
ನವದೆಹಲಿ (ಡಿ.29): ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅಂತ್ಯಸಂಸ್ಕಾರದ ಸ್ಥಳ ಮತ್ತು ಅವರ ಹೆಸರಿನಲ್ಲಿ ಸ್ಮಾರಕ ನಿರ್ಮಾಣ ವಿಷಯವು ಬಿಜೆಪಿ ಮತ್ತು ವಿಪಕ್ಷ ಕಾಂಗ್ರೆಸ್ ನಡುವೆ ಭಾರೀ ಜಟಾಪಟಿಗೆ ಕಾರಣವಾಗಿದೆ. ಇಂದಿರಾ ಸಮಾಧಿ ಸ್ಥಳ ಇರುವ ಶಕ್ತಿಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಿ ಸ್ಮಾರಕ ನಿರ್ಮಿಸುವ ಬದಲು ಕೇಂದ್ರ ಸರ್ಕಾರ ನಿಗಮ್‌ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಸಿದೆ. ಈ ಮೂಲಕ ಮಾಜಿ ಪ್ರಧಾನಿಯನ್ನು ಬಿಜೆಪಿ ಅವಮಾನಿಸುತ್ತಿದೆ ಎಂದು ಕಾಂಗ್ರೆಸ್ ಆರೋಪಿಸಿದರೆ, ಕೊಳಕು ರಾಜಕಾರಣ ನಿಲ್ಲಿಸಿ. ನೀವು ಈ ಹಿಂದೆ ಮಾಜಿ ಪ್ರಧಾನಿ ನರಸಿಂಹರಾವ್‌ಗೆ ಹೇಗೆ ಗೌರವ ಸಲ್ಲಿಸಿದ್ದೀರಿ ಎಂದು ನೆನಪಿಸಿಕೊಳ್ಳಿ ಎಂದು ಬಿಜೆಪಿ ತಿರುಗೇಟು ನೀಡಿದೆ.
ರಾಹುಲ್ ಕಿಡಿ: ನಿಗಮ್‌ಘಾಟ್‌ನಲ್ಲಿ ಅಂತ್ಯಸಂಸ್ಕಾರ ನಡೆಸುವ ಮೂಲಕ ಮೊದಲ ಸಿಖ್ ಪ್ರಧಾನಿಗೆ ಕೇಂದ್ರ ಸರ್ಕಾರ ಅವಮಾನಿಸಿದೆ. ಇದುವರೆಗೆ ಎಲ್ಲಾ ಮಾಜಿ ಪ್ರಧಾನಿಗಳಿಗೂ ಅಂತ್ಯಸಂಸ್ಕಾರದ ವೇಳೆ ನೀಡಿದ ಗೌರವ, ಪಾಲಿಸಿದ ಸಂಪ್ರದಾಯ ಮುರಿಯಲಾಗಿದೆ. ಸೂಕ್ತ ಸ್ಥಳದಲ್ಲಿ ಅಂತ್ಯಸಂಸ್ಕಾರ ನಡೆಸಿದ್ದರೆ ಇನ್ನಷ್ಟು ಜನರು ಅವರ ಅಂತಿಮ ದರ್ಶನ ಪಡೆಯಬಹುದಿತ್ತು. ಅವರಿಗೆ ಸೂಕ್ತ ಸ್ಮಾರಕ ನಿರ್ಮಿಸುವ ಮೂಲಕ ಸರ್ಕಾರ ಅವರನ್ನು ಗೌರವಿಸಬೇಕು ಎಂದು ಶನಿವಾರ ಒತ್ತಾಯಿಸಿದ್ದರು. ಇದಕ್ಕೆ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಪ್ರಿಯಾಂಕಾ ಗಾಂಧಿ, ಜೈರಾಮ್ ರಮೇಶ್ ಸೇರಿ ಹಲವರು ಧ್ವನಿ ಗೂಡಿಸಿದ್ದರು.
ಬಿಜೆಪಿ ತಿರುಗೇಟು: ಕಾಂಗ್ರೆಸ್ ನಾಯಕರ ಆರೋಪಕ್ಕೆ ತಿರುಗೇಟು ನೀಡಿರುವ ಬಿಜೆಪಿ ನಾಯಕ ಸಂಬಿತ್ ಪಾತ್ರ, ‘ಸಾವಿನ ಸಮಯದಲ್ಲಿ ಘನತೆ ಕಾಪಾಡಬೇಕು ಎಂಬುದು ಬಿಜೆಪಿ ನಿಲುವು, ಆದರೆ ಕಾಂಗ್ರೆಸ್ ನಾಯಕರ ಹೇಳಿಕೆಗಳು ದುರದೃಷ್ಟಕರ ಮತ್ತು ನಾಚಿಕೆಗೇಡಿನದ್ದು.. ಮಾಜಿ ಪ್ರಧಾನಿ ಸಿಂಗ್ ಕುರಿತು ಶುಕ್ರವಾರ ಸಂಪುಟ ಸಭೆಯಲ್ಲೂ ಶ್ರದ್ಧಾಂಜಲಿ ಸಲ್ಲಿಸಲಾಗಿದೆ. ಜೊತೆಗೆ ಸಿಂಗ್ ಅವರಿಗೆ ಅರ್ಹ ಸ್ಮಾರಕ ನಿರ್ಮಿಸಲಾಗುವುದು ಎಂದು ಕಾಂಗ್ರೆಸ್ ಅಧ್ಯಕ್ಷ ಖರ್ಗೆ ಮತ್ತು ಸಿಂಗ್ ಅವರ ಕುಟುಂಬ ಸದಸ್ಯರಿಗೆ ಮಾಹಿತಿ ರವಾನಿಸಲಾಗಿದೆ. ಸ್ಮಾರಕ ನಿರ್ಮಿಸಲು ಸಾಕಷ್ಟು ಪ್ರಕ್ರಿಯೆಗಳು ನಡೆಯಬೇಕಿರುವ ಕಾರಣ, ಅಲ್ಲಿಯವರೆಗೂ ಅಂತ್ಯಸಂಸ್ಕಾರ ನಿಲ್ಲಿಸಲಾಗದು. ಆದರೆ ಇದರ ಹೊರತಾಗಿಯೂ ಕಾಂಗ್ರೆಸ್ ಕೀಳು ಆರೋಪದ ಮೂಲಕ ದೇಶದ ರಾಜಕೀಯದ ಘನತೆಯನ್ನು ಮತ್ತಷ್ಟು ಕುಗ್ಗಿಸಿದೆ ಎಂದು ಕಿಡಿಕಾರಿದ್ದಾರೆ.
ನಮ್ಮ ತಂದೆ ಸತ್ತಾಗ ಕಾಂಗ್ರೆಸ್ ಶ್ರದ್ಧಾಂಜಲಿ ಸಭೆ ಸಹ ನಡೆಸಿರಲಿಲ್ಲ: ಪ್ರಣಬ್ ಪುತ್ರಿ
11 ಕಿ.ಮೀ ಪಾರ್ಥೀವ ಶರೀರ ಮೆರವಣಿಗೆ: ಎಐಸಿಸಿ ಕಚೇರಿಯಲ್ಲಿ ಅಂತಿಮ ದರ್ಶನದ ಬಳಿಕ ಅಲ್ಲಿಂದ ಸುಮಾರು 11 ಕಿ.ಮೀ ದೂರದ ನಿಗಮ್‌ಘಾಟ್‌ಗೆ ವಿಶೇಷವಾಗಿ ಅಲಂಕೃತ ಸೇನಾ ವಾಹನದಲ್ಲಿ ಮೆರವಣಿಗೆ ಮೂಲಕ ಪಾರ್ಥಿವ ಶರೀರದ ಮೆರವಣಿಗೆ ನಡೆಸಲಾಯಿತು. ಮಾಜಿ ಪ್ರಧಾನಿಯ ಈ ಅಂತಿಮಯಾತ್ರೆಯನ್ನು ಹಿಂಬಾಲಿಸಿದ ಹಾಗೂ ರಸ್ತೆ ಅಕ್ಕಪಕ್ಕ ಸೇರಿದ್ದ ಕಾಂಗ್ರೆಸ್ ಕಾರ್ಯಕರ್ತರು, ಅಭಿಮಾನಿಗಳು ಡಾ.ಮನಮೋಹನ ಸಿಂಗ್ ಅಮರ್ ರಹೇ, ಎಲ್ಲಿಯವರೆಗೆ ಸೂರ್ಯ,ಚಂದ್ರ ಇರುತ್ತಾರೋ ಅಲ್ಲಿವರೆಗೆ ನಿಮ್ಮ ಹೆಸರು ಅಮರವಾಗಿರುತ್ತದೆ ಎಂಬ ಘೋಷಣೆ ಮೊಳಗಿಸಿದರು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ