
ನವದೆಹಲಿ :ಎಸ್ಪಿಗಳ ಅನುಮತಿ ಇಲ್ಲದೆ ಕ್ರಿಮಿನಲ್ ಪ್ರಕರಣದ ತನಿಖೆಗೆ ಸಂಬಂಧಿಸಿ ತನಿಖಾ ಅಧಿಕಾರಿಗಳು (ಐಒ) ವಕೀಲರಿಗೆ ಸಮನ್ಸ್ ಜಾರಿಗೊಳಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್, ದೇಶದ ತನಿಖಾ ಸಂಸ್ಥೆಗಳಿಗೆ ಖಡಕ್ ಸೂಚನೆ ನೀಡಿದೆ. ಈ ರೀತಿ ಸಮನ್ಸ್ ಜಾರಿ ಮಾಡುವುದು ಕಕ್ಷಿದಾರನ ಮೂಲಭೂತ ಹಕ್ಕನ್ನು ಉಲ್ಲಂಘಿಸುತ್ತದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ.
ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಮತ್ತು ನ್ಯಾ. ಕೆ.ವಿನೋದ್ ಚಂದ್ರನ್ ಮತ್ತು ನ್ಯಾ.ಎನ್.ವಿ. ಅಂಜಾರಿಯಾ ಅವರಿದ್ದ ಪೀಠವು ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯವು (ಇ.ಡಿ.) ಹಿರಿಯ ವಕೀಲರಾದ ದತಾರ್ ಮತ್ತು ವೇಣುಗೋಪಾಲ್ ಅವರಿಗೆ ನೀಡಿದ್ದ ಸಮನ್ಸ್‌ಗೆ ಸಂಬಂಧಿಸಿ ಸುಮೋಟೋ ಪ್ರಕರಣದ ವಿಚಾರಣೆ ವೇಳೆ ಈ ಆದೇಶ ನೀಡಿದೆ ಹಾಗೂ ಸಮನ್ಸ್ ರದ್ದುಪಡಿಸಿದೆ.
ತನಿಖಾ ಸಂಸ್ಥೆಗಳಿಂದ ಎದುರಾಗುವ ಒತ್ತಡದಿಂದ ವಕೀಲರಿಗೆ ರಕ್ಷಣೆ ನೀಡುವ ಉದ್ದೇಶದಿಂದ ಸಮನ್ಸ್‌ಗೆ ಸಂಬಂಧಿಸಿ ಹೊಸದಾಗಿ ನಿರ್ದೇಶನಗಳನ್ನು ಜಾರಿ ಮಾಡಿದೆ.
ಎಲ್ಲಾ ಪ್ರಕರಣದಲ್ಲೂ ತನಿಖಾ ಅಧಿಕಾರಿಗಳು ಕಕ್ಷಿದಾರನಿಗೆ ಕಾನೂನು ಸೇವೆ ನೀಡುತ್ತಿರುವ ವಕೀಲರಿಗೆ ಸಮನ್ಸ್ ಜಾರಿ ಮಾಡುವಂತಿಲ್ಲ. ಭಾರತೀಯ ಸಾಕ್ಷ್ಯ ಅಧಿನಿಯಮ(ಬಿಎಸ್‌ಎ)ದ 132ನೇ ಕಲಂನಡಿ ಬರುವ ಅಪರಾಧಕ್ಕೆ ಮಾತ್ರ ನೀಡಬಹುದಾಗಿದೆ.
ಅಂದರೆ ಆರೋಪಿಯು, ಕಕ್ಷಿದಾರ ವಕೀಲನಿಂದ ಯಾವುದೇ ಅಪರಾಧ ಕೃತ್ಯದಲ್ಲಿ ಸಹಯೋಗ ಕೇಳಿರುವ ಪ್ರಕರಣದಲ್ಲಷ್ಟೇ ಸಮನ್ಸ್ ಜಾರಿ ಮಾಡಬಹುದಾಗಿದೆ. ಬೇರೆ ಪ್ರಕರಣಗಳಲ್ಲಿ ವಕೀಲರಿಗೆ ಕಕ್ಷಿದಾರ ನೀಡಲಾದ ದಾಖಲೆಗಳನ್ನು ಮತ್ತು ಮಾಹಿತಿಗಳನ್ನು ನೀಡುವಂತೆ ಕೇಳುವಂತಿಲ್ಲ.
ಅಲ್ಲದೆ, ಸಮನ್ಸ್ ಜಾರಿ ಮಾಡಬೇಕಿದ್ದರೆ ಅದಕ್ಕೆ ಎಸ್ಪಿ ರ್‍ಯಾಂಕಿನ ಅಧಿಕಾರಿಯ ಒಪ್ಪಿಗೆ ಅತ್ಯಗತ್ಯ. ಈ ಸಮನ್ಸ್ ಅನ್ನು ವಕೀಲ ಕೋರ್ಟ್‌ನಲ್ಲಿ ಪ್ರಶ್ನಿಸಬಹುದಾಗಿದೆ.
ವಕೀಲನಿಗೆ ಸಮನ್ಸ್ ಜಾರಿಗೊಳಿಸಿದಾಗ ಯಾವ ಆಧಾರದ ಮೇಲೆ ಈ ಸಮನ್ಸ್ ಜಾರಿ ಮಾಡಲಾಗುತ್ತಿದೆ ಎಂದು ಸ್ಪಷ್ಟವಾಗಿ ತಿಳಿಸಬೇಕಿದೆ ಎಂದು ಕೋರ್ಟ್ ಹೇಳಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ