ನ್ಯಾಷನಲ್ ಹೆರಾಲ್ಡ್ ಪ್ರಕರಣದಲ್ಲಿ ಸೋನಿಯಾ ಗಾಂಧಿ ಮತ್ತು ರಾಹುಲ್ ಗಾಂಧಿ ವಿರುದ್ಧ ಜಾರಿ ನಿರ್ದೇಶನಾಲಯವು ಚಾರ್ಜ್‌ಶೀಟ್ ಸಲ್ಲಿಸಿದೆ. ಯಂಗ್ ಇಂಡಿಯಾ ಕಂಪನಿಗೆ ಸೇರಿದ 700 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ. ಕಾಂಗ್ರೆಸ್ ಇದನ್ನು ರಾಜಕೀಯ ಪ್ರೇರಿತ ಕ್ರಮ ಎಂದು ಕರೆದಿದೆ.
ನವದೆಹಲಿ (ಏ.16): ‘ನ್ಯಾಷನಲ್ ಹೆರಾಲ್ಡ್’ ಪ್ರಕರಣದಲ್ಲಿ ನಡೆದಿದೆ ಎನ್ನಲಾದ ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯವು ದೆಹಲಿ ನ್ಯಾಯಾಲಯಕ್ಕೆ ಆರೋಪಪಟ್ಟಿ ಸಲ್ಲಿಸಿದ್ದು, ಅದರಲ್ಲಿ ಕಾಂಗ್ರೆಸ್ ಮಾಜಿ ಅಧ್ಯಕ್ಷರಾದ ಸೋನಿಯಾ ಗಾಂಧಿ ಅವರನ್ನು ಆರೋಪಿ ನಂ.1 ಮತ್ತು ರಾಹುಲ್ ಗಾಂಧಿ ಅವರನ್ನು ಆರೋಪಿ ನಂ.2 ಎಂದು ಹೆಸರಿಸಿದೆ.
4 ದಿನಗಳ ಹಿಂದಷ್ಟೇ ಇದೇ ಪ್ರಕರಣದಲ್ಲಿ ಸೋನಿಯಾ, ರಾಹುಲ್ ಷೇರುದಾರರಾಗಿರುವ ಯಂಗ್ ಇಂಡಿಯಾ ಕಂಪನಿಗೆ ಸೇರಿದ 700 ಕೋಟಿ ರು.ಮೌಲ್ಯದ ಆಸ್ತಿ ಜಪ್ತಿಗೆ ಇ.ಡಿ. ನೋಟಿಸ್ ಜಾರಿ ಮಾಡಿತ್ತು. ಅದರ ಬೆನ್ನಲ್ಲೇ ಇದೀಗ ಗಾಂಧಿ ಕುಟುಂಬದ ಇಬ್ಬರು ಹಿರಿಯರನ್ನು ಪ್ರಕರಣದಲ್ಲಿ ಆರೋಪಿಗಳೆಂದು ಹೆಸರಿಸಲಾಗಿದೆ. ಒಂದು ವೇಳೆ ಆರೋಪ ಸಾಬೀತಾದರೆ ಗರಿಷ್ಠ 7 ವರ್ಷಗಳವರೆಗೆ ಶಿಕ್ಷೆ ವಿಧಿಸಬಹುದಾಗಿರುತ್ತದೆ.
ಪ್ರಕರಣವೊಂದರಲ್ಲಿ ಸೋನಿಯಾ ಮತ್ತು ರಾಹುಲ್ ಅವರನ್ನು ಜಂಟಿ-ಆರೋಪಿಯಾಗಿ ಹೆಸರಿಸಿದ ಮೊದಲ ಉದಾಹರಣೆ ಇದಾಗಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜೊತೆಗೆ ಇದನ್ನು ರಾಜಕೀಯ ಮತ್ತು ದ್ವೇಷದ ಕ್ರಮ ಎಂದು ಕಿಡಿಕಾರಿದ್ದು, ಬುಧವಾರ ದೇಶವ್ಯಾಪಿ ಕೇಂದ್ರ ಸರ್ಕಾರದ ಕಚೇರಿಗಳು ಮತ್ತು ಇ.ಡಿ. ಕಚೇರಿಗಳ ಎದುರು ಪ್ರತಿಭಟನೆಗೆ ನಿರ್ಧರಿಸಿದೆ.
ಆರೋಪಪಟ್ಟಿ:
ಇದನ್ನೂ ಓದಿ: ರಾಹುಲ್, ಸೋನಿಯಾಗೆ ಇಡಿ ಶಾಕ್, ನ್ಯಾಷನಲ್ ಹೆರಾಲ್ಡ್ ಕೇಸಲ್ಲಿ 700 ಕೋಟಿ ಆಸ್ತಿ ಜಪ್ತಿ ನೋಟಿಸ್
ನ್ಯಾಷನಲ್ ಹೆರಾಲ್ಡ್ ಪತ್ರಿಕೆ ಮುದ್ರಿಸುತ್ತಿದ್ದ ಅಸೋಸಿಯೇಟೆಡ್ ಜರ್ನ್‌ಲ್ಸ್ ಲಿ. (ಎಜೆಎಲ್) 2000 ಕೋಟಿ ರು. ಮೌಲ್ಯದ ಆಸ್ತಿ ಹೊಂದಿತ್ತು. ಈ ಆಸ್ತಿಯನ್ನು ಕಬಳಿಸುವ ಸಲುವಾಗಿ ಕಾಂಗ್ರೆಸ್ ನಾಯಕರು ಕ್ರಮಿನಲ್ ಸಂಚು ರೂಪಿಸಿ ಎಜೆಎಲ್‌ನ ಶೇ.99ರಷ್ಟು ಷೇರುಗಳನ್ನು ಕೇವಲ 50 ಲಕ್ಷ ರು.ಗೆ ಸೋನಿಯಾ ಮತ್ತು ರಾಹುಲ್ ಶೇ.76ರಷ್ಟು ಷೇರು ಹೊಂದಿರುವ ಯಂಗ್ ಇಂಡಿಯನ್ ಎಂಬ ಖಾಸಗಿ ಕಂಪನಿಗೆ ವರ್ಗಾಯಿಸಲಾಗಿತ್ತು. ಉಳಿದ ಶೇ.24ರಷ್ಟು ಷೇರುಗಳನ್ನು ಗಾಂಧೀ ಕುಟುಂಬದ ಆಪ್ತರಾದ ಮೋತಿಲಾಲ್ ವೋಹ್ರಾ, ಆಸ್ಕರ್ ಫರ್ನಾಂಡಿಸ್, ಸುಮನ್ ದುಬೆ, ಸ್ಯಾಮ್ ಪಿತ್ರೋಡಾ ಮೊದಲಾದವರು ಹೊಂದಿದ್ದಾರೆ.
ಈ ಖರೀದಿ ಅಕ್ರಮದ ಮೂಲಕ ಷೇರುದಾರರು 988 ಕೋಟಿ ರು. ಹಣವನ್ನು ಅಕ್ರಮವಾಗಿ ಸಂಪಾದಿಸಿದ್ದಾರೆ. ಹಾಲಿ ಈ ಆಸ್ತಿಯ ಮೌಲ್ಯ 5000 ಕೋಟಿ ರು.ನಷ್ಟಿದೆ ಎಂದು ನ್ಯಾಯಾಲಯಕ್ಕೆ ಸಲ್ಲಿಸಿದ ಆರೋಪಪಟ್ಟಿಯಲ್ಲಿ ಇ.ಡಿ.ದಾಖಲಿಸಿದೆ. ಜೊತೆಗೆ ಆರೋಪಟ್ಟಿಯಲ್ಲಿ ಸೋನಿಯಾ ಗಾಂಧಿ ಅವರನ್ನು ಅರೋಪಿ ನಂ.1 ಮತ್ತು ರಾಹುಲ್ ಗಾಂಧಿ ಅವರನ್ನು ಆರೋಪಿ ನಂ.2 ಎಂದು ಹೆಸರಿಸಲಾಗಿದೆ. ಮಂಗಳವಾರ ಈ ಆರೋಪಪಟ್ಟಿಯನ್ನು ಪರಿಶೀಲಿಸಿದ ನ್ಯಾಯಾಲಯದ ಏ.25ಕ್ಕೆ ಮುಂದಿನ ವಿಚಾರಣೆ ನಡೆಸುವುದಾಗಿ ತಿಳಿಸಿದೆ.
ಏನಿದು ಪ್ರಕರಣ?:
ನ್ಯಾಷನಲ್ ಹೆರಾಲ್ಡ್ ಪತ್ರಿಕೆಯು ಅಸೋಸಿಯೇಟೆಡ್ ಜರ್ನಲ್ಸ್ ಲಿಮಿಟೆಡ್ (ಎಜೆಎಲ್) ಒಡೆತನದಲ್ಲಿದೆ. ಎಜೆಎಲ್‌ಗೆ ಎಐಸಿಸಿ ಮೂಲಕ 90 ಕೋಟಿ ರು. ಸಾಲ ನೀಡಲಾಗಿತ್ತು. ಆದರೆ ಅದು ಸಾಲ ಮರುಪಾವತಿ ಮಾಡಿರಲಿಲ್ಲ. ಆದರೆ ಎಜೆಎಲ್ 2000 ಕೋಟಿ ರು. ಆಸ್ತಿ ಹೊಂದಿತ್ತು. ಈ ನಡುವೆ ಎಜೆಎಲ್ ಆಸ್ತಿಯನ್ನು ಕಡಿಮೆ ತೋರಿಸಿ, ಕೇವಲ 50 ಲಕ್ಷ ರು.ಗೆ ಯಂಗ್ ಇಂಡಿಯನ್ ಎಂಬ ಕಂಪನಿಗೆ ಎಜೆಎಲ್ ಅನ್ನು ಮಾರಾಟ ಮಾಡಲಾಗಿತ್ತು. ಇದರಲ್ಲಿ ಸೋನಿಯಾ, ರಾಹುಲ್ ಒಟ್ಟು ಶೇ.76ರಷ್ಟು ಷೇರು ಹೊಂದಿದ್ದಾರೆ. ಇದು ಎಜೆಎಲ್ ಆಸ್ತಿ ಕಬಳಿಸಲು ನಡೆಸಿದ ಅಕ್ರಮ ಎಂದು ಆರೋಪಿಸಿ ಬಿಜೆಪಿಯ ಸುಬ್ರಮಣಿಯನ್ ಸ್ವಾಮಿ 2014ರ ಜೂನ್‌ನಲ್ಲಿ ಖಾಸಗಿ ದೂರು ದಾಖಲಿಸಿದ್ದರು. ದೂರಿನ ಆಧಾರದ ಮೇಲೆ ದೆಹಲಿಯ ಪಟಿಯಾಲ ಹೌಸ್ ನ್ಯಾಯಾಲಯವು ತನಿಖೆ ನಡೆಸುವಂತೆ ಇ.ಡಿ.ಗೆ ಆದೇಶಿಸಿತ್ತು. ಇ.ಡಿ. 2021ರಲ್ಲಿ ತನ್ನ ತನಿಖೆಯನ್ನು ಪ್ರಾರಂಭಿಸಿತು.
ಬಲಿಪಶುವಿನ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ
ಕಾಂಗ್ರೆಸ್ ನಾಯಕರು ಸಾರ್ವಜನಿಕರ ಹಣವನ್ನು ಲೂಟಿ ಮಾಡಿದ ಬಳಿಕ ತಾನು ಬಲಿಪಶು ಎಂದು ತೋರಿಸಿಕೊಳ್ಳುತ್ತಿದ್ದಾರೆ. ನ್ಯಾಯಾಲಯದ ಆದೇಶದ ಮೇರೆಗೆ ಪ್ರಕರಣದ ವಿಚಾರಣೆಗಳು ಪ್ರಾರಂಭವಾಗಿತ್ತು. ಭ್ರಷ್ಟಾಚಾರ ಮತ್ತು ಲೂಟಿಯಲ್ಲಿ ತೊಡಗಿರುವ ಯಾರಾದರೂ ಈಗ ಮರುಪಾವತಿ ಮಾಡಬೇಕಾಗುತ್ತದೆ. ಅವರು ಸಾರ್ವಜನಿಕ ಹಣವನ್ನು ಜೇಬಿಗಿಳಿಸುತ್ತಾರೆ ಮತ್ತು ಸಾರ್ವಜನಿಕ ಆಸ್ತಿಯನ್ನು ದೋಚುತ್ತಾರೆ. ಕ್ರಮ ಕೈಗೊಂಡಾಗ ಬಲಿಪಶು ಆದ ರೀತಿಯ ಆಡುತ್ತಾರೆ.
ಶೆಹಜಾದಾ ಪೂನವಾಲಾ, ಬಿಜೆಪಿ ರಾಷ್ಟ್ರೀಯ ವಕ್ತಾರ
ರಾಹುಲ್ ಮೌನಗೊಳಿಸುವ ಯತ್ನ
ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಮತ್ತು ಇತರ ನಾಯಕರ ವಿರುದ್ಧ ಚಾರ್ಜ್‌ಶೀಟ್ ಸಲ್ಲಿಸುವುದು ಪ್ರಧಾನಿ ಮತ್ತು ಗೃಹ ಸಚಿವರ ದ್ವೇಷ ಮತ್ತು ಬೆದರಿಕೆಯ ರಾಜಕೀಯವಲ್ಲದೆ ಬೇರೇನೂ ಅಲ್ಲ. ರಾಜ್ಯ ಪ್ರಾಯೋಜಿತ ಅಪರಾಧವಾದ ನ್ಯಾಷನಲ್ ಹೆರಾಲ್ಡ್‌ನ ಅಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವುದು ಸರ್ಕಾರಿ ಪ್ರಾಯೋಜಿತ ಅಪರಾಧ. ಜೈರಾಂ ರಮೇಶ್, ಕಾಂಗ್ರೆಸ್ ವಕ್ತಾರ