ಸಂಜಯ್ ಸಿಂಗ್‌ಗೆ ಮೋದಿ ಡಿಗ್ರಿ ಪ್ರಕರಣದ ಶಾಕ್, ಸಮನ್ಸ್ ರದ್ದುಪಡಿಸಲು ಸುಪ್ರೀಂ ನಿರಾಕರಣೆ!

By Suvarna NewsFirst Published Apr 8, 2024, 2:10 PM IST
Highlights

ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ಜೈಲು ಪಾಲಾಗಿದ್ದ ಆಪ್ ನಾಯಕ ಸಂಜಯ್ ಸಿಂಗ್ ಇತ್ತೀಚೆಗೆ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದು ಚುನಾವಣೆ ತೊಡಗಿಕೊಂಡಿರುವ ಸಂಜಯ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಶಾಕ್ ನೀಡಿದೆ. ಮೋದಿ ಪದವಿ ಪ್ರಶ್ನಿಸಿದ ಪ್ರಕರಣದಲ್ಲಿ ಸಮನ್ಸ್ ರದ್ದುಪಡಿಸಲು ಸುಪ್ರೀಂ ನಿರಾಕರಿಸಿದೆ.
 

ನವದೆಹಲಿ(ಏ.08) ಆಮ್ ಆದ್ಮಿ ಪಾರ್ಟಿ ಸಂಕಷ್ಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ದೆಹಲಿ ಅಬಕಾರಿ ನೀತಿ ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಮಾಡಿ ಜೈಲು ಸೇರಿದ್ದ ಆಪ್ ಸಂಸದ ಸಂಜಯ್ ಸಿಂಗ್‌ಗೆ ಇತ್ತೀಚೆಗೆ ಸುಪ್ರೀಂ ಕೋರ್ಟ್ ಜಾಮೀನು ನೀಡಿದೆ. ಈಗಾಗಲೇ ಜೈಲಿನಿಂದ ಬಿಡುಗಡೆಯಾಗಿರುವ ಸಂಜಯ್ ಸಿಂಗ್ ಲೋಕಸಭಾ ಚುನಾವಣೆ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದಾರೆ. ಇದರ ನಡುವೆ ಸುಪ್ರೀಂ ಕೋರ್ಟ್ ಮತ್ತೊಂದು ಪ್ರಕರಣದಲ್ಲಿ ಶಾಕ್ ನೀಡಿದೆ. ಪ್ರಧಾನಿ ಮೋದಿ ಪದವಿ ಪ್ರಶ್ನಿಸಿದ್ದ ಸಂಜಯ್ ಸಿಂಗ್ ವಿರುದ್ದ ಗುಜರಾತ್ ವಿಶ್ವವಿದ್ಯಾಲಯ ದಾಖಲಿಸಿದ್ದ ಮಾನನಷ್ಟ ಮೊಕದ್ದಮೆ ಪ್ರಕರಣ ಸಂಬಂಧ ಗುಜರಾತ್ ಉಚ್ಚ ನ್ಯಾಯಾಲಯ ಹೊರಡಿಸಿರುವ ಸಮನ್ಸ್ ರದ್ದು ಪಡಿಸಲು ಸುಪ್ರೀಂ ಕೋರ್ಟ್ ನಿರಾಕರಿಸಿದೆ. 

ಪ್ರಧಾನಿ ನರೇಂದ್ರ ಮೋದಿ ಪದವಿಯನ್ನು ಪ್ರಶ್ನಿಸಿ ಸಿಎಂ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಹೇಳಿಕೆ ನೀಡಿದ್ದರು. ಪ್ರಧಾನಿ ಮೋದಿ ಪದವಿ ನಕಲಿ ಎಂದಿದ್ದರು. ಈ ಹೇಳಿಕೆಯಿಂದ ಮೋದಿಗೆ ಪದವಿ ಪ್ರಮಾಣ ಮಾಡಿದ್ದ ಗುಜರಾತ್ ವಿಶ್ವವಿದ್ಯಾಲಯ ಕೆರಳಿತ್ತು. ಇಂತಹ ಹೇಳಿಕೆಯಿಂದ ವಿಶ್ವವಿದ್ಯಾಲಯದ ಮೇಲೆ ವಿದ್ಯಾರ್ಥಿಗಳು ನಂಬಿಕೆ ಕಳೆದುಕೊಳ್ಳುತ್ತಾರೆ ಎಂದು ಆರೋಪಿಸಿ ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ವಿರುದ್ಧ ಗುಜರಾತ್ ವಿಶ್ವವಿದ್ಯಾಲಯದ ರಿಜಿಸ್ಟ್ರಾರ್ ಪಿಯೂಷ್ ಪಟೆಲ್ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.

ಸಂಕಷ್ಟದ ನಡುವೆ ಆಪ್‌ಗೆ ಬಿಗ್ ರಿಲೀಫ್, ಸಂಜಯ್ ಸಿಂಗ್‌ಗೆ ಸುಪ್ರೀಂ ಕೋರ್ಟ್ ಜಾಮೀನು!

ಗುಜರಾತ್ ಸ್ಥಳೀಯ ನ್ಯಾಯಾಲಯ ಈ ಕುರಿತು ವಿಚಾರಣೆ ನಡೆಸಿತ್ತು. ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್‌ಗೆ ಸಮನ್ಸ್ ನೀಡಿತ್ತು. ಈ ಪ್ರಕರಣ ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿತ್ತು. ಇದೇ ವೇಳೆ ಕೇಜ್ರಿವಾಲ್‌ ಹಾಗೂ ಸಂಸದ ಸಂಜಯ್‌ ಸಿಂಗ್‌ ವಿರುದ್ಧ ಗುಜರಾತ್‌ನ ಸ್ಥಳೀಯ ನ್ಯಾಯಾಲಯಗಳಲ್ಲಿ ದಾಖಲಾಗಿರುವ ಪ್ರಕರಣವನ್ನು ಗುಜರಾತ್‌ನಿಂದ ಹೊರಗೆ ವರ್ಗಾಯಿಸುವಂತೆ ಕೋರಲಾಗಿತ್ತು. ಕೋಲ್ಕತಾದಲ್ಲಿ ಈ ಪ್ರಕರಣ ವಿಚಾರಣೆ ನಡೆಸಲು ಮನವಿ ಮಾಡಲಾಗಿತ್ತು.

ಜನವರಿಯಲ್ಲಿ  ಪ್ರಧಾನಿ ನರೇಂದ್ರ ಮೋದಿ ಅವರ ಪದವಿ ಕುರಿತು ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ವಿರುದ್ಧ ನಡೆಯುತ್ತಿರುವ ವಿಚಾರಣೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿತ್ತು.  

ಮನೆ ಊಟ, ಮೆತ್ತನೆಯ ಬೆಡ್‌ ಕೊಡ್ತಿಲ್ಲ... ಕೋರ್ಟ್‌ ಮೆಟ್ಟಿಲೇರಿದ ಕೆಸಿಆರ್ ಪುತ್ರಿ ಕೆ.ಕವಿತಾ!

ಒಂದು ವೇಳೆ ಪ್ರಧಾನಿ ಮೋದಿ ಅವರು ಪಂಜಾಬ್‌ ಮತ್ತು ದೆಹಲಿ ವಿಶ್ವ ವಿದ್ಯಾಲಯಗಳಲ್ಲಿ ಓದಿಲ್ಲ ಎಂದಾದರೆ ಆ ವಿಶ್ವವಿದ್ಯಾಲಯಗಳು ಸಂತೋಷ ಪಡಬೇಕು. ಅದರ ಬದಲು ವು ಮಾಹಿತಿಯನ್ನು ಮುಚ್ಚಿಡುತ್ತಿವೆ. ಮೋದಿ ಸರಿಯಾದ ಡಿಗ್ರಿಯನ್ನು ಹೊಂದಿದ್ದರೆ ಗುಜರಾತ್‌ ವಿವಿ ಅದನ್ನು ಬಹಿರಂಗಗೊಳಿಸಬೇಕು. ಅದರ ಬದಲು ಮುಚ್ಚಿಡಲು ಮೋದಿ ಅವರ ಅಹಂಕಾರ ಅಥವಾ ಡಿಗ್ರಿ ಸುಳ್ಳಾಗಿರುವುದು ಕಾರಣವಾಗಿರಬಹುದು ಎಂದು ಅರವಿಂದ್ ಕೇಜ್ರಿವಾಲ್ ಹಾಗೂ ಸಂಜಯ್ ಸಿಂಗ್ ಆರೋಪಿಸಿದ್ದರು. 
 

click me!