
ನವದೆಹಲಿ (ಆ.4): ನೀಟ್ ಪ್ರಶ್ನೆ ಪತ್ರಿಕೆ ಸೋರಿಕೆ ಖಂಡಿಸಿ ಜಿರಳೆ ಪಕ್ಷದ ನೇತೃತ್ವದಲ್ಲಿ ನಡೆದ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ದಾಖಲಾಗಿರುವ ಎಫ್‌ಐಆರ್‌ಗಳನ್ನು ವಾಪಸ್ ಪಡೆಯಲು ರಾಜ್ಯ ಸರ್ಕಾರಗಳು ಸ್ವತಂತ್ರ. ಆದರೆ ‘ಗಂಭೀರ ಹಾಗೂ ಘೋರ ಅಪರಾಧದ ಹಿನ್ನೆಲೆ ಹೊಂದಿರುವ ಪ್ರತಿಭಟನಾಕಾರರಿಗೆ ಇದು ಅನ್ವಯ ಆಗಲ್ಲ ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾ.ಜೋಯ್ ಮಲ್ಯ ಬಾಗ್ಚಿ ಹಾಗೂ ನ್ಯಾ.ವಿ.ಮೋಹನ್ ಅವರಿದ್ದ ಪೀಠವು, ‘ಅಪರಾಧದ ಹಿನ್ನೆಲೆ’ ಇರುವವರನ್ನು ಹೊರತುಪಡಿಸಿ ಉಳಿದವರು ಅಂದರೆ, ಘೋರ ಅಪರಾಧ ಮತ್ತು ಗಂಭೀರ ಆರೋಪಗಳನ್ನು ಹೊತ್ತಿರುವವರು ಎಂದರ್ಥ ಎಂದು ಇದೇ ವೇಳೆ ಸ್ಪಷ್ಟನೆಯನ್ನೂ ನೀಡಿದೆ.
ದೆಹಲಿಯಲ್ಲಿ ಸಿಜೆಪಿ ನೇತೃತ್ವದಲ್ಲಿ ನಡೆದಿದ್ದ ವಿದ್ಯಾರ್ಥಿ ಪ್ರತಿಭಟನೆ ಸಂದರ್ಭದ ಹಿಂಸಾಚಾರಕ್ಕೆ ಸಂಬಂಧಿಸಿ ಸಲ್ಲಿಕೆಯಾಗಿದ್ದ ಅರ್ಜಿ ವಿಚಾರಣೆ ವೇಳೆ ಈ ಸ್ಪಷ್ಟನೆ ನೀಡಲಾಗಿದೆ.
ವಿಚಾರಣೆ ವೇಳೆ ಕೇಂದ್ರ ಸರ್ಕಾರವು ನೀಟ್ ಪ್ರತಿಭಟನೆ ವೇಳೆ ವಿದ್ಯಾರ್ಥಿಗಳ ಮೇಲೆ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆದುಕೊಳ್ಳುವ ವಿಚಾರಕ್ಕೆ ತಾನು ಬದ್ಧನಾಗಿದ್ದೇನೆ. ಆದರೆ, ‘ಕ್ರಿಮಿನಲ್ ಅಥವಾ ಅಪರಾಧದ ಹಿನ್ನಲೆ’ ಹೊಂದಿರುವವರ ಕೇಸ್ ವಾಪಸ್ ಪಡೆಯುವುದಿಲ್ಲ ಎಂದು ಕೋರ್ಟ್ ಮುಂದೆ ಹೇಳಿದೆ.
ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು, ವಿದ್ಯಾರ್ಥಿಗಳ ವಿರುದ್ಧ ದಾಖಲಾದ ಎಫ್‌ಐಆರ್‌ಗಳನ್ನು ಹಿಂಪಡೆಯುವ ವಿಚಾರದಲ್ಲಿ ಕೆಲ ತಪ್ಪು ಕಲ್ಪನೆಗಳಿವೆ. ಸರ್ಕಾರ ಗಂಭೀರ ಹಾಗೂ ಘೋರ ಅಪರಾಧದ ಪ್ರಕರಣದ ಆರೋಪ ಎದುರಿಸುತ್ತಿರುವ 2,700 ಮಂದಿಯ ಪ್ರಕರಣಗಳನ್ನು ವಾಪಸ್ ಪಡೆಯುವುದಿಲ್ಲ ಎಂದು ತಿಳಿಸಿದರು.
ಈ ವೇಳೆ ಹಿರಿಯ ವಕೀಲ ಅಭಿಷೇಕ್ ಸಿಂಘ್ವಿ ಅವರು, ಕ್ರಿಮಿನಲ್ ಹಿನ್ನೆಲೆ ಕುರಿತು ಸ್ಪಷ್ಟೀಕರಣ ನೀಡಬೇಕು. ಯಾಕೆಂದರೆ ವಿದ್ಯಾರ್ಥಿಗಳು ಟ್ರಾಫಿಕ್ ನಿಯಮ ಉಲ್ಲಂಘಿಸಿರಬಹುದು, ಸಣ್ಣ ಪುಟ್ಟ ಅಥವಾ ರಾಜಕೀಯಪ್ರೇರಿತ ಕೇಸುಗಳನ್ನು ಎದುರಿಸುತ್ತಿರಬಹುದು ಎಂದರು.
ಆಗ ನ್ಯಾಯಾಲಯವು ಕ್ರಿಮಿನಲ್ ಹಿನ್ನೆಲೆ ಅಥವಾ ಅಪರಾಧದ ಹಿನ್ನೆಲೆ ಅಂದರೆ ಗಂಭೀರ ಅಥವಾ ಘೋರ ಅಪರಾಧ ಎಂದು ಸ್ಪಷ್ಟೀಕರಣ ನೀಡಿತು.
ವಿಚಾರಣೆ ವೇಳೆ ಹಿರಿಯ ವಕೀಲ ಗೋಪಾಲ್ ಶಂಕರನಾರಾಯಣ ಅವರು, ಪ್ರತಿಭಟನೆ ವೇಳೆ ವಕೀಲರ ಮಕ್ಕಳ ಮೇಲೂ ಹಲ್ಲೆ ನಡೆಸಲಾಗಿದೆ ಎಂದು ಹೇಳಿದರು.
ಜತೆಗೆ, ಹಿಂಸಾಚಾರದ ವಿಡಿಯೋಗಳು ಆಘಾತಕಾರಿಯಾಗಿವೆ. ನಾವು 300ಕ್ಕೂ ಹೆಚ್ಚು ವಿಡಿಯೋಗಳನ್ನು ನೀಡಿದ್ದೇವೆ. ಪ್ರತಿಭಟನೆ ನಿಯಂತ್ರಿಸುವ ಆದೇಶಗಳು ಮೇಲಿಂದಲೇ ಬಂದಿರುವ ಹಿನ್ನೆಲೆಯಲ್ಲಿ ಪೊಲೀಸ್ ಕಮಿಷನರ್ ಅವರು ಇವುಗಳ ಕುರಿತು ಪರಿಶೀಲನೆ ನಡೆಸಬೇಕು ಎಂದು ಹೇಳಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ