ಮದುವೆಗೆ ಬರಬೇಕಿದ್ದ ಮಗ, ಹೆಣವಾಗಿ ಬಂದ; ಸಂಭ್ರಮದ ಊರಲ್ಲಿ ಈಗ ಬರೀ ಸೂತಕ!

By Santosh Naik  |  First Published Nov 24, 2023, 4:53 PM IST

ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಭಯೋತ್ಪಾದಕರ ಜೊತೆಗಿನ ಎನ್‌ಕೌಂಟರ್‌ನಲ್ಲಿ ಸಾವು ಕಂಡ 5 ಜನ ಸೈನಿಕರ ಪೈಕಿ, ಉತ್ತರ ಪ್ರದೇಶದ ಪ್ಯಾರಾ ಕಮಾಂಡೋ ಸಚಿನ್‌ ಲೌರ್‌ ಕೂಡ ಒಬ್ಬರು. ಡಿ.8 ರಂದು ವೈವಾಹಿಕ ಜೀವನಕ್ಕೆ ಕಾಲಿಡಬೇಕಿದ್ದ ಇವರು, ಅದಕ್ಕೂ 15 ದಿನ ಮುಂಚೆಯೇ ಹುತಾತ್ಮರಾಗಿದ್ದಾರೆ.
 


ನವದೆಹಲಿ (ನ.24): ಉತ್ತರ ಪ್ರದೇಶದ ಅಲಿಘರ್‌ನ ತಪ್ಪಲ್‌ನ ನಗ್ಲಿಯಾ ಗೌರೋಲಾ ಗ್ರಾಮದ ಭಾರತೀಯ ಸೇನೆಯ ಪ್ಯಾರಾ ಕಮಾಂಡೋ ಸಚಿನ್ ಲೌರ್‌ ಅವರ ಮದುವೆ ಡಿಸೆಂಬರ್‌ 8 ರಂದು ನಿಶ್ಚಿತವಾಗಿತ್ತು. ಡಿಸೆಂಬರ್‌ 1 ರಿಂದ ಅವರು ಪಡೆಯುವ ರಜೆಗೂ ಅನುಮೋದನೆ ಸಿಕ್ಕಿತ್ತು. ಇಡೀ ಗ್ರಾಮದಲ್ಲಿ ಅವರ ಮದುವೆಯ ಆಮಂತ್ರಣ ಪತ್ರಿಕೆಯನ್ನು ಸಂಭ್ರಮದಿಂದಲೇ ಹಂಚಲಾಗಿತ್ತು. ಇಡೀ ಮನೆಗೆ ಸುಣ್ಣ ಬಣ್ಣ ಬಳಿಯುವ ಕಾರ್ಯವೂ ನಡೆದಿತ್ತು. ಆದರೆ, ಜಮ್ಮು ಕಾಶ್ಮೀರದ ರಜೌರಿಯಲ್ಲಿ ನಡೆದ ಎನ್‌ಕೌಂಟರ್‌ ಈ ಎಲ್ಲಾ ಸಂಭ್ರಮಕ್ಕೆ ಕೊನೆ ಹಾಡಿದೆ. ರಜೌರಿ ಎನ್‌ಕೌಂಟರ್‌ನಲ್ಲಿ ಸಾವು ಕಂಡ 5 ಸೈನಿಕರ ಪೈಕಿ, ಪ್ಯಾರಾ ಕಮಾಂಡೋ ಸಚಿನ್‌ ಲೌರ್‌ ಕೂಡ ಒಬ್ಬರು. ಸಚಿನ್‌ ಅವರ ಮದುವೆಗೆ ಸಂಭ್ರಮದಿಂದಲೇ ಸಜ್ಜಾಗಿದ್ದ ಇಡೀ ಊರಿಗೆ ಈಗ ಸೂತಕದ ಛಾಯೆ. ಶುಕ್ರವಾರ ಸಂಜೆ, ಜಮ್ಮು ಮತ್ತು ಕಾಶ್ಮೀರದ ರಜೌರಿಯಲ್ಲಿ ಭದ್ರತಾ ಪಡೆಗಳು ಮತ್ತು ಭಯೋತ್ಪಾದಕರ ನಡುವೆ ಎರಡು ದಿನಗಳ ಕಾಲ ನಡೆದ ಎನ್‌ಕೌಂಟರ್‌ನಲ್ಲಿ ಸಚಿನ್ ಅಕಾಲಿಕ ಸಾವು ಕಂಡಿದ್ದಾರೆ. ಈ ಕಾರ್ಯಾಚರಣೆಯಲ್ಲಿ ಕರ್ನಾಟಕದ ಮಂಗಳೂರಿನ ಕ್ಯಾಪ್ಟನ್ ಎಂ ವಿ ಪ್ರಾಂಜಲ್, ಉತ್ತರ ಪ್ರದೇಶದ ಆಗ್ರಾದ ಕ್ಯಾಪ್ಟನ್ ಶುಭಂ ಗುಪ್ತಾ, ಜಮ್ಮು ಮತ್ತು ಕಾಶ್ಮೀರದ ಪೂಂಚ್‌ನ ಅಜೋಟೆಯ ಹವಾಲ್ದಾರ್ ಅಬ್ದುಲ್ ಮಜೀದ್, ಉತ್ತರಾಖಂಡದ ಹಳ್ಳಿ ಪಡ್ಲಿ ಪ್ರದೇಶದ ಲ್ಯಾನ್ಸ್ ನಾಯಕ್ ಸಂಜಯ್ ಬಿಶ್ತ್ ಮತ್ತು ಉತ್ತರ ಪ್ರದೇಶದ ಸಾಚ್‌ಲಿನ್‌ನ ಪ್ಯಾರಾಟ್ರೂಪರ್‌ನ ಲಾನ್ಸ್ ನಾಯಕ್ ಸಾವು ಕಂಡಿದ್ದಾರೆ.

ತನ್ನ ಬಾಲ್ಯದ ಕನಸನ್ನು ನನಸಾಗಿಸುತ್ತಾ, ಸಚಿನ್ 2019ರ ಮಾರ್ಚ್ 20 ರಂದು ಸೇನೆಗೆ ಸೇರಿ, ಜಮ್ಮು ಕಾಶ್ಮೀರದಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಆ ಬಳಿಕ ಅವರು, 2021 ರಲ್ಲಿ ವಿಶೇಷ ಪಡೆಗಳಲ್ಲಿ ಕಮಾಂಡೋ ಆಗಿ, ಸೇನೆಗೆ PARA ರೆಜಿಮೆಂಟ್‌ನೊಂದಿಗೆ ಸೇರಿಕೊಂಡಿದ್ದರು.

Tap to resize

Latest Videos

ಎನ್‌ಕೌಂಟರ್ ಪ್ರಾರಂಭವಾಗುವ ಕೆಲವೇ ಗಂಟೆಗಳ ಮೊದಲು 23 ವರ್ಷದ ಯೋಧ ತನ್ನ ಕುಟುಂಬದೊಂದಿಗೆ ಸಂವಹನ ನಡೆಸಿದ್ದ. ಗುರುವಾರ ಬೆಳಗ್ಗೆ ಅಣ್ಣ ವಿವೇಕ್‌ಗೆ ವಾಟ್ಸ್‌ಆ್ಯಪ್‌ನಲ್ಲಿ ಮೆಸೇಜ್‌ ಮಾಡಿದ ಸಚಿನ್‌, ಆಪರೇಷನ್‌ ನಡೆಯುತ್ತಿದೆ, ಎಲ್ಲವೂ ಸರಿಯಾಗಿದೆ. ಆದರೆ ಗಂಟೆಗಳ ನಂತರ, ಸಚಿನ್‌ ಅವರ ಗ್ರಾಮವು ದುಃಖದ ಸುದ್ದಿಯನ್ನು ಸ್ವೀಕರಿಸಿದೆ. ತನ್ನ ಮದುವೆಗಾಗಿ ಸಚಿನ್‌ ಈಗಾಗಲೇ ರಜೆಗೆ ಅಪ್ಲೈ ಮಾಡಿ ಒಪ್ಪಿಗೆಯನ್ನೂ ಪಡೆದುಕೊಂಡಿದ್ದರು. ಪ್ರೀತಿ ಮಾಡುತ್ತಿದ್ದ ಹುಡುಗಿಯೊಂದಿಗೆ ಮದುವೆಯಾಗಲು ಡಿಸೆಂಬರ್‌ 1 ರಂದು ಊರಿಗೆ ಬರಬೇಕಿದ್ದ ಸಚಿನ್‌, ಈಗ ಶವಪೆಟ್ಟಿಗೆಯಲ್ಲಿ ತ್ರಿವರ್ಣ ಧ್ವಜವನ್ನು ಅದರ ಮೇಲೆ ಹೊದಿಸಿ ಹಿಂತಿರುಗುತ್ತಾರೆ ಎಂದು ಯಾರೂ ಅಂದುಕೊಂಡಿರಲಿಲ್ಲ.

ಅಪ್ಪ ನನಗೇನೂ ಬೇಡಾ, ನೀನು ಎದ್ದು ಬಾ: ಹುತಾತ್ಮ ಯೋಧನ ಪುತ್ರಿಯ ಕಣ್ಣೀರು

ಮಿಲಿಟರಿ ಹಿನ್ನೆಲೆಯುಳ್ಳ ಕುಟುಂಬದಿಂದ ಬಂದಿರುವ ಸಚಿನ್ ಅವರ ಹಿರಿಯ ಸಹೋದರ ವಿವೇಕ್ ನೌಕಾಪಡೆಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ ಮತ್ತು ಪ್ರಸ್ತುತ ಕೊಚ್ಚಿಯಲ್ಲಿ ನಿಯೋಜನೆಗೊಂದಿದ್ದಾರೆ. ಅವರ ಚಿಕ್ಕಪ್ಪ ಕೂಡ ಸೈನ್ಯದಲ್ಲಿ ಸೇವೆ ಸಲ್ಲಿಸುವಾಗ ತಮ್ಮ ಪ್ರಾಣಾರ್ಪಣೆ ಮಾಡಿದ್ದರು. ರೈತರಾಗಿರುವ ಸಚಿನ್‌ ಅವರ ತಂದೆ ರಮೇಶ್‌ ಚಂದ್‌ ಹಾಗೂ ಅವರ ತಾಯಿ ಭಗವತಿಗೆ ತಮ್ಮ ಮಗ ಇನ್ನಿಲ್ಲ ಎಂದು ನಂಬಲೂ ಕಷ್ಟವಾಗಿದೆ. ಅದರೆ, ಅವರ ಇಡೀ ಊರು ಕುಟುಂಬದ ಸಂಕಷ್ಟದ ಸಮಯದಲ್ಲಿ ಒಟ್ಟುಗೂಡಿದೆ. ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಕೂಡ ಸಂತಾಪ ಸೂಚಿಸಿದ್ದು, ಕರ್ತವ್ಯದ ಸಾಲಿನಲ್ಲಿ ಸಚಿನ್ ಲೌರ್‌ ಅವರ ತ್ಯಾಗಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ. ಶುಕ್ರವಾರ ಸಂಜೆಯ ವೇಳೆಗೆ ವೀರ ಯೋಧನ ಪಾರ್ಥೀವ ಶರೀರ ಸ್ವಗ್ರಾಮ ತಲುಪುವ ನಿರೀಕ್ಷೆಯಿದೆ.

ರಜೌರಿಯಲ್ಲಿ ಉಗ್ರರ ಜೊತೆ ಸೇನೆಯ ಎನ್‌ಕೌಂಟರ್,‌ ಮೇಜರ್‌ ಸೇರಿದಂತೆ 3 ಸೈನಿಕರು ಹುತಾತ್ಮ

click me!