Fake Covid Report ಮೃತರ ಪರಿಹಾರ ಧನ ಪಡೆಯಲು ನಕಲಿ ಕೋವಿಡ್ ವರದಿ, ತನಿಖೆ ಬಗ್ಗೆ ಸುಪ್ರೀಂ ಕೋರ್ಟ್ ಸುಳಿವು!

By Suvarna NewsFirst Published Mar 8, 2022, 2:07 AM IST
Highlights
  • ವೈದ್ಯರಿಂದ ನಕಲಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿರುವ ವಿಚಾರ
  • ಕೋವಿಡ್‌ನಿಂದ ಮೃತರ ಪರಿಹಾರ ಮೊತ್ತ ಪಡೆಯಲು ಸರ್ಕಸ್
  • ಸ್ವತಂತ್ರ್ಯ ತನಿಖೆಗೆ ಆದೇಶಿಸುವ ಬಗ್ಗೆ ನಿರ್ಣಯ
     

ನವದೆಹಲಿ(ಮಾ.08): ಕೋವಿಡ್‌ನಿಂದಾಗಿ ಮೃತಪಟ್ಟವರಿಗೆ ಘೋಷಿಸಿರುವ ಪರಿಹಾರ ಧನವನ್ನು ಪಡೆಯಲು ವೈದ್ಯರಿಂದ ನಕಲಿ ಪ್ರಮಾಣಪತ್ರವನ್ನು ಪಡೆದುಕೊಳ್ಳುತ್ತಿರುವ ವಿಚಾರವನ್ನು ಗಂಭೀರವಾಗಿ ಪರಿಗಣಿಸಿರುವ ಸುಪ್ರೀಂ ಕೋರ್ಟ್‌ ಶೀಘ್ರದಲ್ಲೇ ಇದರ ವಿರುದ್ಧ ತನಿಖೆಗೆ ಆದೇಶಿಸುವ ಸುಳಿವು ನೀಡಿದೆ.

ಕೋವಿಡ್‌ ಸಂತ್ರಸ್ತರ ಕುಟುಂಬ ಸದಸ್ಯರಿಗೆ ಪರಿಹಾರ ನೀಡುವಂತೆ ಕೋರಿ ಗೌರವ್‌ ಬನ್ಸಾಲ… ಸಲ್ಲಿಸಿದ ಅರ್ಜಿಯ ವಿಚಾರಣೆಯನ್ನು ನಡೆಸುತ್ತಿರುವಾಗ ಕೋರ್ಟ್‌ ಈ ಸುಳಿವು ನೀಡಿದೆ. ನ್ಯಾಯಮೂರ್ತಿ ಎಂ.ಆರ್‌.ಶಾ ಹಾಗೂ ಬಿ.ವಿ. ನಾಗರತ್ನರನ್ನು ಒಳಗೊಂಡ ಪೀಠದ ಎದುರು ಕೇಂದ್ರ ಸರ್ಕಾರ ಪರ ಸೋಮವಾರ ವಾದ ಮಂಡಿಸಿದ ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ‘ಕೋವಿಡ್‌ ಸಂಬಂಧೀ ಸಾವುಗಳ ಕ್ಲೇಮುಗಳ ಮೇಲೆ ಸಮಯದ ಮಿತಿಯನ್ನು ಹೇರಬೇಕು. ಸುಪ್ರೀಂ ಕೋರ್ಟ್‌ ಈ ಮೊದಲು ಪರಿಹಾರ ಪಡೆಯಲು ಆರ್‌ಟಿಪಿಸಿಆರ್‌ ಪರೀಕ್ಷೆ ವರದಿ ಬದಲು ವೈದ್ಯರ ಪ್ರಮಾಣಪತ್ರ ಮಾತ್ರ ಸಾಕೆಂದು ನೀಡಿದ ತೀರ್ಪಿನ ದುರ್ಬಳಕೆಯಾಗುತ್ತಿದೆ. ಅಲ್ಲದೇ ವೈದ್ಯರ ನಕಲಿ ಪ್ರಮಾಣಪತ್ರಗಳ ಹಾವಳಿ ಹೆಚ್ಚಾಗಿದ್ದು, ಇದರಿಂದ ಪರಿಹಾರ ಒದಗಿಸುವ ಪ್ರಕ್ರಿಯೆಯಲ್ಲಿ ತೊಡಕು ಉಂಟಾಗುತ್ತಿದೆ’ ಎಂದರು.  ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಸುಪ್ರೀಂ ಕೋರ್ಟ್‌, ಶೀಘ್ರ ಈ ಕುರಿತು ಸ್ವತಂತ್ರ್ಯ ತನಿಖೆಗೆ ಆದೇಶಿಸುವ ಬಗ್ಗೆ ನಿರ್ಣಯ ತೆಗೆದುಕೊಳ್ಳಲಾಗುವುದು ಎಂದು ಹೇಳಿದೆ.

Covid Fourth Wave: ಜೂನ್‌ನಲ್ಲಿ ಭಾರತಕ್ಕೆ 4ನೇ ಕೋವಿಡ್‌ ಅಲೆ: ಮತ್ತೆ ಆತಂಕ

ನಕಲಿ ಕೋವಿಡ್‌ ವರದಿ ಜಾಲ ಭೇದಿಸಿದ ಪೊಲೀಸರು
ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಟ್ರಾವೆಲ್ಸ್‌ ಏಜೆನ್ಸಿಗಳು ನಕ​ಲಿ ಕೋವಿಡ್‌ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ನೀಡಿ ಪ್ರಯಾಣಿಕರನ್ನು ಯಾಮಾರಿಸುತ್ತಿದ್ದ ಜಾಲವನ್ನು ಬೆಳಗಾವಿ ಜಿಲ್ಲೆಯ ನಿಪ್ಪಾಣಿ ಪೊಲೀಸರು ಭೇದಿಸಿದ್ದಾರೆ. ಈ ಸಂಬಂಧ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.

ಧಾರವಾಡದ ಸುರೇಶ ಮಾಡಹಳ್ಳಿ, ಮಹಾರಾಷ್ಟ್ರದ ಸಾತಾರದ ಸತೀಶ ಶಿಂಧೆ ಮತ್ತು ಚಿತ್ರದುರ್ಗದ ಜಗದೀಶ ಬಂಧಿತ ಆರೋಪಿಗಳು. ಬಸ್‌ ಮತ್ತು ನಕಲಿ ಆರ್‌ಟಿಪಿಸಿಆರ್‌ ವರದಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

Covid 19 Crisis: ಕೊರೋನಾ ಸೋಂಕು ತಗ್ಗಿದೆ, ಕೆಲಸ ಆರಂಭಿಸಿ: ಕೇಂದ್ರ

ರಾಜ್ಯದ ಗಡಿ ಪ್ರವೇಶಕ್ಕೆ ಅನ್ಯ ರಾಜ್ಯಗಳಿಂದ ಆಗಮಿಸುವ ಪ್ರಯಾಣಿಕರಿಗೆ ಸರ್ಕಾರ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಕಡ್ಡಾಯಗೊಳಿಸಿದೆ. ಆದರೆ, ಇದನ್ನೇ ಬಂಡವಾಳ ಮಾಡಿಕೊಂಡಿರುವ ಟ್ರಾವೆಲ್ಸ್‌ ಏಜೆನ್ಸಿಗಳು ನಕಲಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ನೀಡುತ್ತಿವೆ. ಈ ಹಿನ್ನೆಲೆಯಲ್ಲಿ ನಿಪ್ಪಾಣಿ ಸಿಪಿಐ ಸಂಗಮೇಶ ಶಿವಯೋಗಿ ನೇತೃತ್ವದಲ್ಲಿ ಪೊಲೀಸ್‌ ಸಿಬ್ಬಂದಿ ತಾವೇ ಖುದ್ದಾಗಿ ಮಹಾರಾಷ್ಟ್ರದ ಕೊಲ್ಲಾಪುರ ಬುಕ್ಕಿಂಗ್‌ ಏಜೆನ್ಸಿಗೆ ತೆರಳಿ ಕುಟುಕು ಕಾರ್ಯಾಚರಣೆ ನಡೆಸಿದ ವೇಳೆ ಟ್ರಾವೆಲ್ಸ್‌ ಏಜೆನ್ಸಿಗಳ ನಿಜವಾದ ಬಂಡವಾಳ ಬಯಲಾಗಿದೆ.

ಲ್ಯಾಬ್‌, ಆಸ್ಪತ್ರೆಯಲ್ಲಿ ನೀಡುವ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಬಸ್‌ ಬುಕ್ಕಿಂಗ್‌ ಏಜೆನ್ಸಿಯಲ್ಲೇ ಕ್ಷಣಾರ್ಧದಲ್ಲೇ ಸಿಗುತ್ತದೆ. ಪೊಲೀಸರು ತಾವೇ ಪ್ರಯಾಣಿಕರ ಸೋಗಿನಲ್ಲಿ ನಕಲಿ ಆರ್‌ಟಿಪಿಸಿಆರ್‌ ನೆಗೆಟಿವ್‌ ವರದಿ ಪಡೆದುಕೊಂಡು ಪ್ರಯಾಣ ಬೆಳೆಸಿದ್ದರು. ಬಳಿಕ ಕುಗನೋಳಿ ಚೆಕ್‌ಪೋಸ್ಟ್‌ ಬಳಿ ಬಸ್‌ ತಡೆದು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೇ, ಕೊಲ್ಲಾಪುರದ ಶೇಫಾಲಿ, ಆನಂದ, ಸಹಾರಾ ಬುಕ್ಕಿಂಗ್‌ ಸೆಂಟರ್‌ಗಳ ಮೇಲೆ ಪೊಲೀಸರು ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದ್ದಾರೆ. ಈ ಕುರಿತು ನಿಪ್ಪಾಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹೊರ ರಾಜ್ಯಗಳಿಗೆ ತೆರಳುವವರಿಗೆ ನಕಲಿ ಕೋವಿಡ್‌ ವರದಿ
ಹಣಕ್ಕಾಗಿ ನಕಲಿ ಕೋವಿಡ್‌ ಪರೀಕ್ಷಾ ಪ್ರಮಾಣಪತ್ರ ವಿತರಿಸುತ್ತಿದ್ದ ಖಾಸಗಿ ಲ್ಯಾಬ್‌ನ ಇಬ್ಬರು ಸಿಬ್ಬಂದಿಯನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ.

ಕಾವಲ್‌ಭೈರಸಂದ್ರದ ಸ್ಕೈ ಲೈನ್‌ ಡಯಾಗ್ನಸ್ಟಿಕ್‌ ಲ್ಯಾಬ್‌ನ ನೌಕರರು ಬಂಧಿತರಾಗಿದ್ದು, ಹೊರ ರಾಜ್ಯಗಳಿಗೆ ತೆರಳುವ ಜನರಿಗೆ ಆರೋಪಿಗಳು ನಕಲಿ ಪ್ರಮಾಣಪತ್ರ ನೀಡುತ್ತಿದ್ದರು. ಈ ಬಗ್ಗೆ ಖಚಿತ ಮಾಹಿತಿ ಪಡೆದು ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ 50 ಹೆಚ್ಚಿನ ನಕಲಿ ಕೋವಿಡ್‌ ವರದಿಗಳನ್ನು ಜಪ್ತಿ ಮಾಡಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕೊರೋನಾ ಸೋಂಕು ನಿಯಂತ್ರಣಕ್ಕೆ ಮುಂಜಾಗ್ರತೆ ಕ್ರಮವಾಗಿ ರಾಜ್ಯದಿಂದ ಹೊರ ರಾಜ್ಯಗಳಿಗೆ ಪ್ರಯಣಿಸುವ ಹಾಗೂ ಆಗಮಿಸುವವರಿಗೆ ಕಡ್ಡಾಯವಾಗಿ ಕೊರೋನಾ ಪ್ರಮಾಣ ಸಲ್ಲಿಕೆಗೆ ಸರ್ಕಾರವು ಆದೇಶಿದೆ. ಈ ಪರಿಸ್ಥಿತಿಯನ್ನು ಲಾಭ ಮಾಡಿಕೊಳ್ಳಲು ಆರೋಪಿಗಳು, ಸರ್ಕಾರದ ಅನುಮತಿ ಪಡೆಯದೆ ಸ್ಕೈಲೈನ್‌ ಡಯಾಗ್ನಸ್ಟಿಕ್‌ ಲ್ಯಾಬ್‌ನ ಹೆಸರಿನಲ್ಲಿ ಸಾರ್ವಜನಿಕರಿಗೆ ಕೊವೀಡ್‌ ಪರೀಕ್ಷಾ ಪ್ರಮಾಣ ಪತ್ರ ವಿತರಿಸುತ್ತಿದ್ದರು. ತಮ್ಮ ಪರಿಚಿತರಿಂದ ಸಂಪರ್ಕಿಸುವ ಜನರಿಂದ ಹಣ ಪಡೆದು ಆರೋಪಿಗಳು, ಸ್ವಾಬ್‌ ಸ್ಯಾಂಪಲ್‌ ಸಂಗ್ರಹಿಸದೆ ನೇರವಾಗಿ ಕೊವೀಡ್‌ ಪರೀಕ್ಷಾ ವರದಿಯನ್ನು ನೀಡುತ್ತಿದ್ದರು ಎಂದು ಅಧಿಕಾರಿಗಳು ವಿವರಿಸಿದ್ದಾರೆ.

click me!