‘ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳಬೇಕು’ ಎಂಬ ಕಲ್ಕತ್ತಾ ಹೈಕೋರ್ಟ್‌ನ ಆಕ್ಷೇಪಾರ್ಹ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮ್ಮತಿ ಸೂಚಿಸಿದೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಅದರ ಆದೇಶವನ್ನು ರದ್ದುಗೊಳಿಸಿದೆ.
ನವದೆಹಲಿ (ಆ.21): ‘ಹದಿಹರೆಯದ ಹುಡುಗಿಯರು ತಮ್ಮ ಲೈಂಗಿಕ ಕಾಮನೆಗಳನ್ನು ನಿಯಂತ್ರಿಸಿಕೊಳ್ಳಬೇಕು’ ಎಂಬ ಕಲ್ಕತ್ತಾ ಹೈಕೋರ್ಟ್‌ನ ಆಕ್ಷೇಪಾರ್ಹ ಅಭಿಪ್ರಾಯಗಳಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಅಸಮ್ಮತಿ ಸೂಚಿಸಿದೆ ಹಾಗೂ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಆರೋಪಿಯನ್ನು ಖುಲಾಸೆಗೊಳಿಸಿದ್ದ ಅದರ ಆದೇಶವನ್ನು ರದ್ದುಗೊಳಿಸಿದೆ. ಇದೇ ವೇಳೆ, ನ್ಯಾಯಾಲಯಗಳು ತೀರ್ಪುಗಳನ್ನು ಹೇಗೆ ಬರೆಯಬೇಕು ಎಂಬುದರ ಬಗ್ಗೆಯೂ ನಿರ್ದೇಶನಗಳನ್ನು ಸುಪ್ರೀಂ ಕೋರ್ಟ್ ಬಿಡುಗಡೆ ಮಾಡಿದೆ. ಪಶ್ಚಿಮ ಬಂಗಾಳ ವ್ಯಕ್ತಿಯೊಬ್ಬ, ತನ್ನ ಜತೆ ಪ್ರಣಯ ಸಂಬಂಧ ಹೊಂದಿದ್ದ ಅಪ್ರಾಪ್ತೆಯ ಮೇಲೆ ಅತ್ಯಾಚಾರ ಎಸಗಿದ್ದ.
ಹೀಗಾಗಿ ಆತನಿಗೆ ಕೆಳ ನ್ಯಾಯಾಲಯ ಪೋಕ್ಸೋ ಕೇಸಿನಡಿ 20 ವರ್ಷದ ಶಿಕ್ಷೆ ವಿಧಿಸಿತ್ತು. ಆದರೆ ಅದನ್ನು ಪ್ರಶ್ನಿಸಿ ಆತ ಕಲ್ಕತ್ತಾ ಹೈಕೋರ್ಟ್ ಮೊರೆ ಹೋಗಿದ್ದ. ಕಳೆದ ವರ್ಷ ಅ.18ರಂದು ಇದರ ವಿಚಾರಣೆ ನಡೆಸಿ ತೀರ್ಪು ಪ್ರಕಟಿಸಿದ್ದ ಹೈಕೋರ್ಟ್, ಆತನಿಗೆ ನೀಡಿದ್ದ ಶಿಕ್ಷೆ ರದ್ದುಗೊಳಿಸಿತ್ತು ಹಾಗೂ ‘ಯುವತಿಯರು ಮತ್ತು ಯುವಕರು ತಮ್ಮ ಲೈಂಗಿಕ ಪ್ರಚೋದನೆಗಳನ್ನು ನಿಯಂತ್ರಿಸಿಕೊಳ್ಳಬೇಕು. ಕೇವಲ 2 ನಿಮಿಷದ ಸುಖಕ್ಕಾಗಿ ಯುವತಿ ಸಮಾಜದ ದೃಷ್ಟಿಯಲ್ಲಿ ಸೋತವಳಂತೆ ಕಾಣುತ್ತಾಳೆ’ ಎಂದಿತ್ತು. ಕೋರ್ಟ್‌ನ ಈ ಅಭಿಪ್ರಾಯಗಳು ಭಾರಿ ಆಕ್ಷೇಪಕ್ಕೆ ಕಾರಣವಾಗಿದ್ದವು. ನಂತರ, ಸುಪ್ರೀಂ ಕೋರ್ಟ್ ಕಳೆದ ವರ್ಷ ಡಿ.7ರಂದು ಹೈಕೋರ್ಟ್ ತೀರ್ಪನ್ನು ಸ್ವಯಂಪ್ರೇರಿತವಾಗಿ ಸ್ವೀಕರಿಸಿ ಪ್ರಕರಣದ ವಿಚಾರಣೆಗೆ ನಿರ್ಧರಿಸಿತ್ತು.
ಇದೇ ವೇಳೆ ಪ.ಬಂಗಾಳ ಸರ್ಕಾರವು ಹೈಕೋರ್ಟ್ ತೀರ್ಪನ್ನು ಪ್ರಶ್ನಿಸಿತ್ತು. ಇದರ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್‌ನ ನ್ಯಾ। ಅಭಯ್ ಎಸ್. ಓಕಾ ಮತ್ತು ಉಜ್ಜಲ್ ಭುಯಾನ್ ಅವರ ಪೀಠವು, ‘ಹೈಕೋರ್ಟ್‌ನ ಕೆಲವು ಅಭಿಪ್ರಾಯಗಳು ಅತ್ಯಂತ ಆಕ್ಷೇಪಾರ್ಹ ಮತ್ತು ಸಂಪೂರ್ಣ ಅನಗತ್ಯವಾಗಿವೆ. ಇದು ‘ದುಃಖದಾಯಕ ಮತ್ತು ದುರದೃಷ್ಟಕರ’. ತೀರ್ಪುಗಳನ್ನು ಬರೆಯುವಾಗ ನ್ಯಾಯಾಧೀಶರು ‘ಬೋಧನೆ’ ಮಾಡುವುದನ್ನು ನಾವು ನಿರೀಕ್ಷಿಸುವುದಿಲ್ಲ. ಹೈಕೋರ್ಟ್ ತೀರ್ಪಿನಲ್ಲಿನ ಕೆಲವು ಪ್ಯಾರಾಗಳು ‘ಸಮಸ್ಯಾತ್ಮಕ’ ಆಗಿವೆ ಮತ್ತು ಅಂತಹ ತೀರ್ಪುಗಳನ್ನು ಬರೆಯುವುದು ಸಂಪೂರ್ಣ ತಪ್ಪು’ ಎಂದಿತು.
ಉಕ್ರೇನ್‌ಗೆ ರೈಲಲ್ಲಿ ಮೋದಿ ಪ್ರಯಾಣ: ಟ್ರೇನ್ ಪೋರ್ಸ್ ಒನ್‌ನಲ್ಲಿ ಪ್ರಧಾನಿ ಸಂಚಾರ
ಅಲ್ಲದೆ, ಇಂಥ ಅಭಿಪ್ರಾಯಗಳು ಆರ್ಟಿಕಲ್ 21 (ಜೀವನದ ಹಕ್ಕು) ಅಡಿಯಲ್ಲಿ ಹದಿಹರೆಯದವರ ಹಕ್ಕುಗಳನ್ನು ಸಂಪೂರ್ಣವಾಗಿ ಉಲ್ಲಂಘಿಸುತ್ತವೆ ಎಂದೂ ಹೇಳಿತು. ‘ಹೀಗಾಗಿ ಹೈಕೋರ್ಟ್ ತೀರ್ಪನ್ನು ನಾವು ರದ್ದುಗೊಳಿಸಿದ್ದೇವೆ ಹಾಗೂ ಭಾರತೀಯ ದಂಡ ಸಂಹಿತೆಯ (ಐಪಿಸಿ) ಸೆಕ್ಷನ್ 376 (ಅತ್ಯಾಚಾರ) ಅಡಿಯಲ್ಲಿ ಆರೋಪಿಗೆ ನೀಡಲಾಗಿದ್ದ ಶಿಕ್ಷೆಯನ್ನು ಮರುಸ್ಥಾಪಿಸಿದ್ದೇವೆ. ತೀರ್ಪನ್ನು ಯಾವ ರೀತಿಯಲ್ಲಿ ಬರೆಯಬೇಕೆಂದು ನಾವು ಹೇಳಿದ್ದೇವೆ. ಆದ್ದರಿಂದ ಎಲ್ಲಾ ಅಭಿಪ್ರಾಯಗಳು ರದ್ದಾಗುತ್ತವೆ’ ಎಂದು ಕಟುವಾಗಿ ನುಡಿಯಿತು.