
ನವದೆಹಲಿ (ಅ.02): ದೇಶದಲ್ಲಿ ಕೊರೋನಾ ವೈರಸ್ ಈ ಪರಿ ಅಬ್ಬರ ಮಾಡುತ್ತಿರುವುದಕ್ಕೆ ‘ಸೂಪರ್ ಸ್ಪ್ರೆಡರ್’ (ಸಣ್ಣ ಪ್ರಮಾಣದ ಸೋಂಕಿತ ವ್ಯಕ್ತಿಗಳು) ಕಾರಣ ಎಂದು ಸಂಶೋಧನೆಯೊಂದು ತಿಳಿಸಿದೆ. ಸರ್ಕಾರ ಶಾಲಾ-ಕಾಲೇಜುಗಳನ್ನು ಆರಂಭಿಸಲು ಚಿಂತನೆ ನಡೆಸುತ್ತಿರುವಾಗಲೇ, ಮಕ್ಕಳಿಂದ ಮಕ್ಕಳಿಗೆ ಸೋಂಕು ಹರಡುವ ಸಾಧ್ಯತೆ ಅತ್ಯಧಿಕ ಎಂದೂ ಈ ಅಧ್ಯಯನ ಎಚ್ಚರಿಕೆಯ ಗಂಟೆ ಬಾರಿಸಿದೆ.
ತಮಿಳುನಾಡು ಹಾಗೂ ಆಂಧ್ರಪ್ರದೇಶದಲ್ಲಿ ಕೊರೋನಾ ಸೋಂಕಿಗೆ ತುತ್ತಾದ 5.75 ಲಕ್ಷ ಮಂದಿಯ ಸಂಪರ್ಕಿತರ ಪತ್ತೆ (ಕಾಂಟ್ಯಾಕ್ಟ್ ಟ್ರೇಸಿಂಗ್) ಹಾಗೂ 84900 ಸಾವುಗಳ ಅಧ್ಯಯನ ನಡೆಸಿ ಈ ವರದಿಯನ್ನು ಸಿದ್ಧಪಡಿಸಲಾಗಿದೆ. ಇದು ದೇಶದ ಅತಿದೊಡ್ಡ ಕಾಂಟ್ಯಾಕ್ಟ್ ಟ್ರೇಸಿಂಗ್ ಅಧ್ಯಯನ ಎಂದು ಹೇಳಲಾಗಿದೆ. ಅದರ ಪ್ರಕಾರ, ಈ ಎರಡೂ ರಾಜ್ಯಗಳಲ್ಲಿ ಕೊರೋನಾ ಸೋಂಕಿಗೆ ತುತ್ತಾಗಿದ್ದ ಶೇ.70ರಷ್ಟುವ್ಯಕ್ತಿಗಳಿಂದ ಯಾರಿಗೂ ಸೋಂಕು ಹರಡಿಲ್ಲ. ಆದರೆ ಕೇವಲ ಶೇ.8ರಷ್ಟುಸೋಂಕಿತರಿಂದ ಶೇ.60ರಷ್ಟುಮಂದಿಯಲ್ಲಿ ಹೊಸದಾಗಿ ಸೋಂಕು ಕಾಣಿಸಿಕೊಂಡಿದೆ. ಶ್ರೀಮಂತ ದೇಶಗಳಿಗೆ ಹೋಲಿಸಿದರೆ, ದೇಶದಲ್ಲಿ ಕೊರೋನಾ ಸೋಂಕು ಹಾಗೂ ಸಾವು 40ರಿಂದ 69ರ ವಯೋಮಾನದವರಲ್ಲಿ ಅತ್ಯಧಿಕವಾಗಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪತ್ನಿ ಮೆಲೇನಿಯಾಗೆ ಕೊರೋನಾ ಪಾಸಿಟಿವ್..! ...
ಮಕ್ಕಳಲ್ಲಿ ಅದೇ ಓರಗೆಯ ಮಕ್ಕಳಿಂದ ಸೋಂಕು ಹರಡುತ್ತಿದೆ. 0-14ರ ವಯೋಮಾನ ಹಾಗೂ 65 ವರ್ಷದ ಮೇಲ್ಪಟ್ಟವ್ಯಕ್ತಿಗಳಿಗೆ ಅದೇ ವಯಸ್ಸಿನವರಿಂದ ಕೊರೋನಾ ಹಬ್ಬುವ ಸಾಧ್ಯತೆ ಅಧಿಕವಾಗಿದೆ ಎಂದು ಈ ಅಧ್ಯಯನ ತಿಳಿಸಿದೆ. ‘ಜರ್ನಲ್ ಸೈನ್ಸ್’ನಲ್ಲಿ ಈ ಅಧ್ಯಯನ ಬುಧವಾರ ಪ್ರಕಟವಾಗಿದೆ.
ಅಮೆರಿಕ ಜತೆ ಹೋಲಿಕೆ: ಅಮೆರಿಕದ ಕೊರೋನಾ ಸೋಂಕಿತರ ಸಾವನ್ನು ತುಲನೆ ಮಾಡಿದಾಗ, ಆಸ್ಪತ್ರೆಗೆ ದಾಖಲಾದ ಸರಾಸರಿ 13 ದಿನಗಳ ಬಳಿಕ ಹೆಚ್ಚು ಮಂದಿ ಸಾವಿಗೀಡಾಗಿದ್ದಾರೆ. ಆದರೆ ಅಧ್ಯಯನ ನಡೆದ 2 ರಾಜ್ಯಗಳಲ್ಲಿ ಆಸ್ಪತ್ರೆಗೆ ದಾಖಲಾದ ಐದೇ ದಿನಗಳಲ್ಲಿ ಹಲವರು ಅಸುನೀಗಿದ್ದಾರೆ.
ಸಾರ್ವಜನಿಕರೇ ಎಚ್ಚರ: ಮಾಸ್ಕ್ ಧರಿಸದಿದ್ರೆ ಕ್ರಿಮಿನಲ್ ಕೇಸ್..! ..
ಅಮೆರಿಕದಲ್ಲಿ 75 ವರ್ಷ ಮೇಲ್ಪಟ್ಟಶೇ.58.1ರಷ್ಟುವ್ಯಕ್ತಿಗಳು ಮರಣ ಹೊಂದಿದ್ದರೆ, ತಮಿಳುನಾಡು, ಆಂಧ್ರದಲ್ಲಿ ಇದು ಶೇ.17.9ರಷ್ಟಿದೆ. ಅಲ್ಲದೆ ಮೃತರಲ್ಲಿ ಶೇ.63ರಷ್ಟುಮಂದಿಗೆ ಒಂದಾದರೂ ಆರೋಗ್ಯ ಸಮಸ್ಯೆ ಮೊದಲೇ ಇತ್ತು. ಶೇ.36ರಷ್ಟುಮಂದಿಗೆ ಎರಡು ಅಥವಾ ಅದಕ್ಕಿಂತ ಹೆಚ್ಚು ಆರೋಗ್ಯ ಸಮಸ್ಯೆಗಳು ಇದ್ದವು. ಮೃತರಲ್ಲಿ ಶೇ.45ರಷ್ಟುಮಂದಿ ಮಧುಮೇಹಿಗಳಾಗಿದ್ದರು ಎಂದು ಅಧ್ಯಯನ ತಿಳಿಸಿದೆ. ಸಹಸ್ರಾರು ಆರೋಗ್ಯ ಕಾರ್ಯಕರ್ತರನ್ನು ಬಳಸಿಕೊಂಡು ಈ ಅಧ್ಯಯನ ಸಿದ್ಧಪಡಿಸಲಾಗಿದೆ ಎಂದು ವಿಜ್ಞಾನಿ ರಮಣನ್ ಲಕ್ಷ್ಮೀ ನಾರಾಯಣ್ ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ