
ಆಂಧ್ರ ಪ್ರದೇಶದ ಅನ್ನಮಯ್ಯ ಜಿಲ್ಲೆಯ ದೊಡ್ಡಪಾಳ್ಯಂ (Peddapalyam) ಗ್ರಾಮದಲ್ಲಿ ರೈತನೊಬ್ಬನ ಹೊಲದಲ್ಲಿ ಅಚ್ಚರಿಯ ಘಟನೆ ನಡೆದಿದೆ. ಜಮೀನನ್ನು ಸಮತಟ್ಟು ಮಾಡುವಾಗ ಬರೋಬ್ಬರಿ 32 ಪುರಾತನ ನಾಗಪಡಗ (ನಾಗರ ಹಾವಿನ ಹೆಡೆ) ಆಕಾರದ ಶಿಲೆಗಳು ಪತ್ತೆಯಾಗಿದ್ದು, ಇಡೀ ಗ್ರಾಮದಲ್ಲಿ ಕುತೂಹಲ ಮತ್ತು ಭಕ್ತಿಯ ವಾತಾವರಣ ನಿರ್ಮಾಣವಾಗಿದೆ.
ಗ್ರಾಮದ ರೈತ ವೆಂಕಟರಮಣ ಎಂಬುವವರಿಗೆ ಸೇರಿದ ಜಮೀನಿನಲ್ಲಿ ಸಣ್ಣ ಗುಡ್ಡವೊಂದಿತ್ತು. ಬಹಳ ಕಾಲದಿಂದ ಈ ಭೂಮಿಯನ್ನು ಬಳಸಲು ಸಾಧ್ಯವಾಗದ ಕಾರಣ ಇತ್ತೀಚೆಗೆ ಅವರು ಜೆಸಿಬಿ (Excavator) ಯಂತ್ರದ ಮೂಲಕ ಗುಡ್ಡವನ್ನು ತೆರವುಗೊಳಿಸಿ ಸಮತಟ್ಟು ಮಾಡುವ ಕೆಲಸ ಆರಂಭಿಸಿದ್ದರು. ಈ ವೇಳೆ ಮಣ್ಣನ್ನು ಅಗೆಯುತ್ತಿದ್ದಂತೆ ಒಂದೊಂದಾಗಿ ಕೆತ್ತನೆ ಮಾಡಿರುವ ಕಲ್ಲುಗಳು ಪತ್ತೆ ಆಗಿವೆ. ಜೆಸಿಬಿ ಮಣ್ಣು ಅಗೆಯುತ್ತಿದ್ದಂತೆಯೇ ಸುಂದರವಾಗಿ ಕೆತ್ತಲಾದ ನಾಗಪಡಗದ ಆಕಾರದ ಕಲ್ಲುಗಳು ಕಂಡುಬಂದಿವೆ. ಅಗೆಯುತ್ತಾ ಹೋದಂತೆ ಒಟ್ಟು 32 ಪುರಾತನ ನಾಗಪಡಗ ಶಿಲೆಗಳು ಪತ್ತೆಯಾಗಿವೆ. ಇಷ್ಟು ದೊಡ್ಡ ಸಂಖ್ಯೆಯಲ್ಲಿ ನಾಗ ಪ್ರತಿಮೆಗಳು ಒಂದೇ ಕಡೆ ಪತ್ತೆಯಾಗಿರುವುದು ಸ್ಥಳೀಯರಲ್ಲಿ ಅಚ್ಚರಿ ಮೂಡಿಸಿದೆ.
ಈ ವಿಷಯ ಕಾಡ್ಗಿಚ್ಚಿನಂತೆ ಹರಡುತ್ತಿದ್ದಂತೆಯೇ ದೊಡ್ಡಪಾಳ್ಯಂ ಮತ್ತು ಸುತ್ತಮುತ್ತಲ ಗ್ರಾಮದ ಜನರು ರೈತನ ಹೊಲಕ್ಕೆ ಧಾವಿಸಿದ್ದಾರೆ. ಪುರಾತನ ಶಿಲೆಗಳನ್ನು ನೋಡಿ ಭಕ್ತಿಯಿಂದ ಪೂಜೆ ಮತ್ತು ನಮಸ್ಕಾರಗಳನ್ನು ಸಲ್ಲಿಸಿದ್ದಾರೆ. ಇವು ದೈವಿಕ ಶಕ್ತಿಯ ಸಂಕೇತ ಎಂದು ಭಾವಿಸಿರುವ ಜನರು ಅಲ್ಲಿಗೆ ಹೂವು, ಹಣ್ಣುಗಳನ್ನು ತಂದು ಅರ್ಪಿಸುತ್ತಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪುರೋಹಿತರೊಬ್ಬರು, ಈ ನಾಗಪಡಗಗಳನ್ನು ಶಾಸ್ತ್ರೋಕ್ತವಾಗಿ ಪ್ರತಿಷ್ಠಾಪಿಸಿ ಅಲ್ಲಿ ಒಂದು ಪುಟ್ಟ ಗುಡಿಯನ್ನು ನಿರ್ಮಿಸುವಂತೆ ರೈತ ವೆಂಕಟರಮಣ ಅವರಿಗೆ ಸಲಹೆ ನೀಡಿದ್ದಾರೆ. ಅಲ್ಲಿಯವರೆಗೆ ಈ ಶಿಲೆಗಳನ್ನು ಸುರಕ್ಷಿತವಾಗಿರಿಸಲು ಒಂದು ದೊಡ್ಡ ಗುಂಡಿ ತೋಡಿ, ಅದರಲ್ಲಿ ನೀರು ತುಂಬಿಸಿ ನಾಗಪಡಗಗಳನ್ನು ಇರಿಸಲಾಗಿದೆ.
ಈ ಶಿಲೆಗಳು ಯಾವ ಕಾಲಕ್ಕೆ ಸೇರಿದವು ಮತ್ತು ಈ ಪ್ರದೇಶದಲ್ಲಿ ಇಷ್ಟು ಪ್ರಮಾಣದ ನಾಗಪಡಗಗಳು ಏಕಿದ್ದವು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿದೆ. ಇವುಗಳ ಹಿಂದೆ ಯಾವುದಾದರೂ ಐತಿಹಾಸಿಕ ದೇಗುಲ ಅಥವಾ ಪುರಾತನ ಸಂಸ್ಕೃತಿಯ ಕುರುಹು ಇದೆಯೇ ಎಂಬುದು ತಿಳಿಯಬೇಕಿದೆ. ಪುರಾತತ್ವ ಇಲಾಖೆಯ (Archaeology Department) ಅಧಿಕಾರಿಗಳು ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದರೆ ಮಾತ್ರ ಈ ರಹಸ್ಯದ ಹಿಂದಿನ ಸತ್ಯ ಹೊರಬರಲಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ