
ಪುರಿ: ಒಡಿಶಾದ ವಿಶ್ವಪ್ರಸಿದ್ಧ ಪುರಿ ಜಗನ್ನಾಥ ರಥಯಾತ್ರೆ ವೇಳೆ ಶುಕ್ರವಾರ ಕಾಲ್ತುಳಿತ ಸಂಭವಿಸಿದೆ. ಈ ದುರ್ಘಟನೆಯಲ್ಲಿ 750ಕ್ಕೂ ಹೆಚ್ಚು ಜನರು ಅಸ್ವಸ್ಥಗೊಂಡಿದ್ದು, ಈ ಪೈಕಿ 12 ಜನರ ಸ್ಥಿತಿ ಗಂಭೀರವಾಗಿದೆ.
ಕಾಲ್ತುಳಿತದ ಹಿನ್ನೆಲೆಯಲ್ಲಿ ಶುಕ್ರವಾರ ರಾತ್ರಿ ರಥಯಾತ್ರೆ ಸ್ಥಗಿತಗೊಳಿಸಿ, ಶನಿವಾರ ಬೆಳಗ್ಗೆ ಮತ್ತೆ ಪುನಾರಂಭಿಸಲಾಗಿದೆ. ರಥಯಾತ್ರೆ ಮಧ್ಯದಲ್ಲೇ ನಿಂತಿದ್ದು ಇತಿಹಾಸದಲ್ಲಿ ಇದೇ ಮೊದಲ ಬಾರಿ ಎನ್ನಲಾಗಿದೆ. ರಥಯಾತ್ರೆ ವೇಳೆ ವೈದ್ಯಕೀಯ ನೆರವು ಕಲ್ಪಿಸಲು ಹೊರಜಿಲ್ಲೆಗಳಿಂದ ಹೆಚ್ಚುವರಿ 378 ವೈದ್ಯರ ನಿಯೋಜಿಸಲಾಗಿದೆ. 265 ಹೆಚ್ಚುವರಿ ಹಾಸಿಗೆ ವ್ಯವಸ್ಥೆ ಮಾಡಲಾಗಿದೆ. ತ್ವರಿತ ವೈದ್ಯಕೀಯ ಚಿಕಿತ್ಸೆ ಕಲ್ಪಿಸಲು, ಗ್ರ್ಯಾಂಡ್ ರಸ್ತೆಯುದ್ದಕ್ಕೂ ಆಂಬ್ಯುಲೆನ್ಸ್ ಕಾರಿಡಾರ್ ಸ್ಥಾಪಿಸಲಾಗಿದೆ. ಸ್ಥಳದಲ್ಲಿ 10,000ಕ್ಕೂ ಅಧಿಕ ಪೊಲೀಸರನ್ನು ನಿಯೋಜಿಸಲಾಗಿದೆ.
ಆಗಿದ್ದೇನು?:
ಶುಕ್ರವಾರ ಜಗನ್ನಾಥ ದೇವರು, ಅವರ ಅಣ್ಣ ಬಲಭದ್ರ ಹಾಗೂ ತಂಗಿ ಸುಭದ್ರಾ ದೇವಿಯ ರಥಯಾತ್ರೆ ನಡೆಯುತ್ತಿತ್ತು. ಸುಮಾರು 10 ಲಕ್ಷಕ್ಕೂ ಅಧಿಕ ಭಕ್ತರು ಸೇರಿದ್ದರು. ಸಂಜೆಯ ವೇಳೆಗೆ ಮೂರೂ ರಥಗಳು ದೇವತೆಗಳ ಚಿಕ್ಕಮ್ಮನ ಸ್ಥಳವೆಂದು ಪರಿಗಣಿಸಲಾದ ಗುಂಡಿಚಾ ದೇವಸ್ಥಾನವನ್ನು ತಲುಪಬೇಕಿತ್ತು. ಈ ಪೈಕಿ ಬಲಭದ್ರನ ತಾಳಧ್ವಜ ರಥ ಎಳೆಯುವ ವೇಳೆ ತಿರುವಿನಲ್ಲಿ ಸಿಲುಕಿಕೊಂಡು ನಿಂತುಬಿಟ್ಟಿತು.
ಇದರಿಂದಾಗಿ ಉಳಿದ ಎರಡು ರಥಗಳು ಕೂಡಾ ಮುಂದೆ ಸಾಗಲಿಲ್ಲ.ಈ ವೇಳೆ ಭಕ್ತರ ನಡುವೆ ಕಾಲ್ತುಳಿತ ಸಂಭವಿಸಿತು ಎನ್ನಲಾಗಿದೆ. ಘಟನಾ ಸ್ಥಳದಲ್ಲಿ 450ಕ್ಕೂ ಹೆಚ್ಚು ಜನರು ಕಾಲ್ತುಳಿತದಿಂದ, ಉಳಿದವರು ಘಟನಾ ಸ್ಥಳದಲ್ಲಿನ ಭಾರೀ ಉಷ್ಣ ಹವೆಯಿಂದ ತಲೆಸುತ್ತು ಬಂದು ಕೆಳಗೆ ಬಿದ್ದು ಅಸ್ವಸ್ಥರಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ