ಸುಪ್ರೀಂಕೋರ್ಟ್‌ನಲ್ಲಿ ಶೀಘ್ರದಲ್ಲೇ ಹಿಜಾಬ್‌ ಕೇಸ್‌ ವಿಚಾರಣೆ..? ಮಧ್ಯಂತರ ಪರಿಹಾರ ಕೋರಿ ಅರ್ಜಿ

By BK AshwinFirst Published Feb 22, 2023, 12:30 PM IST
Highlights

ಸರ್ಕಾರಿ ಕಾಲೇಜುಗಳಲ್ಲಿ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಪರಿಹಾರ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಮಾಡಿದ ಮನವಿಯನ್ನು ಪರಿಗಣಿಸುವ ವಿಚಾರಕ್ಕೆ ಡಿ. ವೈ. ಚಂದ್ರಚೂಡ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 

ನವದೆಹಲಿ (ಫೆಬ್ರವರಿ 22, 2023): ಕರ್ನಾಟಕದ ಹಿಜಾಬ್‌ ಪ್ರಕರಣ ಮತ್ತೆ ದೇಶದಲ್ಲಿ ಮುನ್ನೆಲೆಗೆ ಬಂದಿದೆ. ಸುಪ್ರೀಂಕೋರ್ಟ್‌ನಲ್ಲಿ ಮತ್ತೆ ಶೀಘ್ರದಲ್ಲೇ ಹಿಜಾಬ್‌ ಪ್ರಕರಣದ ವಿಚಾರಣೆ ನಡೆಯುವ ಸಾಧ್ಯತೆ ಇದೆ. ಹಿಜಾಬ್ ಪ್ರಕರಣವನ್ನು ತುರ್ತಾಗಿ ವಿಚಾರಣೆಗೆ ಕೈಗೆತ್ತಿಕೊಳ್ಳುವ ಬಗ್ಗೆ ಶೀಘ್ರದಲ್ಲೇ ನಿರ್ಧಾರ ಕೈಗೊಳ್ಳುವುದಾಗಿ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಬುಧವಾರ ಹೇಳಿದ್ದಾರೆ. ರಾಜ್ಯದ ಸರ್ಕಾರಿ ಕಾಲೇಜುಗಳಲ್ಲಿ ಶೀಘ್ರದಲ್ಲೇ ಪರೀಕ್ಷೆ ನಡೆಯಲಿದ್ದು, ಈ ಹಿನ್ನೆಲೆ ಸರ್ಕಾರಿ ಕಾಲೇಜುಗಳಲ್ಲಿ ಪರೀಕ್ಷೆಗೆ ಹಾಜರಾಗಲು ಮಧ್ಯಂತರ ಪರಿಹಾರ ಕೋರಿ ಮುಸ್ಲಿಂ ವಿದ್ಯಾರ್ಥಿನಿಯರು ಮಾಡಿದ ಮನವಿಯನ್ನು ಪರಿಗಣಿಸುವ ವಿಚಾರಕ್ಕೆ ಡಿ. ವೈ. ಚಂದ್ರಚೂಡ್ ಅವರು ಈ ರೀತಿ ಪ್ರತಿಕ್ರಿಯೆ ನೀಡಿದ್ದಾರೆ. 

ಸರ್ಕಾರಿ ಕಾಲೇಜುಗಳಲ್ಲಿ ಹಿಜಾಬ್ ನಿಷೇಧದಿಂದಾಗಿ ಹುಡುಗಿಯರು ಪರೀಕ್ಷೆಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ ಎಂದು ವಕೀಲ ಶಾದನ್ ಫರಾಸತ್ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ವೈ. ಚಂದ್ರಚೂಡ್‌ ಅವರ ಮುಂದೆ ಪ್ರಸ್ತಾಪಿಸಿದ್ದಾರೆ. ಅಲ್ಲದೆ, ಮಾರ್ಚ್‌ 9 ರಂದು ಮುಂಬರುವ ಪರೀಕ್ಷೆಗಳಿದ್ದು, ಈಗಾಗಲೇ ಅನೇಕ ವಿದ್ಯಾರ್ಥಿನಿಯರು ಒಂದು ವರ್ಷವನ್ನು ಕಳೆದುಕೊಂಡಿದ್ದಾರೆ ಎಂದು ಹೇಳಿದ್ದರು. ಇದಕ್ಕೆ ಉತ್ತರಿಸಿದ ಡಿ. ವೈ. ಚಂದ್ರಚೂಡ್ ಅವರು ನಾನು ಈ ಬಗ್ಗೆ ಶೀಘ್ರದಲ್ಲೇ ಉತ್ತರಿಸುತ್ತೇನೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಹಿಜಾಬ್‌ ವಿವಾದ ಸುಪ್ರೀಂ ತ್ರಿಸದಸ್ಯ ಪೀಠಕ್ಕೆ?

ಇನ್ನು, ಈ ಬಗ್ಗೆ ಜನವರಿ 23 ರಂದೇ, ಹಿರಿಯ ವಕೀಲೆ ಮೀನಾಕ್ಷಿ ಅರೋರಾ ಅವರು ಸರ್ಕಾರಿ ಕಾಲೇಜುಗಳಲ್ಲಿ ನಡೆಯುವ ಪರೀಕ್ಷೆಗಳ ತುರ್ತು ಕುರಿತು ಪ್ರಸ್ತಾಪಿಸಿದ ನಂತರ, ತುರ್ತು ಅರ್ಜಿ ಕೋರಿಕೆಯನ್ನು ಪರಿಗಣಿಸಲು ಸಿಜೆಐ ಒಪ್ಪಿಗೆ ನೀಡಿದ್ದರು. ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ರಾಜ್ಯ ಸರ್ಕಾರವು ನಿಷೇಧ ಮುಂದುವರಿಸಿದ್ದು, ಈ  ದೃಷ್ಟಿಯಿಂದ ಹೆಚ್ಚಿನ ವಿದ್ಯಾರ್ಥಿನಿಯರು ಕೆಲವು ಖಾಸಗಿ ಕಾಲೇಜುಗಳಿಗೆ ವಲಸೆ ಹೋಗಿದ್ದಾರೆ ಎಂಬುದನ್ನು ಮೀನಾಕ್ಷಿ ಅರೋರಾ ಪ್ರಸ್ತಾಪಿಸಿದ್ದರು.

ಹಾಗೂ, ಸಂಬಂಧಪಟ್ಟ ವಿದ್ಯಾರ್ಥಿನಿಯರು ಪರೀಕ್ಷೆಗೆ ಹಾಜರಾಗುವುದನ್ನು ಅನುಕೂಲ ಮಾಡಿಕೊಡಲು ಮಧ್ಯಂತರ ಪರಿಹಾರವಾದರೂ ಅಗತ್ಯವಿದೆ ಎಂದೂ ವಕೀಲೆ ಮೀನಾಕ್ಷಿ ಅರೋರಾ ಮನವಿ ಮಾಡಿಕೊಂಡಿದ್ದರು. ಈ ಹಿನ್ನೆಲೆ ಈ ಕೇಸ್‌ ಬಗ್ಗೆ ಶೀಘ್ರದಲ್ಲೇ ವಿಚಾರಣೆಯ ದಿನಾಂಕವನ್ನು ನಿಗದಿಪಡಿಸಲಾಗುವುದು. ಹಾಗೂ ಸುಪ್ರೀಂಕೋರ್ಟ್‌ ತ್ರಿಸದಸ್ಯ ಪೀಠವನ್ನು ರಚಿಸುವುದಾಗಿಯೂ ದೇಶದ ಅತ್ಯುನ್ನತ ನ್ಯಾಯಾಲಯ ಭರವಸೆ ನೀಡಿತ್ತು. 

ಇದನ್ನೂ ಓದಿ: ಕರ್ನಾಟಕ ಬಳಿಕ ಈಗ ಯುಪಿಯಲ್ಲಿ ಹಿಜಾಬ್‌ ಗಲಾಟೆ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ..!

ಕರ್ನಾಟಕದ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಧರಿಸುವುದನ್ನು ನಿಷೇಧಿಸುವ ಕುರಿತು 2022 ರ ಅಕ್ಟೋಬರ್‌ನಲ್ಲಿ ಸರ್ವೋಚ್ಚ ನ್ಯಾಯಾಲಯವು ವಿಭಜನೆಯ ತೀರ್ಪು ನೀಡಿತ್ತು. ಒಬ್ಬರು ನ್ಯಾಯಮೂರ್ತಿಗಳು ರಾಜ್ಯ ಸರ್ಕಾರವು ಶಾಲೆಗಳಲ್ಲಿ ಸಮವಸ್ತ್ರವನ್ನು ಜಾರಿಗೊಳಿಸಲು ಅಧಿಕಾರವನ್ನು ಹೊಂದಿದೆ ಎಂದು ದೃಢಪಡಿಸಿದ್ದರೆ, ಇನ್ನೊಬ್ಬರು ನ್ಯಾಯಮೂರ್ತಿಗಳು ಹಿಜಾಬ್ ಅನ್ನು ಆಯ್ಕೆಯ ವಿಷಯ ಎಂದು ಹೇಳಿದ್ದು, ಈ ಹಕ್ಕನ್ನು ಸರ್ಕಾರ ಕಿತ್ತುಕೊಳ್ಳಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟಿದ್ದರು. 

ಏನಿದು ಹಿಜಾಬ್‌ ಪ್ರಕರಣ..?

ಶಾಲಾ ಆಡಳಿತ ಮಂಡಳಿ ಅನುಮೋದಿಸಿದ ಸಮವಸ್ತ್ರವನ್ನು ಮಾತ್ರವೇ ವಿದ್ಯಾರ್ಥಿಗಳು ಧರಿಸಬಹುದಾಗಿದ್ದು, ಇತರೆ ಯಾವುದೇ ಧಾರ್ಮಿಕ ಆಚರಣೆಗಳಿಗೆ ಕಾಲೇಜುಗಳಲ್ಲಿ ಅವಕಾಶ ನೀಡುವುದಿಲ್ಲ ಎಂದು ಪಿಯು ಶಿಕ್ಷಣ ಮಂಡಳಿ ಸುತ್ತೋಲೆ ಹೊರಡಿಸಿತ್ತು. ನಂತರ ಈ ವಿಚಾರ ಕರ್ನಾಟಕ ಹೈಕೋರ್ಟ್‌ ಮೆಟ್ಟಿಲೇರಿದ್ದು, ಅಲ್ಲಿ ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅನ್ನು ನಿಷೇಧಿಸುವುದನ್ನು ಪ್ರಶ್ನಿಸಿ ವಿವಿಧ ಅರ್ಜಿಗಳನ್ನು ವಜಾಗೊಳಿಸಿತು ಮತ್ತು ಹಿಜಾಬ್ ಧರಿಸುವುದು ಇಸ್ಲಾಂ ಧರ್ಮದ ಅಗತ್ಯ ಧಾರ್ಮಿಕ ಆಚರಣೆಯಲ್ಲ ಎಂದು ಹೈಕೋರ್ಟ್‌ ಹೇಳಿತ್ತು. 
ಆದರೆ, ಈ ವಿಚಾರ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಹೋದಾಗ ಅಕ್ಟೋಬರ್ 13, 2022 ರಂದು ಕರ್ನಾಟಕ ಹಿಜಾಬ್ ನಿಷೇಧ ಪ್ರಕರಣದಲ್ಲಿ ಸುಪ್ರೀಂಕೋರ್ಟ್‌ ದ್ವಿಸದಸ್ಯ ಪೀಠ ವಿಭಜಿತ ತೀರ್ಪು ಪ್ರಕಟಿಸಿತ್ತು. ಇದರಿಂದ ಕರ್ನಾಟಕ ಸರ್ಕಾರದ ಹಿಜಾಬ್‌ ನಿಷೇಧ ಪ್ರಸ್ತುತ ಜಾರಿಯಲ್ಲಿದೆ. 

ಇದನ್ನೂ ಓದಿ: ಇನ್ಮುಂದೆ ಬ್ರಿಟಿಷ್‌ ಏರ್‌ವೇಸ್‌ ಗಗನಸಖಿಯರಿಗೆ ಸಮವಸ್ತ್ರವಾಗಿ ಹಿಜಾಬ್‌ ಬಳಕೆ..!

click me!