಎಂದು ಬೆಂಬಲಿಸಿದ್ದಾರೆ.
ಉದ್ಯೋಗ ಎಂಬುದು ನಿಮ್ಮ ಜೀವನದ ಒಂದು ಭಾಗವಷ್ಟೇ, ಅದನ್ನೇ ಇಡೀ ಜೀವನ ಮಾಡಿಕೊಳ್ಳಬೇಡಿ ಎಂಬ ಸಂದೇಶವನ್ನು ಈ ಘಟನೆ ಮತ್ತೊಮ್ಮೆ ಜಗತ್ತಿಗೆ ಸಾರಿದೆ. ಉದ್ಯೋಗಕ್ಕಾಗಿ ಆರೋಗ್ಯ, ಹಬ್ಬ-ಹರಿದಿನ ಮತ್ತು ಕೌಟುಂಬಿಕ ಕ್ಷಣಗಳನ್ನು ತ್ಯಾಗ ಮಾಡುವ ಪ್ರವೃತ್ತಿಗೆ ಐಟಿ ವಲಯ ಈಗಲಾದರೂ ಬ್ರೇಕ್ ಹಾಕಬೇಕಿದೆ ಎಂಬ ಚರ್ಚೆ ಬಿಸಿಯಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ