ಸ್ಫೋಟದ ತೀವ್ರತೆಗೆ ದೇಹ ಗೋಡೆಗೆ ಅಪ್ಪಳಿಸಿ ಶ್ವಾಸಕೋಶವೇ ಛಿದ್ರ

Kannadaprabha News   | Kannada Prabha
Published : Nov 14, 2025, 06:52 AM IST
Delhi Blast

ಸಾರಾಂಶ

ದೆಹಲಿಯಲ್ಲಿ ಸೋಮವಾರ ಸಂಜೆ ಕಾರು ಸ್ಫೋಟಗೊಳ್ಳುತ್ತಿದ್ದಂತೆ ದೇಹಗಳು ಗೋಡೆಗೆ ಅಪ್ಪಳಿಸಿವೆ. ಸತ್ತವರ ಶ್ವಾಸಕೋಶ ಛಿದ್ರಛಿದ್ರವಾಗಿದ್ದು, ಕಿವಿಗಳು ಜರ್ಜರಿತವಾಗಿತ್ತು ಎಂಬ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖವಾಗಿದೆ, ಇದು ದುರಂತದ ಭಯಾನಕತೆಗೆ ಸಾಕ್ಷಿ.

ನವದೆಹಲಿ: ದೆಹಲಿಯಲ್ಲಿ ಸೋಮವಾರ ಸಂಜೆ ಕಾರು ಸ್ಫೋಟಗೊಳ್ಳುತ್ತಿದ್ದಂತೆ ದೇಹಗಳು ಗೋಡೆಗೆ ಅಪ್ಪಳಿಸಿವೆ. ಸತ್ತವರ ಶ್ವಾಸಕೋಶ ಛಿದ್ರಛಿದ್ರವಾಗಿದ್ದು, ಕಿವಿಗಳು ಜರ್ಜರಿತವಾಗಿತ್ತು ಎಂಬ ಅಂಶ ಮರಣೋತ್ತರ ಪರೀಕ್ಷೆಯಲ್ಲಿ ಉಲ್ಲೇಖವಾಗಿದೆ, ಇದು ದುರಂತದ ಭಯಾನಕತೆಗೆ ಸಾಕ್ಷಿ.

ದೆಹಲಿ ದುರಂತದಲ್ಲಿ ಸಾವನ್ನಪ್ಪಿದವರ ಮರಣೋತ್ತರ ಪರೀಕ್ಷೆ ವರದಿ ಬಹಿರಂಗವಾಗಿದೆ. ಈ ಪ್ರಕಾರ ಸತ್ತವರಲ್ಲಿ ಹಲವರ ಶ್ವಾಸಕೋಶಗಳು ಛಿದ್ರಗೊಂಡಿವೆ. ಮಾತ್ರವಲ್ಲದೇ ಕಿವಿಗಳು ಕೂಡ ಸಂಪೂರ್ಣವಾಗಿ ಜಜ್ಜಿ ಹೋಗಿವೆ. ಬಹುತೇಕರ ಕರಳು , ಹೊಟ್ಟೆ ಭಾಗಕ್ಕೂ ತೀವ್ರತರಹದಲ್ಲಿ ಹಾನಿಯಾಗಿತ್ತು. ಮೃತರ ದೇಹದ ಮೇಲ್ಭಾಗ, ತಲೆ, ಎದೆಯ ಮೇಲೆಯೇ ಗಾಯಗಳಾಗಿತ್ತು ಎಂದು ವರದಿಯಲ್ಲಿ ವೈದ್ಯರು ಉಲ್ಲೇಖಿಸಿದ್ದಾರೆ.

ಇನ್ನು ತಜ್ಞರ ಪ್ರಕಾರ ಬಹುತೇಕರು ಸ್ಫೋಟ ಸಂಭವಿಸುತ್ತಿದ್ದಂತೆ ಗೋಡೆ ಅಥವಾ ನೆಲಕ್ಕೆ ಅಪ್ಪಳಿಸಿ ಬಿದ್ದಿದ್ದಾರೆ ಇದರ ಪರಿಣಾಮದಿಂದ ದೇಹ ಮೂಳೆಗಳು ಮುರಿದು,ತಲೆಗೆ ಗಂಭೀರ ಗಾಯಗಳಾಗಿ ಸಾವು ಸಂಭವಿಸಿತ್ತು ಎನ್ನಲಾಗಿದೆ.

ಗಾಯಾಳುಗಳಿಗೂ ತಪ್ಪದ ಸಂಕಷ್ಟ :

ಮತ್ತೊಂದಡೆ ದುರಂತದಲ್ಲಿ ಬದುಕುಳಿದವರೂ ಕೂಡ ನಾನಾ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕೆಲವರಲ್ಲಿ ಶ್ರವಣ ದೋಷ ಕಾಣಿಸಿಕೊಂಡಿದೆ. ಇನ್ನು ಕೆಲವರಿಗೆ ತೋಳು, ಮುಖ ಸೇರಿದಂತೆ ದೇಹದ ಹಲವು ಭಾಗಗಳಲ್ಲಿ ಸುಟ್ಟ ಮತ್ತು ಸವೆತದ ಗಾಯಗಳಾಗಿವೆ.ಸ್ಫೋಟಕ್ಕೆ ಮಿಲಿಟರಿ ದರ್ಜೆಯ ಅತ್ಯುನ್ನತ ಸ್ಫೋಟಕ ಬಳಸಿದ್ದ ಕಾರಣ ಅದರ ತೀವ್ರತೆ ಹೆಚ್ಚಿತ್ತು ಎನ್ನಲಾಗಿದೆ.

ಎಐಯುನಿಂದ ಅಲ್‌ ಫಲಾಹ್ ವಿವಿ ಸದಸ್ಯತ್ವ ರದ್ದು

ನವದೆಹಲಿ: ಟೆರರ್‌ ಡಾಕ್ಟರ್ಸ್‌ಗಳ ಹಬ್‌ ಆಗಿ ಕುಖ್ಯಾತಿ ಪಡೆದಿರುವ ಫರೀದಾಬಾದ್‌ನ ಅಲ್‌ ಫಲಾಹ್‌ ವಿವಿಗೆ ಮತ್ತೊಂದು ಆಘಾತ ಎದುರಾಗಿದ್ದು, ಭಾರತೀಯ ವಿಶ್ವವಿದ್ಯಾನಿಲಯಗಳ ಸಂಘ( ಎಐಯು) ಸಂಸ್ಥೆಯ ಸದಸ್ಯತ್ವವನ್ನೇ ರದ್ದುಗೊಳಿಸಿದೆ.

ಕೆಂಪುಕೋಟೆ ದುರಂತದ ಬಳಿಕ ವಿವಿ ವಿರುದ್ಧ ತನಿಖೆ ಚುರುಕುಗೊಂಡಿದೆ. ಈ ಬೆನ್ನಲ್ಲೇ ಎಐಯು ಅಲ್‌ ಫಲಾಹ್‌ ವಿಶ್ವವಿದ್ಯಾನಿಲಯವು ಉತ್ತಮ ಸ್ಥಿತಿಯಲ್ಲಿ ಕಾರ್ಯ ನಿರ್ವಹಿಸುತ್ತಿಲ್ಲ ಎನ್ನುವ ಕಾರಣ ನೀಡಿ ತಕ್ಷಣದಿಂದಲೇ ಜಾರಿಗೆ ಬರುವಂತೆ ಸದಸ್ಯತ್ವ ರದ್ದುಗೊಳಿಸಿ ಆದೇಶಿಸಿದೆ.

ಈ ಪ್ರಕಾರ ಅಲ್‌ ಫಲಾಹ್‌ ಮುಂದಿನ ದಿನಗಳಲ್ಲಿ ತನ್ನ ಯಾವುದೇ ಚಟುವಟಿಕೆಯಲ್ಲಿ ಎಐಯು ಹೆಸರು ಅಥವಾ ಲೋಗೋವನ್ನು ಬಳಸಕೂಡದು ಎಂದು ಸೂಚನೆ ನೀಡಿದೆ.

ಪುಲ್ವಾಮಾ ರೀತಿ ಮತ್ತೆ ಸ್ಫೋಟಕ್ಕೆ ಉಗ್ರರ ಸಂಚು

ನವದೆಹಲಿ: ದೆಹಲಿ ಸ್ಫೋಟ ಕೇಸಲ್ಲಿ ಬಂಧಿತ ಉಗ್ರರು, ಕಾಶ್ಮೀರದಲ್ಲಿ ಮತ್ತೊಂದು ಪುಲ್ವಾಮಾ ಮಾದರಿ ಸ್ಫೋಟಕ್ಕೆ ಸಂಚು ರೂಪಿಸಿದ್ದರು. ಆದರೆ ಇತ್ತೀಚಿನ ದಿನಗಳಲ್ಲಿ ಭಧ್ರತಾ ಪಡೆಗಳು ಕಾಶ್ಮೀರದಲ್ಲಿ ತಪಾಸಣೆ ತೀವ್ರಗೊಳಿಸಿದ್ದ ಕಾರಣ ಮತ್ತು ತಮ್ಮ ತಂಡದ ಸದಸ್ಯನೊಬ್ಬ ಸಿಕ್ಕಿಬಿದ್ದ ಕಾರಣ ಅವರು ಕಾಶ್ಮೀರದಲ್ಲಿನ ತಮ್ಮ ಯೋಜನೆ ರದ್ದುಪಡಿಸಿ, ಅದನ್ನು ದೆಹಲಿಗೆ ವರ್ಗಾಯಿಸಿದ್ದರು ಎಂಬ ವಿಷಯ ತನಿಖೆ ವೇಳೆ ಬೆಳಕಿಗೆ ಬಂದಿದೆ. 2019ರ ಫೆ.14ರಂದು ಭದ್ರತಾ ಸಿಬ್ಬಂದಿಗಳಿದ್ದ ವಾಹನಕ್ಕೆ, ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯ ಲೇಥ್ಪೊರದಲ್ಲಿ ಆತ್ಮಹತ್ಯಾ ಬಾಂಬರ್ ಇದ್ದ ವಾಹನದಿಂದ ದಾಳಿ ಮಾಡಲಾಯಿತು. ಈ ದಾಳಿಯಲ್ಲಿ ಕೇಂದ್ರ ಮೀಸಲು ಪೊಲೀಸ್ ಪಡೆಯ 40 ಮಂದಿ ಹುತಾತ್ಮರಾಗಿದ್ದರು.

ಸ್ಫೋಟ ನಡೆದ ಸ್ಥಳದಿಂದ 300 ಮೀ. ದೂರದಲ್ಲಿಕಟ್ಟಡದ ಮೇಲೆ ಕೈ ಪತ್ತೆ

ನವದೆಹಲಿ: ದೆಹಲಿ ಕಾರು ಸ್ಫೋಟ ನಡೆದ ಸ್ಥಳದಲ್ಲಿನ ಹೃದಯವಿದ್ರಾವಕ ಘಟನೆಗಳು ಒಂದೊಂದಾಗಿಯೇ ತೆರೆದುಕೊಳ್ಳುತ್ತಿದ್ದು, ಘಟನೆ ನಡೆದ 3 ದಿನಗಳ ಬಳಿಕ 300 ಮೀ ದೂರದಲ್ಲಿ ಅಂಗೈ ತುಂಡನ್ನು ಪೊಲೀಸರು ಪತ್ತೆ ವಶ ಪಡಿಸಿಕೊಂಡಿದ್ದಾರೆ. ಇದು ಘಟನೆಯ ಭೀಕರತೆಗೆ ಸಾಕ್ಷಿ ಎನ್ನುವಂತಿದೆ. ನ್ಯೂ ಲಜಪತ್‌ ರಾಯ್‌ ಮಾರುಕಟ್ಟೆಯ ಅಂಗಡಿಯೊಂದರ ಛಾವಣಿ ಮೇಲೆ ಕತ್ತರಿಸಿದ್ದ ಮುಂಗೈ ಪತ್ತೆಯಾಗಿದ್ದು, ದೆಹಲಿಯ ಪೊಲೀಸರು ಅದನ್ನು ವಶಪಡಿಸಿಕೊಂಡಿದ್ದಾರೆ. ಸದ್ಯ ಅದನ್ನು ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ ರವಾನಿಸಿದ್ದಾರೆ.

ದಿಲ್ಲಿ ಸ್ಫೋಟಕ್ಕೆ ವಿವಿಯ ಮತ್ತೊಂದು ಕಾರ್ ಲಿಂಕ್‌

ಚಂಡೀಗಢ: ದೆಹಲಿ ಕಾರು ಸ್ಪೋಟದಲ್ಲಿ ಹ್ಯುಂಡೈ ಐ20 ಮತ್ತು ಇಕೋ ಸ್ಪೋರ್ಟ್‌ ಕಾರು ನಂಟು ಪತ್ತೆ ಬೆನ್ನಲ್ಲೇ ಅಪ್‌ ಫಲಾಹ್‌ ವಿವಿ ಜತೆಗೆ ನಂಟಿರುವ ಮತ್ತೊಂದು ಕಾರು ಕೂಡ ಸ್ಫೋಟಕ್ಕೆ ಬಳಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಮಾರುತಿ ಬ್ರೆಝಾ ಕಾರೊಂದು ವಿವಿಯ ಪಾರ್ಕಿಂಗ್ ಸ್ಥಳದಲ್ಲಿ ನಿಂತಿದ್ದು ಅನುಮಾನಕ್ಕೆ ಎಡೆ ಮಾಡಿ ಕೊಟ್ಟಿದೆ. ಸ್ಫೋಟಕಗಳ ಸಾಗಾಟಕ್ಕೆ ಮೂರು ಕಾರುಗಳು ಬಳಕೆಯಾಗಿತ್ತು ಎನ್ನುವುದು ಪೊಲೀಸ್‌ ತನಿಖೆಯಲ್ಲಿ ಬಹಿರಂಗವಾಗಿತ್ತು. ಆ ಕಾರು ಇದೇ ಇರಬಹುದಾ ಎನ್ನುವ ಶಂಕೆ ವ್ಯಕ್ತವಾಗಿದೆ.

ಬಾಬ್ರಿ ಮಸೀದಿ ಧ್ವಂಸವಾದ ಡಿ.6ಕ್ಕೆ 6 ಕಡೆ ಸ್ಫೋಟ ಸಂಚು ಸ್ಫೋಟಕ್ಕೆ ಉಗ್ರ ಸಂಚು

ನವದೆಹಲಿ: ದೆಹಲಿ ಸ್ಫೋಟದ ಬೆನ್ನಲ್ಲೇ, ಅದರ ಹಿಂದೆ ಭಾರೀ ದೊಡ್ಡ ದಾಳಿಯ ಸಂಚು ಇದ್ದುದು ಈಗ ಬಯಲಾಗಿದೆ. ಜೈಷ್‌-ಎ-ಮೊಹೊಮ್ಮದ್‌ ಸಂಘಟನೆಯೊಂದಿಗೆ ನಂಟು ಹೊಂದಿದ್ದ ಉಗ್ರರು, ಅಯೋಧ್ಯೆಯಲ್ಲಿರುವ ಬಾಬ್ರಿ ಮಸೀದಿ ಧ್ವಂಸವಾದ ಡಿ.6ರಂದು ರಾಷ್ಟ್ರರಾಜಧಾನಿ ವಲಯದ 6 ಕಡೆಗಳಲ್ಲಿ ಭಾರೀ ಸ್ಫೋಟ ನಡೆಸಲು ಸಂಚು ರೂಪಿಸಿದ್ದರು ಎಂಬ ಆಘಾತಕಾರಿ ಮಾಹಿತಿಯನ್ನು ಪ್ರಕರಣದ ತನಿಖೆ ನಡೆಸುತ್ತಿರುವ ಅಧಿಕಾರಿಗಳು ಬಿಚ್ಚಿಟ್ಟಿದ್ದಾರೆ. ಈಗಾಗಲೇ ಬಂಧಿತರಾಗಿರುವ ಉಗ್ರರು ವಿಚಾರಣೆ ವೇಳೆ, ‘1992ರಲ್ಲಿ ಬಾಬ್ರಿ ಮಸೀದಿಯನ್ನು ಕೆಡವಿದ್ದರ ಸೇಡಿಗಾಗಿ ಆ ದಿನ ಭಾರೀ ವಿಧ್ವಂಸ ಸೃಷ್ಟಿಸಲು ಯೋಜಿಸಲಾಗಿತ್ತು’ ಎಂದು ಬಾಯ್ಬಿಟ್ಟಿದ್ದಾರೆ.

PREV

ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ

Read more Articles on
click me!

Recommended Stories

ಪುಟಿನ್ ಭಾರತ ಭೇಟಿಯಿಂದ ಹೊಸ ಚರಿತ್ರೆಗೆ ಮುನ್ನುಡಿ, ಕೆಲ ರಾಷ್ಟ್ರಗಳಿಗೆ ಟೆನ್ಶನ್
ಪುಟಿನ್ ಔತಣಕೂಟಕ್ಕೆ ರಾಹುಲ್ ಗಾಂಧಿ-ಖರ್ಗೆಗಿಲ್ಲ ಆಮಂತ್ರಣ, ಶಶಿ ತರೂರ್‌ಗೆ ಜಾಕ್‌ಪಾಟ್