ತೀವ್ರ ಚಳಿಯಿಂದಾಗಿ ಗೋಚರತೆ ಅಸ್ಪಷ್ಟವಾಗಿದ್ದಕ್ಕೆ ವಿಮಾನ ವಿಳಂಬವಾಗುತ್ತಿದೆ ಎಂದು ಘೋಷಣೆ ಮಾಡಿದ ವಿಮಾನದ ಪೈಲಟ್ ಮೇಲೆ ಪ್ರಯಾಣಿಕನೋರ್ವ ಹಲ್ಲೆ ಮಾಡಿದ ಘಟನೆ ನಡೆದಿದೆ. ದೆಹಲಿಯಿಂದ ಗೋವಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.
ತೀವ್ರ ಚಳಿಯಿಂದಾಗಿ ಗೋಚರತೆ ಅಸ್ಪಷ್ಟವಾಗಿದ್ದಕ್ಕೆ ವಿಮಾನ ವಿಳಂಬವಾಗುತ್ತಿದೆ ಎಂದು ಘೋಷಣೆ ಮಾಡಿದ ವಿಮಾನದ ಪೈಲಟ್ ಮೇಲೆ ಪ್ರಯಾಣಿಕನೋರ್ವ ಹಲ್ಲೆ ಮಾಡಿದ ಘಟನೆ ನಡೆದಿದೆ. ದೆಹಲಿಯಿಂದ ಗೋವಾಗೆ ಹೊರಟಿದ್ದ ಇಂಡಿಗೋ ವಿಮಾನದಲ್ಲಿ ಈ ಘಟನೆ ನಡೆದಿದೆ.
ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ತೀವ್ರ ಚಳಿ ಇದ್ದು, ಕೆಲ ಪ್ರದೇಶಗಳಲ್ಲಿ ಮೈನಸ್ ತಾಪಮಾನ ದಾಖಲಾಗಿದೆ. ದಟ್ಟ ಮಂಜಿನಿಂದಾಗಿ ಗೋಚರ ಅಸ್ಪಷ್ಟವಾಗಿದ್ದು, ಹೀಗಾಗಿ 100 ವಿಮಾನಗಳ ಪ್ರಯಾಣದಲ್ಲಿ ವಿಳಂಬವಾಗಿದೆ. ವಿಮಾನ ವಿಳಂಬವಾದ ಸಂದರ್ಭಗಳಲ್ಲಿ ವಿಮಾನದ ಕ್ಯಾಪ್ಟನ್ ಅಥವಾ ಪೈಲಟ್‌ಗಳು ವಿಮಾನ ಇಷ್ಟು ಹೊತ್ತು ವಿಳಂಬವಾಗಲಿದೆ ಎಂಬುದನ್ನು ಘೋಷಣೆ ಮಾಡುವ ಮೂಲಕ ಪ್ರಯಾಣಿಕರಿಗೆ ತಿಳಿಸುತ್ತಾರೆ. ಅದೇ ರೀತಿ ಹವಾಮಾನ ವ್ಯತ್ಯಯದ ಹಿನ್ನೆಲೆ ಇಂಡಿಗೋ ವಿಮಾನದಲ್ಲಿ ಕ್ಯಾಪ್ಟನ್ ವಿಮಾನ ವಿಳಂಬವಾದ ಘೋಷಣೆ ಮಾಡಿದ್ದಾರೆ. ಇದರಿಂದ ಸಿಟ್ಟಿಗೆದ್ದ ವಿಮಾನ ಪ್ರಯಾಣಿಕನೋರ್ವ ವಿಮಾನದ ಪೈಲಟ್ ಮೇಲೆ ಹಲ್ಲೆ ಮಾಡಿದ್ದು, ಇದರ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಜೊತೆಗೆ ಪ್ರಯಾಣಿಕನ ದುರ್ವರ್ತನೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗಿದೆ.
Video: ಜೈ ಶ್ರೀರಾಮ್ ಘೋಷಣೆಯೊಂದಿಗೆ ದೆಹಲಿಯಿಂದ ಅಯೋಧ್ಯೆಗೆ ಹೊರಟ ಮೊದಲ ವಿಮಾನ
ವಿಮಾನಗಳ ವಿಳಂಬದ ಹಿನ್ನೆಲೆಯಲ್ಲಿ ಈಗಾಗಲೇ ದೆಹಲಿ ವಿಮಾನ ನಿಲ್ದಾಣವೂ ಪ್ರಯಾಣಿಕರಿಗೆ ಕೆಲ ಸಲಹೆಗಳನ್ನು ಬಿಡುಗಡೆ ಮಾಡಿದೆ. ಪ್ರಯಾಣ ಆರಂಭಿಸುವ ಮೊದಲು ನೀವು ಪ್ರಯಾಣಿಸುವ ಏರ್‌ಲೈನ್ಸ್‌ನ್ನು ಸಂಪರ್ಕಿಸುವಂತೆ ಹೇಳಿದೆ. ಈ ಮಧ್ಯೆ ವಿಮಾನದಲ್ಲಿ ವಿಮಾನ ವಿಳಂಬವಾಗಿರುವ ಬಗ್ಗೆ ವಿಮಾನಲ್ಲಿ ಘೋಷಣೆ ಮಾಡುತ್ತಿದ್ದ ವಿಮಾನ ಸಿಬ್ಬಂದಿ ಮೇಲೆ ಪ್ರಯಾಣಿಕ ಹಲ್ಲೆ ಮಾಡಿದ್ದಾನೆ. ಇಂಡಿಗೋ ವಿಮಾನ (6E-2175)ದಲ್ಲಿ ಈ ಘಟನೆ ನಡೆದಿದೆ. ಇದು ದೆಹಲಿಯಿಂದ ಗೋವಾಗೆ ಹೊರಟಿತ್ತು.
ಪೈಲಟ್ ಮೇಲೆ ಹಲ್ಲೆ ಮಾಡಿದ ಪ್ರಯಾಣಿಕನ್ನು ಸಾಹಿಲ್ ಕತಾರಿಯಾ ಎಂದು ಗುರುತಿಸಲಾಗಿದೆ. ಮಂಜಿನಿಂದಾಗಿ ವಿಮಾನ ವಿಳಂಬವಾಗುತ್ತಿದೆ ಎಂದು ಪೈಲಟ್ ಘೋಷಣೆ ಮಾಡುತ್ತಿದ್ದಂತೆ ಸಿಟ್ಟಿಗೆದ್ದ ಪ್ರಯಾಣಿಕ ಮುಂದೆ ಸಾಗಿ ಪೈಲಟ್ ಮೇಲೆ ಹಲ್ಲೆ ಮಾಡಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಇಂಡಿಗೋ ದೆಹಲಿಯಲ್ಲಿ ಪ್ರಕರಣ ದಾಖಲಿಸಿದೆ.
ದೆಹಲಿ ಪೊಲೀಸರ ಪ್ರಕಾರ, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿದು ಬಂದಿದೆ. ಇನ್ನು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ವೀಡಿಯೋದಲ್ಲಿ ಹಳದಿ ಟೀ ಶರ್ಟ್ ಧರಿಸಿದ್ದ ವ್ಯಕ್ತಿಯೋರ್ವ ಪೈಲಟ್‌ಗೆ ಬಂದು ಥಳಿಸುವುದನ್ನು ಕಾಣಬಹುದಾಗಿದೆ. ಜೊತೆಯಲ್ಲಿದ್ದ ಕ್ಯಾಬಿನ್ ಸಿಬ್ಬಂದಿ ಆಗ ಜೋರಾಗಿ ಬೊಬ್ಬೆ ಹೊಡೆಯುತ್ತಾರೆ. ಈ ವೇಳೆ ಮತ್ತೊಬ್ಬ ಬಂದು ಈ ಪ್ರಯಾಣಿಕನ್ನು ಹಿಂದೆ ಕರೆದುಕೊಂಡು ಹೋಗುತ್ತಾನೆ. ಈ ವೀಡಿಯೋ ನೋಡಿದ ಜನ ಪ್ರಯಾಣಿಕನ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮತ್ತೊಬ್ಬರು ಏರ್‌ಲೈನ್ಸ್ ಆತನನ್ನು ಜೀವನ ಪರ್ಯಂತ ವಿಮಾನ ಪ್ರಯಾಣದಿಂದ ಬ್ಯಾನ್ ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಕುಡಿದು ಗಗನಸಖಿ ಮುದ್ದಾಡಲು ಹೋದ ಪ್ರಯಾಣಿಕ, ಬೆಂಗಳೂರಲ್ಲಿ ಇಳಿಯುತ್ತಿದ್ದಂತೆ ಆರೋಪಿ ಅರೆಸ್ಟ್!
