ಅವಿವಾಹಿತ ಮಹಿಳೆಯರೂ ಗರ್ಭಪಾತ ಮಾಡಿಸಿಕೊಳ್ಳಬಹುದು; ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು

By Suvarna News  |  First Published Sep 29, 2022, 11:46 AM IST

Unmarried women legal to get abortion: ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ನೀಡಿದ್ದು ವಿವಾಹಿತ ಮಹಿಳೆಯರೊಂದೇ ಅಲ್ಲದೆ, ವಿವಾಹವಾಗದ ಮಹಿಳೆಯರೂ ಗರ್ಭಪಾತ ಮಾಡಿಸಿಕೊಳ್ಳಬಹುದು. ಕಾನೂನು ಸಾಮಾಜಿಕ ಪರಿಸ್ಥಿತಿಗಳಿಗೆ ತಕ್ಕಂತೆ ಬದಲಾಗಬೇಕು. ವೈಯಕ್ತಿಕ ಸ್ವಾತಂತ್ರ್ಯದ ಬಗ್ಗೆ ಬೆಳಕು ಹರಿಸುವ ಅಗತ್ಯವಿದೆ ಎಂದು ತಿಳಿಸಿದೆ.


ನವದೆಹಲಿ: ದೇಶದ ಸರ್ವೋಚ್ಛ ನ್ಯಾಯಾಲಯ ಮಹತ್ವದ ತೀರ್ಪು ನೀಡಿದ್ದು, ವಿವಾಹಿತರು - ಅವಿವಾಹಿತ ಮತ್ತು ಎಲ್ಲಾ ವರ್ಗದ ಮಹಿಳೆಯರೂ ಸುರಕ್ಷಿತವಾದ ಗರ್ಭಪಾತ ಮಾಡಿಸಿಕೊಳ್ಳಬಹುದು ಎಂದು ತೀರ್ಪು ನೀಡಿದೆ. ಗರ್ಭಧಾರಣೆಯನ್ನು ವೈದ್ಯಕೀಯವಾಗಿ ಮುಕ್ತಾಯಗೊಳಿಸಲು ಸಲ್ಲಿಸಿದ್ದ ಅರ್ಜಿ ಒಂದರ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್‌ ಈ ಮಹತ್ವದ ತೀರ್ಪನ್ನು ನೀಡಿದೆ. "ಮದುವೆಯಾಗದ ಮಹಿಳೆಯರು ಗರ್ಭಪಾತ ಮಾಡಿಸಿಕೊಳ್ಳಲು ಗರ್ಭಧಾರಣೆ ವೈದ್ಯಕೀಯ ಮುಕ್ತಾಯ (Medical Termination of Pregnancy Act) ಕಾನೂನಿನಡಿಯಲ್ಲಿ ಹಕ್ಕು ಹೊಂದಿದ್ದಾರೆ. ಮದುವೆ ಆದವರು, ಮತ್ತು ಆಗದವರು ಎಂಬ ಬೇಧವನ್ನು ಗರ್ಭಪಾತ ಕಾನೂನಿನಲ್ಲಿ ಮಾಡಿಲ್ಲ," ಎಂದು ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ ತಿಳಿಸಿದೆ. "ಬಲವಂತದ ಗರ್ಭಧಾರಣೆಯನ್ನು ವೈವಾಹಿಕ ಅತ್ಯಾಚಾರ ಎಂದು ಪರಿಗಣಿಸಬೇಕು. ಸಂತ್ರಸ್ಥೆ ಗರ್ಭಪಾತಕ್ಕೆ ಇಚ್ಚಿಸಿದರೆ ಅದನ್ನು ವೈವಾಹಿಕ ಅತ್ಯಾಚಾರ ಎಂದು ಪರಗಣಿಸಿ ಅವಕಾಶ ನೀಡಬೇಕು," ಎಂದು ಕೋರ್ಟ್‌ ತಿಳಿಸಿದೆ. 

ಸುಪ್ರೀಂ ಕೋರ್ಟ್‌ ತೀರ್ಪಿನಲ್ಲಿ, "ಇಂದಿನ ದಿನಗಳಲ್ಲಿ ಮದುವೆಯ ಕಟ್ಟುಪಾಡುಗಳು ಪೂರ್ನ ನಿರ್ಧರಿತ ಎಂದು ಕಾನೂನಿನಲ್ಲಿ ಅಭಿಪ್ರಾಯ ಹೊಂದಲು ಸಾಧ್ಯವಿಲ್ಲ. ವೈಯಕ್ತಿಕ ಸ್ವಾತಂತ್ರ್ಯಕ್ಕೆ ಮನ್ನಣೆ ನೀಡಬೇಕಿದೆ. MTP Act ಇಂದಿನ ನೈಜತೆಯನ್ನು ಪರಿಗಣಿಸಬೇಕು ಮತ್ತು ಹಳೆಯ ಹೇರಿಕೆಗಳನ್ನು ಮುಂದುವರೆಸಬಾರದು. ಸಾಮಾಜಿಕ ಬದಲಾವಣೆಗಳು ಮತ್ತು ಪರಿಸ್ಥಿತಿಗೆ ತಕ್ಕಂತೆ ಕಾನೂನಿನ ಜಾರಿ ಮತ್ತು ನಿರ್ಧಾರ ಬದಲಾಗಬೇಕು. ಕಾನೂನು ನಿಂತ ನೀರಾಗಬಾರದು," ಎಂದು ಹೇಳಿದೆ. 

Tap to resize

Latest Videos

ಅಮೆರಿಕಾದಲ್ಲಿ ಭುಗಿಲೆದ್ದ ಚರ್ಚೆ:

ಅಮೆರಿಕದ ಸುಪ್ರೀಂ ಕೋರ್ಟ್ ಇತ್ತೀಚೆಗೆ ಗರ್ಭಪಾತಕ್ಕೆ ಸಂಬಂಧಿಸಿದಂತೆ ಮಹತ್ವದ ಆದೇಶವನ್ನು ಹೊರಡಿಸಿದೆ. ಇದ್ರ ನಂತ್ರ ಗರ್ಭಪಾತದ ಬಗ್ಗೆ ಸಾಕಷ್ಟು ಚರ್ಚೆಗಳು ಮತ್ತೆ ಶುರುವಾಗಿವೆ. ಸುಪ್ರೀಂ ಕೋರ್ಟ್ ಗರ್ಭಪಾತಕ್ಕೆ ಕೆಲವು ಕಾನೂನು ನಿಬಂಧನೆಗಳನ್ನು ವಿಧಿಸಿದೆ. ಈ ಹಿಂದೆ ಗರ್ಭಪಾತದ ಸಂಪೂರ್ಣ ಹಕ್ಕು ಮಹಿಳೆಗಿತ್ತು. ಆದ್ರೀಗ ಕೆಲ ಬದಲಾವಣೆ ಮಾಡಿರುವುದು ಅಲ್ಲಿನವರ ಬೇಸರಕ್ಕೆ ಕಾರಣವಾಗಿದೆ. ಇಂದು ನಾವು ಭಾರತದ ಗರ್ಭಪಾತ ಕಾನೂನಿನ ಬಗ್ಗೆ ವಿವರವನ್ನು ನೀಡ್ತೇವೆ.  

ಭಾರತ (India) ದಲ್ಲಿ  ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್  1971ರ ಪ್ರಕಾರ, ಗರ್ಭಧರಿಸಿದ 20 ವಾರಗಳವರೆಗೆ ಗರ್ಭಪಾತ (Miscarriage) ಕ್ಕೆ ಅನುಮತಿ ಇತ್ತು. 2021 ರಲ್ಲಿ ತಿದ್ದುಪಡಿಯ ಮೂಲಕ ಗರ್ಭಪಾತದ ಮಿತಿಯನ್ನು 24 ವಾರಗಳಿಗೆ ಹೆಚ್ಚಿಸಲಾಗಿದೆ. ಆದ್ರೆ ಇದು ವಿಶೇಷ ಗರ್ಭಿಣಿ (Pregnant)ಯರಿಗೆ ಮಾತ್ರ ಲಭ್ಯವಾಗಲಿದೆ. ಅತ್ಯಾಚಾರ ಅಥವಾ ಮಾನಸಿಕ ಅಸ್ವಸ್ಥ ಮಹಿಳೆಯರು, ಭ್ರೂಣವು ತಾಯಿ ಜೀವಕ್ಕೆ ಅಪಾಯವನ್ನುಂಟುಮಾಡುವ ಯಾವುದೇ ಅಪಾಯವಿದ್ದಲ್ಲಿ  ಅಥವಾ ರೋಗವನ್ನು ಹೊಂದಿದ್ದರೆ ಅಥವಾ ಹುಟ್ಟಿದ ನಂತರ ತೀವ್ರ ಅಂಗವೈಕಲ್ಯಕ್ಕೆ ಬಲಿಯಾಗುವ ಸಂಭವವಿದ್ದರೆ ಗರ್ಭಪಾತಕ್ಕೆ ಅನುಮತಿ ನೀಡಲಾಗುತ್ತದೆ. ಇದಕ್ಕೆ ಇಬ್ಬರು ನೋಂದಾಯಿತ ವೈದ್ಯರ ಅನುಮೋದನೆ ಬೇಕಾಗುತ್ತದೆ. 

ಇದನ್ನೂ ಓದಿ: ಆರು ವಾರದಲ್ಲಿ ಅಬಾರ್ಷನ್‌ ಕಾಯಿದೆ: ವೈರಲ್ ಆದ ಸ್ಟೂಡೆಂಟ್‌ ಭಾಷಣ

ಕಾನೂನು ರಚನೆಯಾಗಿದ್ದು ಯಾವಾಗ? : 1964 ರ ಆಗಸ್ಟ್ 25 ರಂದು ಕೇಂದ್ರ ಕುಟುಂಬ ಯೋಜನಾ ಮಂಡಳಿಯು ಮಾಡಿದ ಶಿಫಾರಸನ್ನು ಪರಿಗಣಿಸಿ 1971 ರಲ್ಲಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್ ಅಂಗೀಕರಿಸಲಾಯಿತು. ನಂತರ ಅದರ ಮೇಲೆ ಕಾನೂನನ್ನು ರಚಿಸಲಾಯಿತು. ಶಾಂತಿಲಾಲ್ ಷಾ ಸಮಿತಿಯ ವರದಿಯ ನಂತರ 1960 ರ ದಶಕದಲ್ಲಿ ಭಾರತದಲ್ಲಿ ಮೆಡಿಕಲ್ ಟರ್ಮಿನೇಷನ್ ಆಫ್ ಪ್ರೆಗ್ನೆನ್ಸಿ ಆಕ್ಟ್  ಜಾರಿಗೆ ಬಂತು ಎಂದು ಹೇಳಲಾಗುತ್ತದೆ. ಕಳೆದ ವರ್ಷ ಇದಕ್ಕೆ ತಿದ್ದುಪಡಿ ತರಲಾಯ್ತು. ನಂತರ ಗರ್ಭಪಾತದ ಮಾನ್ಯ ಅವಧಿಯನ್ನು 20 ವಾರಗಳಿಂದ 24 ವಾರಗಳಿಗೆ ಹೆಚ್ಚಿಸಲಾಗಿದೆ. 

ಭಾರತದ ಹಿಂದಿನ ಕಾನೂನು : 1971 ರ ಮೊದಲು, ಭಾರತದಲ್ಲಿ ಯಾವುದೇ ರೀತಿಯ ಗರ್ಭಪಾತವನ್ನು ಭಾರತೀಯ ದಂಡ ಸಂಹಿತೆಯ (IPC) 1860 ರ ಸೆಕ್ಷನ್ 312 ರ ಪ್ರಕಾರ ಕ್ರಿಮಿನಲ್ ಚಟುವಟಿಕೆ ಎಂದು ಪರಿಗಣಿಸಲಾಗಿತ್ತು. ಆ ಸಮಯದಲ್ಲೂ ಮಹಿಳೆಯ ಜೀವ ಉಳಿಸಲು ಗರ್ಭಪಾತ ಮಾಡಿಸಿದ್ದರೆ ಅದಕ್ಕೆ ಅವಕಾಶ ನೀಡಲಾಗಿತ್ತು. ಗರ್ಭಪಾತವು ಶಿಕ್ಷಾರ್ಹ ಅಪರಾಧವಾಗಿತ್ತು. ಗರ್ಭಪಾತಕ್ಕೆ ಸಹಾಯ ಮಾಡಿದ ವ್ಯಕ್ತಿಗೆ ಮೂರು ವರ್ಷಗಳ ಜೈಲು ಶಿಕ್ಷೆಯನ್ನು ವಿಧಿಸಲಾಗುತ್ತಿತ್ತು. ಗರ್ಭಪಾತ ಮಾಡಿದ ಮಹಿಳೆಗೆ ಏಳು ವರ್ಷಗಳವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ವಿಧಿಸಲಾಗುತ್ತಿತ್ತು.

ಇದನ್ನೂ ಓದಿ: ಪ್ರಸವದ ಮೊದಲು, ನಂತರ ಮಹಿಳೆಯರು ಮಾಡಲೇಬೇಕು ಈ ಯೋಗಾಸನ

ಭಾರತದಲ್ಲಿ ನಡೆಯುತ್ತದೆ ಇಷ್ಟೊಂದು ಗರ್ಭಪಾತ : ವರದಿಯೊಂದರ ಪ್ರಕಾರ 2015ರಲ್ಲಿ ಭಾರತದಲ್ಲಿ 1.56 ಕೋಟಿ ಗರ್ಭಪಾತಗಳಾಗಿವೆ.  ಭಾರತದಲ್ಲಿ ವಾರ್ಷಿಕವಾಗಿ 8 ಲಕ್ಷಕ್ಕೂ ಹೆಚ್ಚು ಅಕ್ರಮ ಮತ್ತು ಕಾನೂನುಬಾಹಿರ ಗರ್ಭಪಾತಗಳು ನಡೆಯುತ್ತಿವೆ. ಇದು ಮಹಿಳೆಯರ ಆರೋಗ್ಯದ ಮೇಲೆ ದೊಡ್ಡ ಪರಿಣಾಮ ಬೀರುತ್ತಿದೆ.  

ಅಸುರಕ್ಷಿತ ಗರ್ಭಪಾತ (Unsafe Abortion) : ವರದಿಯ ಪ್ರಕಾರ ಭಾರತದಲ್ಲಿ ಶೇಕಡಾ  78 ರಷ್ಟು  ಯುವತಿಯರು ಅನಗತ್ಯ ಗರ್ಭಧಾರಣೆಗೆ ಒಳಗಾಗ್ತಿದ್ದಾರೆ. ನಂತ್ರ ಅಸುರಕ್ಷಿತ ಗರ್ಭಪಾತ ಮಾಡಿಸಿಕೊಳ್ತಿದ್ದಾರೆ. ಭಾರತದಲ್ಲಿ ಅಸುರಕ್ಷಿತ ಗರ್ಭಪಾತದ ಸಂಖ್ಯೆ ಹೆಚ್ಚಿದೆ. ಇದ್ರಿಂದ ಸಾವಿನ ಸಂಖ್ಯೆ ಹೆಚ್ಚಾಗುತ್ತದೆ. ಸುರಕ್ಷಿತ ಗರ್ಭಪಾತಕ್ಕೆ ಒಳಗಾಗಿ, ಸರಿಯಾದ ಆರೈಕೆ ಮಾಡಿಕೊಂಡಲ್ಲಿ ಸಾವಿನ ಸಂಖ್ಯೆಯನ್ನು ಶೇಕಡಾ 97 ರಷ್ಟು ತಪ್ಪಿಸಬಹುದು ಎನ್ನುತ್ತಾರೆ ತಜ್ಞರು. 2019 ರ ವರದಿಯ ಪ್ರಕಾರ, 2015 ರಲ್ಲಿ ಭಾರತದಲ್ಲಿ 15.6 ಮಿಲಿಯನ್ ಗರ್ಭಪಾತಗಳು ನಡೆದಿವೆ. ಅದರಲ್ಲಿ ಶೇಕಡಾ 78 ರಷ್ಟು ಅಸುರಕ್ಷಿತ ಗರ್ಭಪಾತ ಎಂದು ವರದಿಯಲ್ಲಿ ಹೇಳಲಾಗಿದೆ.

click me!