ಈ ತಾಯಿಯದ್ದು ಆತ್ಮಹತ್ಯೆಯಲ್ಲ, ಜನರ ಕಮೆಂಟ್ ದಾಳಿಗೆ ಬಲಿಯಾದ ಟೆಕ್ಕಿ ರಮ್ಯಾ!

By Shobha MC  |  First Published May 20, 2024, 7:16 PM IST

ತಿರುವಾವೂರು ಮೂಲಕ ವೆಂಕಟೇಶ್‌ ಎನ್ನುವವರ ಪತ್ನಿಯಾಗಿದ್ದ 33 ವರ್ಷದ ರಮ್ಯಾ ಭಾನುವಾರ ಆತ್ಮಹತ್ಯೆಗೆ ಶರಣಾದರು. ಎರಡು ವಾರದ ಹಿಂದೆ ಈಕೆಯ 7 ತಿಂಗಳ ಹೆಣ್ಣು ಮಗು ಆಕಸ್ಮಿಕವಾಗಿ ಅಪಾರ್ಟ್‌ಮೆಂಟ್‌ನ ಸನ್‌ಶೇಡ್‌ಗೆ ಬಿದ್ದಿತ್ತು. ಮಗುವನ್ನು ರಕ್ಷಣೆ ಮಾಡಿದ ಬಳಿಕ ಈಕೆಯ ಮೇಲೆ ಸೈಬರ್‌ ದಾಳಿ ಶುರುವಾಗಿತ್ತು.


ಎರಡು ವಾರ, ಆಕೆ ಅನುಭವಿಸಿದ್ದು ಅಕ್ಷರಶಃ, ಅಕ್ಷರ ರೂಪದ ನೋಡಿದ ನರಕ. 

ಆ ಕುಹಕದ ಮಾತು, ವ್ಯಂಗ್ಯ, ಲೇವಡಿ, ನಿಂದನೆ, ಹುರಿದು ಮುಕ್ಕಿದರು, ಮಾತಲ್ಲೇ ಜಾಲಾಡಿದರು, ಝಾಡಿಸಿದರು, ಬೆಂಕಿ ಉಗುಳಿದ ನಾಲಗೆಗಳು ಒಂದಾ ಎರಡಾ, ಸಾವಿರಾರು, ಲಕ್ಷಾಂತರ. ಕಮೆಂಟ್​ ರೂಪದಲ್ಲಿ ವಿಷ ಕಕ್ಕಿದ ನಾಲಗೆಗಳು. ಎರಡು ವಾರ ಆಕೆ ಸತ್ತಂತೆ ಬದುಕಿದ್ದಳು. ದಿನವೂ ಸತ್ತು ಸತ್ತು ಬದುಕುತ್ತಿದ್ದಳು. ಮುಖಕ್ಕೆ ಎದುರಾಗಿ ಕೇಳಿದ ಮಾತುಗಳಿಗಿಂತ, ಕಮೆಂಟ್ ರೂಪದಲ್ಲಿ ಮನುಷ್ಯತ್ವವನ್ನೇ ಹೀಯಾಳಿಸಿ, ನೋಯಿಸಿ, ನಲುಗಿಸಿದರು. ಆಕೆಗಿನ್ನು ಬದುಕುವ ಆಸೆಯೇ ಸತ್ತು ಹೋಯ್ತು. ಬೆಳ್ಳಂಬೆಳಗ್ಗೆ ನೇಣಿಗೆ ಕೊರಳೊಡ್ಡಿದರು. 

Latest Videos

undefined

ಇದು ಕೊಯಮತ್ತೂರಿನ ಐಟಿ ಉದ್ಯೋಗಿ ರಮ್ಯಾ (33) ದುರಂತ ಕಥೆ. ಈ ಕಥೆ, ಚಿತ್ರಕತೆ, ಸಂಭಾಷಣೆ ಬರೆದವರು ಮತ್ತಾರೂ ಅಲ್ಲ, ದಿನವೂ ಮೀಡಿಯಾಗಳನ್ನು ಬೈದುಕೊಂಡು ಕಮೆಂಟ್​ ಮಾಡುವ ಸಜ್ಜನ ರೂಪದ, ವಿದ್ಯಾವಂತರೆಂಬ ಮುಖವಾಡ ವಿಕೃತ ಮನಸ್ಸಿನವರು.

ರಮ್ಯಾ ಮಾಡಿದರೂ ತಪ್ಪಾದರೂ ಏನು ಅಂತೀರಾ?: ಏಪ್ರಿಲ್ 28 ರಂದು ರಮ್ಯಾಳ 7 ತಿಂಗಳ ಹೆಣ್ಣುಮಗು ಕೈಜಾರಿ 4ನೇ ಮಹಡಿಯಿಂದ ಮೊದಲ ಮಹಡಿಯ ಸನ್ ಶೇಡ್ ಮೇಲೆ ಬಿದ್ದಿತ್ತು. ಅಕ್ಕಪಕ್ಕದವರ ನೆರವಿನಿಂದ ಮಗುವನ್ನು ರಕ್ಷಿಸಲಾಗಿತ್ತು. ಇದಾದ ಬಳಿಕ ಶುರುವಾಯ್ತು ನೋಡಿ, ನೆರೆಹೊರೆಯವರ ಕುಹಕದ ಮಾತು. ಇಷ್ಟಾಗಿದ್ದರೆ ಪರವಾಗಿಲ್ಲ, ಮಗು ಜಾರಿ ಬಿದ್ದ ದೃಶ್ಯಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದ್ದಂತೆ ರಮ್ಯಾ ವಿರುದ್ಧ ಜನ ಮುಗಿಬಿದ್ದರು. ಶುರುವಾಯ್ತು ನೋಡಿ ಕಮೆಂಟ್​ಗಳ ದಾಳಿ. 

ತಾಯಿಯ ನಿರ್ಲಕ್ಷ್ಯವೇ ಕಾರಣ, ತಾಯಿ ಅಜಾಗರೂಕತೆಯಿಂದ ಈ ಅವಘಡ ಸಂಭವಿಸಿದೆ. ಮಗು ಜಾರಿ ಬೀಳಲು ಅಮ್ಮನೇ ಕಾರಣ, ಥೂ ಇವಳೆಂಥ ತಾಯಿ, ಮಗುವನ್ನೂ ಹೀಗೂ ನೋಡ್ಕೋತಾರಾ ? ಇವಳಂತ ಬೇಜವಾಬ್ದಾರಿ ತಾಯಿ ಬೇರೊಬ್ಬಳಿಲ್ಲ, ಫೋನ್​ ನೋಡ್ತಿದ್ದಳಾ ? ಇನ್​ಸ್ಟಾಗ್ರಾಮ್​ನಲ್ಲಿ ಆಕ್ಟಿವ್ ಆಗಿದ್ದಳಾ? ನಿನ್ನಂಥ ಬೇಜಾಬ್ದಾರಿ ಹೆಣ್ಣಗೆ ಮಗು ಯಾಕೆ ಬೇಕು? ಇನ್ನೂ ಬದುಕಿದ್ದೀಯಾ ? ಇಂಥ ಸಾವಿರಾರು ನಿಂದನೆಯ ಕಮೆಂಟ್​ಗಳು ರಮ್ಯಾರನ್ನು ಮಾನಸಿಕವಾಗಿ ಕೊಂದು ಹಾಕಿತ್ತು. ರಮ್ಯಾ ಅಪಾರ್ಟ್​ಮೆಂಟಿನ ಅಕ್ಕ-ಪಕ್ಕವರೂ, ಇಡೀ ಘಟನೆಗೆ ಇಲ್ಲದ ರೆಕ್ಕೆಪುಕ್ಕ ಕಟ್ಟಿ, ರಮ್ಯಾರನ್ನು ಕಟಕಟೆಯಲ್ಲಿ ನಿಲ್ಲಿಸಿ, ಈಕೆ ಬೇಜವಾಬ್ದಾರಿ ಹೆಂಗಸು, ತಾಯಿಯಾಗಲು ಯೋಗ್ಯತೆ ಇಲ್ಲದವಳು ಎಂದು ಅಸಹನೆ ಕಾರಿಕೊಂಡಿದ್ರು..ಘಟನೆ ನಡೆದು ಎರಡು ವಾರ ಕಳೆದರೂ ರಮ್ಯಾ ಮೇಲಿನ ದಾಳಿ ನಿಲ್ಲಲಿಲ್ಲ. ಸೋಷಿಯಲ್ ಮೀಡಿಯಾದಲ್ಲಿ ಬಂದ ಲಕ್ಷಾಂತರ ಜನರ ಕಮೆಂಟ್​​ಗಳಿಗೆ ರಮ್ಯಾ ರೋಸಿ ಹೋಗಿದ್ದರು. ಮಾನಸಿಕವಾಗಿ ಜರ್ಝರಿತರಾಗಿದ್ರು. ಅಷ್ಟೇ ಅಲ್ಲ, ಈ ಎಲ್ಲ ಅವಮಾನಗಳು, ಹೇಳಿಕೆಗಳು, ನಿಂದನೆಯ ಮಾತುಗಳು ರಮ್ಯಾರನ್ನು ಖಿನ್ನತೆಗೆ ದೂಡಿತು. ಮಗು ಬದುಕುಳಿದ ಸಮಾಧಾನವನ್ನೂ ರಮ್ಯಾ ಅನುಭವಿಸದಂತೆ ಮಾನಸಿಕ ಹಿಂಸೆ ಕೊಟ್ಟವರು, ನಮ್ಮ ‘ಸೋ ಕಾಲ್ಡ್ ಪ್ರಜ್ಞಾವಂತ ಸಮಾಜ’.

ದಿನಬೆಳಗಾದರೆ ಮೀಡಿಯಾದವರು ಆ ಸುದ್ದಿ ದೊಡ್ಡದು ಮಾಡಿದ್ರು, ಈ ಸುದ್ದಿಗೆ ರೆಕ್ಕೆಪುಕ್ಕ ಕಟ್ಟಿದ್ರು, ತಮ್ಮ ಟಿಆರ್​ಪಿ ಹೆಚ್ಚಿಸಿಕೊಳ್ಳೋದಕ್ಕೆ ಬಣ್ಣ ಕಟ್ಟಿ ಹೇಳ್ತಾರೆ ಎಂದು ಬಾಯಿಬಡಿದುಕೊಳ್ಳೋ ಅದೇ ಜನರು, ರಮ್ಯಾಳನ್ನು ಬದುಕಿದ್ದಾಗಲೇ ಸಾಯಿಸಿ, ಇನ್ನು ಬದುಕುವುದು ಬೇಡ ಎನಿಸುವಂತೆ ತಮ್ಮ ಕಮೆಂಟ್​ಗಳ ಮೂಲಕ ಆಕೆಯನ್ನು ನೇಣಿಗೆ ತಂದು ನಿಲ್ಲಿಸಿದ್ರು. ನಿಂದನೆಗೆ ನೊಂದು ಮನೆ ಬದಲಿಸಿದ್ದ ರಮ್ಯಾ, ತವರು ಮನೆ ಸೇರಿಕೊಂಡಿದ್ರೂ, ನಿಂದನೆ ನಿಂತಿರಲಿಲ್ಲ. ಎರಡು ಮಕ್ಕಳ ತಾಯಿ, ಐಟಿ ಉದ್ಯೋಗಿ ರಮ್ಯಾ, ಜನರ ವಿಷದ ಮಾತಿಗೆ ನೊಂದು ನೇಣಿಗೆ ಕೊರಳೊಡ್ಡಿ, ನೆಮ್ಮದಿಯ ನಿದ್ರೆಗೆ ಜಾರಿದ್ರು.. 
ಒಬ್ಬರೇ ಒಬ್ಬರಾದರೂ ರಮ್ಯಾರ ಮನಸ್ಥಿತಿಯ ಬಗ್ಗೆ ಯೋಚಿಸಲಿಲ್ಲ.  ಆಕಸ್ಮಿಕವಾಗಿ ಮಗು ರಮ್ಯಾ ಕೈಯಿಂದ ಜಾರಿಬಿದ್ದಿತು. ಆ ಆಘಾತದಲ್ಲಿದ್ದ ತಾಯಿಗೆ ನಿಂದನೆ, ಹೀಯಾಳಿಕೆಯ ಮಾತುಗಳು ಈಟಿಯಿಂದ ಇರಿದಂತಲ್ಲವೇ ?

ಆಘಾತ, ಟೀಕೆ, ನೋವು; 4ನೇ ಮಹಡಿ ರೂಫ್‌ನಿಂದ ರಕ್ಷಿಸಲ್ಪಟ್ಟ ಮಗುವಿನ ತಾಯಿ ಸಾವು!

ಮಕ್ಕಳು ಕೈಯಿಂದ ಜಾರಿಬೀಳುವುದು ಆಕಸ್ಮಿಕವಲ್ಲದೇ ಮತ್ತೇನೂ ? ಅಷ್ಟಕ್ಕೆ ಆಕೆಯನ್ನು ನಿಂದಿಸಿ, ಅವಮಾನಿಸುವುದು ಸೇಡಿನ ಮನಸ್ಸಲ್ಲವೇ ? ಕೆಟ್ಟ ಕಮೆಂಟ್​ಗಳ ಮೂಲಕ ಆಕೆಯನ್ನು ಇನ್ನಿಲ್ಲದೇ ಕಾಡಿದ್ದಕ್ಕೆ ಏನನ್ನಬೇಕು ? ಆಕೆಯನ್ನು ಇನ್ನಿಲ್ಲದಂತೆ ನಿಂದಿಸಿ, ಕಮೆಂಟ್​ ಗಳಲ್ಲೇ ಶಿಕ್ಷೆ ಕೊಟ್ಟಿರಲ್ಲ, ನಿಮಗೇನು ಶಿಕ್ಷೆ ಕೊಡಬೇಕು? 

8ನೇ ಪ್ಲೋರ್‌ನಲ್ಲಿ ನೇತಾಡ್ತಿದ್ದ ಮಗುವನ್ನು ರಕ್ಷಿಸಿದ ಯುವಕ : ವಿಡಿಯೋ ವೈರಲ್‌

ರಮ್ಯಾಳದ್ದು ಆತ್ಮಹತ್ಯೆಯಲ್ಲ, ಅನಾಗರಿಕ ಸಮಾಜ, ಅಲ್ಲಿನ ಪ್ರಜ್ಞಾವಂತ, ವಿದ್ಯಾವಂತ ಜನರು ಮಾಡಿದ ಕೊಲೆ.  ರಮ್ಯಾಳ ನೆಮ್ಮದಿ ಕೆಡಿಸಿ, ಬದುಕುವುದಕ್ಕೇ ನಾಲಾಯಕ್ ಎಂಬಂತೆ ಬಿಂಬಿಸಿ, ಆಕೆ ಬದುಕು ಕೊನೆಗಾಣಿಸಿಕೊಳ್ಳುವಂತೆ ಮಾಡಿದ ನಿಮಗೆಲ್ಲ ಧಿಕ್ಕಾರ..!
 

click me!