ಸಾಗರ ಜಿಲ್ಲೆಯಲ್ಲಿ ನಾಯಿ ಕಡಿತದ ನಂತರ ಯುವಕನೊಬ್ಬ ನಾಯಿಯಂತೆ ವರ್ತಿಸುತ್ತಿದ್ದಾನೆ, ಜನರ ಮೇಲೆ ದಾಳಿ ಮಾಡಿ ಕಚ್ಚುತ್ತಿದ್ದಾನೆ ಮತ್ತು ಹಸಿ ಮಾಂಸವನ್ನು ತಿನ್ನುತ್ತಿದ್ದಾನೆ. ವೈದ್ಯಕೀಯ ತಜ್ಞರು ಇದು ರೇಬಿಸ್ ನಿಂದಾಗಿರಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ, ಬದಲಾಗಿ ಇದು ತೀವ್ರವಾದ ಮದ್ಯಪಾನದಿಂದ ಉಂಟಾದ ಮಾನಸಿಕ ಅಸ್ವಸ್ಥತೆಯಾಗಿರಬಹುದು ಎಂದಿದ್ದಾರೆ.
ಸಾಗರ: ಬೀದಿ ನಾಯಿಯೊಂದು ಕಚ್ಚಿದ ನಂತರ ಯುವಕನೋರ್ವನ ವರ್ತನೆ ಹಠಾತ್ ಬದಲಾಗಿದ್ದು, ಆತ ನಾಯಿಯಂತೆ ಇತರ ಮನುಷ್ಯರಿಗೆ ಕಚ್ಚಲು ಶುರು ಮಾಡಿದ್ದಾನೆ. ಮಧ್ಯಪ್ರದೇಶದ ಸಾಗರ್ ಜಿಲ್ಲೆಯಲ್ಲಿ ಈ ವಿಚಿತ್ರ ಘಟನೆ ನಡೆದಿದ್ದು, ಯುವಕನ ವಿಚಿತ್ರ ವರ್ತನೆಯಿಂದ ಸ್ಥಳೀಯ ನೆರೆಹೊರೆಯವ ನಿವಾಸಿಗಳು ಆತಂಕಕ್ಕೀಡಾಗಿದ್ದಾರೆ. ಸ್ಥಳೀಯ ತರಕಾರಿ ಅಂಗಡಿಯಲ್ಲಿ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದ ಸೋನು ಎಂಬಾತನಿಗೆ ಎರಡು ವಾರಗಳ ಹಿಂದೆ ನಾಯಿಯೊಂದು ಕಚ್ಚಿತ್ತು. ನಾಯಿ ಕಚ್ಚಿದಾಗಿನಿಂದಲೂ ಆತನ ವರ್ತನೆಯಲ್ಲಿ ವಿಲಕ್ಷಣವಾದ ಬದಲಾವಣೆ ಶುರುವಾಗಿದೆ. ಅದು ಎಷ್ಟು ವಿಚಿತ್ರ ಬದಲಾವಣೆ ಎಂದರೆ ಆತ ನಾಯಿಯಂತೆ ಆ ಪ್ರದೇಶದ ಅನೇಕರಿಗೆ ಕಚ್ಚಿದ ಬರೀ ಇಷ್ಟೇ ಅಲ್ಲದೇ ಆತ ಹಸಿ ಮಾಂಸವನ್ನು ತಿನ್ನಲು ಶುರು ಮಾಡಿದ್ದ.
ಇದರಿಂದ ಆತಂಕಗೊಂಡ ಆ ಪ್ರದೇಶದ ವ್ಯಾಪಾರಿಗಳು ಆತನಿಗೆ ವೈದ್ಯಕೀಯ ಸಹಾಯ ಒದಗಿಸುವುದಕ್ಕೆ ಮುಂದಾದರು. ಆದರೆ ಆತ ನಿರಂತರ ಚಿಕಿತ್ಸೆ ಪಡೆಯುದಕ್ಕೆ ನಿರಾಕರಿಸಿದ್ದು, ನಂತರದಲ್ಲಿ ಆತನ ವರ್ತನೆ ಎಷ್ಟು ಬದಲಾಯಿತೆಂದರೆ ಆತನನ್ನು ನಿಯಂತ್ರಿಸುವುದೇ ಕಷ್ಟಕರವಾಗಲು ಶುರುವಾಯ್ತು. ದಿನ ಕಳೆದಂತೆ ಸೋನುವಿನ ವರ್ತನೆ ಹಿಂಸಾತ್ಮಕ ರೂಪ ಪಡೆಯುತ್ತಿದ್ದು, ಆತ ಮತ್ತೊಬ್ಬ ಈರುಳ್ಳಿ ವ್ಯಾಪಾರಿಯಾಗಿದ್ದ ನರೇಂದ್ರ ಠಾಕೂರ್ ಎಂಬುವವರ ಮೇಲೆ ದಾಳಿ ಮಾಡಿದ್ದ, ಇದಾದ ನಂತರ ವೈದ್ಯರು ಆತನಿಗೆ ಸೋಂಕು ತಗಲದಂತೆ ಇಂಜೆಕ್ಷನ್ ನೀಡಿದ್ದರು.
ತೀವ್ರ ಹಲ್ಲೆಯಿಂದ ಸತ್ತಿದ್ದಾನೆಂದು ಮಣ್ಣಿನಡಿ ಹೂತು ಹಾಕಿದ ವ್ಯಕ್ತಿಯನ್ನು ಬದುಕಿಸಿದ ಬೀದಿ ನಾಯಿ!
ಇದಾದ ನಂತರ ಸ್ಥಳೀಯ ವ್ಯಾಪಾರಿಗಳು ಸೋನುವಿಗೆ ಚಿಕಿತ್ಸೆ ನೀಡಿ ಗುಣಪಡಿಸಬೇಕು ಎಂಬ ನಿರ್ಧಾರಕ್ಕೆ ಬಂದಿದ್ದು, ಆತನಿಗೆ ರಾಬಿಸ್ ಇಂಜೆಕ್ಷನ್ ಜೊತೆ ಇತರ ಚಿಕಿತ್ಸೆಯನ್ನು ನೀಡಿದ್ದಾರೆ. ಆದರೂ ಈ ಎಲ್ಲಾ ಚಿಕಿತ್ಸೆಗಳು ಸೋನುವಿನ ರೋಗ ಗುಣಪಡಿಸುವಲ್ಲಿ ವಿಫಲವಾದವು. ಹೀಗಾಗಿ ಇದು ಆಗಾಗ ಮಾರುಕಟ್ಟೆಗೆ ಬರುವ ಗ್ರಾಹಕರ ಹಾಗೂ ಅಲ್ಲಿ ಕೆಲಸ ಮಾಡುವ ವ್ಯಾಪಾರಿಗಳ ಆತಂಕವನ್ನು ಹೆಚ್ಚಿಸಿದೆ.
ಆದರೆ ಈ ವಿಚಾರಕ್ಕೆ ಸಂಬಂಧಿಸಿದಂತೆ ಬುಂದೇಲ್‌ಖಂಡ್ ವೈದ್ಯಕೀಯ ಕಾಲೇಜಿನ ಡಾ. ಸುಮಿತ್ ರಾವತ್ ಅವರು ಪ್ರತಿಕ್ರಿಯಿಸಿದ್ದು, ರೇಬಿಸ್ ವ್ಯಕ್ತಿಯಿಂದ ವ್ಯಕ್ತಿಗೆ ಹರಡುವುದಿಲ್ಲ ಹಾಗಾಗಿ ಆತನಿಂದ ಬೇರೆಯವರಿಗೆ ರೇಬಿಸ್ ಬರುತ್ತದೆ ಎಂಬ ಭಯ ಬೇಡ. ಸೋನುವಿಗೆ 10 ರಿಂದ 12 ದಿನಗಳ ಹಿಂದೆ ಕಚ್ಚಿದ್ದರೆ, ರೇಬಿಸ್‌ಗೆ ತುತ್ತಾಗಿದ್ದರೆ ರೋಗದ ಮುಂದುವರಿದ ಸ್ಥಿತಿಯನ್ನು ನಾವು ನಿರೀಕ್ಷಿಸಬಹುದು ಹಾಗೂ ಇದು ಸಾವಿಗೆ ಕಾರಣವಾಗಬಹುದು ಎಂದು ಅವರು ಹೇಳಿದ್ದಾರೆ. ಅಲ್ಲದೇ ಆತನ ಈ ವರ್ತನೆಗೆ ರೇಬೀಸ್ ಕಾರಣವಿರಲಾರದು, ಬಹುಶಃ ತೀವ್ರವಾದ ಮದ್ಯಸೇವನೆಯಿಂದಾದ ಮಾನಸಿಕ ಅನಾರೋಗ್ಯ ಕಾರಣವಿರಬಹುದು . ಹೀಗಾಗಿ ಆತನಿಂದ ಅಂತರ ಕಾಯ್ದುಕೊಂಡು ಸುರಕ್ಷಿತವಾಗಿರುವಂತೆ ವೈದ್ಯರು ಸಾರ್ವಜನಿಕರಿಗೆ ಸಲಹೆ ನೀಡಿದ್ದಾರೆ.
ಆಟವಾಡುತ್ತಿದ್ದ ಪುಟ್ಟ ಕಂದನ ದಾಳಿಯಿಂದ ರಕ್ಷಿಸಿದ ನಾಯಿ, ಮೈ ಜುಮ್ಮೆನಿಸುವ ದೃಶ್ಯ ಸೆರೆ!