
ನವದೆಹಲಿ: ದೆಹಲಿಯ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಟೇಕಾಫ್ ವೇಳೆ ಸ್ವಿಸ್ ವಿಮಾನವೊಂದರ ಎಂಜಿನ್‌ನಲ್ಲಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಆರು ಜನ ಗಾಯಗೊಂಡಂತಹ ಘಟನೆ ನಡೆದಿದೆ. ಈ ವಿಮಾನದ ಟೇಕಾಫ್ ರನ್ ಬೆಂಕಿಯಿಂದಾಗಿ ಹಠಾತ್ ಸ್ಥಗಿತಗೊಂಡ ಕಾರಣ ಆರು ಜನ ಗಾಯಗೊಂಡಿದ್ದಾರೆ. ಗಾಯಾಳು ಪ್ರಯಾಣಿಕರನ್ನು ಆಸ್ಪತ್ರೆಗೆ ದಾಖಲಿಸಲಾಗೊದೆ. ಎಲ್ಲಾ ಪ್ರಯಾಣಿಕರನ್ನು ತುರ್ತು ಮೆಟ್ಟಿಲುಗಳನ್ನು ಬಳಸಿ ವಿಮಾನದಿಂದ ಇಳಿಸಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ವಿಮಾನವು ದೆಹಲಿಯಿಂದ ಸ್ವಿಡ್ಜರ್ಲ್ಯಾಂಡ್‌ನ ಝ್ಯುರಿಚ್‌ಗೆ ಹೋಗಬೇಕಿತ್ತು.
ವಿಮಾನ ಸಂಖ್ಯೆ LX147, ಏರ್‌ಬಸ್ A330 ಬೆಳಗಿನ ಜಾವ 1.08 ಕ್ಕೆ ರನ್‌ವೇಯಲ್ಲಿ ಟೇಕಾಫ್‌ಗಾಗಿ ಟೇಕಾಫ್ ರನ್ ಆರಂಭಿಸಿದಾಗ ಒಂದು ಇಂಜಿನನ್‌ನಲ್ಲಿ ದೋಷ ಕಾಣಿಸಿಕೊಂಡು ಬೆಂಕಿ ಕಾಣಿಸಿಕೊಂಡಿತು ಎಂದು ಅಧಿಕಾರಿಗಳು ಹೇಳಿದ್ದಾರೆ. ಈ ವಿಮಾನದಲ್ಲಿ 4 ಪುಟ್ಟು ಶಿಶುಗಳು ಸೇರಿ ಒಟ್ಟು 228 ಪ್ರಯಾಣಿಕರಿದ್ದರು. ವಿಮಾನದಲ್ಲಿ ಬೆಂಕಿ ಕಾಣಿಸಿಕೊಂಡ ಕೂಡಲೇ ತುರ್ತು ಮೆಟ್ಟಿಲುಗಳನ್ನು ಬಳಸಿ ಎಲ್ಲಾ ಪ್ರಯಾಣಿಕರನ್ನು ರನ್‌ವೇಯಲ್ಲಿ ಸ್ಥಳಾಂತರಿಸಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ಸ್ವಿಸ್ ವಿಮಾನಯಾನ ಸಂಸ್ಥೆ ಹೇಳಿಕೆ ಬಿಡುಗಡೆ ಮಾಡಿದ್ದು, ದೆಹಲಿಯಲ್ಲಿ LX147 ವಿಮಾನಕ್ಕೆ ಸಂಬಂಧಿಸಿದ ಘಟನೆಯ ಬಗ್ಗೆ ನಮಗೆ ತಿಳಿದಿದೆ. ಅಪಘಾತಕ್ಕೀಡಾದ ವಿಮಾನವು ಏರ್‌ಬಸ್ A330, HB-JHK ನೋಂದಣಿಯಾಗಿದೆ. ಈ ಬಗ್ಗೆ ಸ್ವಿಸ್ ಒಂದು ಕಾರ್ಯಪಡೆಯನ್ನು ಸ್ಥಾಪಿಸಿದೆ. ವಿಮಾನದಲ್ಲಿ 228 ಪ್ರಯಾಣಿಕರು ಮತ್ತು ನಾಲ್ಕು ಶಿಶುಗಳು ಇದ್ದರು ಎಂಬ ಮಾಹಿತಿ ನೀಡಿದೆ.
ಭಾರತದ ಸ್ಥಳೀಯ ಸಮಯ ಬೆಳಗಿನ ಜಾವ 1 ಗಂಟೆಯ ನಂತರ ವಿಮಾನ ಹಾರುವುದಕಕ್ಕೆ ಸಿದ್ಧವಾಗಿ ಟೇಕಾಫ್ ರನ್ ವೇಳೆ ವಿಮಾನದ ಒಂದು ಎಂಜಿನ್‌ನಲ್ಲಿ ಸಮಸ್ಯೆ ಕಾಣಿಸಿಕೊಂಡಿತು. ಹೀಗಾಗಿ ಸಿಬ್ಬಂದಿ ವಿಮಾನವನ್ನು ಟೇಕ್ ಆಫ್ ಮಾಡಲು ನಿರಾಕರಿಸಿದರು ಮತ್ತು ಪರಿಸ್ಥಿತಿಯನ್ನು ಪರಿಶೀಲಿಸಿದ ನಂತರ, ಮುನ್ನೆಚ್ಚರಿಕೆಯಾಗಿ ವಿಮಾನದಲ್ಲಿದ್ದ ಪ್ರಯಾಣಿಕರ ಸ್ಥಳಾಂತರಿಸಲು ನಿರ್ಧರಿಸಿದರು. ಪ್ರಸ್ತುತ ಆರು ಪ್ರಯಾಣಿಕರು ವೈದ್ಯಕೀಯ ಚಿಕಿತ್ಸೆ ಪಡೆಯುತ್ತಿದ್ದಾರೆ, ಸಿಬ್ಬಂದಿಗೆ ಯಾವುದೇ ಹಾನಿಯಾಗಿಲ್ಲ ಎಂದು ವಿಮಾನಯಾನ ಸಂಸ್ಥೆ ತಿಳಿಸಿದೆ. ಆದರೆ ದೆಹಲಿ ವಿಮಾನ ನಿಲ್ದಾಣದಲ್ಲಿ ಸಂಭವಿಸಿದ ಈ ಘಟನೆಯ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ವಿಮಾನ ರದ್ದಾಗಿದ್ದರಿಂದ ಸಂಕಷ್ಟಕ್ಕೆ ಸಿಲುಕಿದ ಸ್ವಿಸ್ ಪ್ರಯಾಣಿಕರಿಗೆ ಪ್ರಸ್ತುತ ಸಹಾಯ ಮಾಡಲಾಗುತ್ತಿದೆ ಮತ್ತು ಸ್ಥಳೀಯ ತಂಡಗಳು ಪ್ರಯಾಣಿಕರಿಗೆ ಮರು ಬುಕಿಂಗ್ ಅಥವಾ ಹೋಟೆಲ್ ವಸತಿ ವ್ಯವಸ್ಥೆ ಮಾಡಲು ತೀವ್ರವಾಗಿ ಕೆಲಸ ಮಾಡುತ್ತಿವೆ ಎಂದು ಸ್ವಿಸ್ ಏರ್‌ಲೈನ್ಸ್ ಮಾಹಿತಿ ನೀಡಿದೆ.
ಇದನ್ನೂ ಓದಿ: ಖಿನ್ನತೆಯ ಕರಾಳ ರೂಪ: ಕೊಡಗಿನಲ್ಲಿ ಕೋವಿಯಿಂದ ಗುಂಡು ಹಾರಿಸಿಕೊಂಡು ಶಿಕ್ಷಕಿ ಸಾವು
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ