
ನವದೆಹಲಿ: ಇನ್ನು ಮುಂದೆ ಅಮೆರಿಕ ವೀಸಾ ಅರ್ಜಿ ಸಲ್ಲಿಕೆ ವೇಳೆ ಐದು ವರ್ಷಗಳಲ್ಲಿ ಬಳಸಿದ ಸಾಮಾಜಿಕ ಜಾಲತಾಣಗಳ ಯೂಸರ್ ನೇಮ್ ಅನ್ನು ಡಿಎಸ್-160 ಫಾರ್ಮ್‌ನಲ್ಲಿ ಬಹಿರಂಗಪಡಿಸುವುದು ಕಡ್ಡಾಯ. ಒಂದು ವೇಳೆ ಈ ರೀತಿ ಮಾಡದೇ ಹೋದರೆ ವೀಸಾ ನಿರಾಕರಿಸುವ ಮತ್ತು ಭವಿಷ್ಯದಲ್ಲಿ ವೀಸಾ ಸಿಗದೆ ಹೋಗುವ ಸಾಧ್ಯತೆ ಇದೆ ಎಂದು ದೆಹಲಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿ ಎಚ್ಚರಿಸಿದೆ.
ಪ್ರತಿ ವೀಸಾಗಳ ಕುರಿತು ತೆಗೆದುಕೊಳ್ಳುವ ನಿರ್ಧಾರವು ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದ ನಿರ್ಧಾರವಾಗಿರುತ್ತದೆ. ವೀಸಾಗಾಗಿ ಅರ್ಜಿ ಸಲ್ಲಿಸುವವರು ಕಡ್ಡಾಯವಾಗಿ ಐದು ವರ್ಷಗಳಲ್ಲಿ ತಾವು ಬಳಸಿರುವ ಸಾಮಾಜಿಕ ಜಾಲತಾಣದ ಯೂಸರ್‌ಐಡಿ ನೀಡಬೇಕಿದೆ.
ಸಾಮಾಜಿಕ ಜಾಲತಾಣ ಬಳಕೆಯ ಮಾಹಿತಿಯನ್ನು ಕೈಬಿಡುವುದು ವೀಸಾ ನಿರಾಕರಣೆಗೆ ದಾರಿ ಮಾಡಿಕೊಡಬಹುದು. ಭವಿಷ್ಯದಲ್ಲಿ ವೀಸಾಗಾಗಿ ಅರ್ಜಿ ಸಲ್ಲಿಸಲು ಅರ್ಹತೆಯನ್ನೇ ಕಳೆದುಕೊಳ್ಳಬಹುದು ಎಂದು ಅಮೆರಿಕ ದೂತವಾಸ ಕಚೇರಿಯು ಸಾಮಾಜಿಕ ಜಾಲತಾಣದಲ್ಲಿ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ ತಿಳಿಸಿದೆ.
ಜೂ.23ರಂದು ಅಮೆರಿಕ ರಾಯಭಾರ ಕಚೇರಿಯು ವಲಸೆಯ ಉದ್ದೇಶ ಇಲ್ಲದ ಎಫ್, ಎಂ ಅಥವಾ ಜೆ ವೀಸಾ ಕೋರಿ ಅರ್ಜಿ ಸಲ್ಲಿಸುವವರು ತಮ್ಮ ಸಾಮಾಜಿಕ ಜಾಲತಾಣಗಳ ಸೆಟ್ಟಿಂಗ್ಸ್ ಅನ್ನು ''''ಪ್ರೈವೇಟ್''''ನಿಂದ ''''ಪಬ್ಲಿಕ್ '''' ಗೆ ಬದಲಾವಣೆ ಮಾಡುವಂತೆ ಸೂಚಿಸಿತ್ತು. ಇದು ಅವರ ಗುರುತು ಖಚಿತಪಡಿಸಲು ಅವಕಾಶ ಮಾಡಿಕೊಡುತ್ತದೆ ಎಂದು ಸೂಚಿಸಿತ್ತು.
ಡೊನಾಲ್ಡ್ ಟ್ರಂಪ್ ಅವರು ಅಧಿಕಾರಕ್ಕೆ ಬಂದ ಬಳಿಕ ಅಮೆರಿಕದಲ್ಲಿ ವಲಸೆ ನೀತಿ ಬಿಗಿಗೊಳಿಸಲಾಗಿದೆ. ವಲಸೆ ನಿಯಮ ಉಲ್ಲಂಘಿಸುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಆರಂಭಿಸಿದೆ. ಅಮೆರಿಕದ ವೀಸಾವು ಸವಲತ್ತೇ ಹೊರತು ಹಕ್ಕಲ್ಲ ಎಂಬುದು ಅಮೆರಿಕ ಇದೀಗ ಸ್ಪಷ್ಟವಾಗಿ ಹೇಳುತ್ತಿದೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ