
ನವದೆಹಲಿ(ಏ.11): ಪತಂಜಲಿ ಕಂಪನಿಯ ‘ಆಯುರ್ವೇದ’ ಉತ್ಪನ್ನಗಳಿಗೆ ರೋಗಗಳನ್ನು ಗುಣಪಡಿಸುವ ಶಕ್ತಿಯಿದೆ ಎಂಬ ಸುಳ್ಳು ಜಾಹೀರಾತುಗಳನ್ನು ಪ್ರಸಾರ ಮಾಡಿದ ವಿಷಯಕ್ಕೆ ಸಂಬಂಧಿಸಿದಂತೆ ಕಂಪನಿಯ ಪ್ರವರ್ತಕರಾದ ಬಾಬಾ ರಾಮದೇವ್ ಹಾಗೂ ಆಚಾರ್ಯ ಬಾಲಕೃಷ್ಣ ಅವರನ್ನು ಮತ್ತೊಮ್ಮೆ ಸುಪ್ರೀಂಕೋರ್ಟ್ ತೀವ್ರವಾಗಿ ತರಾಟೆ ತೆಗೆದುಕೊಂಡಿದೆ. ಅಲ್ಲದೆ, ಅವರಿಬ್ಬರೂ ಬೇಷರತ್ ಕ್ಷಮೆಯಾಚಿಸಿ ಸಲ್ಲಿಸಿದ ಅಫಿಡವಿಟ್ ಅನ್ನು ತಿರಸ್ಕರಿಸಿರುವ ನ್ಯಾಯಪೀಠ, ‘ನಿಮ್ಮ ವಿರುದ್ಧ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ನೇರವಾಗಿ ಹೇಳಿದೆ.
‘ಖುದ್ದಾಗಿ ಹಾಜರಾಗುವಂತೆ ನೋಟಿಸ್ ನೀಡಿದಾಗ ರಾಮದೇವ್ ಮತ್ತು ಬಾಲಕೃಷ್ಣ ನುಣುಚಿಕೊಳ್ಳಲು ಪ್ರಯತ್ನಿಸಿದರು. ಅದು ಅಕ್ಷಮ್ಯ. ಕೋರ್ಟ್‌ನಲ್ಲಿ ಛೀಮಾರಿ ಹಾಕಿದ ಮೇಲೂ ಮಾರುಕಟ್ಟೆಗೆ ಹೋಗಿ ಬಾಯಿಗೆ ಬಂದಂತೆ ಮಾತನಾಡಿದರು. ಪ್ರಕರಣದ ಇಡೀ ಇತಿಹಾಸ ಮತ್ತು ನ್ಯಾಯಾಂಗ ನಿಂದಕರ ಹಿಂದಿನ ನಡವಳಿಕೆಗಳನ್ನು ನೋಡಿದ ಬಳಿಕ ಈ ಕ್ಷಮಾಪಣೆಯನ್ನು ನಾವು ಒಪ್ಪಿಕೊಳ್ಳಲು ಸಾಧ್ಯವೇ ಇಲ್ಲ’ ಎಂದೂ ಕೋರ್ಟ್ ಹೇಳಿದೆ.
ಅಲೋಪತಿ ಬಗ್ಗೆ ಅಪಪ್ರಚಾರ ಮಾಡಿಲ್ಲ, ಕೋರ್ಟಿಗೆ ಪತಂಜಲಿ ಉತ್ಪನ್ನ ಬಗ್ಗೆ ಸ್ಪಷ್ಟನೆ ನೀಡುವೆ: ರಾಮದೇವ್
ಜೊತೆಗೆ ಮೊದಲು ಮಾಧ್ಯಮಗಳಿಗೆ ಅಫಿಡವಿಟ್ ವರದಿ ಬಿಡುಗಡೆ ಮಾಡಿ ಬಳಿಕ ನಮ್ಮ ಬಳಿಗೆ ಬಂದಿದ್ದೀರಿ. ನೀವು ಪ್ರಚಾರದಲ್ಲಿ ಖಂಡಿತಾ ನಂಬಿಕೆ ಇಟ್ಟಿದ್ದೀರಿ. ಪ್ರಕರಣದ ಕುರಿತು ಕೋರ್ಟ್ ಛಾಟಿ ಬೀಸುವವರೆಗೂ ನೀವು ಅಫಿಡವಿಟ್ ಸಲ್ಲಿಸುವ ಗೋಜಿಗೆ ಹೋಗಿಲ್ಲ. ಸಲ್ಲಿಸಿದ ಅಫಿಡವಿಟ್ ಕೂಡಾ ಲೋಪ ಹೊಂದಿದೆ. ನಮ್ಮನ್ನೇನು ಕುರುಡರು ಅಂದುಕೊಂಡಿದ್ದೀರಾ ಎಂದು ನ್ಯಾ. ಹಿಮಾ ಕೊಹ್ಲಿ ಮತ್ತು ನ್ಯಾ. ಅಹ್ಸನುದ್ದೀನ್ ಅಮಾನುಲ್ಲಾ ಅವರನ್ನೊಳಗೊಂಡ ಪೀಠ ಪತಂಜಲಿ ಸಂಸ್ಥೆಯ ಪ್ರವರ್ತಕರ ವಿರುದ್ಧ ಛಾಟಿ ಬೀಸಿತು.
ಅಲ್ಲದೆ ಪತಂಜಲಿ ಕಂಪನಿಯ ಉತ್ಪನ್ನಗಳು ಮತ್ತು ಜಾಹೀರಾತುಗಳಿಗೆ ಅನುಮೋದನೆ ನೀಡಿದ ಹಾಗೂ ನಂತರ ಅವುಗಳ ವಿರುದ್ಧ ಕ್ರಮ ಕೈಗೊಳ್ಳದೆ ವಿಳಂಬ ಧೋರಣೆ ತೋರಿದ ಉತ್ತರ ಪ್ರದೇಶದ ಪರವಾನಗಿ ಇಲಾಖೆಯ ವಿರುದ್ಧವೂ ಕಿಡಿಕಾರಿರುವ ಸುಪ್ರೀಂಕೋರ್ಟ್, ನಾವು ಈ ವಿಷಯವನ್ನು ಹಗುರವಾಗಿ ತೆಗೆದುಕೊಳ್ಳುವುದಿಲ್ಲ. ‘ನಿಮ್ಮನ್ನು ಸುಲಿದುಹಾಕುತ್ತೇವೆ’ ಎಂದು ತೀಕ್ಷ್ಣವಾಗಿ ಹೇಳಿದೆ. ಮುಂದಿನ ವಿಚಾರಣೆಯನ್ನು ಏ.16ಕ್ಕೆ ನಿಗದಿಪಡಿಸಲಾಗಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ