* ‘ಹಿಂದಿಯಷ್ಟೇ ತಮಿಳಿಗೂ ಮಾನ್ಯತೆ ನೀಡಿ, ನೀಟ್‌ನಿಂದ ವಿನಾಯ್ತಿ ಕೊಡಿ’
* ಮೋದಿ ಸಮ್ಮುಖದಲ್ಲೇ ಹಿಂದಿ ಹೇರಿಕೆ, ನೀಟ್‌ಗೆ ಮುಖ್ಯಮಂತ್ರಿ ಸ್ಟಾಲಿನ್ ಕಿಡಿ
* ತಮಿಳುನಾಡಿನಲ್ಲಿ ಹಿಂದಿಯಂತೆ ತಮಿಳನ್ನೂ ಅಧಿಕೃತ ಭಾಷೆ ಮಾಡಿ
ಚೆನ್ನೈ(ಮೇ.27): ಕೇಂದ್ರ ಸರ್ಕಾರ, ದಕ್ಷಿಣದ ರಾಜ್ಯಗಳ ಮೇಲೆ ಹಿಂದಿ ಹೇರಿಕೆ ಮಾಡುತ್ತಿದೆ ಎಂಬ ಆರೋಪಗಳ ಬೆನ್ನಲ್ಲೇ, ಗುರುವಾರ ಇಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸ್ವತಃ ಪ್ರಧಾನಿ ನರೇಂದ್ರ ಮೋದಿ ಅವರ ಸಮ್ಮುಖದಲ್ಲೇ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಹಿಂದಿ ಹೇರಿಕೆ ಮತ್ತು ನೀಟ್ ಕುರಿತ ಕೇಂದ್ರದ ನಿಲುವನ್ನು ವಿರೋಧಿಸಿದ್ದಾರೆ. ತಮಿಳು ಭಾಷೆ ಮತ್ತು ತಮಿಳು ವಿದ್ಯಾರ್ಥಿಗಳ ಕುರಿತು ಗಟ್ಟಿಧ್ವನಿಯಲ್ಲಿ ಮಾತನಾಡಿದ ಸ್ಟಾಲಿನ್ ಅವರ ನಿಲುವಿಗೆ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.
ವಿವಿಧ ಯೋಜನೆಗಳಿಗೆ ಚಾಲನೆ ನೀಡಲು ಹಮ್ಮಿಕೊಳ್ಳಲಾಗಿದ್ದ ಕಾರ್ಯಕ್ರಮದಲ್ಲಿ ಮಾತನಾಡಿದ ಸಿಎಂ ಸ್ಟಾಲಿನ್, ‘ಹಿಂದಿಯನ್ನು ನಮ್ಮ ಮೇಲೆ ಹೇರಬೇಡಿ. ತಮಿಳಿಗೂ ಹಿಂದಿಯಷ್ಟೇ ಮಾನ್ಯತೆ ಕೊಡಿ. ತಮಿಳು ಭಾಷೆ ಪುರಾತನವಾದಷ್ಟೇ ಆಧುನಿಕ ಭಾಷೆಯೂ ಹೌದು. ಹೀಗಾಗಿ ತಮಿಳಿಗೆ ರಾಜ್ಯದಲ್ಲಿ ಹಿಂದಿಯಷ್ಟೇ ಮಾನ್ಯತೆ ನೀಡುವಂತೆ ಹಾಗೂ ಸರ್ಕಾರಿ ಕಚೇರಿ ಮತ್ತು ಮದ್ರಾಸ್ ಹೈಕೋರ್ಚ್‌ನಲ್ಲಿ ಅಧಿಕೃತ ಭಾಷೆಯನ್ನಾಗಿ ಘೋಷಿಸುವಂತೆ ಕೇಂದ್ರ ಸರ್ಕಾರವನ್ನು ಕೋರುತ್ತೇನೆ’ ಎಂದರು.
ಜೊತೆಗೆ ‘ನಾವು ನೀಟ್ ಪರೀಕ್ಷೆಯನ್ನು ವಿರೋಧಿಸುತ್ತೇವೆ ಮತ್ತು ಈ ಕುರಿತು ಈಗಾಗಲೇ ರಾಜ್ಯ ವಿಧಾನಸಭೆಯಲ್ಲಿ ಈ ಕುರಿತು ಮಸೂದೆಯನ್ನೂ ಅಂಗೀಕರಿಸಿದ್ದೇವೆ. ಹೀಗಾಗಿ ರಾಜ್ಯಕ್ಕೆ ನೀಟ್ ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಪ್ರಧಾನಿಗಳಲ್ಲಿ ಕೋರುತ್ತೇನೆ’ ಎಂದು ಹೇಳಿದರು. ಇದೇ ವೇಳೆ ರಾಜ್ಯ ಸರ್ಕಾರ ಅಂಗೀಕರಿಸಿದ ಮಸೂದೆಯನ್ನು ಇನ್ನೂ ಕೇಂದ್ರ ಸರ್ಕಾರಕ್ಕೆ ಕಳುಹಿಸದ ರಾಜ್ಯಪಾಲ ಆರ್.ಎನ್.ರವಿ ವಿರುದ್ಧವೂ ಅವರ ಸಮ್ಮುಖದಲ್ಲೇ ಕಿಡಿಕಾರಿದ ಸ್ಟಾಲಿನ್, ‘ನಮ್ಮ ಮಸೂದೆಯನ್ನು ರಾಜ್ಯಪಾಲರು ಅಂಗೀಕರಿಸಬೇಕಾಗಿಲ್ಲ, ಅದರ ಬದಲು ಅವರು ಪೋಸ್ಟ್‌ಮನ್ ರೀತಿಯಲ್ಲಿ ಮಸೂದೆಯನ್ನು ರಾಷ್ಟ್ರಪತಿಗಳ ಸಹಿಗೆ ಕಳುಹಿಸಿಕೊಟ್ಟರೆ ಸಾಕು’ ಎಂದು ವ್ಯಂಗ್ಯವಾಡಿದರು.
ಇದರ ಜೊತೆಗೆ ‘ಕಚಥೀವು ದ್ವೀಪವನ್ನು ಶ್ರೀಲಂಕಾದಿಂದ ಮರಳಿ ಪಡೆದು, ನಮ್ಮ ಮೀನುಗಾರರು ಸಮುದ್ರದಲ್ಲಿ ಮುಕ್ತವಾಗಿ ಸಂಚಾರ ಮಾಡಲು ಅವಕಾಶ ಮಾಡಿಕೊಡಬೇಕು. ರಾಜ್ಯಕ್ಕೆ ಕೇಂದ್ರದಿಂದ ಬಾಕಿ ಇರುವ 14006 ಕೋಟಿ ರು. ಜಿಎಸ್‌ಟಿ ಬಾಕಿಯನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಕೇಂದ್ರವನ್ನು ಕೋರುತ್ತೇನೆ’ ಎಂದು ಸಿಎಂ ಸ್ಟಾಲಿನ್ ಮನವಿ ಮಾಡಿದರು.
ಮೋದಿ ಮೆಚ್ಚುಗೆ:
ಬಳಿಕ ಮಾತನಾಡಿದ ಪ್ರಧಾನಿ ಮೋದಿ ‘ತಮಿಳುನಾಡು ವಿಶೇಷ ಸ್ಥಳವಾಗಿದ್ದು, ತಮಿಳು ಭಾಷೆ ಅತ್ಯಂತ ಸನಾತನ ಹಿನ್ನೆಲೆ ಹೊಂದಿದೆ ಹಾಗೂ ತಮಿಳು ಸಂಸ್ಕೃತಿ ಜಾಗತಿಕವಾದುದು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಇದೇ ವೇಳೆ ಕೇಂದ್ರ ಸರ್ಕಾರ ಅಂಗೀಕರಿಸಿದ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಬಗ್ಗೆ ಪ್ರಸ್ತಾಪಿಸಿದ ಮೋದಿ, ‘ಹೊಸ ನೀತಿಯಿಂದಾಗಿ ವಿದ್ಯಾರ್ಥಿಗಳು ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣವನ್ನು ಸ್ಥಳೀಯ ಭಾಷೆಗಳಲ್ಲೂ ಪಡೆಯಬಹುದು ಮತ್ತು ತಮಿಳುನಾಡು ಇದರಿಂದ ಲಾಭ ಪಡೆದುಕೊಳ್ಳಬಹುದು ಎನ್ನುವ ಮೂಲಕ, ಕೇಂದ್ರ ಸರ್ಕಾರ ಹಿಂದಿ ಹೇರಿಕೆ ಮಾಡುತ್ತಿಲ್ಲ ಎಂದು ಪರೋಕ್ಷವಾಗಿ ಸಂದೇಶ ರವಾನಿಸುವ ಯತ್ನ ಮಾಡಿದರು.
ಸ್ಟಾಲಿನ್ ಬೇಡಿಕೆಗಳು
- ತಮಿಳುನಾಡಿನಲ್ಲಿ ಹಿಂದಿಯಂತೆ ತಮಿಳನ್ನೂ ಅಧಿಕೃತ ಭಾಷೆ ಮಾಡಿ
- ಹೈಕೋರ್ಚ್, ಕಚೇರಿಗಳಲ್ಲಿ ತಮಿಳಿಗೆ ಅಧಿಕೃತ ಭಾಷೆ ಸ್ಥಾನ ನೀಡಿ
- ವೈದ್ಯಕೀಯ ಅರ್ಹತೆ ಪರೀಕ್ಷೆ ನೀಟ್‌ನಿಂದ ರಾಜ್ಯಕ್ಕೆ ವಿನಾಯಿತಿ ನೀಡಿ
- ರಾಜ್ಯಕ್ಕೆ ಬರಬೇಕಿರುವ .14006 ಕೋಟಿ ಜಿಎಸ್‌ಟಿ ಕೂಡಲೇ ಕೊಡಿ