ಶವ ಪರೀಕ್ಷೆಯ ಪ್ರಾಥಮಿಕ ವರದಿಗಳ ಅನ್ವಯ ಹೃದಯದ ರಕ್ತನಾಳದ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ ಎಂದು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹಾಣ್ ಮಾಹಿತಿ ನೀಡಿದ್ದಾರೆ. ಆದರೆ ದಿಢೀರ್ ಸಾವಿಗೆ ಹಾವು ಕಡಿತದಂಥ ಸಾಧ್ಯತೆಯೂ ಇಲ್ಲದಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಭೋಪಾಲ್ (ಏಪ್ರಿಲ್ 26, 2023): ಭಾನುವಾರ ಮಧ್ಯಪ್ರದೇಶದ ಕುನೋ ಅರಣ್ಯದಲ್ಲಿ ದಕ್ಷಿಣ ಆಫ್ರಿಕಾದ ಉದಯ್ ಹೆಸರಿನ ಚೀತಾ ಸಾವಿಗೆ ಹಾವು ಕಡಿತ ಕಾರಣ ಇರಬಹುದು ಎಂಬ ಒಂದು ಶಂಕೆ ಎದುರಾಗಿದೆ. ಇದೇ ವೇಳೆ, ಹೃದಯದ ರಕ್ತನಾಳದ ಸಮಸ್ಯೆ ಕಾರಣವಾಗಿರಬಹುದು ಎಂದು ಪ್ರಾಥಮಿಕ ಶವ ಪರೀಕ್ಷೆ ವೇಳೆ ಕಂಡುಬಂದಿದೆ ಎಂದು ಅರಣ್ಯಾಧಿಕಾರಿಗಳು ಹೇಳಿದ್ದಾರೆ.
ಆದರೆ, ‘ಸಾವಿಗೆ ಹಾವು ಕಡಿತ ಸೇರಿದಂತೆ ಇತರೆ ಕೆಲವು ಸಾಧ್ಯತೆಗಳೂ ಇರಬಹುದು. ಹೀಗಾಗಿ ಶವಪರೀಕ್ಷೆಯ ಪೂರ್ಣ ವರದಿ ಬಂದ ಬಳಿಕ ಈ ಕುರಿತ ಸ್ಪಷ್ಟಚಿತ್ರಣ ಸಿಗಬಹುದು’ ಎಂದು ಅಧಿಕಾರಿಗಳು ಹೇಳಿದ್ದಾರೆ.
‘ಶನಿವಾರ ಚೀತಾವನ್ನು ಪರೀಕ್ಷೆಗೆ ಒಳಪಡಿಸಿದಾಗ ಅದು ಸಂಪೂರ್ಣ ಆರೋಗ್ಯವಾಗಿತ್ತು. ಆದರೆ ಭಾನುವಾರ ಬೆಳಗ್ಗೆ ಇದ್ದಕ್ಕಿದ್ದಂತೆ ಅದು ಮಂಕುಬಡಿದಂತೆ ಮಲಗಿತ್ತು. ಕೂಡಲೇ ಅದಕ್ಕೆ ಅರವಳಿಕೆ ನೀಡಿ, ಚಿಕಿತ್ಸೆ ಆರಂಭಿಸಲಾಗಿತ್ತು. ಆದರೂ ಕೆಲವೇ ಗಂಟೆಗಳಲ್ಲಿ ಚೀತಾ ಸಾವನ್ನಪ್ಪಿದ್ದು ಕಳವಳ ಮೂಡಿಸಿದೆ. ಶವ ಪರೀಕ್ಷೆಯ ಪ್ರಾಥಮಿಕ ವರದಿಗಳ ಅನ್ವಯ ಹೃದಯದ ರಕ್ತನಾಳದ ಸಮಸ್ಯೆಯಿಂದ ಮೃತಪಟ್ಟಿರುವ ಶಂಕೆ ಇದೆ ಎಂದು ರಾಜ್ಯದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಜೆ.ಎಸ್.ಚೌಹಾಣ್ ಮಾಹಿತಿ ನೀಡಿದ್ದಾರೆ. ಆದರೆ ದಿಢೀರ್ ಸಾವಿಗೆ ಹಾವು ಕಡಿತದಂಥ ಸಾಧ್ಯತೆಯೂ ಇಲ್ಲದಿಲ್ಲ’ ಎಂದು ತಜ್ಞರು ಹೇಳಿದ್ದಾರೆ.
ಇದನ್ನು ಓದಿ: ಚೀತಾಗಳ ಸ್ಥಳಾಂತರ ಮಾಡಲು ಕೇಂದ್ರಕ್ಕೆ ಮಧ್ಯ ಪ್ರದೇಶ ಮೊರೆ: 2 ಚೀತಾ ಸಾವಿನ ಬೆನ್ನಲ್ಲೇ ಪತ್ರ
ಈ ನಡುವೆ ಮೃತ ಚೀತಾದ ಮರಣೋತ್ತರ ಪರೀಕ್ಷೆಯನ್ನು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರದ ಐಜಿ ಅಮಿತ್ ಮಲ್ಲಿಕ್ ಹಾಜರಿನಲ್ಲಿ ನಡೆಸಲಾಗಿದೆ. ಚೀತಾದ ರಕ್ತದ ಮಾದರಿಯನ್ನು ಪರೀಕ್ಷೆಗಾಗಿ ಕಳುಹಿಸಿಕೊಡಲಾಗಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ಆಫ್ರಿಕಾ ಮತ್ತು ನಮೀಬಿಯಾದಿಂದ ತರಲಾದ 20 ಚೀತಾಗಳ ಪೈಕಿ 2 ಚೀತಾಗಳು ಕಳೆದ ಒಂದು ತಿಂಗಳ ಅವಧಿಯಲ್ಲಿ ಮೃತಪಟ್ಟಿವೆ.. ಮೊದಲ ಚೀತಾ ಕಿಡ್ನಿ ವೈಫಲ್ಯದಿಂದ ಮೃತಪಟ್ಟಿತ್ತು.
ಇದನ್ನೂ ಓದಿ: ಆಫ್ರಿಕಾದಿಂದ ತಂದಿದ್ದ ಮತ್ತೊಂದು ಚೀತಾ ಸಾವು: ತಿಂಗಳಲ್ಲೇ ಎರಡನೇ ಚೀತಾ ಸಾವಿನ ಕಹಿಸುದ್ದಿ
2 ಬಾರಿ ದಾರಿ ತಪ್ಪಿದ್ದ ಚೀತಾ ‘ಪವನ್’ ಕುನೋ ಅರಣ್ಯಕ್ಕೆ ಸ್ಥಳಾಂತರ
ಕಳೆದೊಂದು ತಿಂಗಳಲ್ಲಿ ಮಧ್ಯಪ್ರದೇಶದ ಕುನೋ ರಾಷ್ಟ್ರೀಯ ಉದ್ಯಾನವನದಿಂದ 2 ಬಾರಿ ದಾರಿ ತಪ್ಪಿ ಹೋಗಿದ್ದ ಚೀತಾ ‘ಪವನ್’ನನ್ನು ಉದ್ಯಾನವನದ ಆವರಣಕ್ಕೆ ಸ್ಥಳಾಂತರಿಸಲಾಗಿದೆ. ಮೊದಲ ಬಾರಿ ಉದ್ಯಾನವನದಿಂದ ತಪ್ಪಿಸಿಕೊಂಡಿದ್ದ ಚೀತಾವನ್ನು ಏಪ್ರಿಲ್ 7 ರಂದು ಬೈರಾದ್ ಪ್ರದೇಶದ ಶಿವಪುರಿಯಲ್ಲಿ ಹಿಡಿಯಲಾಗಿತ್ತು.
ಆದರೆ ಬಳಿಕ ಏಪ್ರಿಲ್ 22 ರಂದು ಮತ್ತೊಮ್ಮೆ ತಪ್ಪಿಸಿಕೊಂಡು ಉತ್ತರ ಪ್ರದೇಶದ ಅರಣ್ಯಕ್ಕೆ ಪ್ರವೇಶಿಸುತ್ತಿತ್ತು. ಆಗ ಚೀತಾವನ್ನು ಸೆರೆಹಿಡಿಯಲಾಗಿತ್ತು. ಇದೀಗ ಕುನೋ ಅರಣ್ಯದ ಆವರಣಕ್ಕೆ ಆಫ್ರಿಕಾ ಚೀತಾವನ್ನು ಸ್ಥಳಾಂತರಿಸಲಾಗಿದ್ದು, ಅಲ್ಲಿ ಇತರ ಚೀತಾಗಳೊಂದಿಗೆ ಇದು ಉಳಿದುಕೊಂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ನಮೀಬಿಯಾದಿಂದ ಬಂದಿದ್ದ ಈ ಚೀತಾದ ಮೂಲ ಹೆಸರು ‘ಒಬಾನ್’. ಭಾರತಕ್ಕೆ ಬಂದ ಬಳಿಕ ಅದಕ್ಕೆ ‘ಪವನ್’ ಎಂದು ಹೆಸರಿಡಲಾಗಿತ್ತು.
ಇದನ್ನೂ ಓದಿ: ಆಫ್ರಿಕಾದಿಂದ ಬಂದ ಚೀತಾಗಳಿಗೆ ಮರುನಾಮಕರಣ: ಮೋದಿ ಸಲಹೆಯಂತೆ ಹೆಸರು ಸೂಚಿಸಿದ್ದ ಜನತೆ