Mekedatu project: ಮೇಕೆದಾಟು ಯೋಜನೆ, ಕರ್ನಾಟಕಕ್ಕೆ ಗೆಲುವು, ತಮಿಳುನಾಡು ಅರ್ಜಿ ವಜಾ, ಸುಪ್ರೀಂಗೆ ಧನ್ಯವಾದ ಹೇಳಿದ ಡಿಕೆಶಿ

Kannadaprabha News   | Kannada Prabha
Published : May 27, 2026, 07:01 AM IST
Supreme court reject tamilunadu ple mekedatu project

ಸಾರಾಂಶ

ಮೇಕೆದಾಟು ಯೋಜನೆ ವಿರೋಧಿಸಿ ತಮಿಳುನಾಡು ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌ ವಜಾಗೊಳಿಸಿದ್ದು, ಕರ್ನಾಟಕಕ್ಕೆ ದೊಡ್ಡ ಜಯ ಸಿಕ್ಕಿದೆ. ಬೆಂಗಳೂರು ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಗೆ ಕುಡಿಯುವ ನೀರು ಒದಗಿಸುವ ಈ ಯೋಜನೆಗೆ ಇದ್ದ ಪ್ರಮುಖ ಅಡಚಣೆ ನಿವಾರಣೆಯಾದಂತಾಗಿದೆ.

 ನವದೆಹಲಿ (ಮೇ.27): ಕರ್ನಾಟಕ ಸರ್ಕಾರದ ಪ್ರಸ್ತಾವಿತ ಮೇಕೆದಾಟು ಯೋಜನೆ(Mekedatu project) ವಿರೋಧಿಸಿ ತಮಿಳುನಾಡು(Tamilunadu) ಸಲ್ಲಿಸಿದ್ದ ಪರಿಶೀಲನಾ ಅರ್ಜಿಯನ್ನು ಸುಪ್ರೀಂಕೋರ್ಟ್‌(Supreme court) ವಜಾಗೊಳಿಸಿದ್ದು, ಕರ್ನಾಟಕ(Karnataka)ಕ್ಕೆ ಬಹು ದೊಡ್ಡ ಜಯ ಸಿಕ್ಕಿದೆ.

ಮೇಕೆದಾಟು: ತಮಿಳುನಾಡು ಅರ್ಜಿ ವಜಾಗೊಳಿಸಿದ ಸುಪ್ರೀಂ

ಮೇಕೆದಾಟು ಯೋಜನೆ ವಿರುದ್ಧ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಗಳನ್ನು ಸುಪ್ರೀಂಕೋರ್ಟ್‌ 2025ರ ನವೆಂಬರ್‌ನಲ್ಲಿ ವಜಾಗೊಳಿಸಿತ್ತು. ತಮಿಳುನಾಡಿನ ಆಕ್ಷೇಪಣೆ, ತಜ್ಞ ಸಂಸ್ಥೆಗಳು, ಕಾವೇರಿ ನೀರು ನಿಯಂತ್ರಣ ಸಮಿತಿ ಮತ್ತು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ಅಭಿಪ್ರಾಯ ಪರಿಗಣಿಸಿದ ನಂತರವೇ ಆಯೋಗ ಯೋಜನೆಗೆ ಅನುಮೋದನೆ ನೀಡಲಿದೆ ಎಂದು ತಿಳಿಸಿತ್ತು. ಈ ಮಧ್ಯೆ, 2025ರ ತೀರ್ಪನ್ನು ಮರುಪರಿಶೀಲಿಸುವಂತೆ ಕೋರಿ ತಮಿಳುನಾಡು ಮತ್ತೆ ನ್ಯಾಯಾಲಯದ ಮೆಟ್ಟಿಲೇರಿತ್ತು. ಮಂಗಳವಾರ ಈ ಪರಿಶೀಲನಾ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್‌, ನ್ಯಾ.ಜೋಯ್ಮಲ್ಯ ಬಾಗ್ಚಿ ಹಾಗೂ ನ್ಯಾ.ವಿಫುಲ್‌ ಎಂ. ಪಾಂಚೋಲಿ ಅವರಿದ್ದ ತ್ರಿಸದಸ್ಯ ಪೀಠ ಅರ್ಜಿಯನ್ನು ವಜಾಗೊಳಿಸಿದೆ.

ಏನಿದು ಮೇಕೆದಾಟು ಪ್ರಾಜೆಕ್ಟ್?

ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಮತ್ತು ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಕುಡಿಯುವ ನೀರು ಒದಗಿಸುವ ಪ್ರಮುಖ ಉದ್ದೇಶದಿಂದ ಕರ್ನಾಟಕ ಸರ್ಕಾರ ಬೆಂಗಳೂರು ದಕ್ಷಿಣ ಜಿಲ್ಲೆಯ ಮೇಕೆದಾಟು ಬಳಿ ಅಣೆಕಟ್ಟು ನಿರ್ಮಾಣಕ್ಕೆ ಮುಂದಾಗಿದೆ. ಇದಕ್ಕೆ ತಮಿಳುನಾಡು ಸರ್ಕಾರ ವಿರೋಧ ವ್ಯಕ್ತಪಡಿಸಿದ್ದು, ಅಣೆಕಟ್ಟು ನಿರ್ಮಾಣದಿಂದ ತಮಿಳುನಾಡಿಗೆ ನೈಸರ್ಗಿಕವಾಗಿ ಹರಿದು ಬರುವ ಕಾವೇರಿ ನೀರಿನ ಪ್ರಮಾಣ ಕಡಿಮೆಯಾಗುತ್ತದೆ. ಅಲ್ಲದೆ, ಇದು ಕಾವೇರಿ ಜಲವಿವಾದ ನ್ಯಾಯಾಧಿಕರಣ ಮತ್ತು ಸುಪ್ರೀಂಕೋರ್ಟ್ ನೀಡಿರುವ ತೀರ್ಪಿನ ಉಲ್ಲಂಘನೆಯಾಗಿದೆ. ಕೆಳ ಹಂತದ ರಾಜ್ಯದ (ತಮಿಳುನಾಡು) ಒಪ್ಪಿಗೆಯಿಲ್ಲದೆ ನದಿಯ ಮೇಲ್ಭಾಗದಲ್ಲಿ ಯಾವುದೇ ಯೋಜನೆ ಮಾಡುವಂತಿಲ್ಲ ಎಂದು ಆಕ್ಷೇಪಿಸಿ, ಅಣೆಕಟ್ಟು ನಿರ್ಮಾಣಕ್ಕೆ ಅನುಮತಿ ನೀಡುವ ಬಗ್ಗೆ ಪರಿಶೀಲನೆ ನಡೆಸುವಂತೆ ಕೋರಿ ಅರ್ಜಿ ಸಲ್ಲಿಸಿತ್ತು.

ತಮಿಳುನಾಡು ವಾದವನ್ನು ಆಕ್ಷೇಪಿಸಿದ್ದ ಕರ್ನಾಟಕ, ಮಳೆಗಾಲದಲ್ಲಿ ಕಾವೇರಿ ಜಲಾನಯನ ಪ್ರದೇಶದಲ್ಲಿ ಮಳೆ ಹೆಚ್ಚಾದಾಗ, ಜಲಾಶಯಗಳು ಭರ್ತಿಯಾಗಿ, ಹೆಚ್ಚುವರಿ ನೀರು ಅಪಾರ ಪ್ರಮಾಣದಲ್ಲಿ ತಮಿಳುನಾಡಿನ ಮೂಲಕ ಸಮುದ್ರ ಪಾಲಾಗುತ್ತದೆ. ಈ ಹೆಚ್ಚುವರಿ ನೀರನ್ನು ಮಾತ್ರ ಮೇಕೆದಾಟುವಿನಲ್ಲಿ ಸಂಗ್ರಹಿಸಲಾಗುವುದು. ಸುಪ್ರೀಂಕೋರ್ಟ್ ಆದೇಶದಂತೆ ತಮಿಳುನಾಡಿಗೆ ಬಿಡಬೇಕಾದ ನೀರಿನ ಪಾಲನ್ನು ನೀಡಿದ ನಂತರವೇ ಉಳಿಯುವ ನೀರನ್ನು ಸಂಗ್ರಹಿಸಲಾಗುವುದು, ಇದರಿಂದ ತಮಿಳುನಾಡಿಗೆ ಯಾವುದೇ ನಷ್ಟವಿಲ್ಲ. ಇದು ಕುಡಿಯುವ ನೀರಿನ ಯೋಜನೆಯಾಗಿದ್ದು, ರಾಷ್ಟ್ರೀಯ ಜಲ ನೀತಿಯ ಪ್ರಕಾರ ಕುಡಿಯುವ ನೀರಿನ ಯೋಜನೆಗಳಿಗೆ ಮೊದಲ ಆದ್ಯತೆ ನೀಡಬೇಕು ಎಂದು ವಾದಿಸಿತ್ತು.

ಸುಪ್ರೀಂಗೆ ಧನ್ಯವಾದ ಹೇಳಿದ ಡಿಕೆಶಿ:

ಸುಪ್ರೀಂಕೋರ್ಟ್‌ ತೀರ್ಪು ಕರ್ನಾಟಕದ ಪಾಲಿಗೆ ಶುಭ ಸುದ್ದಿ. ಕರ್ನಾಟಕ ರಾಜ್ಯದ ಪರವಾಗಿ ನಾವು ಸುಪ್ರೀಂಕೋರ್ಟ್‌ಗೆ ಧನ್ಯವಾದ ಅರ್ಪಿಸುತ್ತೇವೆ ಎಂದು ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಹರ್ಷ ವ್ಯಕ್ತಪಡಿಸಿದ್ದಾರೆ.

ದೆಹಲಿಯ ಕರ್ನಾಟಕ ಭವನದಲ್ಲಿ ಮಂಗಳವಾರ ಸುದ್ದಿಗಾರರ ಜೊತೆ ಮಾತನಾಡಿ, ಸುಪ್ರೀಂಕೋರ್ಟ್‌ ಈ ಹಿಂದಿನ ಆದೇಶದಲ್ಲೇ ನಮಗೆ ಸ್ಪಷ್ಟ ಆದೇಶ ನೀಡಿದೆ. ತಮಿಳುನಾಡಿಗೆ 177 ಟಿಎಂಸಿ ನೀರು ಹರಿಸಲು ಸೂಚಿಸಿದೆ. ಅದನ್ನು ನಾವು ಪಾಲಿಸುತ್ತಿದ್ದು, ಉಳಿದ ನೀರಿನ ಸಂಗ್ರಹಕ್ಕೆ ಮುಂದಾಗಿದ್ದೇವೆ. ಈಗ ಈ ಯೋಜನೆ ಕುರಿತು ತೀರ್ಮಾನ ಮಾಡಬೇಕಾಗಿರುವುದು ಕೇಂದ್ರ ಸರ್ಕಾರ. ನಾವು ಪರಿಷ್ಕೃತ ಡಿಪಿಆರ್‌ ಸಲ್ಲಿಕೆ ಪ್ರಕ್ರಿಯೆಯಲ್ಲಿದ್ದೇವೆ ಎಂದು ತಿಳಿಸಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

India Latest News Live: ತಿರುಪತಿಗೆ ಒಂದೇ ದಿನ ದಾಖಲೆ 98058 ಭಕ್ತರ ಭೇಟಿ, ದೇವರ ದರ್ಶನ
Bihar travel Mandatory: ಬಿಹಾರ ಸರ್ಕಾರಿ ನೌಕರರಿಗೆ 3 ತಿಂಗಳಿಗೊಮ್ಮೆ ಪ್ರವಾಸ ಹೋಗುವುದು ಕಡ್ಡಾಯ!