ಜಡ್ಜ್‌ ನೇಮಕ ವಿಳಂಬ: ಕೇಂದ್ರದ ನಡೆಗೆ ಮತ್ತೆ ಸುಪ್ರೀಂ ಕಿಡಿ

By Kannadaprabha NewsFirst Published Dec 9, 2022, 1:00 AM IST
Highlights

‘ಸಮಾಜದ ಕೆಲವು ವಿಭಾಗಗಳು ಕೊಲಿಜಿಯಂ ವಿರುದ್ಧ ನಿಲುವು ವ್ಯಕ್ತಪಡಿಸಿವೆ ಎಂದ ಮಾತ್ರಕ್ಕೆ ನೆಲದ ಕಾನೂನು ಬದಲಾಗಲ್ಲ’ ಎಂದು ಕಿಡಿಕಾರಿದ ನ್ಯಾ. ಎಸ್‌. ಕೆ. ಕೌಲ್‌ ನೇತೃತ್ವದ ಪೀಠ 

ನವದೆಹಲಿ(ಡಿ.09): ನ್ಯಾಯಾಧೀಶರ ನೇಮಕಾತಿಯಲ್ಲಿ ವಿಳಂಬ ನೀತಿಯನ್ನು ಅನುಸರಿಸುತ್ತಿದ್ದ ಕೇಂದ್ರ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಮತ್ತೆ ಎಚ್ಚರಿಕೆ ನೀಡಿದೆ. ‘ನೆಲದ ಕಾನೂನು ಎಲ್ಲಿಯವರೆಗೆ ಇರುತ್ತದೋ ಅಲ್ಲಿಯವರೆಗೆ ಪಾಲನೆ ಆಗುವಂತೆ ನೋಡಿಕೊಳ್ಳಬೇಕು’ ಎನ್ನುವ ಮೂಲಕ ತಾನು ಶಿಫಾರಸು ಮಾಡಿರುವ 19 ನ್ಯಾಯಾಧೀಶರ ಹೆಸರುಗಳನ್ನು ಕೇಂದ್ರ ಸರ್ಕಾರ ವಾಪಸು ಕಳಿಸಿಕ್ಕೆ ಆಕ್ಷೇಪಿಸಿದೆ. ಕೊಲಿಜಿಯಂ ವ್ಯವಸ್ಥೆಯಡಿ ಶಿಫಾರಸಾಗಿರುವ ಹೆಸರುಗಳ ನೇಮಕಾತಿ ವಿಳಂಬ ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿ ವಿಚಾರಣೆ ಮುಂದುವರಿಸಿದ ನ್ಯಾ. ಎಸ್‌. ಕೆ. ಕೌಲ್‌ ನೇತೃತ್ವದ ಪೀಠವು ‘ಸಮಾಜದ ಕೆಲವು ವಿಭಾಗಗಳು ಕೊಲಿಜಿಯಂ ವಿರುದ್ಧ ನಿಲುವು ವ್ಯಕ್ತಪಡಿಸಿವೆ ಎಂದ ಮಾತ್ರಕ್ಕೆ ನೆಲದ ಕಾನೂನು ಬದಲಾಗಲ್ಲ’ ಎಂದು ಕಿಡಿಕಾರಿದೆ.

‘ಎಲ್ಲಿಯವರೆಗೆ ಈ ‘ಚೆಂಡಿನಾಟ’ ಕದನ ನಡೆಯುತ್ತದೆ? ಕೊಲಿಜಿಯಂ ವ್ಯವಸ್ಥೆ ಇರುವವರೆಗೆ ಆ ಪ್ರಕಾರ ನಡೆಯಬೇಕು. ಕೊಲಿಜಿಯಂ ವ್ಯವಸ್ಥೆಯಿರುವವರೆಗೂ ನಾವು ಅದನ್ನೇ ಎತ್ತಿ ಹಿಡಿಯುತ್ತೇವೆ. ನೀವು (ಸರ್ಕಾರ) ಬೇರೆ ಕಾನೂನು ತರಲು ಬಯಸಿದ್ದರೆ ನಿಮ್ಮನ್ನು ತಡೆಯುವವರು ಯಾರೂ ಇಲ್ಲ. ಕಾನೂನುಗಳನ್ನು ರೂಪಿಸುವ ಹಕ್ಕು ಸಂಸತ್ತಿಗಿದೆ. ಆದರೆ ಅದನ್ನು ಕೂಲಂಕಷವಾಗಿ ಪರಿಶೀಲನೆಗೆ ಒಳಪಡಿಸುವ ಹಕ್ಕು ನ್ಯಾಯಾಂಗಕ್ಕಿದೆ. ಹೀಗಾಗಿ ನ್ಯಾಯಾಂಗದ ಕಾನೂನುಗಳನ್ನು ಪಾಲಿಸುವುದು ಮುಖ್ಯ. ಇಲ್ಲದಿದ್ದರೆ ಜನರು ತಮಗೆ ಸರಿ ಎನಿಸಿದ ಕಾನೂನನ್ನೇ ಪಾಲಿಸುತ್ತಾರೆ’ ಎಂದಿದೆ.

ಬಾಬ್ರಿ ಧ್ವಂಸ: ಅಡ್ವಾಣಿ ಸೇರಿ 32 ಜನರ ಖುಲಾಸೆ ಪ್ರಶ್ನಿಸಿ ಸುಪ್ರೀಂಗೆ ಮನವಿ

ಕೊಲಿಜಿಯಂ ವಿರುದ್ಧ ಹೇಳಿಕೆಗೆ ಕೋರ್ಟ್‌ ಮತ್ತೆ ಆಕ್ಷೇಪ

ನವದೆಹಲಿ: ‘ಕೊಲಿಜಿಯಂ ವ್ಯವಸ್ಥೆ ವಿರುದ್ಧ ಮಾತುಗಾರಿಕೆ ಸರಿಯಲ್ಲ. ಕೊಲಿಜಿಯಂ ವ್ಯವಸ್ಥೆಯು ಕಾನೂನಾತ್ಮಕವಾದದ್ದು, ಅದನ್ನು ಪಾಲನೆ ಮಾಡಬೇಕು’ ಎಂದು ಸುಪ್ರೀಂ ಕೋರ್ಟ್‌ ಗುರುವಾರ ಹೇಳಿದೆ. ಈ ಮೂಲಕ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಸರ್ಕಾರದಲ್ಲಿನ ಪ್ರಮುಖರು ಮಾತನಾಡುತ್ತಿರುವ ಬಗ್ಗೆ ಮತ್ತೆ ಆಕ್ಷೇಪ ವ್ಯಕ್ತಪಡಿಸಿದೆ.

ಕೊಲಿಜಿಯಂ ಕುರಿತಾದ ಅರ್ಜಿಯೊಂದರ ವಿಚಾರಣೆ ವೇಳೆ ಈ ಪ್ರತಿಕ್ರಿಯೆ ನೀಡಿದ ನ್ಯಾಯಪೀಠ, ‘ಕೊಲಿಜಿಯಂ ಆಕ್ಷೇಪಿಸಿ ಸರ್ಕಾರದ ಉನ್ನತ ಜನರು ಪದೇ ಪದೇ ಹೇಳಿಕೆ ನೀಡುತ್ತಿರುವುದು ಸಮಂಜಸವಲ್ಲ ಎಂದು ನೀವು ಸರ್ಕಾರಕ್ಕೆ ಸಲಹೆ ನೀಡಬೇಬೇಕು’ ಎಂದು ಅಟಾರ್ನಿ ಜನರಲ್‌ ಆರ್‌. ವೆಂಕಟರಮಣಿ ಅವರಿಗೆ ತಾಕೀತು ಮಾಡಿದೆ. ಇತ್ತೀಚೆಗೆ ಕೊಲಿಜಿಯಂ ವ್ಯವಸ್ಥೆ ಬಗ್ಗೆ ಉಪರಾಷ್ಟ್ರಪತಿ ಜಗದೀಪ್‌ ಧನಕರ್‌ ಹಾಗೂ ಕೇಂದ್ರ ಕಾನೂನು ಸಚಿವ ಕಿರಣ್‌ ರಿಜಿಜು ಟೀಕೆ ಟಿಪ್ಪಣಿ ಮಾಡಿದ್ದರು ಎಂಬುದು ಇಲ್ಲಿ ಗಮನಾರ್ಹ.
 

click me!