
ನವದೆಹಲಿ (ಮಾ.6): ವಿಶ್ವ ವಿಖ್ಯಾತ ಜಿಮ್ ಕಾರ್ಬೆಟ್ ಹುಲಿ ಮೀಸಲು ಅರಣ್ಯದಲ್ಲಿ ಪ್ರವಾಸೋದ್ಯಮ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಉತ್ತರಾಖಂಡದ ಮಾಜಿ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಡಿಎಫ್‌ಓ ಕಿಶನ್ ಚಂದ್, ಬೇಕಾಬಿಟ್ಟಿಯಾಗಿ ಮರಗಳನ್ನು ಕಡಿದು ಅಲ್ಲಿ ಕಟ್ಟಡಗಳನ್ನು ನಿರ್ಮಾಣ ಮಾಡಿದ್ದರು. ಈ ವಿಚಾರವಾಗಿ ಸುಪ್ರೀಂ ಕೋರ್ಟ್ ಮಾಜಿ ಅರಣ್ಯ ಸಚಿವ ಹರಕ್ ಸಿಂಗ್ ರಾವತ್ ಹಾಗೂ ಡಿಎಫ್‌ಓ ಕಿಶನ್ ಚಂದ್ ಅವರಿಗೆ ಛೀಮಾರಿ ಹಾಕಿದೆ. ಅದರೊಂದಿಗೆ ಈ ವಿಚಾರದಲ್ಲಿ ತನಿಖೆ ನಡೆಸುತ್ತಿರುವ ಸಿಬಿಐಗೆ ಸ್ಪಷ್ಟ ಸೂಚನೆ ನೀಡಿರುವ ಸುಪ್ರೀಂ ಕೋರ್ಟ್, ಮುಂದಿನ ಮೂರು ತಿಂಗಳ ಒಳಗಾಗಿ ಈ ಪ್ರಕರಣದ ಸ್ಟೇಟಸ್ ವರದಿಯನ್ನು ನ್ಯಾಯಪೀಠಕ್ಕೆ ಸಲ್ಲಿಸಬೇಕು ಎಂದು ಆದೇಶಿಸಿದೆ. ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಆರ್.ಗವಾಯಿ ನೇತೃತ್ವದ ಪೀಠ, ಇದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಾರ್ವಜನಿಕ ನಂಬಿಕೆಯನ್ನು ಸಂಪೂರ್ಣವಾಗಿ ಕಸದ ಬುಟ್ಟಿಗೆ ಎಸೆದಿರುವ ಘಟನೆ ಇದಾಗಿದೆ ಎಂದು ತಿಳಿಸಿದೆ.
"ಅವರು (ರಾವತ್ ಮತ್ತು ಚಂದ್) ಕಾನೂನನ್ನು ಸಂಪೂರ್ಣವಾಗಿ ನಿರ್ಲಕ್ಯ ಮಾಡಿದ್ದಾರೆ. ಮತ್ತು ವಾಣಿಜ್ಯ ಉದ್ದೇಶಗಳಿಗಾಗಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ನೆಪದಲ್ಲಿ ಕಟ್ಟಡಗಳನ್ನು ನಿರ್ಮಿಸಲು ಮರಗಳನ್ನು ಸಾಮೂಹಿಕವಾಗಿ ಕಡಿಯುವಲ್ಲಿ ತೊಡಗಿದ್ದಾರೆ. ಆದರೆ, ಅವರು ಕಾನೂನಿಗಿಂತ ದೊಡ್ಡವರಲ್ಲ' ಎಂದು ಪೀಠ ಹೇಳಿದೆ. ಒಟ್ಟಾರೆಯಾಗಿ ಶಾಸನಬದ್ಧ ನಿಬಂಧನೆಗಳನ್ನು ನೀಡುವಲ್ಲಿ ರಾವತ್ ಮತ್ತು ಚಂದ್ ಅವರ ಧೂರ್ಯ ಕಂಡು ನಮಗೇ ಆಶ್ಚರ್ಯವಾಗಿದೆ ಎಂದು ನ್ಯಾಯಾಲಯ ಹೇಳಿದೆ.
"ಪ್ರಸ್ತುತ ಪ್ರಕರಣದಲ್ಲಿ, ಆಗಿನ ಅರಣ್ಯ ಸಚಿವರು ತಾವು ಕಾನೂನಿಗೆ ಅತೀತರು ಎಂದು ಪರಿಗಣಿಸಿದ್ದದರು ಎನ್ನುವುದು ನಿಸ್ಸಂದೇಹವಾಗಿ ಗೊತ್ತಾಗುತ್ತಿದೆ. ಅವರೊಂದಿಗೆ ಡಿಎಫ್‌ಓ ಕಿಶನ್ ಚಂದ್ ಕೂಡ ಸಾರ್ವಜನಿಕರ ನಂಬಿಕೆಯನ್ನು ಗಾಳಿಗೆ ತೂರಿಸಿದ್ದಾರೆ. ಸ್ವಲ್ಪ ಸಡಿಲ ಬಿಟ್ಟರೆ, ರಾಜಕಾರಣಿಗಳು ಹಾಗೂ ಅಧಿಕಾರಿಗಳು ಹೇಗೆ ಕಾನೂನನ್ನು ತಮ್ಮ ಕೈಗಳಲ್ಲಿ ಆಡಿಸುತ್ತಾರೆ ಎನ್ನುವುದಕ್ಕೆ ಇದು ಸ್ಪಷ್ಟ ಉದಾಹರಣೆ' ಎಂದು ನ್ಯಾಯಾಲಯ ಹೇಳಿದೆ. ಈ ಪ್ರಕರಣದಲ್ಲಿ ಇವರು ಮಾತ್ರವೇ ಅಲ್ಲ, ಇನ್ನೂ ಅನೇಕರು ಭಾಗಿಯಾಗಿದ್ದಾರೆ ಎನ್ನುವುದು ನಮಗೆ ಗೊತ್ತಿದೆ. ಆದರೆ, ಸಿಬಿಐ ಈ ಬಗ್ಗೆ ತನಿಖೆ ನಡೆಸುತ್ತಿರುವುದರಿಂದ ನಾವು ಹೆಚ್ಚೇನೂ ಹೇಳುತ್ತಿಲ್ಲ" ಎಂದು ತಿಳಿಸಿದೆ.
ಮಾರ್ನಿಂಗ್ ವಾಕ್ ಹೋದೋನಿಗೆ ಶಾಕ್: ಧುತ್ತನೇ ಎದುರಾದ National Animal:ವೀಡಿಯೋ
ಇದು ದೇಶದ ರಾಷ್ಟ್ರೀಯ ಉದ್ಯಾನವನಗಳ ಬಫರ್ ಅಥವಾ ಫ್ರಿಂಜ್ ಪ್ರದೇಶಗಳಲ್ಲಿ ಹುಲಿ ಸಫಾರಿಗಳನ್ನು ಅನುಮತಿಸಬಹುದೇ ಎಂದು ಪರಿಶೀಲಿಸಲು ಸಮಿತಿಯನ್ನು ರಚನೆ ಮಾಡಿದೆ.
ರಾಷ್ಟ್ರೀಯ ವನ್ಯಜೀವಿ ಸಂರಕ್ಷಣಾ ಯೋಜನೆಯು ಸಂರಕ್ಷಿತ ಪ್ರದೇಶಗಳನ್ನು ಮೀರಿ ವನ್ಯಜೀವಿ ಸಂರಕ್ಷಣೆಯ ಅಗತ್ಯವನ್ನು ಗುರುತಿಸುತ್ತದೆ ಎಂಬುದು ಸ್ಪಷ್ಟವಾಗಿದೆ ಎಂದು ಪೀಠ ಹೇಳಿದೆ. ಇದೇ ವೇಳೆ ಮಹಾಭಾರತದ 'ಧರ್ಮೋ ರಕ್ಷತಿ ರಕ್ಷಿತಃ' ರೀತಿಯ ಸಾಲುಗಳನ್ನೂ ಉಲ್ಲೇಖ ಮಾಡಿದ ಕೋರ್ಟ್, ಹುಲಿ ಇಲ್ಲದೆ ಕಾಡು ನಾಶವಾಗುತ್ತದೆ. ಆ ಕಾರಣದಿಂದೇ ಅರಣ್ಯವೇ ಎಲ್ಲಾ ಹುಲಿಗಳನ್ನು ರಕ್ಷಣೆ ಮಾಡಬೇಕಿದೆ ಎಂದಿದೆ. "ನಾವು ಹುಲಿ ಸಫಾರಿ ಸ್ಥಾಪನೆಗೆ ಅನುಮತಿ ನೀಡುತ್ತಿದ್ದೇವೆ, ಆದರೆ ತೀರ್ಪಿನಲ್ಲಿ ನೀಡಿರುವ ನಮ್ಮ ನಿರ್ದೇಶನಗಳಿಗೆ ಒಳಪಟ್ಟಿರುತ್ತದೆ" ಎಂದು ಪೀಠವು ತಿಳಿಸಿದೆ.
ಸಫಾರಿಗೆ ಹೋದವರ ಮೇಲೆ ಅಟ್ಟಿಸಿಕೊಂಡು ಹೋದ ವ್ಯಾಘ್ರ: ಪ್ರವಾಸಿಗರು ಜಸ್ಟ್ ಮಿಸ್!
ಈ ಹಿಂದೆ ಹುಲಿ ಸಂರಕ್ಷಿತ ಪ್ರದೇಶದಲ್ಲಿ ಅಕ್ರಮ ಕಟ್ಟಡ ನಿರ್ಮಾಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯ ರಾವತ್ ಮತ್ತು ಚಂದ್ ಅವರ ನಿವಾಸಗಳ ಮೇಲೆ ದಾಳಿ ನಡೆಸಿತ್ತು. ಮಾಜಿ ಬಿಜೆಪಿ ನಾಯಕರಾಗಿದ್ದ ಹರಕ್ ಸಿಂಗ್ ರಾವತ್‌ರನ್ನು 2022ರಲ್ಲಿ ಪಕ್ಷದಿಂದ ಉಚ್ಛಾಟನೆ ಮಾಡಲಾಗಿತ್ತು. ಪ್ರಸ್ತುತ ಹರಕ್ ಸಿಂಗ್ ಕಾಂಗ್ರೆಸ್ ನಾಯಕರಾಗಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ