Latest Videos

Hate Speech: ಧರ್ಮದ ಹೆಸರಿನಲ್ಲಿ ಎಂಥಾ ಸ್ಥಿತಿಗೆ ತಲುಪಿದ್ದೇವೆ..! ದ್ವೇಷ ಭಾಷಣಕ್ಕೆ ಸುಪ್ರೀಂ ಕೋರ್ಟ್‌ ಬೇಸರ!

By Santosh NaikFirst Published Oct 21, 2022, 7:13 PM IST
Highlights

Supreme Court On Inflammatory Speeches ದ್ವೇಷ ಭಾಷಣ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್, ಜಾತ್ಯತೀತ ದೇಶಕ್ಕೆ ಇದು ಆಘಾತಕಾರಿಯಾದ ವಿಚಾರ ಎಂದು ಹೇಳಿದೆ. ಯಾವುದೇ ಸಮುದಾಯದ ವಿರುದ್ಧ ದ್ವೇಷ ಭಾಷಣದ ಮೂಲಕವೇ ಮಾಡಲಾಗುವ ಶೋಷಣೆಯನ್ನು ನಾವು ನೋಡುತ್ತಿದ್ದೇವೆ. ಇಂತಹ ಪರಿಸ್ಥಿತಿಯನ್ನು ನಾವು ಹಿಂದೆಂದೂ ಕಂಡಿರಲಿಲ್ಲ ಎಂದಿದೆ.

ನವದೆಹಲಿ (ಅ. 21): 21ನೇ ಶತಮಾನದಲ್ಲಿ ಜಾತ್ಯಾತೀತ ದೇಶವೊಂದಕ್ಕೆ ದ್ವೇಷ ಭಾಷಣ ಬಹಳ ಅಪಾಯಕಾರಿ ಎಂದು ಸುಪ್ರೀಂ ಕೋರ್ಟ್‌ ಶುಕ್ರವಾರದ ವಿಚಾರಣೆಯ ವೇಳೆ ಅಭಿಪ್ರಾಯಪಟ್ಟಿದೆ. ಭವಿಷ್ಯದಲ್ಲಿ ದ್ವೇಷ ಭಾಷಣ ವಿಚಾರದಲ್ಲಿ ಪೊಲೀಸರು ಎಫ್‌ಐಆರ್‌ ಆಗುವವರೆಗೂ ಕ್ರಮ ಕೈಗೊಳ್ಳಲು ಕಾಯಬೇಕಾದ ಅಗತ್ಯವಿಲ್ಲ. ತ್ವರಿತ ಕ್ರಮ ದಾಖಲಾಗಬೇಕು ಎಂದು ದೇಶದ ಅಗ್ರ ನ್ಯಾಯಾಲಯ ಹೇಳಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ನಿಷ್ಕ್ರೀಯತೆಯನ್ನು ನ್ಯಾಯಾಂಗ ನಿಂದನೆ ಎಂದು ಸುಪ್ರೀಂ ಕೋರ್ಟ್‌ ಪರಿಗಣನೆ ಮಾಡುತ್ತದೆ ಎಂದು ಹೇಳಿದೆ. ಇದರಲ್ಲಿ ಯಾವುದೇ ರೀತಿಯ ನಿರ್ಲಕ್ಷ್ಯ ತೋರಿದರೆ ಅಧಿಕಾರಿಗಳ ವಿರುದ್ಧ ನ್ಯಾಯಾಂಗ ನಿಂದನೆ ಕ್ರಮ ಕೈಗೊಳ್ಳಲಾಗುವುದು ಎಂದು ಸುಪ್ರೀಂ ಕೋರ್ಟ್ ಹೇಳಿದ್ದು, ದ್ವೇಷ ಭಾಷಣ ಪ್ರಕರಣದಲ್ಲಿ ಯಾವುದೇ ದೂರು ಅಥವಾ ಎಫ್‌ಐಆರ್ ದಾಖಲಾಗದಿದ್ದರೂ ಪೊಲೀಸರು ಸ್ವಯಂ ಪ್ರೇರಿತ ಕ್ರಮ ಕೈಗೊಳ್ಳಬೇಕು. ಈ ಸಂಬಂಧ ದೆಹಲಿ, ಉತ್ತರಾಖಂಡ ಮತ್ತು ಉತ್ತರಾಖಂಡ ಪೊಲೀಸರಿಗೆ ನ್ಯಾಯಾಲಯ ನೋಟಿಸ್ ಜಾರಿ ಮಾಡಿದೆ.

ಪ್ರಚೋದನಕಾರಿ ಭಾಷಣದ ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ, ದ್ವೇಷ ಭಾಷಣ (hate Speech, ) ಮಾಡಿದವರ ವಿರುದ್ಧ ಪೊಲೀಸರಿಗೆ(Police) ದೂರು ನೀಡಲಾಗಿದೆಯೇ ಅಥವಾ ಅವರು ನೇರವಾಗಿ ನ್ಯಾಯಾಲಯಕ್ಕೆ ಬಂದಿದ್ದಾರೆಯೇ ಎಂದು ಅರ್ಜಿದಾರರನ್ನು ನ್ಯಾಯಾಲಯ ಕೇಳಿದೆ. ಈ ಕುರಿತು ಪೊಲೀಸರಿಗೆ ಹಲವು ಬಾರಿ ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅರ್ಜಿದಾರರ ಪರ ವಕೀಲ ಕಪಿಲ್ ಸಿಬಲ್ ಹೇಳಿದ್ದಾರೆ.

ಬಿಜೆಪಿ ಸಂಸದ ಪ್ರವೇಶ್ ವರ್ಮಾ ಮುಸ್ಲಿಮರ ವಾಣಿಜ್ಯ ವ್ಯವಹಾರ ಬಹಿಷ್ಕಾರದ ಬಗ್ಗೆ ಮಾತನಾಡುತ್ತಾರೆ ಮತ್ತು ಅಂತಹ ಕಾರ್ಯಕ್ರಮಗಳಲ್ಲಿ ಪೊಲೀಸರು ಮೂಕ ಪ್ರೇಕ್ಷಕರಾಗಿದ್ದಾರೆ ಎಂದು ಕಪಿಲ್ ಸಿಬಲ್ (Kapil Sibal) ವಾದದ ವೇಳೆ ಹೇಳಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ  ನ್ಯಾಯಮೂರ್ತಿ ಕೆಎಂ ಜೋಸೆಫ್ (Justice KM Joseph) ಅವರು, ನೀವು ಕಾನೂನು ಸಚಿವರಾಗಿದ್ದಾಗ ದ್ವೇಷ ಭಾಷಣದ ಬಗ್ಗೆ ಏನಾದರೂ ಕ್ರಮ ಕೈಗೊಂಡಿದ್ದೀರಾ ಎಂದು ಸಿಬಲ್ ಅವರನ್ನು ಪ್ರಶ್ನಿಸಿದರು. 

ಮುಸ್ಲಿಮರೂ ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದಾರೆಯೇ ಎಂದು ಸುಪ್ರೀಂ ಕೋರ್ಟ್ (Supreme Court) ಸಿಬಲ್ ಅವರನ್ನು ಪೀಠ ಈ ವೇಳೆ ಪ್ರಶ್ನೆ ಮಾಡಿತು. ಎರಡೂ ಧರ್ಮದ ಕಡೆಯವರಿಂದಲೂ ದ್ವೇಷ ಭಾಷಣಗಳು ಬರುತ್ತಿವೆ ಎಂದು ಈ ವೇಳೆ ಅವರು ಉತ್ತರಿಸಿದರು. ದೇಶದಲ್ಲಿ ನಿರಂತರವಾಗಿ ನಡೆಯುತ್ತಿರುವ ದ್ವೇಷ ಭಾಷಣಗಳ ಘಟನೆಗಳ ಕುರಿತು ನ್ಯಾಯಾಲಯವು, ಜಾತ್ಯತೀತ ದೇಶಕ್ಕೆ ಇದು ಆಘಾತಕಾರಿ ವಿಚಾರ ಎಂದು ಹೇಳಿದೆ. ಯಾವುದೇ ಸಮುದಾಯದ ವಿರುದ್ಧ  ದ್ವೇಷ ಭಾಷಣದ ಮೂಲಕ ಮಾಡಲಾಗುತ್ತಿರುವ ಶೋಷಣೆಯನ್ನು ನಾವು ನೋಡುತ್ತಿದ್ದೇವೆ. ಇಂತಹ ಪರಿಸ್ಥಿತಿಯನ್ನು ನಾವು ಹಿಂದೆಂದೂ ಕಂಡಿರಲಿಲ್ಲ ಎಂದಿದೆ.

ಇದು 'ಪಬ್ಲಿಸಿಟಿ ಇಂಟ್ರಸ್ಟ್‌ ಲಿಟಿಗೇಷನ್‌', ತಾಜ್‌ಮಹಲ್‌ ಕುರಿತಾದ ಅರ್ಜಿಯನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್‌!

ಧರ್ಮದ ಹೆಸರಿನಲ್ಲಿ ನಾವು ಎಂಥಾ ಸ್ಥಿತಿಯವರೆಗೆ ಬಂದು ತಲುಪಿದ್ದೇವೆ ಎಂದು ನ್ಯಾಯಾಲಯ ಹೇಳಿದ್ದು, ಇಂತಹ ಪ್ರಚೋದನಕಾರಿ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ ಎಂದಿದೆ. ವಾಸ್ತವವಾಗಿ, ದೇಶದಲ್ಲಿ ಮುಸ್ಲಿಂ ಸಮುದಾಯವನ್ನು ಭಯಭೀತಗೊಳಿಸುವ ಮತ್ತು ಗುರಿಯಾಗಿಸುವ ಬೆದರಿಕೆಯನ್ನು ತಡೆಗಟ್ಟಲು ತಕ್ಷಣಕ್ಕೆ ಮಧ್ಯಂತರ ಆದೇಶವನ್ನು ಕೋರಿ ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ವಿಚಾರಣೆ ನಡೆಸುವ ವೇಳೆ ಈ ಮಾತನ್ನು ಹೇಳಿದೆ.

Bilkis Bano ಅತ್ಯಾಚಾರಿಗಳ ಬಿಡುಗಡೆ ವಿವಾದ: ತರಾತುರಿಯಲ್ಲಿ ಒಪ್ಪಿಗೆ ನೀಡಿದ್ದ ಕೇಂದ್ರ

ದ್ವೇಷದ ಭಾಷಣ ಮಾಡುವವರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳುವ ಅಗತ್ಯವಿದೆ ಎಂದು ನ್ಯಾಯಮೂರ್ತಿ ಕೆಎಂ ಜೋಸೆಫ್ ಅವರ ಪೀಠ ಹೇಳಿದೆ. ಇಂತಹ ಪ್ರಕರಣಗಳಲ್ಲಿ ಧರ್ಮವನ್ನು ಲೆಕ್ಕಿಸದೆ ಕ್ರಮ ಕೈಗೊಳ್ಳಬೇಕು ಎಂದು ನ್ಯಾಯಾಲಯ ಹೇಳಿದೆ. ದೇಶಾದ್ಯಂತ ದ್ವೇಷದ ವಾತಾವರಣ ನಿರ್ಮಾಣವಾಗಿದೆ. ಇಂತಹ ಹೇಳಿಕೆಗಳು ಆತಂಕಕಾರಿ. ಈ ಹೇಳಿಕೆಗಳನ್ನು ಸಹಿಸಲು ಸಾಧ್ಯವಿಲ್ಲ. 21ನೇ ಶತಮಾನದಲ್ಲಿ ಎಂಥಾ ಸ್ಥಿತಿ. ಧರ್ಮದ ಹೆಸರಿನಲ್ಲಿ ನಾವು ಎಲ್ಲಿಗೆ ತಲುಪಿದ್ದೇವೆ? ನಾವು ದೇವರನ್ನು ಎಷ್ಟು ಚಿಕ್ಕದಾಗಿ ಮಾಡಿದ್ದೇವೆ? ಎಂದು ಬೇಸರ ವ್ಯಕ್ತಪಡಿಸಿದೆ.

click me!