ರಾಜ್ಯ ಸರ್ಕಾರಗಳು ಎಸ್ಸಿ,ಎಸ್ಟಿ ಜನರಿಗೆ ಮೀಸಲಾತಿ ನೀಡಬಹುದು: ಸುಪ್ರೀಂ ಐತಿಹಾಸಿಕ ತೀರ್ಪು

Published : Aug 02, 2024, 08:36 AM ISTUpdated : Aug 02, 2024, 11:18 AM IST
ರಾಜ್ಯ ಸರ್ಕಾರಗಳು ಎಸ್ಸಿ,ಎಸ್ಟಿ ಜನರಿಗೆ ಮೀಸಲಾತಿ ನೀಡಬಹುದು: ಸುಪ್ರೀಂ ಐತಿಹಾಸಿಕ ತೀರ್ಪು

ಸಾರಾಂಶ

ರಾಜ್ಯಗಳಿಗೆ ಎಸ್‌ಸಿ, ಎಸ್‌ಟಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿಯೊಳಗೇ ಪ್ರತ್ಯೇಕ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್‌ ಹೇಳುವ ಮೂಲಕ ತಾನೇ 2004ರಲ್ಲಿ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.  

ನವದೆಹಲಿ(ಆ.02):  ಮಹತ್ವದ ಬೆಳವಣಿಗೆಯೊಂದರಲ್ಲಿ ಸುಪ್ರೀಂಕೋರ್ಟ್‌ನ ಸಂವಿಧಾನ ಪೀಠವು ‘ರಾಜ್ಯಗಳಿಗೆ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳಲ್ಲಿ ಪ್ರತ್ಯೇಕ ಒಳಮೀಸಲಾತಿಯನ್ನು ನೀಡುವ ಅಧಿಕಾರವಿದೆ’ ಎಂದು ಐತಿಹಾಸಿಕ ತೀರ್ಪು ನೀಡಿದೆ. ಎಸ್‌ಸಿ, ಎಸ್‌ಟಿಗಳಲ್ಲೇ ಹೆಚ್ಚು ದಮನಿತರನ್ನು ಗುರುತಿಸಿ ಅವರ ಕಲ್ಯಾಣಕ್ಕಾಗಿ ರಾಜ್ಯ ಸರ್ಕಾರಗಳು ಈ ಕ್ರಮ ಕೈಗೊಳ್ಳಬಹುದು ಎಂದು ತನ್ನ 6:1 ಬಹುಮತದ ತೀರ್ಪಿನಲ್ಲಿ ತಿಳಿಸಿದೆ.

ಇದೇ ವೇಳೆ, ಪೀಠದ ನಾಲ್ವರು ನ್ಯಾಯಮೂರ್ತಿಗಳು, ‘ಎಸ್‌ಸಿ, ಎಸ್‌ಟಿ ಮೀಸಲಿನಲ್ಲಿ ಕೆನೆಪದರ ನೀತಿ ಜಾರಿಗೆ ತರಬೇಕು. ಅಂದರೆ, ಉಳ್ಳವರನ್ನು ಮೀಸಲಾತಿಯಿಂದ ಹೊರಗಿಡಲು ರಾಜ್ಯಗಳು ನೀತಿ ರೂಪಿಸಬೇಕು’ ಎಂದು ತೀರ್ಪಿನಲ್ಲಿ ಹೇಳಿದ್ದಾರೆ. ಸುಪ್ರೀಂಕೋರ್ಟ್‌ನ ಈ ತೀರ್ಪು ಈಗಾಗಲೇ ಕರ್ನಾಟಕ ಸೇರಿದಂತೆ ಸಾಕಷ್ಟು ರಾಜ್ಯಗಳಲ್ಲಿ ಒಳಮೀಸಲಾತಿಗಾಗಿ ನಡೆಯುತ್ತಿರುವ ಹೋರಾಟಕ್ಕೆ ಹೊಸ ತಿರುವು ನೀಡಲಿದೆ. ಅಲ್ಲದೆ, ಮೀಸಲಾತಿಯೊಳಗೆ ಸಾಕಷ್ಟು ಬದಲಾವಣೆಗೂ ಕಾರಣವಾಗುವ ಸಾಧ್ಯತೆಯಿದೆ.

ಗಣಿ ತೆರಿಗೆ ಸಂಗ್ರಹ ಅಧಿಕಾರ ಕೇಂದ್ರ ಸರ್ಕಾರಕ್ಕಿಲ್ಲ, ರಾಜ್ಯಕ್ಕೆ ಮಾತ್ರ: ಸುಪ್ರೀಂಕೋರ್ಟ್‌ ತೀರ್ಪು

2004ರ ಸುಪ್ರೀಂ ತೀರ್ಪು ರದ್ದು:

ರಾಜ್ಯಗಳಿಗೆ ಎಸ್‌ಸಿ, ಎಸ್‌ಟಿಯಲ್ಲಿ ಅತ್ಯಂತ ಹಿಂದುಳಿದ ಜಾತಿಗಳನ್ನು ಗುರುತಿಸಿ ಮೀಸಲಾತಿಯೊಳಗೇ ಪ್ರತ್ಯೇಕ ಮೀಸಲಾತಿ ನೀಡುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್‌ ಹೇಳುವ ಮೂಲಕ ತಾನೇ 2004ರಲ್ಲಿ ನೀಡಿದ್ದ ತೀರ್ಪನ್ನು ರದ್ದುಪಡಿಸಿದೆ.

2004ರಲ್ಲಿ ಇ.ವಿ.ಚೆನ್ನಯ್ಯ ವರ್ಸಸ್‌ ಆಂಧ್ರಪ್ರದೇಶ ಸರ್ಕಾರದ ಪ್ರಕರಣದಲ್ಲಿ, ‘ಶತಮಾನಗಳ ಕಾಲ ತಾರತಮ್ಯ ಹಾಗೂ ಅವಮಾನ ಎದುರಿಸಿದ ಎಲ್ಲಾ ಎಸ್‌ಸಿ, ಎಸ್‌ಟಿ ಸಮುದಾಯಗಳೂ ಒಂದೇ ಆಗಿವೆ. ಅವುಗಳಲ್ಲಿ ಉಪ ವರ್ಗೀಕರಣ ಸಾಧ್ಯವಿಲ್ಲ’ ಎಂದು ಸುಪ್ರೀಂಕೋರ್ಟ್‌ನ ಪಂಚಸದಸ್ಯ ತೀರ್ಪು ನೀಡಿತ್ತು. ಅದರ ವಿರುದ್ಧ ಸಲ್ಲಿಕೆಯಾದ ಮೇಲ್ಮನವಿಗಳು, 2010ರಲ್ಲಿ ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ನೀಡಿದ್ದ ತೀರ್ಪು ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಮೇಲ್ಮನವಿಯೂ ಸೇರಿದಂತೆ ವಿವಿಧ ರಾಜ್ಯಗಳು ಹಾಗೂ ಸಂಘಟನೆಗಳು ಸಲ್ಲಿಸಿದ್ದ ಸುಮಾರು 30 ಅರ್ಜಿಗಳನ್ನು ಒಗ್ಗೂಡಿಸಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌ ನೇತೃತ್ವದ ಪೀಠ ಈ ತೀರ್ಪು ನೀಡಿದೆ.

‘ಒಳಮೀಸಲು ನೀಡಲು ಪ್ರಮಾಣೀಕರಿಸಬಹುದಾದ ಮತ್ತು ಎದ್ದು ತೋರುವ ದತ್ತಾಂಶಗಳು ರಾಜ್ಯಗಳ ಬಳಿ ಇರಬೇಕು. ಇವು ಇಲ್ಲದೆ ರಾಜ್ಯಗಳು ತಮ್ಮ ಇಚ್ಛೆಯಂತೆ ಒಳಮೀಸಲು ನೀಡಲು ಸಾಧ್ಯವಿಲ್ಲ’ ಎಂದೂ ಪೀಠ ತನ್ನ ತೀರ್ಪಿನಲ್ಲಿ ಸ್ಪಷ್ಟಪಡಿಸಿದೆ.

6 ಪ್ರತ್ಯೇಕ ತೀರ್ಪು ಬರೆದ ಜಡ್ಜ್‌ಗಳು:

ರಾಜ್ಯಗಳಿಗೆ ಎಸ್‌ಸಿ, ಎಸ್‌ಟಿ ಮೀಸಲಿನಲ್ಲಿ ಒಳಮೀಸಲು ನೀಡುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪಿನಲ್ಲಿ 6 ಪ್ರತ್ಯೇಕ ತೀರ್ಪುಗಳಿವೆ. ಅದರಲ್ಲಿ ಸಿಜೆಐ ಚಂದ್ರಚೂಡ್‌ ಮತ್ತು ನ್ಯಾ.ಮಿಶ್ರಾ ಇಬ್ಬರೂ ಸೇರಿ ಒಂದು ತೀರ್ಪು ಹಾಗೂ ನಾಲ್ವರು ಜಡ್ಜ್‌ಗಳು ತಲಾ ಒಂದು ತೀರ್ಪು ನೀಡಿದ್ದು, ಈ ಆರು ಮಂದಿ ಒಳಮೀಸಲಿನ ಪರ ತೀರ್ಪು ಬರೆದಿದ್ದಾರೆ. ನ್ಯಾ.ಬೇಲಾ ತ್ರಿವೇದಿ ಮಾತ್ರ ರಾಜ್ಯಗಳಿಗೆ ಒಳಮೀಸಲು ನೀಡುವ ಅಧಿಕಾರವಿಲ್ಲ ಎಂದು ತೀರ್ಪು ಬರೆದಿದ್ದಾರೆ. ಒಟ್ಟು ನಾಲ್ವರು ಜಡ್ಜ್‌ಗಳು ಕೆನೆಪದರ ನೀತಿ ಜಾರಿಗೆ ತರಬೇಕು ಎಂದು ತೀರ್ಪಿನಲ್ಲಿ ಹೇಳಿದ್ದಾರೆ.

ಕೆನೆಪದರ ನೀತಿ ಅಂದರೆ, ಮೀಸಲು ಪಡೆದ ನಿರ್ದಿಷ್ಟ ಸಮುದಾಯದಲ್ಲಿ ಈಗಾಗಲೇ ಮುಂದುವರೆದು ಸಬಲೀಕರಣಗೊಂಡಿರುವವರನ್ನು ಮೀಸಲಿನಿಂದ ಹೊರಗಿಡುವುದು. ಸದ್ಯ ಇತರೆ ಹಿಂದುಳಿದ ವರ್ಗಗಳ (ಒಬಿಸಿ) ಮೀಸಲಾತಿಯಲ್ಲಿ ಮಾತ್ರ ಈ ನೀತಿ ಜಾರಿಯಲ್ಲಿದೆ. ಅದರನ್ವಯ ಒಬಿಸಿ ಜಾತಿಗಳಲ್ಲಿ ವಾರ್ಷಿಕ 8 ಲಕ್ಷ ರು.ಗಿಂತ ಮೇಲ್ಪಟ್ಟ ಆದಾಯ ಹೊಂದಿರುವವರನ್ನು ಮೀಸಲಿನಿಂದ ಹೊರಗಿಡಲಾಗಿದೆ. ಎಸ್‌ಸಿ, ಎಸ್‌ಟಿ ಮೀಸಲಿನಲ್ಲಿ ಕೆನೆಪದರ ನೀತಿ ಜಾರಿಯಲ್ಲಿಲ್ಲ. ಅದನ್ನು ಈಗ ಜಾರಿಗೊಳಿಸುವಂತೆ ಸುಪ್ರೀಂಕೋರ್ಟ್‌ ಹೇಳಿದ್ದು, ಅದಕ್ಕೆ ಯಾವ ಮಾನದಂಡ ಅನ್ವಯಿಸಲಾಗುತ್ತದೆ ಎಂಬುದು ಕುತೂಹಲ ಮೂಡಿಸಿದೆ.

ಲೈಂಗಿಕ ಕಿರುಕುಳ: ಪಶ್ಚಿಮ ಬಂಗಾಳ ರಾಜ್ಯಪಾಲರ ವಿರುದ್ಧ ಸುಪ್ರೀಂಕೋರ್ಟ್‌ಗೆ ಅರ್ಜಿ

ತೀರ್ಪು ನಮ್ಮಲ್ಲೇ ಮೊದಲು ಜಾರಿಗೆ: ತೆಲಂಗಾಣ

ಹೈದರಾಬಾದ್‌: ರಾಜ್ಯಗಳಿಗೆ ಒಳಮೀಸಲಾತಿ ಜಾರಿಗೆ ತರುವ ಅಧಿಕಾರವಿದೆ ಎಂದು ಸುಪ್ರೀಂಕೋರ್ಟ್‌ ನೀಡಿರುವ ತೀರ್ಪನ್ನು ನಮ್ಮ ರಾಜ್ಯದಲ್ಲೇ ಮೊದಲು ಜಾರಿಗೆ ತರುತ್ತೇವೆ ಎಂದು ತೆಲಂಗಾಣದ ಮುಖ್ಯಮಂತ್ರಿ ರೇವಂತ್‌ ರೆಡ್ಡಿ ತಿಳಿಸಿದ್ದಾರೆ.

ಗುರುವಾರ ವಿಧಾನಸಭೆಯಲ್ಲಿ ತೀರ್ಪು ಸ್ವಾಗತಿಸಿ ಮಾತನಾಡಿದ ಅವರು, ‘ಎಸ್‌ಸಿ-ಎಸ್‌ಟಿಯೊಳಗೇ ಹಲವು ಉಪಜಾತಿಗಳಿದ್ದು, ಅವರಲ್ಲಿ ಮಾದಿಗರು ಮೊದಲಾದ ಹೆಚ್ಚು ದಮನಿತರಿಗೆ ಪ್ರತ್ಯೇಕ ಮೀಸಲಾತಿಯಿರಬೇಕು ಎಂದು ತೆಲಂಗಾಣದಿಂದ ನಾವು ಪ್ರಬಲ ವಾದ ಮಂಡಿಸಿದ್ದೆವು. ಅದಕ್ಕೆ ಜಯವಾಗಿದೆ. ತಕ್ಷಣ ಒಳಮೀಸಲನ್ನು ನಾವು ಜಾರಿಗೆ ತರುತ್ತೇವೆ’ ಎಂದು ಹೇಳಿದರು.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಕಾರ್‌ನಲ್ಲಿ ಜೋಡಿ 'ಸರಸ' ಸೆರೆಹಿಡಿದ ಟೋಲ್‌ ಮ್ಯಾನೇಜರ್‌, ಸಿಸಿಟಿವಿ ವಿಡಿಯೋ ತೋರಿಸಿ ಬ್ಲ್ಯಾಕ್‌ಮೇಲ್‌!
ವಿಶ್ವದ ಟಾಪ್ 10 ಬೊಟಾನಿಕಲ್ ಗಾರ್ಡನ್ ಲಿಸ್ಟ್‌ನಲ್ಲಿ ನಂ.1 ನಮ್ಮ ಲಾಲ್‌ಬಾಗ್