
ನವದೆಹಲಿ(ಮೇ.19): ಕೊರೋನಾ ವೈರಸ್ ವಿಚಾರವಾಗಿ ತಪ್ಪು ಮಾಹಿತಿ ಟ್ವೀಟ್ ಮಾಡಿರುವ ಕೇಜ್ರಿವಾಲ್ ವಿರುದ್ಧ ಭಾರೀ ಟೀಕೆ ವ್ಯಕ್ತವಾಗಿದೆ. ಮಕ್ಕಳಿಗೆ ಅಪಾಯಕಾರಿಯಾಗಬಲ್ಲ ರೂಪಾಂತರಿ ವೈರಸ್ ಸಿಂಗಾಪುರದಲ್ಲಿ ಪತ್ತೆಯಾಗಿದೆ. ಹೀಗಾಗಿ ಉಭಯ ದೇಶಗಳ ನಡುವಿನ ವಿಮಾನಯಾನವನ್ನು ರದ್ದುಗೊಳಿಸಬೇಕೆಂದು ಟ್ವೀಟ್ ಮಾಡಿದ್ದರು. ಅವರ ಈ ಟ್ವೀಟ್‌ಗೆ ಆಕ್ರೋಶ ವ್ಯಕ್ತಪಡಿಸಿದ್ದ ಸಿಂಗಾಪುರ ರಾಯಭಾರ ಕಚೇರಿ ಈ ಮಾಹಿತಿ ಸುಳ್ಳು, ಸಿಂಗಾಪುರ ತಳಿ ಎನ್ನುವಂತಹ ಯಾವುದೇ ವೈರಸ್ ಇಲ್ಲ. ಭಾರತದಲ್ಲಿ ರೂಪಾಂತರಗೊಂಡ ವೈರಸ್ಸೇ ಅತ್ಯಂತ ಅಪಾಯಕಾರಿ ಎಂದಿತ್ತು. ಸದ್ಯ ಈ ವಿಚಾರವಾಗಿ ಸಂಸದ ರಾಜೀವ್ ಚಂದ್ರಶೇಖರ್ ಸೇರಿದಂತೆ ಅನೇಕ ಮಂದಿ ಕೇಜ್ರೀವಾಲ್ ಮಾತುಗಳನ್ನು ಖಂಡಿಸಿದ್ದಾರೆ.
ಸಿಂಗಾಪುರದಲ್ಲಿ ಪತ್ತೆಯಾದ ವೈರಸ್‌ನಿಂದ ಭಾರತಕ್ಕೆ ಕೊರೋನಾ 3ನೇ ಅಲೆ; ಎಚ್ಚರಿಕೆ ನೀಡಿದ ಸಿಎಂ!
ಕೇಜ್ರಿವಾಲ್ ಟ್ವೀಟ್‌ಗೆ ಆರ್‌ಸಿ ಖಂಡನೆ
ಬಿಜೆಪಿ ವಕ್ತಾರ ರಾಜ್ಯಸಭಾ ಸಂಸದ ರಾಜೀವ್ ಚಂದ್ರಶೇಖರ್ ಸದ್ಯ ಕೇಜ್ರಿವಾಲ್ ಟ್ವೀಟ್‌ನ್ನು ಖಂಡಿಸಿ 'ಅರವಿಂದ ಕೇಜ್ರೀವಾಲ್ ಹಾಗೂ ರಾಹುಲ್ ಗಾಂಧಿ ನಡುವೆ ಒಂದು ಬಗೆಯ ಸ್ಪರ್ಧೆ ನಡೆಯುತ್ತಿದೆ. ತಮ್ಮ ವೈಫಲ್ಯತೆಯಿಂದ ಜನರ ಗಮನ ಬೇರೆಡೆ ಹರಿಸುವಂತೆ, ಜನರನ್ನು ಗೊಂದಕ್ಕೊಳಗಾಗುವಂತೆ ಮಾಡುವ ಸ್ಫರ್ಧೆ ಇದಾಗಿದೆ. ಕೇಜ್ರಿವಾಲ್ ಈ ಹೇಳಿಕೆಯಿಂದ ಇಬ್ಬರ ನಡುವೆ ಭಾರೀ ಪೈಪೋಟಿ ಇದೆ ಎಂಬುವುದು ತಿಳಿಸುತ್ತದೆ' ಎಂದಿದ್ದಾರೆ.
ಸಿಂಗಾಪುರದ ತಿರುಗೇಟು
ಕೇಜ್ರಿವಾಲ್ ಆರೋಪಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ರಾಯಭಾರ ಕಚೇರಿ, ಕೊರೋನಾ ವೈರಸ್‌ನಲ್ಲಿ ಸಿಂಗಾಪುರ ಪ್ರಬೇಧ ಎಂಬುದು ಇಲ್ಲವೇ ಇಲ್ಲ. ನಮ್ಮಲ್ಲಿ ಭಾರೀ ಆತಂಕ ಸೃಷ್ಟಿಸಿರುವ ವೈರಸ್ ತಳಿ ಎಂದರೆ ಅದು ಭಾರತ ಮೂಲದ್ದೇ ಆದ ಬಿ.1.617.2 ಎಂದು ದೂರಿದೆ. ಅಲ್ಲದೇ ಕೇಜ್ರೀವಾಲ್ ಟ್ವೀಟ್‌ಗೆ ಆತಂಕ ವ್ಯಕ್ತಪಡಿಸಿದ್ದ ಕಚೇರಿ ದೆಹಲಿ ಮುಖ್ಯಮಂತ್ರಿಗೆ ವಿಮಾನ ಸೇವೆ ಅಥವಾ ಈ ವೈರಸ್ ಬಗ್ಗೆ ಮಾತನಾಡುವ ಯಾವ ಅಧಿಕಾರವೂ ಇಲ್ಲ ಎಂದಿದ್ದಾರೆ.
ವಿದೇಶಾಂಗ ಸಚಿವ ಜೈಶಂಕರ್ ಕೂಡಾ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಸಿಂಗಾಪುರ ಹಾಗೂ ಭಾರತ ಎರಡೂ ರಾಷ್ಟ್ರಗಳು ಕೊರೋನಾ ವಿರುದ್ಧ ಹೋರಾಟ ನಡೆಸುತ್ತಿವೆ. ಸೀಮಗಾಪುರ ಭಾರತಕ್ಕೆ ನೆರವು ನೀಡಿದೆ. ಇದಕ್ಕೆ ನಾನು ಧನ್ಯವಾದ ತಿಳಿಸುತ್ತೇನೆ. ದೆಹಲಿ ಸಿಎಂ ನೀಡಿರುವ ಹೇಳಿಕೆ ಭಾರತ ಸರ್ಕಾರದ ಹೇಳಿಕೆಯಲ್ಲ ಎಂಬುವುದನ್ನು ವಿದೇಶಾಂಗ ಸಚಿವನಾಗಿ ನಾನು ಸ್ಪಷ್ಟಪಡಿಸುತ್ತೇನೆ ಎಂದಿದ್ದಾರೆ.
ಕೇಜ್ರಿವಾಲ್ ಹೇಳಿದ್ದೇನು?
ಸಿಂಗಾಪುರದಲ್ಲಿ ಪತ್ತೆಯಾದ ಕೊರೋನಾ ವೈರಸ್‌ನ ಪ್ರಭೇದದಿಂದ ಮಕ್ಕಳಿಗೆ ಹೆಚ್ಚು ಅಪಾಯವಿದೆ. ಈ ತಳಿಯು 3ನೇ ಅಲೆಯ ವೈರಸ್ ಆಗಿ ದೆಹಲಿ ಪ್ರವೇಶಿಸಬಹುದಾದ ಸಾಧ್ಯತೆಯಿದೆ. ಹೀಗಾಗಿ ಸಿಂಗಾಪುರದ ಎಲ್ಲಾ ವಿಮಾನ ಸೇವೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದರು. ಏತನ್ಮಧ್ಯೆ, ಕೊರೋನಾ ಸೋಂಕಿಗೆ ಬಲಿಯಾದ ವ್ಯಕ್ತಿಯ ಕುಟುಂಬಕ್ಕೆ 50 ಸಾವಿರ ಪರಿಹಾರ ನೀಡಲಾಗುತ್ತದೆ. ಜೊತೆಗೆ ಆ ವ್ಯಕ್ತಿ ದುಡಿಯುವ ವ್ಯಕ್ತಿಯಾಗಿದ್ದರೆ ಅವರ ಕುಟುಂಬಕ್ಕೆ ಮಾಸಿಕ 2500 ರು. ಪಿಂಚಣಿ ನೀಡಲಾಗುತ್ತದೆ. ತಂದೆ-ತಾಯಿ ಸೇರಿ ಪೋಷಕರ ಅಗಲಿಕೆಯಿಂದ ಅನಾಥರಾದ ಮಕ್ಕಳು 25 ವರ್ಷ ಆಗುವವರಿಗೆ ಮಾಸಿಕ 2500 ರು. ಸಹಾಯ ಧನ ನೀಡುತ್ತೇವೆ ಎಂದು ಕೇಜ್ರಿವಾಲ್ ಪ್ರಕಟಿಸಿದ್ದರು.
ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್ ನ್ಯೂಸ್ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ