
ಅಂಕಪಲ್ಲಿ (ಡಿ.29) ಹೊಸ ವರ್ಷದ ರಜೆ ಹಿನ್ನಲೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಪ್ರಯಾಣ ಮಾಡುತ್ತಿದ್ದಾರೆ. ಹೊಸ ವರ್ಷವನ್ನು ಬರಮಾಡಿಕೊಳ್ಳುವ ಮೊದಲೇ ಇದೀಗ ರೈಲಿನಲ್ಲಿ ಬೆಂಕಿ ಕಾಣಿಸಿಕೊಂಡ ಘಟನೆ ನಡೆದಿದೆ. ವೇಗವಾಗಿ ಸಾಗುತ್ತಿದ್ದ ಟಾಟಾ ನಗರ ಎರ್ನಾಕುಲಂ ಎಕ್ಸ್‌ಪ್ರೆಸ್ ರೈಲಿನ ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡು ದುರಂತ ಆಂಧ್ರ ಪ್ರದೇಶದ ಅಂಕಪಲ್ಲಿ ಜಿಲ್ಲೆಯ ದುವ್ವಾಡದಲ್ಲಿ ನಡೆದಿದೆ. ಘಟನೆಯಲ್ಲಿ ಓರ್ವ ಪ್ರಯಾಣಿಕ ಮೃತಪಟ್ಟಿರುವುದಾಗಿ ವರದಿಯಾಗಿದೆ. ಬೆಂಕಿ ಮಾಹಿತಿ ಸಿಗುತ್ತಿದ್ದಂತೆ ಲೋಕೋ ಪೈಲೆಟ್ ತಕ್ಷಣವೇ ರೈಲು ನಿಲ್ಲಿಸಿ ಪ್ರಯಾಣಿಕರು ರೈಲಿನಿಂದ ಸುರಕ್ಷಿತವಾಗಿ ಹೊರಗಿಳಿಯಲು ಅವಕಾಶ ಮಾಡಿದ್ದಾರೆ. ಹೀಗಾಗಿ ಸಾವು ನೋವಿನ ಪ್ರಮಾಣ ಕಡಿಮೆಯಾಗಿದೆ.
18189 ರೈಲು ಸಂಖ್ಯೆಯ ಟಾಟಾ ನಗರ ಎರ್ನಾಕುಲಂ ರೈಲು ಟಾಟಾ ನಗರದಿಂದ ವಿಶಾಖಪಟ್ಟಣಂ ಮಾರ್ಗವಾಗಿ ಸಂಚಾರ ಆರಂಭಿಸಿತ್ತು. ದುವ್ವಾಡ ಸಮೀಪ ರೈಲು ಬರುತ್ತಿದ್ದಂತೆ ರೈಲಿನ ಬಿ1, ಎಂ2 ಎಸಿ ಕೋಚ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಬೆಂಕಿ ಹಾಗೂ ದಟ್ಟ ಹೊಗೆಯಿಂದ ಪ್ರಾಯಣಿಕರು ಪರದಾಡಿದ್ದಾರೆ. ಇದೇ ವೇಳೆ ಲೋಕೋ ಪೈಲೈಟ್ ರೈಲಿನ ಬೋಗಿಗಳಲ್ಲಿ ಬೆಂಕಿ ಕಾಣಿಸಿಕೊಂಡಿರುವುದು ಗಮನಿಸಿದ್ದಾರೆ. ಹೀಗಾಗಿ ತಕ್ಷಣವೇ ರೈಲು ನಿಲ್ಲಿಸಲಾಗಿದೆ. ರೈಲು ನಿಲ್ಲುತ್ತಿದ್ದಂತೆ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಇತ್ತ ಬಿ1 ಎಸಿ ಕೋಚ್‌ನಲ್ಲಿ ಪ್ರಯಾಣಿಸುತ್ತಿದ್ದ 70 ವರ್ಷದ ಪ್ರಯಾಣಿಕ ಚಂದ್ರಶೇಖರ್ ಸುಂದರ್ ಬೆಂಕಿ ಸುಟ್ಟ ಗಾಯಗಳಿಂದ ಮೃತಪಟ್ಟಿದ್ದಾರೆ. ಹಿರಿಯ ಪ್ರಯಾಣಿಕ ಚಂದ್ರಶೇಖರ್ ಸುಂದರ್‌ಗೆ ತಕ್ಷಣೇ ಬೆಂಕಿಯಿಂದ ರಕ್ಷಣೆ ಪಡೆಯಲು ಸಾಧ್ಯವಾಗಲಿಲ್ಲ. ಪ್ರಾಣ ಉಳಿಸಿಕೊಳ್ಳಲು ಎದ್ದು ಬೇರೆ ಬೋಗಿಗೆ ತೆರಳಲು ಸಾಧ್ಯವಾಗದೆ ಬೆಂಕಿಯ ಕೆನ್ನಾಲಗಗೆ ಸಿಲುಕಿ ಮೃತಪಟ್ಟಿದ್ದಾರೆ.
ರೈಲು ನಿಲ್ಲಿಸುತ್ತಿದ್ದಂತೆ ಪ್ರಯಾಣಿಕರು ರೈಲಿನಿಂದ ಇಳಿದಿದ್ದಾರೆ. ಹಲವರು ಹೆಣ್ಣು ಮಕ್ಕಳು, ಮಹಿಳೆಯರನ್ನು ಸುರಕ್ಷಿತವಾಗಿ ರೈಲಿನಿಂದ ಇಳಿಸಿದ್ದಾರೆ. ಇತ್ತ ಬಿ1 ಹಾಗೂ ಎಂ2 ರೈಲಿನ ಬೋಗಿಗಳಲ್ಲಿ ಬೆಂಕಿ ತೀವ್ರಗೊಂಡಿತ್ತು. ಇದರಲ್ಲಿ ಚಂದ್ರಶೇಖರ್ ಸಿಲುಕಿ ಮೃತಪಟ್ಟಿದ್ದಾರೆ. ಕೆಲವೇ ನಿಮಿಷದಲ್ಲಿ ಬೆಂಕಿ ಆವರಿಸಿಕೊಂಡಿದೆ. ಎರಡುು ಬೋಗಿಗಳು ಹೊತ್ತಿ ಉರಿದಿದೆ. ಅಗ್ನಿಶಾಮಕ ದಳ ಸ್ಥಳಕ್ಕೆ ಆಗಮಿಸುವಾಗ ಎರಡು ಬೋಗಿಗಳು ಹೊತ್ತಿ ಉರಿದು ಇತರ ಬೋಗಿಗಳು ಬೆಂಕಿ ವ್ಯಾಪಿಸಿಕೊಂಡಿತ್ತು. ಇತ್ತ ಅಗ್ನಿಶಾಮಕ ದಳ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದೆ. ನಾಲ್ಕು ಅಗ್ನಿಶಾಮಕ ದಳ ರೈಲು ಬೆಂಕಿ ನಂದಿಸಲು ಸ್ಥಳಕ್ಕೆ ಧಾವಿಸಿತ್ತು.
ಎರಡು ಬೋಗಿಗಳು ಸಂಪೂರ್ಣ ಹೊತ್ತಿ ಉರಿದಿತ್ತು. ಈ ಘಟನೆಯಿಂದ ವಿಶಾಖಪಟ್ಟಂ ವಿಜಯವಾಡ ಮಾರ್ಗದ ರೈಲು ಸಂಚಾರ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿತ್ತು. ಇತ್ತ ರೈಲಿನಿಂದ ಇಳಿದ ಎಲ್ಲಾ ಪ್ರಯಾಣಿಕರು ಸಣ್ಣ ರೈಲು ನಿಲ್ದಾಣದಲ್ಲೇ 3 ಗಂಟೆವರೆಗೆ ಕಾಯಬೇಕಾಯಿತು. ತೀವ್ರ ಚಳಿಯಿಂದ ಹಲವು ಪ್ರಯಾಣಿಕರು ಅಸ್ವಸ್ಥಗೊಂಡಿದ್ದರು. ಮಧ್ಯ ರಾತ್ರಿ 1.30 ಸುಮಾರಿಗೆ ಈ ಘಟನೆ ನಡೆದಿತ್ತು. ಈ ರಾತ್ರಿ ಹಲವು ಪ್ರಯಾಣಿಕರು ಚಳಿಯಲ್ಲೇ ನಿಲ್ದಾಣದಲ್ಲಿ ಕಾಯಬೇಕಾದ ಪರಿಸ್ಥಿತಿ ಎದುರಾಗಿತ್ತು. ರೈಲ್ವೇ ಅಧಿಕಾರಿಗಳು ಸ್ಥಳಕ್ಕೆ ಆ್ಯಂಬುಲೆನ್ಸ್ ನಿಯೋಜನೆ ಮಾಡಿದ್ದರು. ತೀವ್ರ ಚಳಿಯಿಂದ ಆರೋಗ್ಯ ಸಮಸ್ಯೆ ಎದುರಾದರೆ ತುರ್ತು ನೆರವಿಗೆ ಆ್ಯಂಬುಲೆನ್ಸ್ ವ್ಯವಸ್ಥೆ ಮಾಡಲಾಗಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ