
ಕಾನ್ಪುರ: ಕುಡಿದ ಮತ್ತಿನಲ್ಲಿ ಹಾವಾಡಿಗನೋರ್ವ ಹಾವೊಂದನ್ನು ಮಹಿಳಾ ಪೊಲೀಸ್ ಮೇಲೆ ಎಸೆದಂತಹ ಘಟನೆ ನಡೆದಿದೆ. ಈ ವೇಳೆ ಪೊಲೀಸ್ ಜೀವಭಯದಿಂದ ಓಡಿದ್ದಾರೆ. ಉತ್ತರ ಪ್ರದೇಶದ ಕಾನ್ಪುರದಲ್ಲಿ ಈ ಘಟನೆ ನಡೆದಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ.
ಕುಡಿದ ಮತ್ತಿನಲ್ಲಿದ್ದ ಹಾವಾಡಿಗನೋರ್ವ ರಸ್ತೆಯಲ್ಲಿ ಹಾವನ್ನು ಹಿಡಿದುಕೊಂಡು ಅಂಗಡಿಗಳಿಗೆ ಹಾಗೂ ಅಲ್ಲಿ ಸಾಗುತ್ತಿದ್ದ ಜನರಿಗೆ ಹೆದರಿಸಲು ಮುಂದಾಗಿದ್ದಾನೆ. ಈ ವೇಳೆ ಅಂಗಡಿಯೊಳಗೆ ಜನ ಚಹಾ ಕುಡಿಯುತ್ತಿದ್ದರು. ಆದರೆ ಈತನ ಕೈನಲ್ಲಿ ಹಾವು ನೋಡಿದ ಜನ ಭಯಗೊಂಡಿದ್ದು, ಕುಳಿತಲ್ಲಿಂದ ಎದ್ದು ದೂರ ಓಡುವುದಕ್ಕೆ ಶುರು ಮಾಡಿದ್ದಾರೆ. ಈ ಘಟನೆಯ ವೀಡಿಯೋ ಈಗ ವೈರಲ್ ಆಗಿದೆ.
ವೈರಲ್ ಆದ ವೀಡಿಯೋವೊಂದರಲ್ಲಿ ಹಾವಾಡಿಗನೊಬ್ಬ ಚಹಾ ಅಂಗಡಿಯೊಳಗೆ ನುಗ್ಗಿ ವ್ಯಕ್ತಿಯೊಬ್ಬರ ಕುತ್ತಿಗೆ ಮೇಲೆ ಹಾವನ್ನು ಇಡಲು ಮುಂದಾಗಿದ್ದಾನೆ. ಇದು ಹತ್ತಿರದಲ್ಲಿದ್ದವರನ್ನು ಭಯಗೊಳಿಸಿದೆ. ಹಾವಾಡಿಗನ ಈ ವರ್ತನೆ ನೋಡಿದ ಅಂಗಡಿಯವರು ಮತ್ತು ಸ್ಥಳೀಯ ನಿವಾಸಿಗಳು ವಿರೋಧ ವ್ಯಕ್ತಪಡಿಸಿದಾಗ ಈ ಹಾವಾಡಿಗ ಆವರಣದಿಂದ ಹೊರ ಬಂದಿದ್ದಾನೆ. ಇದಾದ ನಂತರ ಸ್ವಲ್ಪ ಹೊತ್ತಿನ ಆತ ಆ ರಸ್ತೆಯಲ್ಲೇ ಮುಂದೆ ಹೋಗಿದ್ದ ರಸ್ತೆ ವಿಭಜಕದ ಬಳಿ ನಿಂತಿದ್ದ ಮಹಿಳಾ ಪೊಲೀಸ್ ಒಬ್ಬರ ಮೇಲೆ ಹಾವನ್ನು ಎಸೆದಿದ್ದಾನೆ. ಈ ವೇಳೆ ಅವರು ಕಿರುಚಾಡಿ ಜೀವಭಯದಿಂದ ಓಡಿದ್ದಾರೆ.
ಹೀಗೆ ಹಾವಾಡಿಗನ ಕೈನಿಂದ ಕೆಳಗೆ ಬಿದ್ದ ಹಾವು ನೆಲದಲ್ಲಿ ಹರಿದಾಡುತ್ತಾ ಅಲ್ಲಿದ್ದ ಮತ್ತೊಬ್ಬ ಪೊಲೀಸ್ ಕಾನ್ಸ್‌ಟೇಬಲ್ ಕಾಲ ಕೆಳಗೆ ಹರಿದಾಡುತ್ತಾ ಸಾಗಿದ್ದು, ಅವರು ಕೂಡ ಭಯದಿಂದ ಆ ಜಾಗ ಬಿಟ್ಟು ಬೇರೆಡೆ ಓಡಿದ್ದಾರೆ. ಈ ಹಾವಾಡಿಗನ ಹುಚ್ಚು ವರ್ತನೆಯಿಂದ ಬೇಸತ್ತ ಅಲ್ಲಿನ ಅಂಗಡಿಯಲ್ಲಿದ್ದವರು ಆತನನನ್ನು ಸುತ್ತುವರೆದಿದ್ದಾರೆ. ಈ ವೇಳೆ ಇನ್ನು ಇಲ್ಲೇ ಇದ್ದರೆ ತನಗೊಂದು ಗತಿಯಾಗುತ್ತದೆ ಎಂದು ಅರಿತ ಹಾವಾಡಿಗ ತನ್ನ ಹಾವನ್ನು ಹಿಡಿದು ಬುಟ್ಟಿಗೆ ಹಾಕಿಕೊಂಡು ಅಲ್ಲಿಂದ ಕಾಲ್ಕಿತ್ತಿದ್ದಾನೆ.
ಕ್ಯಾಂಟೀನ್‌ನಲ್ಲಿ ಕುಳಿತಿದ್ದವರ ಮೇಲೆ ಬಿದ್ದ ಸೀಲಿಂಗ್ ಫ್ಯಾನ್:
ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಮತ್ತೊಂದು ವೀಡಿಯೋದಲ್ಲಿ ರಾಜಸ್ಥಾನದ ವಿಶ್ವವಿದ್ಯಾಲಯದ ಕ್ಯಾಂಟೀನ್‌ನಲ್ಲಿ ವಿದ್ಯಾರ್ಥಿಗಳು ಊಟ ಮಾಡುತ್ತಿದ್ದಾಗಲೇ ಸೀಲಿಂಗ್ ಫ್ಯಾನ್ ಇದ್ದಕ್ಕಿದ್ದಂತೆ ಬಿದ್ದಂತಹ ಘಟನೆ ನಡೆದಿದ್ದು, ಇದರ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ವೈರಲ್ ಆಗಿರುವ ವೀಡಿಯೋದಲ್ಲಿ ಕಾಣುವಂತೆ., ಕೆಲವು ವಿದ್ಯಾರ್ಥಿಗಳು ಮೇಜ್‌ನ ಮೇಲೆ ಕುಳಿತು ಊಟ ಮಾಡುತ್ತಿರುವಾಗ ಒಂದು ಸೀಲಿಂಗ್ ಫ್ಯಾನ್ ಇದ್ದಕ್ಕಿದ್ದಂತೆ ನೆಲಕ್ಕೆ ಬಿದ್ದಿದೆ. ಈ ವೇಳೆ ಅಲ್ಲಿ ಕುರ್ಚಿಯಲ್ಲಿ ಕುಳಿತಿದ್ದ ಒಬ್ಬ ವ್ಯಕ್ತಿಯ ತಲೆಗೆ ಪೆಟ್ಟು ಬಿದ್ದಿದ್ದು, ಅಲ್ಲಿದ್ದವರು ಗಾಬರಿಯಾಗಿದ್ದಾರೆ.
ಈ ಘಟನೆ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ಚರ್ಚೆಗೆ ಗ್ರಾಸವಾಗಿದ್ದು, ಸರ್ಕಾರಿ ಸಂಸ್ಥೆಗಳಲ್ಲಿನ ಅವ್ಯವಸ್ಥೆಗಳ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ರಾಜಸ್ಥಾನ ವಿಶ್ವವಿದ್ಯಾಲಯದ ಕ್ಯಾಂಟೀನ್‌ನಲ್ಲಿ ಚಾಲನೆಯಲ್ಲಿರುವ ಫ್ಯಾನ್ ಬಿದ್ದಿದೆ. ನಾವು ಯಾವುದಕ್ಕಾಗಿ ಕಾಯುತ್ತಿದ್ದೇವೆ. ವಿದ್ಯಾರ್ಥಿಗಳ ಸುರಕ್ಷತೆಯನ್ನು ಏಕೆ ಇಷ್ಟೊಂದು ನಿರ್ಲಕ್ಷ್ಯದಿಂದ ಪರಿಗಣಿಸಲಾಗುತ್ತಿದೆ ಎಂದು ವೀಡಿಯೋ ನೋಡಿದ ನೆಟ್ಟಿಗರೊಬ್ಬರು ಪ್ರಶ್ನೆ ಮಾಡಿದ್ದಾರೆ. ಈ ಬಾರಿ ನಾವು ಅದೃಷ್ಟವಂತರು. ಯಾರಿಗೂ ಗಂಭೀರವಾಗಿ ಗಾಯಗಳಾಗಿಲ್ಲ ಎಂದು ಒಬ್ಬರು ಹೇಳಿದ್ದರೆ, ದೇವರಿಗೆ ಧನ್ಯವಾದಗಳು ಅದು ನೇರವಾಗಿ ಯಾರ ಮೇಲೂ ಬೀಳಲಿಲ್ಲಎಂದು ಮತ್ತೊಬ್ಬರು ಬರೆದಿದ್ದಾರೆ.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ