ಅಗ್ನಿಪಥ ದಿಕ್ಕಿಲ್ಲದ ಯೋಜನೆ, ಪ್ರತಿಭಟನಕಾರರಿಗೆ ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ!

By Suvarna NewsFirst Published Jun 18, 2022, 5:39 PM IST
Highlights
  • ದಿಕ್ಕು ದೆಸೆಯಿಲ್ಲದ ಯೋಜನೆ ಜಾರಿ ಮಾಡಿದೆ ಎಂದ ಸೋನಿಯಾ ಗಾಂಧಿ
  • ಅಗ್ನಿಪಥ ಯೋಜನೆಯಿಂದ ಬಿಜೆಪಿಗೆ ಲಾಭ, ದೇಶಕ್ಕೆ ನಷ್ಟ
  • ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದ ಸೋನಿಯಾ ಗಾಂಧಿ
     

ನವದೆಹಲಿ(ಜೂ.18): ದೇಶದ ಹಲವು ಭಾಗಗಳಲ್ಲಿ ಪ್ರತಿಭಟನೆ, ಹಿಂಸಾಚಾರ, ರೈಲಿಗೆ ಬೆಂಕಿ, ವಾಹನಕ್ಕೆ ಬೆಂಕಿ, ರೈಲು ನಿಲ್ದಾಣ ಧ್ವಂಸ ಸೇರಿದಂತೆ ಹಲವು ರೀತಿಯಲ್ಲಿ ಪ್ರತಿಭಟನೆ ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರದ ಅಗ್ನಿಪಥ ಸೇನಾ ನೇಮಕಾತಿ ಯೋಜನೆ ಈ ಪ್ರತಿಭಟನೆ ಹಿಂದಿನ ಕಾರಣ. ಇದೀಗ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಆಸ್ಪತ್ರೆಯಿಂದಲೇ ಬೆಂಬಲ ಸೂಚಿಸಿದ್ದಾರೆ. 

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಎಲ್ಲಾ ವರ್ಗದ ಜನರ ವಿರೋದ ಕಟ್ಟಿಕೊಳ್ಳುತ್ತಿದೆ. ಇದೀಗ ದಿಕ್ಕು ದೆಸೆಯಿಲ್ಲದ ಅಗ್ನಿಪಥ ಯೋಜನೆಯನ್ನು ತಂದಿದೆ. ಹೀಗಾಗಿ ದೇಶಾದ್ಯಂತ ಕೇಂದ್ರದ ಅಗ್ನಿಪಥ ಯೋಜನೆ ವಿರುದ್ಧ ಪ್ರತಿಭಟನೆ ನಡೆಯುತ್ತಿದೆ. ಈ ಪ್ರತಿಭಟನಾಕಾರರಿಗೆ ಕಾಂಗ್ರೆಸ್ ಬೆಂಬಲ ನೀಡಲಿದೆ. ಅವರ ದ್ವನಿಯನ್ನು ಅಡಗಿಸುವ ಕೆಲಸವನ್ನು ಕೇಂದ್ರ ಬಿಜೆಪಿ ಮಾಡುತ್ತಿದೆ ಎಂದು ಸೋನಿಯಾ ಗಾಂಧಿ ಪತ್ರದ ಮೂಲಕ ಹೇಳಿದ್ದಾರೆ.

ಕಾಂಗ್ರೆಸ್‌ ಮುಖ್ಯಸ್ಥೆ ಆರೋಗ್ಯ ಸ್ಥಿತಿ ಗಂಭೀರ, ಶ್ವಾಸನಾಳ ಸೋಂಕು ಹೆಚ್ಚಳ

ಸೇನೆಯಲ್ಲಿ ಸೇರಿ ದೇಶ ಸೇವೆ ಮಾಡಲು ತಯಾರಿ ಮಾಡಿಕೊಳ್ಳುತ್ತಿದ್ದ ಹಲವರಿಗೆ ಈ ಯೋಜನೆ ನಿರಾಸೆ ತಂದಿದೆ. ಇದರಿಂದಲೇ ಆಕ್ರೋಶಗಳು ವ್ಯಕ್ತವಾಗುತ್ತಿದೆ. ಕೇಂದ್ರ ಸರ್ಕಾರ ತಕ್ಷಣವೇ ಅಗ್ನಿಪಥ ಯೋಜನೆ ಹಿಂಪಡೆಯಬೇಕು ಎಂದು ಸೋನಿಯಾ ಗಾಂಧಿ ಪತ್ರದಲ್ಲಿ ಹೇಳಿದ್ದಾರೆ.

ನಿವೃತ್ತ ಸೇನಾಧಿಕಾರಿಗಳು ಈ ಯೋಜನೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ದೇಶದ ಭದ್ರತೆ ಕುರಿತು ಆತಂಕ ವ್ಯಕ್ತಪಡಿಸಿದ್ದಾರೆ. ಇಷ್ಟಾದರೂ ಕೇಂದ್ರ ಸರ್ಕಾರ ತನ್ನ ವಾದವನ್ನೇ ಮುಂದುವರಿಸುತ್ತಿದೆ. ಹಿರಿಯರ ಸಲಹೆಗಳನ್ನು ಕೇಳುತ್ತಿಲ್ಲ ಎಂದು ಪತ್ರದಲ್ಲಿ ಹೇಳಿದ್ದಾರೆ.

ಅಗ್ನಿಪಥ ಸೇರ್ಪಡೆ ವಯೋಮಿತಿ 23ಕ್ಕೆ ಏರಿಕೆ
ಅಗ್ನಿಪಥ ಯೋಜನೆಯಡಿ ಸೇನೆಗೆ ಸೇರಲು ಇರುವ ಗರಿಷ್ಠ ವಯೋಮಿತಿಯನ್ನು 23ಕ್ಕೆ ಏರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ ಇದು 2022ನೇ ಸಾಲಿಗೆ ಮಾತ್ರ ಸೀಮಿತವಾಗಿರಲಿದೆ. ಕೋವಿಡ್‌ ಹಿನ್ನೆಲೆಯಲ್ಲಿ 2 ವರ್ಷಗಳಿಂದ ಸೇನೆಗೆ ನೇಮಕಾತಿ ನಡೆದಿರಲಿಲ್ಲ. ಆದರೆ ಇದೀಗ ದಿಢೀರ್‌ ಹೊಸ ಅಗ್ನಿಪಥ ಯೋಜನೆ ಘೋಷಿಸಿದ ಕಾರಣ, ತಾವು ಸೇನೆಗೆ ಸೇರ್ಪಡೆಯಾಗುವ ಅವಕಾಶ ಕಳೆದುಕೊಂಡಿದ್ದೇವೆ ಎಂಬ ಯುವ ಸಮೂಹದ ಆಗ್ರಹಕ್ಕೆ ಓಗೊಟ್ಟು ಕೇಂದ್ರ ಸರ್ಕಾರ ಈ ನಿರ್ಧಾರ ಪ್ರಕಟಿಸಿದೆ. ಹೊಸ ಆದೇಶದ ಅನ್ವಯ 17ವರೆ ವರ್ಷದಿಂದ 23 ವರ್ಷದ ಯುವಕ-ಯುವತಿಯರು ಅಗ್ನಿವೀರರಾಗಬಹುದು.

ಸೋನಿಯಾ, ರಾಹುಲ್‌ ಗಾಂಧಿಗೆ ಇಡಿ ನೋಟಿಸ್‌ ಬಿಜೆಪಿ ಷಡ್ಯಂತ್ರ: ಸಿದ್ದರಾಮಯ್ಯ

ಅಗ್ನಿಪಥ ಯೋಜನೆ ರದ್ದು ಮಾಡಲು ಆಗ್ರಹ
ಪ್ರಸ್ತುತ ಕೇಂದ್ರ ಸರ್ಕಾರದ ಹೊಸ ಸೇನಾ ನೇಮಕಾತಿ ಮತ್ತು ಅದರ ಪ್ರಕ್ರಿಯೆ ದೇಶದ ಸಾರ್ವಭೌಮತೆಗೆ ಗಂಡಾಂತರ ತಂದೊಡ್ಡಿದೆ. ಕಳೆದೆರಡು ವರ್ಷಗಳಿಂದ ಸೇನಾ ನೇಮಕಾತಿಯೇ ನಡೆದಿಲ್ಲ. ಮೊದಲು ಪೂರ್ಣ ಪ್ರಮಾಣದ ಸೇನಾ ನೇಮಕಾತಿ ನಡೆಯಲಿ ಎಂದು ಎಸ್‌ಎಫ್‌ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಒತ್ತಾಯಿಸಿದ್ದಾರೆ.

ಈ ಕುರಿತು ಪ್ರಕಟಣೆ ನೀಡಿ, 2021ರ ಅಂಕಿ ಅಂಶಗಳ ಪ್ರಕಾರ ಭಾರತೀಯ ಸೇನೆಯಲ್ಲಿ 1,04,653 ಸೈನಿಕ ಸಿಬ್ಬಂದಿ ಕೊರತೆಯಿತ್ತು. ಈಗ ಕೇಂದ್ರ ಸರ್ಕಾರವು ಗಾಯದ ಮೇಲೆ ಬರೆ ಎಳೆದಂತೆ, ನೇಮಕಾತಿಯಲ್ಲಿ ಸ್ಥಳೀಯ ಕೋಟಾವನ್ನು ರದ್ದು ಮಾಡಿರುವುದರೊಂದಿಗೆ ಆರು ತಿಂಗಳ ತರಬೇತಿಯೂ ಸೇರಿದಂತೆ ನಾಲ್ಕು ವರ್ಷಗಳ ಅಲ್ಪಕಾಲಿಕ ನೇಮಕಾತಿ ಮಾಡಲು ನಿರ್ಧರಿಸಿದೆ ಎಂದಿದ್ದಾರೆ.
 

click me!