ತಂಬಾಕುದಾಸರಿಗೆ ಕೊರೋನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು!

By Suvarna NewsFirst Published Jul 30, 2020, 11:32 AM IST
Highlights

ಧೂಮಪಾನಿಗಳಿಗೆ ಕೊರೋನಾ ಸೋಂಕು ಹಬ್ಬುವ ಸಾಧ್ಯತೆ ಹೆಚ್ಚು| ಸಾವಿನ ಪ್ರಮಾಣವೂ ಅಧಿಕ: ಕೇಂದ್ರ ಸರ್ಕಾರ

ನವದೆಹಲಿ(ಜು.30): ಧೂಮಪಾನ ಮಾಡುವವರಿಗೆ ಕೊರೋನಾ ತಗಲುವ ಸಾಧ್ಯತೆ ಹೆಚ್ಚು ಮತ್ತು ಒಮ್ಮೆ ಕೊರೋನಾ ಬಂದರೆ ಇವರಲ್ಲಿ ಸಾವಿನ ಸಾಧ್ಯತೆಯೂ ಅಧಿಕ ಎಂದು ಕೇಂದ್ರ ಆರೋಗ್ಯ ಇಲಾಖೆ ಎಚ್ಚರಿಕೆ ನೀಡಿದೆ.

‘ಭಾರತದಲ್ಲಿ ಕೋವಿಡ್‌-19 ಮತ್ತು ತಂಬಾಕು ಬಳಕೆ’ ಎಂಬ ದಾಖಲೆಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಅದರಲ್ಲಿ, ಧೂಮಪಾನಿಗಳು ಕೈಯಲ್ಲಿ ಸಿಗರೇಟು ಹಿಡಿದುಕೊಂಡು ಅದನ್ನು ಬಾಯಿಗಿಟ್ಟುಕೊಳ್ಳುವುದರಿಂದ ಕೈಯಿಂದ ಬಾಯಿಗೆ ವೈರಸ್‌ ವರ್ಗಾವಣೆಯಾಗಿ ಕೊರೋನಾ ತಗಲುವ ಸಾಧ್ಯತೆ ಹೆಚ್ಚಿರುತ್ತದೆ. ಸಿಗರೇಟು, ಪೈಪ್‌ ಅಥವಾ ಹುಕ್ಕಾವನ್ನು ಹಂಚಿಕೊಂಡು ಸೇದಿದರೆ ಅದರಿಂದಲೂ ವೈರಸ್‌ ತಗಲುವ ಸಾಧ್ಯತೆ ಹೆಚ್ಚು. ಒಮ್ಮೆ ಕೊರೋನಾ ಸೋಂಕು ತಗಲಿದರೆ ಧೂಮಪಾನಿಗಳಲ್ಲಿ ಸಾವಿನ ಪ್ರಮಾಣವೂ ಹೆಚ್ಚು. ಏಕೆಂದರೆ ಧೂಮಪಾನದಿಂದ ಶ್ವಾಸಕೋಶಕ್ಕೆ ಮೊದಲೇ ಹಾನಿಯಾಗಿರುತ್ತದೆ. ಕೊರೋನಾ ಕೂಡ ಶ್ವಾಸಕೋಶದ ಮೇಲೇ ದಾಳಿ ನಡೆಸುವುದರಿಂದ ಸಾವಿನ ಸಾಧ್ಯತೆ ಹೆಚ್ಚುತ್ತದೆ ಎಂದು ಎಚ್ಚರಿಕೆ ನೀಡಲಾಗಿದೆ.

ತಂಬಾಕು ಬಳಕೆಯಿಂದ ಹೃದ್ರೋಗ, ಕ್ಯಾನ್ಸರ್‌, ಶ್ವಾಸಕೋಶ ಸಂಬಂಧಿ ಸಮಸ್ಯೆ ಹಾಗೂ ಮಧುಮೇಹ ಬರುವ ಸಾಧ್ಯತೆ ಹೆಚ್ಚು. ಈ ರೋಗಗಳು ಇದ್ದರೆ ಕೊರೋನಾದಿಂದ ಸಾವು ಸಂಭವಿಸುವ ಸಾಧ್ಯತೆಯೂ ಹೆಚ್ಚುತ್ತದೆ. ಇನ್ನು, ತಂಬಾಕು ತಿನ್ನುವ ಚಟವಿರುವವರಿಗೂ ಈ ರೋಗಗಳು ಬರುವ ಸಾಧ್ಯತೆ ಹೆಚ್ಚು. ಜೊತೆಗೆ, ಅದನ್ನು ಎಲ್ಲೆಂದರಲ್ಲಿ ಉಗಿಯುವುದರಿಂದ ಅವರ ಎಂಜಲಿನಿಂದ ಸೋಂಕು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹೀಗಾಗಿ ತಂಬಾಕು ತ್ಯಜಿಸುವುದು ಕೊರೋನಾದಿಂದ ಪಾರಾಗುವ ಮಾರ್ಗಗಳಲ್ಲೊಂದು ಎಂದು ಆರೋಗ್ಯ ಇಲಾಖೆ ಹೇಳಿದೆ.

click me!