ವಿಜಯಪುರ ಏರ್‌ಪೋರ್ಟ್‌: ಸುಪ್ರೀಂ ಮಹಾವಿಘ್ನ ನಿವಾರಣೆ, ವಿಮಾನ ಹಾರಾಟಕ್ಕೆ ಕ್ಷಣಗಣನೆ - ಸಚಿವ ಎಂ.ಬಿ.ಪಾಟೀಲ

Published : Jul 29, 2026, 09:49 PM IST
Vijayapura Airport

ಸಾರಾಂಶ

ವಿಜಯಪುರ ವಿಮಾನ ನಿಲ್ದಾಣಕ್ಕೆ ಎದುರಾಗಿದ್ದ ಪರಿಸರ ಅನುಮತಿಯ ಕಾನೂನು ತೊಡಕು ಸುಪ್ರೀಂಕೋರ್ಟ್ ತೀರ್ಪಿನಿಂದ ಸಂಪೂರ್ಣವಾಗಿ ನಿವಾರಣೆಯಾಗಿದೆ. ಈ ಹಿನ್ನೆಲೆಯಲ್ಲಿ, ಮುಂದಿನ 3 ತಿಂಗಳೊಳಗೆ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಲಿದೆ ಎಂದು ಸಚಿವ ಎಂ.ಬಿ. ಪಾಟೀಲ ಪ್ರಕಟಿಸಿದ್ದಾರೆ. ಕೇಂದ್ರದ ಒಪ್ಪಿಗೆ ಮತ್ತು ಡಿಜಿಸಿಎ ಪರಿಶೀಲನೆಯ ನಂತರ ವಾಣಿಜ್ಯ ವಿಮಾನ ಹಾರಾಟ ಆರಂಭವಾಗಲಿದೆ.

ಬೆಂಗಳೂರು (ಜು.29): ಕಾರ್ಯಾರಂಭಕ್ಕೆ ಸಂಪೂರ್ಣ ಸಿದ್ಧವಾಗಿರುವ ವಿಜಯಪುರ ವಿಮಾನ ನಿಲ್ದಾಣದ (Vijayapura Airport) ಹಾರಾಟಕ್ಕೆ ಎದುರಾಗಿದ್ದ ಪರಿಸರ ಅನುಮತಿಯ (Environmental Clearance) ದೊಡ್ಡ ಅಡೆತಡೆಗಳು ಈಗ ಸಂಪೂರ್ಣವಾಗಿ ನಿವಾರಣೆಯಾಗಿವೆ. ಸುಪ್ರೀಂಕೋರ್ಟ್ (Supreme Court) ನೀಡಿದ ಅಂತಿಮ ತೀರ್ಪಿನಿಂದಾಗಿ ಯೋಜನೆಗೆ ದಾರಿ ಸುಗಮವಾಗಿದ್ದು, ಮುಂದಿನ 3 ತಿಂಗಳೊಳಗೆ ವಿಮಾನ ನಿಲ್ದಾಣ ಲೋಕಾರ್ಪಣೆಯಾಗಲಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ (M.B. Patil) ಪ್ರಕಟಿಸಿದ್ದಾರೆ.

ಸುಪ್ರೀಂಕೋರ್ಟ್ ತ್ರಿಸದಸ್ಯ ಪೀಠದ ಮಹತ್ವದ ತೀರ್ಪು:

ಸುಪ್ರೀಂಕೋರ್ಟಿನ ಪ್ರಮುಖ ತ್ರಿಸದಸ್ಯ ಪೀಠದ ನ್ಯಾಯಮೂರ್ತಿಗಳಾದ ಸೂರ್ಯಕಾಂತ್, ಜಯಮಾಲ್ಯ ಬಾಗ್ಚಿ ಮತ್ತು ವಿಪುಲ್ ಎಂ. ಪಾಂಚೋಲಿ ಅವರಿದ್ದ ಪೀಠವು ಈ ಮಹತ್ವದ ಅಂತಿಮ ತೀರ್ಪು ನೀಡಿದೆ. ರಾಜ್ಯ ಸರ್ಕಾರದ ಪರವಾಗಿ ಸುಪ್ರೀಂಕೋರ್ಟ್‌ನಲ್ಲಿ ಬಲವಾಗಿ ವಾದ ಮಂಡಿಸಿದ ಕೇಂದ್ರ ಸರ್ಕಾರದ ಸಾಲಿಸಿಟರ್ ಜನರಲ್ (Solicitor General) ತುಷಾರ್ ಮೆಹತಾ, ಹಿರಿಯ ನ್ಯಾಯವಾದಿ ಕಪಿಲ್ ಸಿಬಲ್, ರಾಜ್ಯದ ಅಡ್ವೊಕೇಟ್ ಜನರಲ್ (Advocate General) ಶಶಿಕಿರಣ್ ಶೆಟ್ಟಿ ಮತ್ತು ನಿಶಾಂತ್ ಪಾಟೀಲ್ ಅವರಿಗೆ ಸಚಿವ ಎಂ.ಬಿ. ಪಾಟೀಲ ವಿಶೇಷ ಧನ್ಯವಾದಗಳನ್ನು ಸಲ್ಲಿಸಿದ್ದಾರೆ.

ಏನಿದು ಪರಿಸರ ಅನುಮತಿಯ ಕಾನೂನು ತೊಡಕು?

ಪರಿಸರ ಸಂಬಂಧಿ ಅನುಮೋದನೆಗಳನ್ನು ಪಡೆಯದೆ ಕೈಗೆತ್ತಿಕೊಂಡ ಯೋಜನೆಗಳನ್ನು ರದ್ದುಪಡಿಸುವಂತೆ ಸುಪ್ರೀಂಕೋರ್ಟ್ ಈ ಹಿಂದೆ ಆದೇಶಿಸಿತ್ತು. ಇದರಿಂದಾಗಿ ವಿಜಯಪುರ ಏರ್‌ಪೋರ್ಟ್‌ ಯೋಜನೆಯೂ ಸಂಕಷ್ಟಕ್ಕೆ ಸಿಲುಕಿತ್ತು. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರವು ಹಿರಿಯ ವಕೀಲರ ತಂಡದ ಮೂಲಕ ಕೋರ್ಟ್‌ಗೆ ಯೋಜನೆಯ ಸಾರ್ವಜನಿಕ ಹಿತಾಸಕ್ತಿಯನ್ನು ಮನವರಿಕೆ ಮಾಡಿಕೊಟ್ಟಿತ್ತು. ಈ ಹಿಂದೆ ಏಪ್ರಿಲ್ 1ರಂದು ಸುಪ್ರೀಂಕೋರ್ಟ್ ತಾತ್ಕಾಲಿಕ ವಿನಾಯಿತಿ ನೀಡಿ ತೀರ್ಪು ಕಾಯ್ದಿರಿಸಿತ್ತು. ಆದರೆ ಈಗ ನೀಡಿರುವ ಅಂತಿಮ ತೀರ್ಪಿನಲ್ಲಿ ಶಾಶ್ವತ ವಿನಾಯಿತಿ (Permanent Exemption) ನೀಡಿ ಆದೇಶಿಸಿದೆ.

ಮುಂದಿನ ಪ್ರಕ್ರಿಯೆಗಳು ಮತ್ತು ಡಿಜಿಸಿಎ (DGCA) ಭೇಟಿ:

ಸುಪ್ರೀಂಕೋರ್ಟ್ ನಿರ್ದೇಶನದಂತೆ ಕೇಂದ್ರ ಪರಿಸರ ಮತ್ತು ಅರಣ್ಯ ಸಚಿವಾಲಯಕ್ಕೆ (Ministry of Environment & Forests) ಪರಿಸರ ಅನುಮತಿ ಕೋರಿ ಸಲ್ಲಿಸಲಾದ ಅರ್ಜಿಗಳನ್ನು ಶೀಘ್ರ ವಿಲೇವಾರಿ ಮಾಡಲು ಸೂಚಿಸಲಾಗಿದೆ. ಕೇಂದ್ರದಿಂದ ಪರಿಸರ ಒಪ್ಪಿಗೆ ಸಿಕ್ಕ ತಕ್ಷಣವೇ, ನಾಗರಿಕ ವಿಮಾನಯಾನ ಮಹಾನಿರ್ದೇಶಕರ (DGCA) ಹಿರಿಯ ಅಧಿಕಾರಿಗಳ ತಂಡವು ವಿಜಯಪುರಕ್ಕೆ ಭೇಟಿ ನೀಡಿ ವಿಮಾನ ನಿಲ್ದಾಣದ ಸಿದ್ಧತೆಗಳನ್ನು ಪರಿಶೀಲಿಸಲಿದೆ (Inspection). ಡಿಜಿಸಿಎ ಯಿಂದ ಅಂತಿಮ ಲೈಸೆನ್ಸ್ ಸಿಕ್ಕ ತಕ್ಷಣವೇ ವಾಣಿಜ್ಯ ವಿಮಾನ ಹಾರಾಟ (Commercial Flights) ಆರಂಭವಾಗಲಿದೆ.

₹614 ಕೋಟಿ ವೆಚ್ಚದ ಯೋಜನೆ!

ವಿಜಯಪುರ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರವು ₹614 ಕೋಟಿಗೂ ಹೆಚ್ಚು ಹಣ ವಿನಿಯೋಗಿಸಿದೆ. ಈ ಏರ್‌ಪೋರ್ಟ್ ಸಾರ್ವಜನಿಕ ಸೇವೆಗೆ ಲಭ್ಯವಾದರೆ ವಿಜಯಪುರ ಸೇರಿದಂತೆ ಇಡೀ ಕಿತ್ತೂರು ಕರ್ನಾಟಕ (Kittur Karnataka) ಹಾಗೂ ನೆರೆಹೊರೆಯ ಜಿಲ್ಲೆಗಳ ಕೈಗಾರಿಕಾ ಪ್ರಗತಿ, ಪ್ರವಾಸೋದ್ಯಮ ಮತ್ತು ಆರ್ಥಿಕ ವಲಯಕ್ಕೆ ದೊಡ್ಡ ಮಟ್ಟದ ಉತ್ತೇಜನ ಸಿಗಲಿದೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಜಾಗತಿಕ ಮಟ್ಟದಲ್ಲಿ ಯುಪಿಐ ಮತ್ತೊಂದು ಮೈಲುಗಲ್ಲು: ಭಾರತದಲ್ಲೇ ಕುಳಿತು ದುಬೈ ಬುರ್ಜ್ ಖಲೀಫಾ ಬುಕ್ ಮಾಡಬಹುದು!
ಅಮೆರಿಕದಲ್ಲಿ ನಡೆದ ಜಾಗತಿಕ ಸೌಂದರ್ಯ ಸ್ಪರ್ಧೆಯಲ್ಲಿ ಗುಜರಾತ್​ ಸುಂದರಿಗೆ Mrs. Earth Elite ಕಿರೀಟ: ಯಾರೀಕೆ