
'ಅಯ್ಯೋ ನಮ್ಮ ಮಕ್ಕಳು ಫೋನ್ ಕಾಲ್ಗೆ ಸಿಕ್ತಿಲ್ಲ. ಹೇಗಾದ್ರೂ ಮಾಡಿ ಪ್ರಧಾನಿ ಮೋದಿಯವರೇ ನಮ್ಮ ಮಕ್ಕಳ ಜೀವ ಉಳಿಸಿ' ಎಂದು ಇರಾನ್‌ನಲ್ಲಿ ವೈದ್ಯಕೀಯ ಓದಲು ಹೋದ ವಿದ್ಯಾರ್ಥಿಗಳ ಪಾಲಕರು ಭಾರತದಲ್ಲಿ ಅತ್ತು ಕರೆದರು. ಇಸ್ರೇಲ್- ಇರಾನ್ ಯುದ್ಧ ಭೀಕರ ಸ್ವರೂಪ ತಾಳುತ್ತಿದ್ದಂತೆಯೇ ಅಲ್ಲಿರುವ ಜನರು ಜೀವ ಉಳಿಸಿಕೊಂಡರೆ ಸಾಕು ಎನ್ನುವ ಸ್ಥಿತಿ ಇದೆ. ಭಾರತ ಬಿಟ್ಟು ಇರಾನ್ಗೆ ಓದಲು ಹೋಗಿದ್ದ ನೂರಾರು ವಿದ್ಯಾರ್ಥಿ-ವಿದ್ಯಾರ್ಥಿನಿಯರ ಜೀವದ ಭಯದಿಂದ ಕಂಗೆಟ್ಟು ಹೋದರು. ಇಂಥ ಸಂದರ್ಭಗಳಲ್ಲಿ ತಾಯ್ನಾಡು ನೆನಪಾಗುವುದು ಸಹಜ. ಅದಕ್ಕಾಗಿಯೇ ಹೇಗಾದರೂ ಮಾಡಿ ಭಾರತಕ್ಕೆ ಲ್ಯಾಂಡ್ ಆದರೆ ಸಾಕು, ಜೀವ ಉಳಿದರೆ ಸಾಕು ಎನ್ನುವ ಸ್ಥಿತಿ ಅಲ್ಲಿನ ವಿದ್ಯಾರ್ಥಿಗಳಲ್ಲಿ ನಿರ್ಮಾಣವಾಗಿತ್ತು. ಭೀಕರ ಯುದ್ಧದ ನಡುವೆ ಬದುಕಿ ಉಳಿಯುವುದೇ ಕಷ್ಟ ಎನ್ನುವ ಸ್ಥಿತಿಯಿಂದ ಅಕ್ಷರಶಃ ವಿದ್ಯಾರ್ಥಿಗಳು ಹಾಗೂ ಭಾರತದಲ್ಲಿರುವ ಅವರ ಪಾಲಕರು ನಲುಗಿ ಹೋಗಿದ್ದರು.
ಆದರೆ, ಪ್ರತಿಬಾರಿಯೂ ಭಾರತ ಸರ್ಕಾರ, ಇಂಥ ಪ್ರಕ್ಷುಬ್ಧ ಪರಿಸ್ಥಿತಿಯಲ್ಲಿ, ಯುದ್ಧಭೂಮಿಯಿಂದಲೇ ತನ್ನ ಪ್ರಜೆಗಳನ್ನು ಸುರಕ್ಷಿತವಾಗಿ ಕರೆದುಕೊಂಡು ಬರಲು ಸರ್ವ ಪ್ರಯತ್ನ ಮಾಡುತ್ತಲೇ ಬಂದಿದೆ. ಅದೇ ರೀತಿ ಇದೀಗ ಆಪರೇಷನ್ ಸಿಂಧು ಮೂಲಕ 110 ವಿದ್ಯಾರ್ಥಿಗಳನ್ನು ಸುರಕ್ಷಿತವಾಗಿ ಕರೆತಂದಿದೆ. ಇಸ್ರೇಲ್ ಮತ್ತು ಇರಾನ್ ನಡುವಿನ ಸಂಘರ್ಷದಿಂದಾಗಿ, ಇರಾನ್‌ನಲ್ಲಿರುವ ಭಾರತೀಯರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಇರಾನ್‌ನಲ್ಲಿ ಸುಮಾರು 30 ಸಾವಿರ ಭಾರತೀಯ ವಿದ್ಯಾರ್ಥಿಗಳು ವಿವಿಧ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಈ ಪೈಕಿ ಬಹುತೇಕರು ಜಮ್ಮು ಮತ್ತು ಕಾಶ್ಮೀರಕ್ಕೆ ಸೇರಿದವರಾಗಿದ್ದಾರೆ. ಇಲ್ಲಿಗೆ ಬರುವವರೆಗೂ ಪ್ರಾಣ ಇದ್ದರೆ ಸಾಕು ಅಂತಿದ್ದ ವಿದ್ಯಾರ್ಥಿಗಳು ಇಲ್ಲಿ ಬಂದ ಮೇಲೆ ಮನೆಗೆ ತೆರಳಲು ಒದಗಿಸಿರೋ ಬಸ್ ಸರಿಯಿಲ್ಲ ಎಂದು ಜಮ್ಮು ಕಾಶ್ಮೀರದ ಮುಖ್ಯಮಂತ್ರಿಗೆ ದೂರಿದ್ದಾರೆ. ತಮಗೆ ಐಷಾರಾಮಿ ಡಿಲಕ್ಸ್ ಬಸ್ ಬೇಕು ಎಂದು ಕೇಳಿಕೊಂಡಿದ್ದಾರೆ! 110 ವಿದ್ಯಾರ್ಥಿಗಳ ಮೊದಲು ಗುಂಪನ್ನು ದೆಹಲಿಗೆ ಕರೆತರಲಾಗಿತ್ತು. ಆ ಪೈಕಿ 90 ವಿದ್ಯಾರ್ಥಿಗಳು ಜಮ್ಮು ಮತ್ತು ಕಾಶ್ಮೀರದವರಾಗಿದ್ದಾರೆ. ಇವರನ್ನು ಮನೆಗೆ ಕರೆತರಲು ವ್ಯವಸ್ಥೆ ಮಾಡಲಾದ ಬಸ್‌ಗಳು ಸರಿಯಿಲ್ಲ ಎಂದು ವಿದ್ಯಾರ್ಥಿಗಳು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇವರ ಮನವಿಯನ್ನು ಜಮ್ಮು ಮತ್ತು ಕಾಶ್ಮೀಕರದ ಮುಖ್ಯಮಂತ್ರಿ ಒಮರ್ ಅಬ್ದುಲ್ಲಾ ಪರಿಗಣಿಸಿ ಕಣಿವೆಯ ವಿದ್ಯಾರ್ಥಿಗಳಿಗಾಗಿ ಹೊಸ ಡೀಲಕ್ಸ್ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಈ ಕುರಿತು ತನ್ನ ಅಧಿಕೃತ ಎಕ್ಸ್ ಅಕೌಂಟ್‌ನಲ್ಲಿ ಟ್ವೀಟ್ ಮಾಡಿರುವ ಮುಖ್ಯಮಂತ್ರಿ ಕಚೇರಿ, "ವಿದ್ಯಾರ್ಥಿಗಳ ವಿನಂತಿ ಬಗ್ಗೆ ಮಾಹಿತಿ ಬಂದಿದೆ. ಅವರಿಗೆ ಸರಿಯಾದ ಡಿಲಕ್ಸ್ ಬಸ್‌ಗಳನ್ನು ವ್ಯವಸ್ಥೆ ಮಾಡಲು ಜಮ್ಮು ಮತ್ತು ಕಾಶ್ಮೀರದ ರಾಜ್ಯ ರಸ್ತೆ ಸಾರಿಗೆ ನಿಗಮದೊಂದಿಗೆ ಸಮನ್ವಯ ಸಾಧಿಸಲಾಗುವುದು" ಎಂದು ಭರವಸೆ ನೀಡಿದೆ.
ಅವರಲ್ಲಿ ಕೆಲವು ವಿದ್ಯಾರ್ಥಿಗಳು ಪ್ರಾಣ ಉಳಿಸಿರುವ ಭಾರತ ಸರ್ಕಾರಕ್ಕೆ ಮನತುಂಬಿ ಕೃತಜ್ಞತೆ ಸಲ್ಲಿಸಿದ್ದಾರೆ. "ನಾವು ಇರಾನ್‌ನಲ್ಲಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದೇವು. ನಮ್ಮನ್ನು ವಿಶೇಷ ವಿಮಾನದತ್ತ ಕರೆದೊಯ್ಯಲು ಬಂದಿದ್ದ ಬಸ್ ಬಳಿಯೇ ಬಾಂಬ್ ಸ್ಫೋಟಗೊಂಡಿತ್ತು. ಆದರೆ ಭಾರತ ಸರ್ಕಾರ ನಮ್ಮನ್ನು ಸುರಕ್ಷಿತವಾಗಿ ಮನೆ ತಲುಪಿಸಿದೆ. ಇದಕ್ಕೆ ನಾವು ಕೇಂದ್ರ ಸರ್ಕಾರಕ್ಕೆ ಧನ್ಯವಾದ ಅರ್ಪಿಸುತ್ತೇವೆ" ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಬಾಂಬ್ ಸ್ಫೋಟದ ನಡುವೆಯೂ ವಿದ್ಯಾರ್ಥಿಗಳು ತಮ್ಮ ಪ್ರಾಣ ಉಳಿಸಿಕೊಂಡು, ಭಾರತದ ರಕ್ಷಣಾ ಸಿಬ್ಬಂದಿ ಅವರ ಪ್ರಾಣವನ್ನು ಕಾಪಾಡಿ ಅವರನ್ನು ಕರೆತಂದಿರುವುದು ಇದರಿಂದಲೇ ತಿಳಿಯುತ್ತದೆ. ಆದರೂ ಇವರಿಗೆ ಈಗ ಬಸ್ ಚಿಂತೆಯಾಗಿರುವುದು ಸಾಕಷ್ಟು ಟೀಕೆಗೆ ಗುರಿಯಾಗಿದೆ. ಈ ಹಿಂದೆ ಕೂಡ, ಯುದ್ಧದ ಭೀತಿಯಲ್ಲಿ ಭಾರತದ ರಕ್ಷಣಾ ಸಿಬ್ಬಂದಿ ಪ್ರಾಣ ಪಣಕ್ಕಿಟ್ಟು ಜೀವ ಉಳಿಸಿದಾಗಲೂ ಕೆಲವು ವಿದ್ಯಾರ್ಥಿಗಳು ಅದು ಸರಿಯಾಗಿಲ್ಲ, ಇದು ಸರಿಯಿರಲಿಲ್ಲ ಎಂದು ಭಾರತಕ್ಕೆ ಬಂದು ಮಾಧ್ಯಮಗಳ ಎದುರು ಕಿರುಚಾಡಿದ್ದೂ ನಡೆದಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ