
ನವದೆಹಲಿ: ‘ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರವು (ರೆರಾ) ಬಿಲ್ಡರ್‌ಗಳಿಗೆ ಅನುಕೂಲ ಮಾಡಿಕೊಡುತ್ತಿದೆಯೇ ಹೊರತು ಬೇರೇನೂ ಮಾಡುತ್ತಿಲ್ಲ. ಇದರ ಸ್ಥಾಪನೆ ಬಗ್ಗೆ ಎಲ್ಲಾ ರಾಜ್ಯಗಳು ಮರುಪರಿಶೀಲನೆ ನಡೆಸುವ ಸಮಯ ಬಂದಿದೆ’ ಎಂದು ಸುಪ್ರೀಂ ಕೋರ್ಟ್ ಗುರುವಾರ ಬೇಸರ ವ್ಯಕ್ತಪಡಿಸಿದೆ.
ಹಿಮಾಚಲ ಪ್ರದೇಶದ ರೇರಾ ಕಚೇರಿಯನ್ನು ಶಿಮ್ಲಾದಿಂದ ಧರ್ಮಶಾಲಾಕ್ಕೆ ಸ್ಥಳಾಂತರಿಸುವ ವಿಷಯದಲ್ಲಿ ಹಿಮಾಚಲ ಪ್ರದೇಶ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಹಿಮಾಚಲ ಸರ್ಕಾರ ಮತ್ತು ಇತರರು ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಮುಖ್ಯ ನ್ಯಾ. ಸೂರ್ಯಕಾಂತ್ ಹಾಗೂ ನ್ಯಾ. ಜಯಮಾಲ್ಯ ಬಾಗ್ಚಿ ಅವರಿದ್ದ ಪೀಠ, ‘ರೇರಾವನ್ನು ಯಾರಿಗಾಗಿ ಸ್ಥಾಪಿಸಲಾಗಿದೆಯೋ ಅವರು ಸಂಪೂರ್ಣ ಬೇಸರಗೊಂಡಿದ್ದು, ನಿರಾಶರಾಗಿದ್ದಾರೆ.
ಈ ಸಂಸ್ಥೆಯು ಬಿಲ್ಡರ್‌ಗಳಿಗೆ ಅನುಕೂಲ ಮಾಡುವುದನ್ನು ಬಿಟ್ಟು ಬೇರೇನನ್ನೂ ಮಾಡುತ್ತಿಲ್ಲ. ಇದನ್ನು ರದ್ದುಗೊಳಿಸುವುದೇ ಉತ್ತಮ, ಅದಕ್ಕೆ ನಮಗೆ ಅದರ ಬಗ್ಗೆ ಅಭ್ಯಂತರವಿಲ್ಲ’ ಎಂದಿತು. ಜೊತೆಗೆ, ‘ರೇರಾ ಸಂಸ್ಥೆಯ ಚಾಲನೆ ಬಗ್ಗೆ ಎಲ್ಲಾ ರಾಜ್ಯಗಳು ಮರುಚಿಂತನೆ ನಡೆಸಲು ಇದು ಸಕಾಲ’ ಎಂದು ಅಭಿಪ್ರಾಯಪಟ್ಟಿತು.
ಏನಿದು ರೇರಾ?: ರೇರಾ (ಆರ್‌ಇಆರ್‌ಎ) ಎಂದರೆ ರಿಯಲ್ ಎಸ್ಟೇಟ್ ನಿಯಂತ್ರಣ ಪ್ರಾಧಿಕಾರ. ರಿಯಲ್ ಎಸ್ಟೇಟ್ ವಲಯವನ್ನು ನಿಯಂತ್ರಿಸಲು, ಪಾರದರ್ಶಕತೆಯನ್ನು ಹೆಚ್ಚಿಸಲು ಮತ್ತು ಮನೆ ಖರೀದಿದಾರರನ್ನು ರಕ್ಷಿಸಲು 2016 ರಲ್ಲಿ ಭಾರತೀಯ ಸಂಸತ್ತು ಅಂಗೀಕರಿಸಿದ ಒಂದು ಮಹತ್ವದ ಕಾಯ್ದೆ. ಇದರನ್ವಯ ಬಿಲ್ಡರ್‌ಗಳು ಅದರಲ್ಲಿ ಕಡ್ಡಾಯವಾಗಿ ನೋಂದಣಿ ಮಾಡಿಸಿಕೊಳ್ಳಬೇಕು. ನಿಯಮಾನುಸಾರ ಮನೆ ನಿರ್ಮಿಸಬೇಕು. ನಿಗದಿತ ಅವಧಿಯಲ್ಲಿ ಮನೆಗಳನ್ನು ಖರೀದಿದಾರರಿಗೆ ಹಸ್ತಾಂತರಿಸಬೇಕು ಎಂಬ ಇತ್ಯಾದಿ ನಿಯಮಗಳಿವೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ