ಕಾವೇರಿ ನೀರಿಗಾಗಿ ಮತ್ತೆ ಕ್ಯಾತೆ, 113 ಪುಟಗಳ ಅರ್ಜಿ ಹಿಡಿದು ಸುಪ್ರೀಂ ಕದ ತಟ್ಟಿದ ತಮಿಳುನಾಡು!

By Gowthami K  |  First Published Aug 15, 2023, 10:25 AM IST

ಕಾವೇರಿ ನೀರಿಗಾಗಿ ತಮಿಳುನಾಡು ರಾಜ್ಯ ಮತ್ತೆ ಕ್ಯಾತೆ ತೆಗೆದಿದೆ. 113 ಪುಟಗಳ ಅರ್ಜಿ ಹಿಡಿದು ಸುಪ್ರೀಂಕೋರ್ಚ್‌ ಕದ ಮತ್ತೆ ತಟ್ಟಿದೆ.


ನವದೆಹಲಿ (ಆ.15): ಕಾವೇರಿ ನೀರಿಗಾಗಿ ತಮಿಳುನಾಡು ರಾಜ್ಯ ಮತ್ತೆ ಕ್ಯಾತೆ ತೆಗೆದಿದೆ. 113 ಪುಟಗಳ ಅರ್ಜಿ ಹಿಡಿದು ಸುಪ್ರೀಂಕೋರ್ಟ್‌ ಕದ ಮತ್ತೆ ತಟ್ಟಿದೆ. ಸೋಮವಾರ ಅರ್ಜಿ ಸಲ್ಲಿಸಿರುವ ತಮಿಳುನಾಡು ಸರ್ಕಾರ, ಸುಪ್ರೀಂಕೋರ್ಟ್‌ ತೀರ್ಪಿನ ಪ್ರಕಾರ ನೀರು ಬಿಡುವಂತೆ ಕರ್ನಾಟಕ ಸರ್ಕಾರಕ್ಕೆ ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದೆ.

ಕಾವೇರಿ ನದಿ ನೀರಿನ ಸಮಸ್ಯೆಗೆ ಸಂಬಂಧಿಸಿ ತಮಿಳುನಾಡು ಮುಖ್ಯಮಂತ್ರಿಗಳು ಪ್ರಧಾನಿಗೆ ಬರೆದ ಪತ್ರ ಸೇರಿ ಎಲ್ಲ ವಿವರಗಳನ್ನು ತಮಿಳುನಾಡು ಸರ್ಕಾರ ತನ್ನ ಅರ್ಜಿಯಲ್ಲಿ ಉಲ್ಲೇಖಿಸಿದೆ. ಜೂನ್‌ ಮತ್ತು ಜುಲೈ ತಿಂಗಳಲ್ಲಿ ಒಟ್ಟು 40.43 ಟಿಎಂಸಿ ನೀರು ಬಿಡುಗಡೆ ಮಾಡಲು ನ್ಯಾಯಾಧಿಕರಣದ ಐತೀರ್ಪಿನಲ್ಲಿ ಹೇಳಿದ್ದರೂ ಕರ್ನಾಟಕ ನೀರು ಬಿಟ್ಟಿಲ್ಲ. ಈವರೆಗೆ ಕೊರತೆಯಾಗಿರುವ 28.8 ಟಿಎಂಸಿ ನೀರನ್ನು ಕರ್ನಾಟಕ ಸರ್ಕಾರ ಕೂಡಲೇ ಬಿಡುಗಡೆ ಮಾಡಲು ಸೂಚಿಸಬೇಕು ಎಂದು ಅರ್ಜಿಯಲ್ಲಿ ಮನವಿ ಮಾಡಿದೆ. ಅಲ್ಲದೆ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರವನ್ನು ಇದರಲ್ಲಿ ಪ್ರತಿವಾದಿಯಾಗಿಸಬೇಕು ಎಂದು ಅರ್ಜಿಯಲ್ಲಿ ತಮಿಳುನಾಡು ಮನವಿ ಮಾಡಿದೆ.

Latest Videos

undefined

ಕಾವೇರಿ ನೀರಿಗಾಗಿ ತಮಿಳುನಾಡು ಕ್ಯಾತೆ: ರಾಜ್ಯದ ರೈತರ ಹಿತ ಕಾಯುವಂತೆ ಸಿಎಂಗೆ ಬೊಮ್ಮಾಯಿ ಪತ್ರ

ತಮಿಳುನಾಡು ಆತುರದ ಕ್ರಮ: ಡಿಕೆಶಿ
ಕಾವೇರಿ ನದಿ ನೀರು ಹಂಚಿಕೆ ವಿಚಾರವಾಗಿ ತಮಿಳುನಾಡು ಸರ್ಕಾರ ಇಷ್ಟೊಂದು ಆತುರವಾಗಿ ಸುಪ್ರೀಂ ಕೋರ್ಟ್‌ ಮೆಟ್ಟಿಲೇರುವ ಅಗತ್ಯ ಇರಲಿಲ್ಲ ಎಂದು ಜಲಸಂಪನ್ಮೂಲ ಖಾತೆ ಹೊಂದಿರುವ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅಭಿಪ್ರಾಯಪಟ್ಟಿದ್ದಾರೆ.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಮತ್ತು ತಮಿಳುನಾಡಿನ ರೈತರ ಹಿತ ಕಾಯಲು ನಾವು ಒಟ್ಟಾಗಿ ಕೆಲಸ ಮಾಡಬೇಕು. ಕರ್ನಾಟಕದ ಕಾವೇರಿ ಜಲಾನಯನ ಪ್ರದೇಶದಲ್ಲಿ ಈ ಹಂಗಾಮಿನಲ್ಲಿ ಬೀಳುತ್ತಿರುವ ಮಳೆ ಹಾಗೂ ಆಣೆಕಟ್ಟುಗಳಿಗೆ ಒಳಹರಿವು ಪ್ರಮಾಣ ಆಧರಿಸಿ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.

ಈಗಾಗಲೇ ಮಂಡ್ಯದ ರೈತರಿಗೆ ಯಾವುದೇ ರೀತಿಯ ಬಿತ್ತನೆ ಮಾಡಬೇಡಿ ಎಂದು ಜಿಲ್ಲಾ ಉಸ್ತುವಾರಿ ಸಚಿವರಾದ ಚಲುವರಾಯಸ್ವಾಮಿ ಮನವಿ ಮಾಡಿದ್ದಾರೆ. ನಮ್ಮ ಅಗತ್ಯ ಪ್ರಮಾಣದ ಕುಡಿಯುವ ನೀರು ಇಟ್ಟುಕೊಂಡು ತಮಿಳುನಾಡಿಗೆ ನೀರು ನೀಡಲು ಬದ್ಧರಾಗಿದ್ದೇವೆ. ನೀರು ಹರಿಸುವ ಸಂಪೂರ್ಣ ಅಧಿಕಾರ ಪ್ರಾಧಿಕಾರದ ಬಳಿ ಇದೆ. ನಾವು ಎರಡೂ ರಾಜ್ಯದ ರೈತರನ್ನು ಉಳಿಸಬೇಕಿದೆ. ಎಲ್ಲರೂ ವಾಸ್ತವಾಂಶ ಅರಿತು ಹೆಜ್ಜೆ ಇಡಬೇಕಿದೆ. ನಮ್ಮ ರೈತರ ಜಮೀನು ಒಣಗಬಾರದು, ಅದೇ ರೀತಿ ತಮಿಳುನಾಡಿನ ರೈತರ ಜಮೀನು ಒಣಗಬಾರದು. ಈ ನಿಟ್ಟಿನಲ್ಲಿ ಕ್ರಮಕೈಗೊಳ್ಳಲಾಗುವುದು ಎಂದರು.

ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ತಮಿಳುನಾಡಿನ ಅರ್ಜಿ ವಿಚಾರವಾಗಿ ಅಡ್ವೋಕೆಟ್‌ ಜನರಲ್‌ ಅವರೊಂದಿಗೆ ಜತೆ ಚರ್ಚೆ ಮಾಡುತ್ತೇನೆ. ಯಾವುದೇ ಸಂಘರ್ಷಕ್ಕೆ ಮುಂದಾಗುವ ಮನಸ್ಥಿತಿ ನಮಗಿಲ್ಲ. ನಾವೆಲ್ಲರೂ ಅಣ್ಣತಮ್ಮಂದಿರಂತೆ. ಸಂಘರ್ಷಕ್ಕೆ ಇಳಿಯದೇ ಸಮಸ್ಯೆ ಬಗೆಹರಿಸಿಕೊಳ್ಳಬೇಕು ಎಂದು ತಿಳಿಸಿದರು.

ಕಾವೇರಿ ನೀರನ್ನು ಮಿತಿಮೀರಿ ಬಳಸುತ್ತಿದೆ ತಮಿಳುನಾಡು: ಸಿಎಂ ಸಿದ್ದರಾಮಯ್ಯಗೆ ಮಾಹಿತಿ ಕೊಟ್ಟ ಬೊಮ್ಮಾಯಿ

ಕೃಷ್ಣಾ ಐತೀರ್ಪು ನ.29ಕ್ಕೆ, ಸುಪ್ರೀಂ ವಿಚಾರಣೆ ಶುರು
ಕೃಷ್ಣಾನದಿ ಜಲ ವಿವಾದಕ್ಕೆ ಸಂಬಂಧಿಸಿದ ಐತೀರ್ಪಿನ ಅಧಿಸೂಚನೆ ಹೊರಡಿಸುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿ ಎಂದು ಕೋರಿ ಮಹಾರಾಷ್ಟ್ರ ಹಾಗೂ ಕರ್ನಾಟಕ ಸರ್ಕಾರ ಸಲ್ಲಿಸಿದ್ದ ಅರ್ಜಿಯನ್ನು ನ.29ರಂದು ವಿಚಾರಣೆ ಆರಂಭಿಸುವುದಾಗಿ ಸುಪ್ರೀಂಕೋರ್ಟ್‌ ತಿಳಿಸಿದೆ. ಕರ್ನಾಟಕ ಕೋರಿರುವಂತೆ ಮುಂದಿನ ತಿಂಗಳು ವಿಚಾರಣೆ ಸಾಧ್ಯವಿಲ್ಲ ಎಂದೂ ಹೇಳಿದೆ.

ಕಾವೇರಿ ನ್ಯಾಯಾಧಿಕರಣದ ಐತೀರ್ಪು 2009ರಲ್ಲೇ ಪ್ರಕಟವಾಗಿದ್ದರೂ ಈವರೆಗೆ ಕೇಂದ್ರ ಸರ್ಕಾರ ಈ ಸಂಬಂಧ ಅಧಿಸೂಚನೆ ಹೊರಡಿಸಿಲ್ಲ. ಅಧಿಸೂಚನೆ ಪ್ರಕಟಣೆಗೆ ಆದೇಶಿಸಿ ಎಂದು ಮಹಾರಾಷ್ಟ್ರ ಹಾಗೂ ಕರ್ನಾಟಕ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಜತೆಗೆ, ಮುಂದಿನ ತಿಂಗಳಲ್ಲಾದರೂ ಈ ಅರ್ಜಿಯ ವಿಚಾರಣೆ ನಡೆಸುವಂತೆ ಮನವಿ ಮಾಡಿತ್ತು. ಆದರೆ, ನ್ಯಾಯಾಲಯವು ಸೆಪ್ಟೆಂಬರ್‌ ಅಥವಾ ಅಕ್ಟೋಬರ್‌ನಲ್ಲಿ ಅರ್ಜಿ ವಿಚಾರಣೆ ಸಾಧ್ಯವಿಲ್ಲ. ನ.29ರಂದು ವಿಚಾರಣೆ ನಡೆಸುವುದಾಗಿ ತಿಳಿಸಿತು.

click me!