ಕೇಂದ್ರದಿಂದ 18 ಸಾವಿರ ಕೋಟಿ ರು. ಬರ ಪರಿಹಾರ ಬಿಡುಗಡೆ ವಿಚಾರವಾಗಿ ಕರ್ನಾಟಕ ಹೂಡಿದ್ದ ದಾವೆ ಹಿನ್ನೆಲೆ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿದೆ.
ನವದೆಹಲಿ (ಏ.08): 18 ಸಾವಿರ ಕೋಟಿ ರು. ಬರ ಪರಿಹಾರ ಬಿಡುಗಡೆ ಮಾಡಲು ನಿರ್ದೇಶನ ನೀಡುವಂತೆ ಕೇಂದ್ರ ಸರ್ಕಾರದ ವಿರುದ್ಧ ಕರ್ನಾಟಕ ಸರ್ಕಾರ ಸುಪ್ರೀಂಕೋರ್ಟ್ ಮೆಟ್ಟಿಲೇರಿತ್ತು. ಇದೀಗ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ಕೇಂದ್ರ ಸರ್ಕಾರಕ್ಕೆ ನೋಟೀಸ್ ಜಾರಿ ಮಾಡಿದೆ. ಎರಡು ವಾರದಲ್ಲಿ ಉತ್ತರಿಸುವಂತೆ ಕೇಂದ್ರಕ್ಕೆ ಸೂಚನೆ ನೀಡಿರುವ ಸುಪ್ರೀಂ ಮುಂದಿನ ವಿಚಾರಣೆಯನ್ನು ಎರಡು ವಾರಗಳ ಕಾಲ ಮುಂದೂಡಿದೆ.
ಹಿರಿಯ ವಕೀಲ ಕಪಿಲ್ ಸಿಬಲ್ ಕರ್ನಾಟಕ ಪರ ವಾದ ಮಂಡನೆ ಮಾಡುತ್ತಿದ್ದು, ಈ ವೇಳೆ ಚುನಾವಣಾ ಆಯೋಗವನ್ನು ಪಾರ್ಟಿ ಮಾಡುವಂತೆ ಕಪಿಲ್ ಸಿಬಲ್ ಪೀಠಕ್ಕೆ ತಿಳಿಸಿ, ಈ ಪ್ರಕರಣವನ್ನು ಒಂದು ತಿಂಗಳೊಳಗೆ ನಿರ್ಧರಿಸಬೇಕು ಎಂದು ಆಗ್ರಹಿಸಿದರು. ಇದಕ್ಕೆ ಕೇಂದ್ರದಿಂದ ಉತ್ತರ ಬರಲಿ ಅಮೇಲೆ ನೋಡೋಣ ಎಂದು ಕೋರ್ಟ್ ಹೇಳಿದೆ.
ಕೇಂದ್ರದ ಪರ ವಾದ ಮಂಡಿಸಿದ ಎಸ್‌ಜಿ ಮೆಹ್ತಾ, ಕರ್ನಾಟಕ 32 ಅರ್ಜಿಗಳು ಸಲ್ಲಿಸುವ ಬದಲು ಕೇಂದ್ರದೊಂದಿಗೆ ಮಾತನಾಡಬಹುದಿತ್ತು. ಅರ್ಜಿಗಳ ಹಾಕಿರುವ ಸಮಯ ನೋಡಿದ್ರೆ ಗೊತ್ತಾಗುತ್ತದೆ. ಕೋರ್ಟ್ ನೋಟಿಸ್ ನೀಡದೇ ಇರಬಹುದು, ಆದ್ರೆ ಇದು ಸುದ್ದಿ ಆಗುತ್ತದೆ ಎಂದು ವಾದಿಸಿದರು.
ಸುಪ್ರೀಂ ಕೋರ್ಟ್ : ಒಕ್ಕೂಟ ಮತ್ತು ರಾಜ್ಯಗಳ ನಡುವೆ ಸ್ಪರ್ಧೆ ಬೇಡ. ವಿವಿಧ ರಾಜ್ಯ ಸರ್ಕಾರಗಳು ನ್ಯಾಯಾಲಯದ ಮೊರೆ ಹೋಗುತ್ತಿರುವುದನ್ನು ನಾವು ನೋಡುತ್ತಿದ್ದೇವೆ. ಇದೀಗ ಕೇಂದ್ರವು ಬರ ಪರಿಹಾರ ಹಣವನ್ನು ಬಿಡುಗಡೆ ಮಾಡುತ್ತಿಲ್ಲ ಎಂದು ಆರೋಪಿಸಿ ಕರ್ನಾಟಕ ಮನವಿ ಸಲ್ಲಿಸಿದೆ. ನೀವಿಬ್ಬರು ಮಾತನಾಡಲು ಬಯಸುತ್ತೇವೆ. ನಿಮ್ಮ ಮಧ್ಯಸ್ಥಿಕೆಯಿಂದ ಈ ಮನವಿಯು ನಿರುಪಯುಕ್ತವಾಗಬಹುದು.
ಕೇಂದ್ರದ ಪರ ಅಟಾರ್ನಿ ಜನರಲ್ ಆರ್ ವೆಂಕಟರಮಣಿ ಕೂಡ ವಾದ ಮಂಡಿಸಿ, ಪೀಠವು ನೋಟಿಸ್ ನೀಡಲಿಲ್ಲ ಉತ್ತರಿಸಲು 2 ವಾರಗಳು ಅಗತ್ಯವಾಗುತ್ತದೆ ಎಂದರು.
ಕೇಂದ್ರ ಕೃಷಿ ಇಲಾಖೆ ಹಾಗು ರಾಷ್ಟ್ರೀಯ ವಿಕೋಪ ನಿರ್ವಹಣಾ ಪ್ರಾಧಿಕಾರದ ವಿರುದ್ದ ದೂರು ಸಲ್ಲಿಸಿರುವ ಕರ್ನಾಟಕ ಬರಪರಿಹಾರ ಬಿಡುಗಡೆಗೆ ನಿರ್ಲಕ್ಷ್ಯ ತೋರುತ್ತಿದೆ ಎಂದು ಸುಪ್ರೀಂನಲ್ಲಿ ದಾವೆ ಹೂಡಿದೆ.
ತನಗೆ ಬರ ಪರಿಹಾರವನ್ನು ಕೇಂದ್ರ ಸರ್ಕಾರ ನೀಡುತ್ತಿಲ್ಲ ಎಂದು ಮಾ.23ರಂದು ಕರ್ನಾಟಕ ಸರ್ಕಾರ ಕೂಡ ಸುಪ್ರೀಂಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ತನ್ಮೂಲಕ ಬರ ಪರಿಹಾರಕ್ಕಾಗಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ದೇಶದ ಮೊದಲ ರಾಜ್ಯ ಎನಿಸಿಕೊಂಡಿತ್ತು. ಇನ್ನೊಂದೆಡೆ ಕೇರಳ ಸರ್ಕಾರ ಕೂಡಾ, ಹೆಚ್ಚುವರಿ ಸಾಲ ಪಡೆಯಲು ಕೇಂದ್ರ ಸರ್ಕಾರ ಅನುಮತಿ ನೀಡಿಲ್ಲ ಎಂದು ಸುಪ್ರೀಂಕೋರ್ಟ್ ಮೆಟ್ಟಿಲೇರಿದೆ. ಈ ವಿಷಯ ಇದೀಗ 5 ಸದಸ್ಯರ ಸಾಂವಿಧಾನ ಪೀಠಕ್ಕ ವರ್ಗಾವಣೆಯಾಗಿದೆ.
ಕರ್ನಾಟಕದ ಬಳಿಕ ನೆರೆ ಪರಿಹಾರ ಕೊಡಿಸುವಂತೆ ತಮಿಳುನಾಡು ಸರ್ಕಾರ ಕೂಡ ಸರ್ವೋಚ್ಚ ನ್ಯಾಯಾಲಯದ ಕದ ಬಡಿದಿತ್ತು. ಈ ಮೂಲಕ ಕೇಂದ್ರ ಸರ್ಕಾರ ಅನುದಾನ ಹಾಗೂ ಪರಿಹಾರ ಹಂಚಿಕೆಯಲ್ಲಿ ದಕ್ಷಿಣ ಭಾರತಕ್ಕೆ ತಾರತಮ್ಯ ಮಾಡುತ್ತಿದೆ ಎಂದು ದನಿ ಎತ್ತಿರುವ ದಕ್ಷಿಣ ರಾಜ್ಯಗಳು ಈಗ ಕಾನೂನು ಸಮರವನ್ನು ತೀವ್ರಗೊಳಿಸಿದಂತಾಗಿದೆ.
ಬೆಳೆ ನಷ್ಟದ ಪರಿಹಾರಕ್ಕಾಗಿ 4,663.112ಕೋಟಿರು. ಬರಗಾಲದಿಂದ ಸಮಸ್ಯೆ ಗೊಳಗಾಗಿರುವ ಕುಟುಂಬಗಳಿಗೆ ಪರಿಹಾರ ನೀಡಲು 12,577.9 ಕೋಟಿ ರು., ಕುಡಿಯುವ ನೀರು ಪೂರೈಕೆಗೆ 566.78 ಕೋಟಿ ರು., ಜಾನುವಾರು ಆರೈಕೆಗೆ 363.68 ಕೋಟಿ ರು. ಸೇರಿದಂತೆ 18,171.44 ಕೋಟಿ ರು. ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್‌ನಲ್ಲಿ ರಿಟ್ ಅರ್ಜಿ ಸಲ್ಲಿಸುವ ಮುನ್ನ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸುಮಾರು 1 ತಿಂಗಳ ಕಾಲ ಸರ್ಕಾರದ ಹಿರಿಯ ಸಚಿವರು, ಅಧಿಕಾರಿಗಳು ಹಾಗೂ ಕಾನೂನು ತಜ್ಞರ ಸಲಹೆ ಪಡೆದು ರಾಜ್ಯ ಸರ್ಕಾರ ಅರ್ಜಿ ಸಲ್ಲಿಸಿತ್ತು.