ಮೀಸಲಾತಿ ಮೂಲಭೂತ ಹಕ್ಕಲ್ಲ, ಸರ್ಕಾರದ ವಿವೇಚನೆಗೆ ಬಿಟ್ಟ ವಿಚಾರ: ಸುಪ್ರೀಂ

By Kannadaprabha NewsFirst Published Feb 9, 2020, 2:40 PM IST
Highlights

ಮೀಸಲು ಮೂಲಭೂತ ಹಕ್ಕಲ್ಲ: ಸುಪ್ರೀಂಕೋರ್ಟ್‌| ಮೀಸಲು ಕೊಡಿ ಎಂದು ಆದೇಶಿಸುವ ಅಧಿಕಾರ ಕೋರ್ಟುಗಳಿಗೆ ಇಲ್ಲ| ಸರ್ಕಾರಗಳು ವಿವೇಚನೆ ಬಳಸಿ ಮೀಸಲು ಕೊಡಬಹುದು, ಕಡ್ಡಾಯ ಅಲ್ಲ

ನವದೆಹಲಿ[ಫೆ.09]: ಪರಿಶಿಷ್ಟಜಾತಿ ಹಾಗೂ ಪಂಗಡಗಳಿಗೆ ಉದ್ಯೋಗ ಮತ್ತು ಬಡ್ತಿಯಲ್ಲಿ ಮೀಸಲಾತಿ ನೀಡುವುದು ರಾಜ್ಯ ಸರ್ಕಾರಗಳ ವಿವೇಚನೆಗೆ ಬಿಟ್ಟವಿಚಾರ. ಸರ್ಕಾರಿ ಉದ್ಯೋಗದಲ್ಲಿ ಮೀಸಲು ಬೇಕೇಬೇಕು ಎಂದು ಕೇಳುವುದಕ್ಕೆ ಅದು ಯಾವುದೇ ಮೂಲಭೂತ ಹಕ್ಕು ಇಲ್ಲ. ಮೀಸಲು ನೀಡುವಂತೆ ಸರ್ಕಾರಗಳಿಗೆ ಆದೇಶಿಸುವ ಅಧಿಕಾರ ನ್ಯಾಯಾಲಯಗಳಿಗೂ ಇಲ್ಲ ಎಂದು ಸುಪ್ರೀಂ ಕೋರ್ಟ್‌ ಮಹತ್ವದ ತೀರ್ಪು ಪ್ರಕಟಿಸಿದೆ.

ರಾಜ್ಯ ಸರ್ಕಾರಗಳು ಕೂಡ ಕಡ್ಡಾಯವಾಗಿ ಮೀಸಲು ನೀಡಬೇಕು ಎಂದೇನೂ ಇಲ್ಲ. ಮೀಸಲು ನೀಡಬೇಕೇ, ಬೇಡವೇ ಎಂಬ ವಿಚಾರ ರಾಜ್ಯಗಳ ವಿವೇಚನೆಗೆ ಸಂಬಂಧಿಸಿದ್ದು ಎಂದು ನ್ಯಾಯಾಲಯ ಸ್ಪಷ್ಟಪಡಿಸಿದೆ.

ಮೀಸಲು ನೀಡಿಕೆ ಸಂದರ್ಭದಲ್ಲಿ ಸರ್ಕಾರಿ ನೌಕರಿಗಳಲ್ಲಿ ಎಸ್‌ಸಿ-ಎಸ್‌ಟಿಗೆ ಸೂಕ್ತ ಪ್ರಾತಿನಿಧ್ಯ ಇದೆಯೇ ಎಂಬ ಬಗ್ಗೆ ರಾಜ್ಯ ಸರ್ಕಾರಗಳು ಅಂಕಿ-ಅಂಶಗಳನ್ನು ಸಂಗ್ರಹಿಸಬೇಕು. ಅಗತ್ಯವಿಲ್ಲ ಎಂದು ಕಂಡುಬಂದಲ್ಲಿ ಮೀಸಲು ನೀಡಬೇಕಿಲ್ಲ ಎಂದು ನ್ಯಾ| ಎಲ್‌. ನಾಗೇಶ್ವರರಾವ್‌ ಹಾಗೂ ನ್ಯಾ| ಹೇಮಂತ ಗುಪ್ತಾ ಅವರನ್ನು ಒಳಗೊಂಡ ಪೀಠ ಹೇಳಿದೆ.\

ಕನ್ನಡಿಗರಿಗೇ ಮೊದಲ ಆದ್ಯತೆ, ಶೇ.75ರಷ್ಟು ಉದ್ಯೋಗ ಮೀಸಲಾತಿಗೆ ಸರ್ಕಾರದ ಸಿದ್ಧತೆ!

ಸಂವಿಧಾನದ 16ನೇ ಪರಿಚ್ಛೇದದ ಪ್ರಕಾರ ಎಸ್‌ಸಿ-ಎಸ್‌ಟಿ ಸಮುದಾಯಕ್ಕೆ ಮೀಸಲು ನೀಡುವ ವಿವೇಚನೆ ರಾಜ್ಯ ಸರ್ಕಾರಗಳಿಗೆ ಬಿಟ್ಟಿದ್ದಾಗಿದೆ. ಆದರೆ ಸರ್ಕಾರಿ ಹುದ್ದೆಗಳಲ್ಲಿ ಮೀಸಲು ನೀಡಿ ಎಂದು ರಾಜ್ಯ ಸರ್ಕಾರಗಳಿಗೆ ಆದೇಶ ನೀಡಲಾಗದು. ರಾಜ್ಯ ಸರ್ಕಾರಗಳು ಕೂಡ ಬಡ್ತಿಯಲ್ಲಿ ಮೀಸಲು ನೀಡಲೇಬೇಕು ಎಂದೇನಿಲ್ಲ ಎಂದು ಅದು ಸ್ಪಷ್ಟಪಡಿಸಿದೆ.

ಉತ್ತರಾಖಂಡ ಸರ್ಕಾರದ ಲೋಕೋಪಯೋಗಿ ಇಲಾಖೆಯ ಅಸಿಸ್ಟಂಟ್‌ ಸಿವಿಲ್‌ ಎಂಜಿನಿಯರ್‌ ಹುದ್ದೆಗೆ ಬಡ್ತಿ ಮೀಸಲು ನೀಡುವ ವಿಚಾರಕ್ಕೆ ಸಂಬಂಧಿಸಿದ ವ್ಯಾಜ್ಯದಲ್ಲಿ ಕೋರ್ಟ್‌ ಈ ನಿರ್ಣಯ ನೀಡಿದೆ. ಉತ್ತರಾಖಂಡ ಸರ್ಕಾರ ಬಡ್ತಿ ಮೀಸಲು ನೀಡಲು ನಿರಾಕರಿಸಿತ್ತು. ಇದು ಹೈಕೋರ್ಟ್‌ ಮೆಟ್ಟಿಲೇರಿದಾಗ, ಸರ್ಕಾರಿ ಹುದ್ದೆಗಳಲ್ಲಿ ಎಸ್‌ಸಿ/ಎಸ್ಟಿಪ್ರಾತಿನಿಧ್ಯ ಕುರಿತ ಮಾಹಿತಿ ಸಂಗ್ರಹಿಸಿ ಬಳಿಕ ನಿರ್ಧಾರ ಕೈಗೊಳ್ಳುವಂತೆ ಸೂಚಿಸಿತ್ತು.

ಫೆಬ್ರವರಿ 9ರ ಟಾಪ್ 10 ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ

click me!