* ಮಾರುಕಟ್ಟೆ, ಪ್ರವಾಸಿ ತಾಣಗಳಲ್ಲಿ ಕೊರೋನಾ ನಿಯಮ ಉಲ್ಲಂಘನೆ: ಕೇಂದ್ರ ಸರ್ಕಾರ ಗರಂ
* ಕೋವಿಡ್ ನಿಯಮ ಉಲ್ಲಂಘನೆಗೆ ಅಧಿಕಾರಿಗಳ ಹೊಣೆ ಮಾಡಿ: ಕೇಂದ್ರ
* ಕೋವಿಡ್ ಸನ್ನಡತೆ ಪಾಲನೆಯಾಗುವಂತೆ ನೋಡಿಕೊಳ್ಳಿ, ಇಲ್ಲದಿದ್ದರೆ 3ನೇ ಅಲೆಯ ಭೀತಿ ಹೆಚ್ಚು
ನವದೆಹಲಿ(ಜು.15): ಲಾಕ್‌ಡೌನ್ ತೆರವಾದ ಬೆನ್ನಲ್ಲೇ ಮಾರುಕಟ್ಟೆ, ಪ್ರವಾಸಿ ತಾಣಗಳು, ಶಾಪಿಂಗ್ ಮಾಲ್‌ಗಳು ಸೇರಿದಂತೆ ವಿವಿಧ ಸ್ಥಳಗಳಲ್ಲಿ ಕೊರೋನಾ ನಿಯಮಗಳನ್ನು ಪಾಲಿಸದೆ ಜನರು ಗುಂಪುಗೂಡುತ್ತಿರುವುದಕ್ಕೆ ಕೇಂದ್ರ ಸರ್ಕಾರ ಮತ್ತೊಮ್ಮೆ ತೀವ್ರ ಕಳವಳ ವ್ಯಕ್ತಪಡಿಸಿದೆ. ಕೊರೋನಾ ಸನ್ನಡತೆ ಕಟ್ಟುನಿಟ್ಟಾಗಿ ಪಾಲಿಸದೆ ಇದ್ದರೆ ಶೀಘ್ರ 3ನೇ ಅಲೆ ದೇಶಕ್ಕೆ ಅಪ್ಪಳಿಸಲಿದೆ. ನಿಯಮ ಉಲ್ಲಂಘನೆ ಆಗದಂತೆ ನೋಡಿಕೊಳ್ಳುವ ಹೊಣೆ ಅಧಿಕಾರಿಗಳದ್ದಾಗಿದೆ. ಒಂದು ವೇಳೆ ಉಲ್ಲಂಘನೆ ಆದರೆ ಸಂಬಂಧಿತ ಅಧಿಕಾರಿಗಳ ಮೇಲೆ ಕ್ರಮ ಜರುಗಿಸಬೇಕು ಎಂದು ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಎಚ್ಚರಿಕೆ ನೀಡಿದೆ.
undefined
3ನೇ ಅಲೆಗೆ ಜನರಿಂದಲೇ ಆಹ್ವಾನ: ಮೋದಿ ಕಳವಳ!
ಈ ಸಂಬಂಧ ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೆ ಪತ್ರ ಬರೆದಿರುವ ಕೇಂದ್ರ ಗೃಹ ಕಾರ್ಯದರ್ಶಿ ಅಜಯ್ ಭಲ್ಲಾ, ‘ಗಿರಿಧಾಮಗಳು, ಪ್ರವಾಸಿ ತಾಣಗಳು ಮಾರುಕಟ್ಟೆಪ್ರದೇಶಗಳಲ್ಲಿ ಜನರು ಕೊರೋನಾ ನಿಯಮಗಳನ್ನು ನಿರ್ದಯವಾಗಿ ಉಲ್ಲಂಘನೆ ಮಾಡುತ್ತಿರುವುದು ನಮ್ಮ ಗಮನಕ್ಕೆ ಬಂದಿದೆ. ಹೀಗಾಗಿ ಕೊರೋನಾ ನಿಯಮಗಳ ಪಾಲನೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುಬೇಕು’ ಎಂದು ತಿಳಿಸಿದ್ದಾರೆ.
2ನೇ ಅಲೆ ಮುಗಿದಿಲ್ಲ:
ಇದೇ ವೇಳೆ ಸಾರ್ವಜನಿಕ ಸಾರಿಗೆಯಲ್ಲಿ ಕೋವಿಡ್ ನಿಯಮಗಳ ಪಾಲನೆ ಆಗುತ್ತಿಲ್ಲ. ಮಾರುಕಟ್ಟೆಗಳಲ್ಲಿ ಸಾಮಾಜಿಕ ಅಂತರ ಉಲ್ಲಂಘಿಸಿ ಭಾರೀ ಸಂಖ್ಯೆಯಲ್ಲಿ ಜನರು ಗುಂಪುಗೂಡುತ್ತಿದ್ದಾರೆ. ಆದರೆ, ಕೊರೋನಾ 2ನೇ ಅಲೆ ಇನ್ನೂ ಮುಕ್ತಾಯಗೊಂಡಿಲ್ಲ. ಕೊರೋನಾ ಬಗ್ಗೆ ಕೊಂಚವೂ ನಿರ್ಲಕ್ಷ್ಯ ಸಲ್ಲದು. ಎಲ್ಲರೂ ಕಟ್ಟುನಿಟ್ಟಾಗಿ ಕೊರೋನಾ ಶಿಷ್ಟಾಚಾರಗಳನ್ನು ಪಾಲಿಸಬೇಕಿದೆ.
ದೇಶದಲ್ಲಿ 3ನೇ ಅಲೆ ಜು.4ಕ್ಕೇ ಆರಂಭವಾಗಿದೆ!
ಕೊರೋನಾ ಪ್ರಕರಣಗಳು ಇಳಿಕೆ ಆಗಿರುವ ಹಿನ್ನೆಲೆಯಲ್ಲಿ ರಾಜ್ಯ ಹಾಗೂ ಕೇಂದ್ರಾಡಳಿತ ಪ್ರದೇಶಗಳು ಆರ್ಥಿಕ ಚಟುವಟಿಕೆಗಳಿಗೆ ಅವಕಾಶ ಕಲ್ಪಿಸುತ್ತಿವೆ. ಆದರೆ, ಈಗಿರುವ ನಿರ್ಬಂಧಗಳನ್ನು ಎಚ್ಚರಿಕೆಯಿಂದ ತೆರವುಗೊಳಿಸಬೇಕು. ಪಾಸಿಟಿವಿಟಿ ದರ ಕಡಿಮೆ ಇರುವ ಸಂದರ್ಭದಲ್ಲಿ ಅವು ಮತ್ತೊಮ್ಮೆ ಏರಿಕೆ ಆಗದಂತೆ ಮುನ್ನೆಚ್ಚರಿಕಾ ಕ್ರಮಗಳನ್ನು ಪಾಲಿಸಬೇಕು.
ಸಾರ್ವಜನಿಕ ಸಾರಿಗೆ ಮತ್ತು ಹಿಮಾಲಯದ ತಪ್ಪಲು ಪ್ರದೇಶಗಳ ಪ್ರವಾಸಿ ತಾಣಗಳಲ್ಲಿ ಕೊರೋನಾ ನಿಯಮಗಳು ಪಾಲನೆ ಆಗುತ್ತಿಲ್ಲ. ಮಾರುಕಟ್ಟೆಸ್ಥಳಗಳಲ್ಲಿ ಸಾಮಾಜಿಕ ಅಂತರ ಇಲ್ಲದೆ ಭಾರೀ ಪ್ರಮಾಣದಲ್ಲಿ ಜನಜಂಗುಳಿ ಸೇರುತ್ತಿದೆ ಎಂದು ಭಲ್ಲಾ ಆತಂಕ ವ್ಯಕ್ತಪಡಿಸಿದ್ದಾರೆ.
'ಎಚ್ಚರ.. 3ನೇ ಅಲೆ ಸನ್ನಿಹಿತ: ಪ್ರವಾಸ, ಯಾತ್ರೆ, ಧಾರ್ಮಿಕ ಉತ್ಸವ ಮುಂದೂಡಿ!'
ಕೆಲವು ಕಡೆ ಸೋಂಕು ಪ್ರಸರಣ ಅಧಿಕ:
ಕೆಲವು ರಾಜ್ಯಗಳಲ್ಲಿ ಆರ್ ಫ್ಯಾಕ್ಟರ್ (ಒಬ್ಬರಿಂದ ಇನ್ನೊಬ್ಬರಿಗೆ ಸೋಂಕು ಹರಡುವಿಕೆ ಸಂಖ್ಯೆ) ಕಳವಳಕಾರಿಯಾಗಿದೆ. ಸೋಂಕು ಹರಡುವಿಕೆಯ ಪ್ರಮಾಣ 1ಕ್ಕಿಂತಲೂ ಕಡಿಮೆ ಇದ್ದರೆ ಒಬ್ಬ ವ್ಯಕ್ತಿ ಸಾಮಾನ್ಯವಾಗಿ ಒಬ್ಬನಿಗಿಂತಲೂ ಕಡಿಮೆ ಜನರಿಗೆ ಸೋಂಕನ್ನು ಹರಡುತ್ತಾನೆ. ಒಂದು ವೇಳೆ ಆರ್ ಫ್ಯಾಕ್ಟರ್ 1.0ಕ್ಕಿಂತ ಹೆಚ್ಚಿದ್ದರೆ ಕೊರೋನಾ ವೈರಸ್ ವೇಗವಾಗಿ ಹರಡುತ್ತದೆ. ಆಗ ಒಬ್ಬ ವ್ಯಕ್ತಿ ಅಧಿಕ ಸಂಖ್ಯೆಯಲ್ಲಿ ಇನ್ನೊಬ್ಬರಿಗೆ ಕೊರೋನಾ ಅಂಟಿಸುತ್ತಿದ್ದಾನೆ ಎಂದರ್ಥ. ಮಾಲ್‌ಗಳು, ಮಾರುಕಟ್ಟೆಸಂಕೀರ್ಣಗಳು, ಬಸ್ ಮತ್ತು ರೈಲ್ವೆ ನಿಲ್ದಾಣಗಳು, ಮದುವೆ ಸಭಾಂಗಣಗಳು, ಹೆಚ್ಚು ಹೆಚ್ಚು ಜನರು ಗುಂಪುಗೂಡುವ ಪ್ರದೇಶಗಳು ಕೊರೋನಾ ಹರಡುವ ಹಾಟ್‌ಸ್ಪಾಟ್‌ಗಳಾಗಿವೆ. ಕೊರೋನಾ ನಿಯಮಗಳನ್ನು ಜಾರಿ ಮಾಡದೇ ಇರುವುದಕ್ಕೆ ಸಂಬಂಧಿತ ಅಧಿಕಾರಿಗಳು ಹೊಣೆಗಾರರಾಗುತ್ತಾರೆ. ಅಂಥವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ತಿಳಿಸಲಾಗಿದೆ.
ಗಿರಿಧಾಮಗಳು, ಪ್ರವಾಸಿ ತಾಣಗಳು, ಮಾರುಕಟ್ಟೆಗಳಲ್ಲಿ ಜನರು ಕೊರೋನಾ ನಿಯಮ ನಿರ್ದಯವಾಗಿ ಉಲ್ಲಂಘನೆ ಮಾಡುತ್ತಿದ್ದಾರೆ. ಹೀಗಾಗಿ ಕೊರೋನಾ ನಿಯಮಗಳ ಪಾಲನೆಯ ಜವಾಬ್ದಾರಿ ಹೊತ್ತಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು.
ಅಜಯ್ ಭಲ್ಲಾ, ಕೇಂದ್ರ ಗೃಹ ಕಾರ್ಯದರ್ಶಿ