* 11ನೇ ತರಗತಿಗೆ ಭೌತಿಕ ಪರೀಕ್ಷೆ ನಡೆಸಲು ಮುಂದಾಗಿದ್ದಕ್ಕೆ ಕಿಡಿ
* ಕೋವಿಡ್ ನಡುವೆ ಪರೀಕ್ಷೆ: ಕೇರಳಕ್ಕೆ ಸುಪ್ರೀಂ ತಪರಾಕಿ
* ನಾಡಿದ್ದಿನಿಂದ ಆರಂಭವಾಗಬೇಕಿದ್ದ ಪರೀಕ್ಷೆಗೆ ಒಂದು ವಾರ ತಡೆ
ನವದೆಹಲಿ(ಸೆ.04): ರಾಜ್ಯದಲ್ಲಿ ಕೊರೋನಾ ಪರಿಸ್ಥಿತಿ ಗಂಭೀರವಾಗಿರುವ ಹೊರತಾಗಿಯೂ 11ನೇ ತರಗತಿಗೆ ಭೌತಿಕ ಪರೀಕ್ಷೆ ನಡೆಸಲು ಹೊರಟಿದ್ದ ಕೇರಳ ಸರ್ಕಾರದ ನಿರ್ಧಾರಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಸುಪ್ರೀಂಕೋರ್ಟ್, ಸೆ.6ರಿಂದ ಆರಂಭವಾಗಬೇಕಿದ್ದ ಪರೀಕ್ಷೆಗಳಿಗೆ ತಾತ್ಕಾಲಿಕ ನಡೆ ನೀಡಿದೆ. ಜೊತೆಗೆ ಪ್ರಕರಣದ ವಿಚಾರಣೆಯನ್ನು ಸೆ.13ಕ್ಕೆ ಮುಂದೂಡಿದ್ದು, ಅಷ್ಟರೊಳಗೆ ಪರೀಕ್ಷೆ ನಡೆಸುತ್ತಿರುವುದಕ್ಕೆ ಸೂಕ್ತ ಕಾರಣ ಸಲ್ಲಿಸಬೇಕು ಎಂದು ರಾಜ್ಯ ಸರ್ಕಾರಕ್ಕೆ ಸೂಚಿಸಿದೆ.
ರಾಜ್ಯ ಸರ್ಕಾರ ಭೌತಿಕ ಪರೀಕ್ಷೆ ನಡೆಸುತ್ತಿರುವುದನ್ನು ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ತ್ರಿಸದಸ್ಯ ಪೀಠ, ‘ಕೋವಿಡ್‌ನಿಂದಾಗಿ ರಾಜ್ಯದಲ್ಲಿ ಪರಿಸ್ಥಿತಿ ಗಂಭೀರವಾಗಿದೆ. ದೇಶದ ಒಟ್ಟು ಪ್ರಕರಣಗಳಲ್ಲಿ ಕೇರಳದ ಪಾಲೇ ಶೇ.70ರಷ್ಟಿದೆ. ಹೀಗಿರುವಾಗ ಈ ವಯಸ್ಸಿನ ಮಕ್ಕಳನ್ನು ಅಪಾಯಕ್ಕೆ ಒಡ್ಡಬಾರದು. ಸೆ.6ರಿಂದ ಭೌತಿಕ ಪರೀಕ್ಷೆ ನಡೆಸಲು ರಾಜ್ಯ ಸರ್ಕಾರ ನೀಡಿರುವ ಕಾರಣ ಗಮನಿಸಿದರೆ, ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸದೇ ಇರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಈ ಬಗ್ಗೆ ಸರ್ಕಾರ ನೀಡಿರುವ ಉತ್ತರ ತೃಪ್ತಿದಾಯಕವಾಗಿಲ್ಲ. ಹೀಗಾಗಿ ಮುಂದಿನ ಆದೇಶದವರೆಗೂ ನಾವು ಭೌತಿಕ ಪರೀಕ್ಷೆಗಳಿಗೆ ತಾತ್ಕಾಲಿಕ ತಡೆ ನೀಡುತ್ತೇವೆ’ ಎಂದು ಹೇಳಿ ಸೆ.13ಕ್ಕೆ ಅರ್ಜಿ ವಿಚಾರಣೆ ಮುಂದೂಡಿತು.
ಪರೀಕ್ಷೆ ನಡೆಸುವುದು ರಾಜ್ಯ ಸರ್ಕಾರದ ನೀತಿ. ಈ ವಿಷಯದಲ್ಲಿ ಕೋರ್ಟ್‌ನ ಮಧ್ಯಪ್ರವೇಶ ಅಗತ್ಯವಿಲ್ಲ ಎಂದು ಇದೇ ಪ್ರಕರಣದಲ್ಲಿ ಈ ಹಿಂದೆ ರಾಜ್ಯ ಹೈಕೋರ್ಟ್ ಆದೇಶ ನೀಡಿತ್ತು. ಹೀಗಾಗಿ ಅದನ್ನು ಸುಪ್ರೀಂಕೋರ್ಟ್‌ನಲ್ಲಿ ಪ್ರಶ್ನಿಸಲಾಗಿತ್ತು.
ಶುಕ್ರವಾರ ಕೂಡಾ ಕೇರಳದಲ್ಲಿ 29322 ಹೊಸ ಸೋಂಕಿತರು ಪತ್ತೆಯಾಗಿದ್ದು, 131 ಜನರು ಸಾವನ್ನಪ್ಪಿದ್ದಾರೆ. ಟೆಸ್ಟ್ ಪಾಸಿಟಿವಿಟಿ ದರ ಶೇ.17.91ರಷ್ಟಿದೆ.
ಬೆಂಗಳೂರು ಕಾಲೇಜಲ್ಲಿ 32 ಮಂದಿಗೆ ಸೋಂಕು
ಬೆಂಗಳೂರು: ಕೊರೋನಾ ತೀವ್ರ ಪ್ರಮಾಣದಲ್ಲಿ ಏರುತ್ತಿರುವ ಕೇರಳದಿಂದ ಹೆಚ್ಚಿನ ವಿದ್ಯಾರ್ಥಿಗಳು ಆಗಮಿಸಿರುವ ಬೆಂಗಳೂರಿನ ಕ್ರಿಶ್ಚಿಯನ್ ನರ್ಸಿಂಗ್ ಕಾಲೇಜಿನಲ್ಲಿ 32 ವಿದ್ಯಾರ್ಥಿಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಹಿನ್ನೆಲೆಯಲ್ಲಿ ಕಾಲೇಜನ್ನು ಸೀಲ್‌ಡೌನ್ ಮಾಡಲಾಗಿದ್ದು, ಆರೋಗ್ಯ ಸಚಿವ ಡಾ
ಕೆ.ಸುಧಾಕರ್ ಕಾಲೇಜಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ಸುಪ್ರೀಂಕೋರ್ಟ್ ಹೇಳಿದ್ದೇನು?
1.ರಾಜ್ಯದಲ್ಲಿ ಕೋವಿಡ್ ಸ್ಥಿತಿ ಗಂಭೀರವಾಗಿದೆ, ನಿತ್ಯ 30000ದ ಆಸುಪಾಸು ಕೇಸು ದಾಖಲಾಗುತ್ತಿದೆ
2. ದೇಶದ ಒಟ್ಟು ಕೇಸಲ್ಲಿ ಕೇರಳದ ಪಾಲೇ ಶೇ.70ರಷ್ಟಿದೆ, ಹೀಗಾಗಿ ಮಕ್ಕಳನ್ನು ಅಪಾಯಕ್ಕೆ ಒಡ್ಡಲಾಗದು
3. ದೇಶದಲ್ಲೇ ಉತ್ತಮ ವೈದ್ಯಕೀಯ ವ್ಯವಸ್ಥೆ ಇದ್ದರೂ ರಾಜ್ಯದಲ್ಲಿ ಸೋಂಕು ನಿಯಂತ್ರಣ ಸಾಧ್ಯವಾಗುತ್ತಿಲ್ಲ
4. ಭೌತಿಕ ಪರೀಕ್ಷೆಯ ಅನಿವಾರ್ಯತೆ ಬಗ್ಗೆ ರಾಜ್ಯ ಸರ್ಕಾರ ನೀಡಿರುವ ಕಾರಣಗಳು ತೃಪ್ತಿದಾಯಕವಾಗಿಲ್ಲ
5. ಕೇರಳ ಸರ್ಕಾರ ಪರಿಸ್ಥಿತಿಯನ್ನು ಸೂಕ್ಷ್ಮವಾಗಿ ಅವಲೋಕಿಸಿಲ್ಲ ಎಂಬುದು ಮೇಲ್ನೋಟಕ್ಕೆ ಸಾಬೀತಾಗುತ್ತಿದೆ