
ನವದೆಹಲಿ: 2001ರಲ್ಲೇ ಸ್ಟೂಡೆಂಟ್ಸ್ ಇಸ್ಲಾಮಿಕ್ ಮೂವ್‌ವೆಂಟ್ ಆಫ್ ಇಂಡಿಯಾ (ಸಿಮಿ) ಸಂಘಟನೆ ಮೇಲೆ ನಿಷೇಧ ಹೇರಿದ್ದರೂ ಕರ್ನಾಟಕ ಸೇರಿದಂತೆ ಹಲವು ದೇಶಗಳಲ್ಲಿ ಈಗಲೂ ಸಂಘಟನೆ ಸಕ್ರಿಯವಾಗಿದೆ. ಸಂಘಟನೆ ಕಾರ್ಯಾಕರ್ತರು ಬೇರೆ ಬೇರೆ ಸಂಘಟನೆಯ ಹೆಸರಲ್ಲಿ ಮತ್ತೆ ಒಗ್ಗೂಡಿ, ವಿದೇಶಗಳಲ್ಲಿರುವ ತಮ್ಮ ಸಹಚರರು ಮತ್ತು ನಾಯಕರ ಜೊತೆ ನಿರಂತರ ಸಂಪರ್ಕದ ಮೂಲಕ ದೇಶದ್ರೋಹದ ಚಟುವಟಿಕೆಗಳಲ್ಲಿ ನಿರತರಾಗಿದ್ದಾರೆ. ಹೀಗಿರುವಾಗ ಸಂಘಟನೆ ಮೇಲಿನ ನಿಷೇಧ ತೆರವು, ದೇಶದ ಸಾರ್ವಭೌಮತೆ ಮತ್ತು ಭದ್ರತೆಗೆ ಭಾರೀ ಧಕ್ಕೆ ತರಬಲ್ಲದು ಎಂದು ಕೇಂದ್ರ ಸರ್ಕಾರ ಸುಪ್ರೀಂಕೋರ್ಚ್‌ಗೆ ಮಾಹಿತಿ ನೀಡಿದೆ.
ಸಿಮಿ ಸಂಘಟನೆ ಮೇಲಿನ ನಿಷೇಧ ಹಿಂದಕ್ಕೆ ಪಡೆಯುವಂತೆ ಸಲ್ಲಿಸಲಾದ ಅರ್ಜಿಯೊಂದಕ್ಕೆ ಕೇಂದ್ರ ಗೃಹ ಸಚಿವಾಲಯದ ಪರವಾಗಿ ಅಫಿಡವಿಟ್ ಸಲ್ಲಿಸಲಾಗಿದ್ದು, ಅದರಲ್ಲಿ ಸಂಘಟನೆಯ ಗುರಿ, ಕಾರ್ಯಾಚರಣೆ, ಅದರಿಂದ ದೇಶಕ್ಕೆ ಇರುವ ಅಪಾಯಗಳ ಕುರಿತು ವಿಸ್ತೃತವಾಗಿ ಮಾಹಿತಿ ನೀಡಲಾಗಿದೆ.
ಇದನ್ನು ಓದಿ: ನಿಷೇಧಿತ ಸಿಮಿ ಸಂಘಟನೆ ನಾಯಕರಿಂದ ಹುಟ್ಟಿದ ಪಿಎಫ್ಐ ಬ್ಯಾನ್, 2017ರಲ್ಲಿ ನೀಡಿತ್ತು ವರದಿ!
‘ಸಿಮಿ ಸಂಘಟನೆಯ ಗುರಿ ದೇಶದ ಕಾನೂನಿಗೆ ವಿರುದ್ಧವಾಗಿದೆ. ಸಂಘಟನೆ, ಇಸ್ಲಾಂ ಹೆಸರಿನಲ್ಲಿ ವಿದ್ಯಾರ್ಥಿಗಳು ಮತ್ತು ಯುವಕರನ್ನು ಒಗ್ಗೂಡಿಸಿ ಜಿಹಾದ್‌ಗೆ ಬೆಂಬಲ ಪಡೆಯುವ ಯತ್ನ ಮಾಡುತ್ತಿದೆ. ಕ್ರಾಂತಿಯ ಮೂಲಕ ಭಾರತದಲ್ಲಿ ಷರಿಯಾ ಅಧರಿತ ಇಸ್ಲಾಮಿಕ್ ಆಡಳಿತ ಸ್ಥಾಪನೆ ಅದರ ಗುರಿ. ದೇಶದ ಸಂವಿಧಾನ, ಅದರ ಜಾತ್ಯತೀತ ಸ್ವರೂಪದಲ್ಲಿ ಸಿಮಿತ ನಂಬಿಕೆ ಹೊಂದಿಲ್ಲ. ಜೊತೆಗೆ ಮೂರ್ತಿ ಪೂಜೆ ಪಾಪ ಎಂದು ಬೋಧಿಸಿ, ಇಂಥ ಆಚರಣೆಗಳನ್ನು ಕೊನೆಗಾಣಿಸಬೇಕು ಎಂದು ಕರೆಕೊಡುತ್ತದೆ.’
‘2001ರಲ್ಲೇ ಸಂಘಟನೆ ನಿಷೇಧಿಸಿದ್ದರೂ, ಈಗಲೂ ಅದು ಕರ್ನಾಟಕ, ಆಂಧ್ರ, ಬಿಹಾರ, ಗುಜರಾತ್, ಕೇರಳ ಮಹಾರಾಷ್ಟ್ರ ಸೇರಿದಂತೆ ಹಲವು ರಾಜ್ಯಗಳಲ್ಲಿ ಸಕ್ರಿಯವಾಗಿದೆ. ಹಲವು ರಾಜ್ಯಗಳಲ್ಲಿ ಬೇರೆ ಬೇರೆ ಹೆಸರುಗಳ ಮೂಲಕ ಸಂಘಟನೆ ಕಾರ್ಯಾಚರಣೆ ನಡೆಸುತ್ತಿದೆ. ಅದರ ಕಾರ್ಯಕರ್ತರು ಇತರೆ ಸಂಘಟನೆಗಳ ಹೆಸರಲ್ಲಿ ಮತ್ತೆ ಒಂದಾಗಿದ್ದಾರೆ. ಸಂಘಟನೆ ತನ್ನ ಕಾರ್ಯಕರ್ತರ ಮೂಲಕ ಪಾಕಿಸ್ತಾನ, ಅಷ್ಘಾನಿಸ್ತಾನ, ಸೌದಿ ಅರೇಬಿಯಾ, ಬಾಂಗ್ಲಾದೇಶ, ನೇಪಾಳ ಮತ್ತು ಇತರೆ ಕೆಲ ದೇಶಗಳಲ್ಲಿನ ಕೆಲ ಮತೀಯ ಮತ್ತು ಉಗ್ರ ಸಂಘಟನೆಗಳ ಜೊತೆ ನಂಟುಹೊಂದಿದೆ.’
ಇದನ್ನೂ ಓದಿ: ಸಿಮಿ ಇನ್ನೊಂದು ಮುಖ ಪಿಎಫ್‌ಐ: ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ
‘ಹಿಜ್ಬುಲ್ ಮುಜಾಹಿದೀನ್, ಲಷ್ಕರ್‌ನಂಥ ಪಾಕ್ ಮೂಲಕ ಉಗ್ರ ಸಂಘಟನೆಗಳು ಸಿಮಿ ಸಂಘಟನೆಯಲ್ಲಿ ನುಸುಳುವ ಮೂಲಕ ಭಾರತದಲ್ಲಿ ದೇಶ ವಿರೋಧಿ ಕೆಲಸಗಳನ್ನು ನಡೆಸುವಲ್ಲಿ ಯಶಸ್ವಿಯಾಗಿವೆ. ಭಾರತದಲ್ಲಿ ಇಸ್ಲಾಮಿಕ್ ಆಡಳಿತ ಸ್ಥಾಪಿಸಲು ಮುಸ್ಲಿಮರ ಬೆಂಬಲ ಪಡೆಯಲು ಸಂಘಟನೆ ದೇಶವ್ಯಾಪಿ ಆಂದೋಲನ ಆರಂಭಿಸಿದೆ. ಕುರಾನ್‌ನಲ್ಲಿರುವ ಅಂಶಗಳ ಅನ್ವಯ ಜನರು ಜೀವನ ನಡೆಸುವಂತೆ ಮಾಡುವುದು, ಇಸ್ಲಾಂ ಆಚರಣೆ ಉತ್ತೇಜಿಸುವುದು, ಧರ್ಮಕ್ಕಾಗಿ ಜಿಹಾದ್, ರಾಷ್ಟ್ರೀಯತೆಯ ವಿನಾಶ, ಇಸ್ಲಾಮಿಕ್ ಆಡಳಿತ ಸ್ಥಾಪನೆಯ ಗುರಿಯನ್ನು ಸಂಘಟನೆ ಹಾಕಿಕೊಂಡಿದೆ. ಹೀಗಿರುವಾಗ ಸಂಘಟನೆ ಮೇಲಿನ ನಿಷೇಧ ಹಿಂದಕ್ಕೆ ಪಡೆಯುವುದು ದೇಶದ ಭದ್ರತೆ ಮತ್ತು ಸಾರ್ವಭೌಮತಕ್ಕೆ ಅಪಾಯ ತರಲಿದೆ’ ಎಂದು ಕೇಂದ್ರ ಸರ್ಕಾರ ಅಫಿಡವಿಟ್‌ನಲ್ಲಿ ಕಳವಳ ವ್ಯಕ್ತಪಡಿಸಿದೆ.
ಈ ಅಫಿಡವಿಟ ಸಲ್ಲಿಕೆ ಬಳಿಕ ವಾದಿ-ಪ್ರತಿವಾದಿಗಳು ವಿಚಾರಣೆ ಮುಂದೂಡಿಕೆ ಕೋರಿದ ಹಿನ್ನೆಲೆಯಲ್ಲಿ, ನ್ಯಾಯಾಲಯ ವಿಚಾರಣೆಯನ್ನು ಮುಂದಿನ ತಿಂಗಳಿಗೆ ಮುಂದೂಡಿತು.
ಇದನ್ನು ಓದಿ: ಕರ್ನಾಟಕದವರೂ ಸೇರಿ 122 ಶಂಕಿತ ಸಿಮಿ ಸದಸ್ಯರು ಖುಲಾಸೆ!
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ