ಇನ್ಫೋಸಿಸ್ ಸಹಸಂಸ್ಥಾಪಕ ನಾರಾಯಣಮೂರ್ತಿ ಅವರ ಪತ್ನಿ ಸುಧಾಮೂರ್ತಿ ಅವರ ಮಾತುಗಳನ್ನು ಆಲಿಸುವ ದೊಡ್ಡ ವರ್ಗವೇ ಇದೆ. ತಮ್ಮ ಭಾಷಣಗಳು ಮಾತ್ರವಲ್ಲದೆ, ಪುಸ್ತಕಗಳ ಮೂಲಕವೂ ಅವರು ಜನರೊಂದಿಗೆ ಬೆರೆಯುತ್ತಿರುತ್ತಾರೆ. ಹಿಂದೊಮ್ಮೆ ತಮ್ಮ ಪುಸ್ತಕ ಬಿಡುಗಡೆಯ ಸಮಾರಂಭದಲ್ಲಿ ಪತಿಯ ಬಗ್ಗೆ ಅವರು ಹೇಳಿದ್ದ ಮಾತುಗಳು ಮತ್ತೆ ವೈರಲ್ ಆಗಿವೆ.
ಬೆಂಗಳೂರು (ಅ.6): ನನ್ನ ಪುಸ್ತಕಗಳಲ್ಲಿ ನಾನು ಬರೆಯುವ ವಿಚಾರಗಳು ಹೊಸದಲ್ಲ. ಅಲ್ಲಿರುವ ಪ್ರತಿಯೊಂದು ವಿಚಾರಗಳು, ಅನುಭವಗಳನ್ನು ಸ್ವತಃ ನಾನೇ ಅನುಭವಿಸಿರುವಂಥದ್ದು. ಇದನ್ನೆಲ್ಲಾ ನಾನು ಮನೆಗೆ ಬಂದು ಹಂಚಿಕೊಳ್ಳುತ್ತಿದ್ದೆ. ನಿಮಗೆ ಗೊತ್ತಿರಬಹುದು. ನಾನು ಸಿಕ್ಕಾಪಟ್ಟೆ ಮಾತನಾಡ್ತೀನಿ. ಹಾಗೂ ಬಹಿರ್ಮುಖಿ. ಯಾವ ವಿಚಾರಗಳನ್ನು ನನ್ನಲ್ಲೇ ಇಟ್ಟುಕೊಳ್ಳುವುದಿಲ್ಲ. ಆದರೆ, ನನ್ನ ಪತಿ (ನಾರಾಯಣ ಮೂರ್ತಿ) ಅಂತರ್ಮುಖಿ. ಅವರು ಏನನ್ನೂ ಕೇಳೋದಿಲ್ಲ ಅಥವಾ ಅವರು ಕೇಳ್ತಾ ಇರ್ತಾರಷ್ಟೆ, ಏನನ್ನೂ ಹೇಳೋದೂ ಇಲ್ಲ. ಅದಕ್ಕಾಗಿಯೇ ಜನರು ಹೇಳೋದು ವಿರುದ್ಧ ಧ್ರುವಗಳು ಬೇಗನೆ ಆಕರ್ಷಿತವಾಗುತ್ತವೆ ಅಂತಾ. ಹೀಗಿರುವಾಗ ನಾನು ಯಾರ ಬಳಿ ನನ್ನ ಕಥೆಗಳು ಹಾಗೂ ವಿಚಾರಗಳನ್ನು ಹೇಳೋದು? ಆಗ ನಾನು ನನ್ನ ಅಕ್ಕ ಸುನಂದಾ ಬಳಿ ಹೇಳಿಕೊಳ್ಳುತ್ತಿದ್ದೆ ಎಂದು ಸುಧಾಮೂರ್ತಿ ಹೇಳಿರುವ ಮಾತುಗಳು ವೈರಲ್ ಆಗಿವೆ. ನನ್ನೆಲ್ಲಾ ಕಥೆಗಳನ್ನು ತಾಳ್ಮೆಯಿಂದ ಕೇಳುತ್ತಿದ್ದದ್ದು ಸುನಂದಾ ಮಾತ್ರ. ಸುನಂದಾ ವೃತ್ತಿಯಲ್ಲಿ ವೈದ್ಯೆ. ನಾನು ಹೇಳುವ ಪ್ರತಿ ಕಥೆಗಳು, ಪ್ರತಿ ಸಂಗತಿಗಳನ್ನು ಆಕೆಯೇ ಕೇಳಿಸಿಕೊಳ್ಳಬೇಕಿತ್ತು ಪಾಪ ಎಂದು ಹೇಳಿದ್ದಾರೆ.
ಪ್ರತಿ ದಿನ ನನ್ನ ಒಂದಲ್ಲಾ ಒಂದು ವಿಚಾರ ಕೇಳುತ್ತಿದ್ದ ಸುನಂದಾ, ನೀನು ಪ್ರತಿ ದಿನ ಇಂಥ ಕಥೆಗಳನ್ನು ಹೇಳುತ್ತೀಯ. ಯಾಕೆ ಇದನ್ನು ನೀನು ಬರೆಯಬಾರದು. ನನ್ನಂಥೇ ಇರುವ ಕೆಲವು ವ್ಯಕ್ತಿಗಳಿಗೆ ಇದು ಅರ್ಥವಾಗಲು ಸುಲಭವಾಗುತ್ತದೆ ಎಂದಿದ್ದರು. ಬಹುಶಃ ಅದೇ ನಾನು ಪುಸ್ತಕ ಬರೆಯಲು ಕಾರಣವಾಯಿತು ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಅದಲ್ಲದೆ ನಾನು ಕಾಲೇಜಿನಲ್ಲಿ ಕಂಪ್ಯೂಟರ್ ಸೈನ್ಸ್‌ನ ಟೀಚರ್ ಆಗಿದ್ದೆ. ಈಗ ನನ್ನ ಸಾಕಷ್ಟು ವಿದ್ಯಾರ್ಥಿಗಳು ಸಿಗುತ್ತಾರೆ. ಒಂದು ಗಂಟೆಯ ಪೀರಿಯಡ್‌ನಲ್ಲಿ ನಾನು 45 ಗಂಟೆ ಪಾಠ ಮಾಡುತ್ತಿದ್ದರೆ, 15 ನಿಮಿಷ ಪ್ರತಿ ದಿನ ಒಂದೊಂದು ಕಥೆ ಹೇಳುತ್ತಿದ್ದೆ. ಬಹುಶಃ ಇಲ್ಲಿಯೇ ನನ್ನ ವಿದ್ಯಾರ್ಥಿನಿಯೊಬ್ಬರು ಇರಬೇಕು. ಆಕೆಯನ್ನೇ ಬೇಕಾದರೆ ಕೇಳಿ, ಆಕೆಗೆ ಇಂದು ನೆನಪಿರುವುದು ನಾನು ಕಲಿಸಿದ ಪಾಠವಲ್ಲ. ನಾನು ಹೇಳುತ್ತಿದ್ದ ಕಥೆಗಳನ್ನು ಮಾತ್ರವೇ ಅವರು ನೆನಪಲ್ಲಿ ಇಟ್ಟುಕೊಂಡಿದ್ದಾರೆ. ನನ್ನೊಳಗಿರುವ ಕಥೆಯಗಳನ್ನು ಜನರೊಂದಿಗೆ ಹಂಚಿಕೊಳ್ಳಲು ಬಯಸಿದ್ದೆ. ಬರೀ ಕಥೆಗಳನ್ನು ಹೇಳುತ್ತಿದ್ದರೆ, ಅದು ಹೆಚ್ಚಿನ ಸಮಯ ಅವರ ನೆನಪಲ್ಲಿ ಇರೋದಿಲ್ಲ. ಅದಕ್ಕಾಗಿಯೇ ದೊಡ್ಡವರು ಲೇಖನಿ ಹರಿತವಾದದ್ದು ಎಂದು ಹೇಳಿರಬೇಕು. ನನ್ನ ಕಥೆಗಳನ್ನು ಅಕ್ಷರರೂಪಕ್ಕೆ ಇಳಿಸಿದಾಗ ಮಾತ್ರವೇ ಅದು ಅವರಿಗೆ ತಲುಪುತ್ತದೆ ಎಂದು ನನಗನಿಸಿತು ಎಂದು ಹೇಳಿದ್ದಾರೆ.
ಇದೇ ವೇಳೆ ನನ್ನ ಬರವಣಿಗೆ ದೊಡ್ಡ ಬಲ ಏನೆಂದರೆ, ನಾನು ಮಾತನಾಡುವ ಭಾಷೆ ಅದು ಇಂಗ್ಲೀಷ್ ಆಗಿರಲಿ, ಕನ್ನಡವೇ ಆಗಿರಲಿ ಜನರಿಗೆ ಸರಳವಾಗು ಅರ್ಥವಾಗುವಂತೆ ಇರುತ್ತದೆ. ಹಾಗಿದ್ದರೆ ನೀವು ಡಿಕ್ಷನರಿಗಳನ್ನು ಬಳಸೋದಕ್ಕೆ ವಿರೋಧ ಹೊಂದಿದ್ದೀರಿ ಎಂದಾಯಿತು ಎಂದು ಶಶಿ ತರೂರ್ ಹೇಳಿದಾಗ, ಇಂದಿಗೂ ಭಾರತದಲ್ಲಿ ಶೇ. 50.60ರಷ್ಟು ಮಂದಿ ತಮಗೆ ತಿಳಿದಷ್ಟು ರೀತಿಯಲ್ಲಿ ಮಾತ್ರವೇ ಇಂಗ್ಲೀಷ್ ಮಾತನಾಡುತ್ತಾರೆ ಹಾಗೂ ಅರ್ಥ ಮಾಡಿಕೊಳ್ಳುತ್ತಾರೆ. ಬಹುಶಃ ಶಶಿ ತರೂರ್ ಹಾಗೂ ರಾಮಚಂದ್ರ ಗುಹಾ ಅವರಂಥ ವ್ಯಕ್ತಿಗಳು ಬರೆದ ಪುಸ್ತಕಗಳನ್ನು ಅರ್ಥ ಮಾಡಿಕೊಳ್ಳಲು ಬಹುಶಃ ಜನರಿಗೆ ಡಿಕ್ಷನರಿಗಳು ಬೇಕಾಗಬಹುದು. ಆದರೆ, ನನ್ನ ಇಂಗ್ಲೀಷ್ ಹಾಗಲ್ಲ ಎಲ್ಲರಿಗೂ ಅರ್ಥವಾಗುವಂತೆ ಇರುತ್ತದೆ ಎಂದು ಹೇಳುವ ಮೂಲಕ ಶಶಿ ತರೂರ್ ಅವರ ಇಂಗ್ಲೀಷ್‌ಗೆ ಟಾಂಗ್ ನೀಡಿದರು.
ಅಮೆರಿಕಾದಲ್ಲಿ ಸುಧಾಮೂರ್ತಿ ಹೆಸರು ಬಳಸಿಕೊಂಡು ಹಣ ವಸೂಲಿ: ಇಬ್ಬರು ಮಹಿಳೆಯರ ವಿರುದ್ಧ ದೂರು
ಭಾರತದಲ್ಲಿ ಇಂಗ್ಲೀಷ್ ಹೇಗೆ ಇದೆ ಎಂದರೆ, ಇಲ್ಲಿನ ಶೇ. 10 ರಿಂದ 20ರಷ್ಟು ಜನಕ್ಕೆ ನೀವು ಇಂಗ್ಲೀಷ್‌ನಲ್ಲಿ ಏನೇ ಮಾತನಾಡಿದರೂ, ಏನೇ ತೋರಿಸದರೂ ಅವರಿಗೆ ಅರ್ಥವಾಗೋದಿಲ್ಲ. ನಾನು ಅಂಥ ಜನರನ್ನು ತುಂಬಾ ನೋಡಿದ್ದೇನೆ. ಇನ್ನೂ 10 ರಿಂದ 20 ರಷ್ಟು ವ್ಯಕ್ತಿಗಳು ನಿಮ್ಮ ಥರ (ಶಶಿ ತರೂರ್) ಇಂಗ್ಲೀಷ್‌ನಲ್ಲಿ ಬಹಳ ಪ್ರಚಂಡವಾಗಿರುತ್ತಾರೆ. ಅವರು ಹೇಳಿರುವ ಶಬ್ದಗಳಿಗೆ ಅರ್ಥ ಡಿಕ್ಷನರಿಗಳಲ್ಲೇ ನೋಡಬೇಕು. ಉಳಿದ ಶೇ.50 ರಿಂದ 60ರಷ್ಟು ಜನರಿಗೆ ಇಂಗ್ಲೀಷ್ ಅರ್ಥವಾಗುವದು ನನ್ನ ರೀತಿ ಮಾತ್ರ. ಹಾಗಾಗಿ ಬರವಣಿಗೆಯಲ್ಲಿ ಸರಳ ಇಂಗ್ಲೀಷ್ ಬಳಸುತ್ತೇನೆ ಎಂದು ಸುಧಾ ಮೂರ್ತಿ ಹೇಳಿದ್ದಾರೆ.
ಎಲಾನ್ ಮಸ್ಕ್‌ನ ಜಗತ್ತಿನಲ್ಲಿ ಸರಳತೆಯ ಸುಧಾಮೂರ್ತಿ, ಮಹಿಳಾ ಉದ್ಯಮಿಯ ಲಿಂಕ್ಡ್ ಇನ್ ಪೋಸ್ಟ್ ವೈರಲ್