
ನವದೆಹಲಿ (ಜ.4): ಬಾಂಗ್ಲಾದೇಶದಲ್ಲಿ ಮುಂದಿನ ಕೆಲವು ದಿನಗಳಲ್ಲಿ ಚುನಾವಣೆಗಳು ನಡೆಯಲಿವೆ. ಶೇಖ್ ಹಸೀನಾ ಅವರ ಪಕ್ಷವಾದ ಅವಾಮಿ ಲೀಗ್ ಈ ಚುನಾವಣೆಗಳಲ್ಲಿ ಭಾಗವಹಿಸುತ್ತಿಲ್ಲ. ಬಾಂಗ್ಲಾದೇಶ ರಾಷ್ಟ್ರೀಯತಾವಾದಿ ಪಕ್ಷದ (ಬಿಎನ್‌ಪಿ) ಮುಖ್ಯಸ್ಥೆ ಖಲೀದಾ ಜಿಯಾ ನಿಧನರಾಗಿದ್ದಾರೆ ಮತ್ತು ಅವರ ಮಗ ತಾರಿಕ್ ರೆಹಮಾನ್ ಪ್ರಧಾನಿ ಹುದ್ದೆಗೆ ಪ್ರಬಲ ಸ್ಪರ್ಧಿಯಾಗಿದ್ದಾರೆ. ಈ ನಡುವೆ ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ಇತರ ಅಲ್ಪಸಂಖ್ಯಾತರ ಮೇಲಿನ ಹಿಂಸಾಚಾರ ಕಡಿಮೆಯಾಗುವ ಲಕ್ಷಣಗಳು ಕಾಣುತ್ತಿಲ್ಲ. ಹಿಂದೂಗಳನ್ನು ಥಳಿಸಿ ಅವರ ಮನೆಗಳನ್ನು ಸುಟ್ಟುಹಾಕಿದ ವರದಿಗಳಿಲ್ಲದೆ ಒಂದು ದಿನವೂ ಕಳೆದಿಲ್ಲ. ಈ ವಿಚಾರವಾಗಿ ಬಾಂಗ್ಲಾದೇಶದಿಂದ ಹೊರಹಾಕಲ್ಪಟ್ಟ ಬರಹಗಾರ್ತಿ ತಸ್ಲಿಮಾ ನಸ್ರೀನ್ ಮಹತ್ವದ ಹೇಳಿಕೆ ನೀಡಿದ್ದಾರೆ.
ಬಾಂಗ್ಲಾದೇಶದಲ್ಲಿ ಎರಡು ರೀತಿಯ ಜಿಹಾದಿಗಳಿದ್ದಾರೆ ಎಂದು ವಿಶ್ಲೇಷಿಸಿರುವ ತಸ್ಲೀಮಾ, ಒಬ್ಬ ಗಡ್ಡ ಬಿಟ್ಟು, ಸ್ಕಲ್ ಕ್ಯಾಪ್ ಧರಿಸಿ ಮದರಸಾದಲ್ಲಿ ಶಿಕ್ಷಣ ಪಡೆದ ಜಿಹಾದಿಯಾದರೆ, ಇನ್ನೊಬ್ಬ ಕೋಟ್-ಪ್ಯಾಂಟ್ ಧರಿಸಿ ವಿಶ್ವವಿದ್ಯಾಲಯದಲ್ಲಿ ಪದವಿ ಪಡೆದ ಪಾಶ್ಚಿಮಾತ್ಯ ಉಡುಪಿನ ಜಿಹಾದಿ. ರೂಪದಲ್ಲಿ ವ್ಯತ್ಯಾಸವಿದ್ದರೂ ಇಬ್ಬರ ಉದ್ದೇಶ ಮತ್ತು ಕನಸು ಮಾತ್ರ ಒಂದೇ ಆಗಿದೆ ಎಂದು ಪೋಸ್ಟ್ ಮಾಡಿದ್ದಾರೆ.
ಈ ಎರಡೂ ವರ್ಗದ ಜಿಹಾದಿಗಳ ಅಂತಿಮ ಗುರಿ ಭಾರತದ ವಿರುದ್ಧ ದ್ವೇಷ ಹರಡುವುದಾಗಿದೆ ಎಂದು ನಸ್ರೀನ್ ಆರೋಪಿಸಿದ್ದಾರೆ. ಭಾರತದ ವಿರುದ್ಧ ಯುದ್ಧ ಮಾಡುವುದು ಮತ್ತು ಅಂತಿಮವಾಗಿ ಬಾಂಗ್ಲಾದೇಶವನ್ನು ಪಾಕಿಸ್ತಾನದೊಂದಿಗೆ ವಿಲೀನಗೊಳಿಸುವುದು ಇವರ ಮುಖ್ಯ ಕನಸಾಗಿದೆ. ದೇಶದಲ್ಲಿ ಹಿಂದೂಗಳ ಮನೆ ಸುಡುವುದು ಮತ್ತು ಅವರ ಮೇಲಿನ ಹಲ್ಲೆಗಳು ನಿಲ್ಲುತ್ತಿಲ್ಲ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ.
ಸಾಂಸ್ಕೃತಿಕ ಸಂಬಂಧ ನಾಶವಾದರೆ ಜಿಹಾದಿಗಳದ್ದೇ ರಾಜ್ಯ
ಬಾಂಗ್ಲಾದೇಶದಲ್ಲಿ ಇಂದಿಗೂ ಅನೇಕರು ಪ್ರಗತಿಪರ ಮತ್ತು ಜಾತ್ಯತೀತ ಚಿಂತನೆಗಳನ್ನು ಹೊಂದಿದ್ದಾರೆ ಎಂದು ನೆನಪಿಸಿದ ಅವರು, ಶೇ.100 ರಷ್ಟು ಜನ ಇನ್ನೂ ಜಿಹಾದಿಗಳಾಗಿಲ್ಲ. ದೇಶವನ್ನು ನಾಗರಿಕ ರಾಷ್ಟ್ರವಾಗಿ ಕಟ್ಟಲು ಈಗಲೂ ಅವಕಾಶವಿದೆ. ಆದರೆ, ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಸಾಂಸ್ಕೃತಿಕ ಸಂಬಂಧಗಳು ಕಡಿದುಹೋದರೆ, ಜಿಹಾದಿ ಶಕ್ತಿಗಳು ಮತ್ತಷ್ಟು ಬಲಗೊಳ್ಳುತ್ತವೆ ಎಂದು ಎಚ್ಚರಿಸಿದ್ದಾರೆ.
ಸಿನಿಮಾ, ಕ್ರಿಕೆಟ್ ನಿಲ್ಲಿಸುವುದು ಬಾಂಗ್ಲಾಕ್ಕೇ ನಷ್ಟ
ದ್ವೇಷಕ್ಕೆ ದ್ವೇಷವೇ ಮದ್ದಲ್ಲ ಎಂದು ಪ್ರತಿಪಾದಿಸಿರುವ ತಸ್ಲೀಮಾ, ಭಾರತದೊಂದಿಗೆ ಕ್ರಿಕೆಟ್, ಸಿನಿಮಾ, ಸಂಗೀತ ಮತ್ತು ಪುಸ್ತಕ ಮೇಳಗಳಂತಹ ಸಾಂಸ್ಕೃತಿಕ ವಿನಿಮಯಗಳು ಮುಂದುವರಿಯಬೇಕು ಎಂದಿದ್ದಾರೆ. ಈ ಸಂಬಂಧಗಳನ್ನು ನಿಲ್ಲಿಸುವುದರಿಂದ ಭಾರತಕ್ಕೆ ಹೆಚ್ಚಿನ ನಷ್ಟವಿಲ್ಲ, ಆದರೆ ಬಾಂಗ್ಲಾದೇಶವು ಸಂಪೂರ್ಣವಾಗಿ ನಾಶವಾಗುತ್ತದೆ ಮತ್ತು ಜಾಗತಿಕವಾಗಿ ಒಂಟಿಯಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ರಾಜಕೀಯ ಸಂಕಷ್ಟದಲ್ಲಿ ಬಾಂಗ್ಲಾದೇಶ
ಶೇಖ್ ಹಸೀನಾ ಅವರ ಅವಾಮಿ ಲೀಗ್ ಚುನಾವಣೆಯಿಂದ ಹೊರಗುಳಿದಿರುವುದು ಮತ್ತು ಖಲೀದಾ ಜಿಯಾ ಅವರ ನಿಧನದ ನಂತರ ತಾರಿಕ್ ರೆಹಮಾನ್ ಪ್ರಧಾನಿ ರೇಸ್‌ನಲ್ಲಿರುವುದು ಬಾಂಗ್ಲಾದೇಶದ ಭವಿಷ್ಯದ ಬಗ್ಗೆ ಅನಿಶ್ಚಿತತೆಯನ್ನು ಮೂಡಿಸಿದೆ. ಈ ನಡುವೆ ಅಲ್ಪಸಂಖ್ಯಾತರ ರಕ್ಷಣೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ