ಜೈಷ್‌ ವೈದ್ಯರ ಉಗ್ರಜಾಲ ಬಯಲಿಗೆಳೆದಿದ್ದು ಎಸ್‌ಎಸ್‌ಪಿ ಚಕ್ರವರ್ತಿ

Kannadaprabha News   | Kannada Prabha
Published : Nov 14, 2025, 07:02 AM IST
dr umar delhi blast

ಸಾರಾಂಶ

ಕೆಂಪುಕೋಟೆ ಬಳಿಯ ಸ್ಫೋಟ ಪ್ರಕರಣದಲ್ಲಿ ಬಲಿಯಾದ ಆತ್ಮಾಹುತಿ ದಾಳಿಕೋರನ ಸಹಚರರನ್ನು, ಭಾರೀ ದೊಡ್ಡ ಸಂಚಿಗೂ ಮೊದಲೇ ಬಂಧಿಸಿ ಬಹುದೊಡ್ಡ ಅನಾಹುತವನ್ನು ತಡೆದದ್ದು ಶ್ರೀನಗರದ ಒಬ್ಬ ಪೊಲೀಸ್‌ ಅಧಿಕಾರಿಯ ಜಾಣ್ಮೆ ಎಂದು ತಿಳಿದುಬಂದಿದೆ.

ನವದೆಹಲಿ: ಕೆಂಪುಕೋಟೆ ಬಳಿಯ ಸ್ಫೋಟ ಪ್ರಕರಣದಲ್ಲಿ ಬಲಿಯಾದ ಆತ್ಮಾಹುತಿ ದಾಳಿಕೋರನ ಸಹಚರರನ್ನು, ಭಾರೀ ದೊಡ್ಡ ಸಂಚಿಗೂ ಮೊದಲೇ ಬಂಧಿಸಿ ಬಹುದೊಡ್ಡ ಅನಾಹುತವನ್ನು ತಡೆದದ್ದು ಶ್ರೀನಗರದ ಒಬ್ಬ ಪೊಲೀಸ್‌ ಅಧಿಕಾರಿಯ ಜಾಣ್ಮೆ ಎಂದು ತಿಳಿದುಬಂದಿದೆ.

ಅ.19ರಂದು ಸೇನೆಗೆ ಬೆದರಿಕೆ ಒಡ್ಡಿ ಅಂಟಿಸಲಾಗಿದ್ದ ಜೈಷ್‌ ಸಂಘಟನೆಯ ಪೋಸ್ಟರ್‌ಗಳನ್ನು ಸ್ಥಳೀಯರು ಕಂಡಿದ್ದರೂ, ಅದು ಕಾಶ್ಮೀರದಲ್ಲಿ ಮಾಮೂಲಾಗಿ ವರ್ಷಗಳಿಂದ ನಡೆಯುತ್ತಾ ಬಂದಿದ್ದರಿಂದ ನಿರ್ಲಕ್ಷಿಸಿದ್ದರು. ಆದರೆ ಶ್ರೀನಗರದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ, ಆಂಧ್ರಪ್ರದೇಶದ ಕರ್ನೂಲ್‌ ಮೂಲದ ಡಾ। ಜಿ.ವಿ. ಸಂದೀಪ್‌ ಚಕ್ರವರ್ತಿ ಆ ಪೋಸ್ಟರ್‌ಗಳ ಹಿಂದಿರುವ ಕರಿನೆರಳನ್ನು ಪತ್ತೆಮಾಡಿ, ಅದರ ಜಾಡು ಹಿಡಿದು ಹೊರಟಿದ್ದರು.

ವೈದ್ಯರ ರೂಪದಲ್ಲಿದ್ದ ಉಗ್ರರ ಮುಖವಾಡ ಕಳಚಿಬಿದ್ದಿತ್ತು

ಮೊದಲಿಗೆ ಪೋಸ್ಟರ್‌ ಅಂಟಿಸಲಾದ ಪ್ರದೇಶದ ಸಿಸಿಟೀವಿಗಳನ್ನು ಪರಿಶೀಲಿಸಿ, ಅದರ ಆಧಾರದಲ್ಲಿ ತನಿಖೆ ಶುರು ಮಾಡಿದರು. ಆಗ ನೌಗಾಂ ಮಸೀದಿಯ ಮೌಲ್ವಿಯಾಗಿದ್ದ ಶೋಪಿಯಾನ್‌ನ ಇರ್ಫಾನ್‌ ಅಹ್ಮದ್‌ನ ಸುಳಿವು ಸಿಕ್ಕಿತು. ಅದರ ಆಧಾರದಲ್ಲಿ ಶೋಪಿಯಾನ್‌ನಲ್ಲಿದ್ದ ಆತನ ನಿವಾಸ ಮತ್ತು ನೌಗಾಂನಲ್ಲಿನ ಆಸ್ತಿ ಮೇಲೆ ದಾಳಿ ನಡೆಸಿದರು. ಡಿಜಿಟಲ್‌ ಹೆಜ್ಜೆಗಳನ್ನು ಹಿಂಬಾಲಿಸಿ ಹೋದಾಗ, ಆತನ ನಂಟು ಹರ್ಯಾಣ ಮತ್ತು ಉತ್ತರಪ್ರದೇಶಕ್ಕೂ ವಿಸ್ತರಿಸಿರುವುದು ತಿಳಿದುಬಂತು.

ಇದರ ಬೆನ್ನುಹತ್ತಲು ರಚಿಸಲಾದ ವಿಶೇಷ ಪಡೆಗೆ, ಫರೀದಾಬಾದ್‌ನ ಅಲ್‌-ಫಲಾ ವಿಶ್ವವಿದ್ಯಾಲಯದಲ್ಲಿ ಅಧ್ಯಾಪಕನಾಗಿದ್ದ ಪುಲ್ವಾಮ ಮೂಲದ ಮುಜಾಮಿಲ್‌ ಅಹ್ಮದ್‌ ಸಿಕ್ಕಿಬಿದ್ದಿದ್ದ. ಇದರಿಂದಾಗಿ ಬಳಿಕ ವೈದ್ಯರ ರೂಪದಲ್ಲಿದ್ದ ಉಗ್ರರ ಮುಖವಾಡ ಕಳಚಿಬಿದ್ದಿತ್ತು.

ಹೀಗೆ, ಜೀವ ಉಳಿಸುವ ವೃತ್ತಿಯಲ್ಲಿದ್ದುಕೊಂಡು ಸಾಮೂಹಿಕ ಹತ್ಯೆಗೆ ಸಂಚು ರೂಪಿಸುತ್ತಿದ್ದವರನ್ನು ಪತ್ತೆ ಮಾಡಿದ ಚಕ್ರವರ್ತಿಯವರೂ ಸಹ ಪೊಲೀಸ್‌ ಸೇವೆಗೆ ಸೇರುವ ಮೊದಲು ವೈದ್ಯರಾಗಿದ್ದರು. ಆಂಧ್ರಪ್ರದೇಶದ ಕರ್ನೂಲ್‌ನವರಾಗಿರುವ ಇವರು, 2010ರಲ್ಲಿ ವಿದ್ಯಾಭ್ಯಾಸ ಮುಗಿಸಿ ವೈದ್ಯನಾಗಿ ಕೆಲಸ ಆರಂಭಿಸಿದರು. ಬಳಿಕ 2014ರಲ್ಲಿ ಐಪಿಎಸ್‌ ಅಧಿಕಾರಿಯಾಗುವ ಮೂಲಕ ಖಾಕಿ ತೊಟ್ಟರು.

ಉಗ್ರನಿಗ್ರಹ ಕಾರ್ಯಾಚರಣೆಯಲ್ಲಿ ಭಾಗಿಯಾಗಿದ್ದು ಸೇರಿದಂತೆ ಇವರು ಮಾಡಿದ ಸಾಹಸಗಳಿಗಾಗಿ ರಾಷ್ಟ್ರಪತಿಗಳಿಂದ 6 ಪದಕ ಪಡೆದಿದ್ದಾರೆ.

ಪುಲ್ವಾಮಾ ಉಗ್ರ ಉಮರ್‌ ಪತ್ನಿ ಜತೆ ಶಾಹೀನಾ ನಂಟು

ನವದೆಹಲಿ: ಪುಲ್ವಾಮಾ ದಾಳಿಯ ಮಾಸ್ಟರ್‌ ಮೈಂಡ್‌, ಜೈಷ್‌ ಕಮಾಂಡರ್‌ ಉಮರ್‌ ಫಾರೂಖ್‌ನ ಪತ್ನಿ ಅಫಿರಾ ಬೀಬಿ ಜತೆಗೆ ದೆಹಲಿ ಸ್ಫೋಟದ ಸಂಚಿನ ಆರೋಪಿ ಡಾ.ಶಾಹೀನಾ ಸಂಪರ್ಕದಲ್ಲಿದ್ದಳು ಎಂಬ ಅಂಶ ತನಿಖೆಯಲ್ಲಿ ಬಯಲಾಗಿದೆ. ಅಫಿರಾ ಪಾಕಿಸ್ತಾನ ಮೂಲದ ಮಹಿಳೆಯಾಗಿದ್ದು, ಉಮರ್‌ನನ್ನು ವರಿಸಿದ್ದಳು. ಉಮರ್‌ ಜೈಷ್‌ ಎ ಮೊಹಮ್ಮದ್‌ ಉಗ್ರ ಸಂಘಟನೆಯ ನಾಯಕ ಮಸೂದ್‌ ಅಜರ್‌ನ ಸೋದರ ಸಂಬಂಧಿಯಾಗಿದ್ದಾನೆ. ಹೀಗಾಗಿ ಘಟನೆಯಲ್ಲಿ ಜೈಷ್‌ ಉಗ್ರರ ಕೈವಾಡದ ಕುರಿತು ಮತ್ತಷ್ಟು ಶಂಕೆ ಬಲವಾಗಿದೆ. ಇನ್ನು ಅಫಿರಾ, ಜೈಷ್‌ ನೂತನವಾಗಿ ಸ್ಥಾಪಿಸಿರುವ ಮಹಿಳಾ ಉಗ್ರ ಘಟಕವಾದ ಜಮಾಯತ್‌ ಉಲ್‌ ಮೊಮಿನಾತ್‌ಗೆ ಇತ್ತೀಚೆಗೆ ಸೇರ್ಪಡೆಯಾಗಿದ್ದಳು ಎನ್ನಲಾಗಿದೆ.

ನಿತ್ಯ ಸಂಜೆ 4 ಗಂಟೆ ಬಳಿಕ ವಿವಿಯಲ್ಲಿ ಡಾ. ಶಾಹೀನಾ ರಹಸ್ಯ ಉಗ್ರ ಮಾತುಕತೆ

ನವದೆಹಲಿ: ಅಲ್‌ ಫಲಾಹ್‌ ವಿವಿಯ ಟೆರರ್‌ ಡಾಕ್ಟರ್‌ ಶಾಹೀನಾ ಸಯೀದ್‌ ವರ್ತನೆಯ ಬಗ್ಗೆ ಜತೆ ಕೆಲಸ ಮಾಡುತ್ತಿದ್ದವರು ಮಹತ್ವದ ಮಾಹಿತಿ ಬಿಚ್ಚಿಟ್ಟಿದ್ದು, ‘ ವಿವಿಯ ಕೆಲಸ ಮುಗಿದ ಬಳಿಕ ಆಕೆ ಪ್ರತಿ ದಿನ ಸಂಜೆ 4 ಗಂಟೆ ಬಳಿಕ ರಹಸ್ಯ ಮಾತುಕತೆ ನಡೆಸುತ್ತಿದ್ದಳು. ಸಂಸ್ಥೆಯ ಯಾವುದೇ ನಿಯಮಗಳನ್ನೂ ಪಾಲಿಸುತ್ತಿರಲಿಲ್ಲ. ವರ್ತನೆ ವಿಚಿತ್ರವಾಗಿತ್ತು’ ಎಂದಿದ್ದಾರೆ.

ಮಾಧ್ಯಮಗಳಲ್ಲಿ ಈ ಬಗ್ಗೆ ಮಾತನಾಡಿರುವ ಕೆಲ ಸಹದ್ಯೋಗಿಗಳು, ‘ ಡಾ.ಶಾಹೀನಾ ವಿಚಿತ್ರ ವರ್ತನೆ ಹೊಂದಿದ್ದಳು. ಸಂಸ್ಥೆಯ ನಿಯಮ ಪಾಲಿಸುತ್ತಿರಲಿಲ್ಲ. ಯಾರಿಗೂ ತಿಳಿಸದೆ ವಿವಿಯಿಂದ ಹೊರ ಹೋಗುತ್ತಿದ್ದರು’ ಎಂದು ಹೇಳಿದ್ದಾರೆ.

ಇನ್ನು ಮತ್ತೊಂದೆಡೆ ಆಕೆ ಒಂದು ಜಪಮಾಲೆ( ಇಸ್ಲಾಂನಲ್ಲಿ ಮಿಸ್ಬಾಹಾ ಅಥವಾ ತಸ್ಬಿಹ್‌ ) , ಒಂದು ಹದೀಸ್‌ ಪುಸ್ತಕ ( ಪ್ರವಾದಿ ಮುಹಮ್ಮದ್‌ ಅವರ ಬೋಧನೆಗಳ ಸಂಗ್ರಹ) ಎನ್ನುವ ಪುಸ್ತಕ ಹೊಂದಿದ್ದಳು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಯಲಾಗಿದೆ,

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ರತನ್ ಟಾಟಾ ಮಲತಾಯಿ, ಲ್ಯಾಕ್‌ಮೆ ಫ್ಯಾಶನ್ ಸಂಸ್ಥಾಪಕಿ ಸೈಮನ್ ಟಾಟಾ ನಿಧನ
ಭಾರತದ 2 ಬಿಲಿಯನ್ ಡಾಲರ್ ಪರಮಾಣು ಜಲಾಂತರ್ಗಾಮಿ ಒಪ್ಪಂದ ಅಂತಿಮಗೊಳಿಸಿದ ಪುಟಿನ್ ಭೇಟಿ