ರಾಜಮನೆತನದೊಳಗೆ ಕಿತ್ತಾಟ, ಅಯ್ಯಪ್ಪನ ಆಭರಣ ಪಟ್ಟಿ ತಯಾರಿಗೆ ಸುಪ್ರೀಂ ಆದೇಶ!

By Suvarna NewsFirst Published Feb 9, 2020, 3:21 PM IST
Highlights

ಅಯ್ಯಪ್ಪನ ಆಭರಣ ಪಟ್ಟಿ ತಯಾರಿಗೆ ಸುಪ್ರೀಂ ಆದೇಶ| ಆಭರಣಕ್ಕಾಗಿ ರಾಜಮನೆತನದೊಳಗೆ ಕಿತ್ತಾಟ

ನವದೆಹಲಿ[ಫೆ.09]: ಕೇರಳದ ಅನಂತಪದ್ಮನಾಭ ದೇವಾಲಯದ ರೀತಿಯಲ್ಲೇ ಶಬರಿಮಲೆ ಅಯ್ಯಪ್ಪ ದೇವಾಲಯದ ಆಭರಣ ಪಟ್ಟಿಹಾಗೂ ಆಭರಣ ಮೌಲ್ಯಮಾಪನ ವರದಿ ತಯಾರಿಸಲು ಸರ್ವೋಚ್ಚ ನ್ಯಾಯಾಲಯ ಆದೇಶಿಸಿದೆ. ಪಟ್ಟಿತಯಾರಿಸಲು ಕೇರಳ ಹೈಕೋರ್ಟ್‌ ನಿವೃತ್ತ ನ್ಯಾಯಾಧೀಶ ಸಿ.ಎನ್‌. ರಾಮಚಂದ್ರನ್‌ ನಾಯರ್‌ ಅವರನ್ನು ನೇಮಿಸಿದೆ.

ಆಭರಣಗಳ ಮೇಲೆ ಹಕ್ಕು ಸಾಧಿಸಲು ಪಂದಳಂ ರಾಜಮನೆತನದಲ್ಲಿ ಕಿತ್ತಾಟ ನಡೆದಿದ್ದು, ಈ ಹಿನ್ನೆಲೆಯಲ್ಲಿ ಕೋರ್ಟ್‌ ಈ ಆದೇಶ ನೀಡಿದೆ.

ಇದೇ ವೇಳೆ, ಮೌಲ್ಯಮಾಪನ ಮಾಡಲು ಅಕ್ಕಸಾಲಿಗರ ಸಹಾಯ ಪಡೆಯಬಹುದು. ಆಭರಣ ಪಟ್ಟಿಹಾಗೂ ಮೌಲ್ಯಮಾಪನ ವರದಿಯನ್ನು ಸೀಲ್‌ ಮಾಡಿದ ಲಕೋಟೆಯಲ್ಲಿ ತನಗೆ ಸಲ್ಲಿಸಬೇಕು ಎಂದೂ ಕೋರ್ಟ್‌ ಹೇಳಿದೆ.

‘ಈ ಪವಿತ್ರ ಆಭರಣಗಳ ಸುರಕ್ಷತೆ ಮತ್ತು ಭದ್ರತೆ ಬಗ್ಗೆ ನಮಗೆ ಆತಂಕವಿದೆ’ ಎಂದು ನ್ಯಾ| ಎನ್‌.ವಿ. ರಮಣ ನೇತೃತ್ವದ ತ್ರಿಸದಸ್ಯ ಪೀಠ ಇದೇ ವೇಳೆ ತಿಳಿಸಿದೆ.

ಶಬರಿಮಲೆ ಅಯ್ಯಪ್ಪ ದೇವಾಲಯದ ಆಭರಣಗಳು ಪಂದಳಂ ರಾಜಮನೆತನದ ವಶದಲ್ಲಿವೆ. ಆದರೆ ರಾಜಮನೆತನದಲ್ಲೇ ಒಡಕು ಇದ್ದು, ಒಬ್ಬರನ್ನು ಕಂಡರೆ ಇನ್ನೊಬ್ಬರಿಗೆ ಆಗದು. ಹೀಗಾಗಿ, ‘ಆಭರಣಗಳು ಅಯ್ಯಪ್ಪನಿಗೆ ಸೇರಿದ್ದಲ್ಲ. ರಾಜಮನೆತನಕ್ಕೆ ಸೇರಿವೆ. ಅವನ್ನು ತಮ್ಮ ವಶಕ್ಕೆ ಕೊಡಿಸಿ’ ಎಂದು ಪಂದಳಂ ರಾಜಮನೆತನದ ಅನ್ಯ ವರ್ಗಗಳು ಸುಪ್ರೀಂ ಕೋರ್ಟ್‌ ಮೊರೆ ಹೋಗಿದ್ದವು. ಇದರ ವಿಚಾರಣೆ ನಡೆಸಿದ ಪೀಠ ಈಗ ಈ ಆದೇಶ ನೀಡಿದೆ.

ಆದರೆ ಸರ್ಕಾರದ ವಶದಲ್ಲಿ ಅಯ್ಯಪ್ಪನ 16 ಆಭರಣ ಮಾತ್ರ ಇವೆ. ವಿಚಾರಣೆ ವೇಳೆ, ‘ಸರ್ಕಾರದ ವಶದಲ್ಲಿ ಕೇವಲ 16 ಆಭರಣ ಮಾತ್ರ ಇವೆಯೇ’ ಎಂದು ನ್ಯಾಯಪೀಠ ಅಚ್ಚರಿಯನ್ನೂ ವ್ಯಕ್ತಪಡಿಸಿದೆ.

ಆಭರಣದ ಇತಿಹಾಸ:

ಅಯ್ಯಪ್ಪನ ಆಭರಣ ಪಂದಳಂ ರಾಜಮನೆತನದ ವಶದಲ್ಲೇಕಿವೆ ಎಂಬುದರ ಹಿಂದೆ ಇತಿಹಾಸವಿದೆ. ಪಂದಳಂ ರಾಜನ ಮಗನಾಗಿ ಶಬರಿಮಲೆ ಅಯ್ಯಪ್ಪನು ಮಾನವ ಅವತಾರ ತಾಳಿದ್ದ. ಹೀಗಾಗಿ ಆತನಿಗೆ ಸಂಬಂಧಿಸಿದ ಆಭರಣ ರಾಜಮನೆತನದ ಬಳಿ ಇವೆ ಎಂದು ಹೇಳಲಾಗುತ್ತದೆ.

click me!