
ಲಂಡನ್ : ಸುಮಾರು 9,000 ಕೋಟಿ ರೂಪಾಯಿಗಳ ಬ್ಯಾಂಕ್ ಸಾಲ ವಂಚನೆ ಮತ್ತು ಅಕ್ರಮ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ದೇಶಭ್ರಷ್ಟ ಉದ್ಯಮಿ ವಿಜಯ್ ಮಲ್ಯ, ಭಾರತೀಯ ತನಿಖಾ ಸಂಸ್ಥೆಗಳು ಹಾಗೂ ಸರ್ಕಾರದ ವಿರುದ್ಧ ತಮ್ಮ 'ಎಕ್ಸ್' (ಟ್ವಿಟರ್) ಖಾತೆಯಲ್ಲಿ ತೀವ್ರ ಆಕ್ರೋಶ ಹೊರಹಾಕಿದ್ದಾರೆ. ಇತ್ತೀಚೆಗೆ ದೇಶದಲ್ಲಿ 'ಕಾಕ್ರೋಚ್ ಜನತಾ ಪಾರ್ಟಿ' ನಡೆಸಿದ ಅನ್ಯಾಯದ ವಿರುದ್ಧದ ಪ್ರತಿಭಟನೆಯನ್ನು ಪರೋಕ್ಷವಾಗಿ ಉಲ್ಲೇಖಿಸಿರುವ ಅವರು, "ನನ್ನ ಜೀವನದಲ್ಲಿ ಅನುಭವಿಸಿದ ಮತ್ತು ಎದುರಿಸುತ್ತಿರುವ ಅನ್ಯಾಯವನ್ನು ನೋಡಿದರೆ, ನಾನೂ ಜಿರಳೆಯಾಗಬೇಕಿತ್ತೇ ಅನಿಸುತ್ತದೆ. ಬಹುಶಃ ಜಿರಳೆಯಾಗಿ ಬದುಕುವುದು ಉತ್ತಮವೇನೋ" ಎಂದು ವ್ಯಂಗ್ಯವಾಡಿದ್ದಾರೆ. ತಮ್ಮ ವಿರುದ್ಧದ ಕಾನೂನು ಕ್ರಮಗಳನ್ನು ಪ್ರಶ್ನಿಸಿ ಸರಣಿ ಪೋಸ್ಟ್ ಮಾಡಿರುವ ಮಲ್ಯ, ಜಾರಿ ನಿರ್ದೇಶನಾಲಯ (ಇ.ಡಿ) ಜತೆಗಿನ ತಮ್ಮ ಹಳೆಯ ವಿವಾದ ಹಾಗೂ ಸಾಲ ಮರುಪಾವತಿಯ ವಿಚಾರವನ್ನು ಮತ್ತೆ ಪ್ರಸ್ತಾಪಿಸಿದ್ದಾರೆ.
ಜಾರಿ ನಿರ್ದೇಶನಾಲಯವು ಬಾಂಬೆ ಹೈಕೋರ್ಟ್‌ನಲ್ಲಿ ಸಲ್ಲಿಸಿದ ಅಫಿಡವಿಟ್ ಅನ್ನು ಉಲ್ಲೇಖಿಸಿರುವ ಮಲ್ಯ, ಇ.ಡಿ ಸಲ್ಲಿಸಿರುವ ಅಧಿಕೃತ ದಾಖಲೆ ಪ್ರಕಾರ, 2021ರಲ್ಲೇ ನನ್ನ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಂಡು ಸುಮಾರು 14,131.60 ಕೋಟಿ ರೂಪಾಯಿಗಳನ್ನು ವಿವಿಧ ಬ್ಯಾಂಕ್‌ಗಳಿಗೆ ವರ್ಗಾಯಿಸಲಾಗಿದೆ. ಮೂಲ ಸಾಲಕ್ಕಿಂತ ಹೆಚ್ಚಿನ ಮೊತ್ತವನ್ನು ಬ್ಯಾಂಕ್‌ಗಳು ವಸೂಲಿ ಮಾಡಿಕೊಂಡಿದ್ದರೂ, ಕಳೆದ ಐದು ವರ್ಷಗಳಿಂದ ನನ್ನನ್ನು ಇಂದಿಗೂ ವಂಚಕ ಮತ್ತು ದೇಶಭ್ರಷ್ಟ ಎಂದು ಬಿಂಬಿಸುತ್ತಿರುವುದು ದುರಂತ. ಸಾಲ ತೀರುವಳಿಯಲ್ಲಿ ನ್ಯಾಯಯುತ ಲೆಕ್ಕಪತ್ರ ಸಲ್ಲಿಕೆಯಾಗುತ್ತಿಲ್ಲ, ಹೆಚ್ಚುವರಿಯಾಗಿ ಮುಟ್ಟುಗೋಲು ಹಾಕಿಕೊಂಡ ಹಣದಿಂದ ನನಗೆ ಎಷ್ಟು ಮರುಪಾವತಿಯಾಗಬೇಕಿದೆ ಎಂಬುದನ್ನು ಮಾಧ್ಯಮಗಳು ಪ್ರಶ್ನಿಸುತ್ತಿಲ್ಲ ಎಂದು ದೂರಿದ್ದಾರೆ.
ತಮಗೆ ನೀಡಿರುವ ಪಲಾಯನಗೈದ ಆರೋಪಿ ಎಂಬ ಹಣೆಪಟ್ಟಿಯನ್ನು ಬಲವಾಗಿ ವಿರೋಧಿಸಿರುವ ಅವರು, ಸಾಲ ಮರುಪಾವತಿಯು ಭಾರತದಲ್ಲಿನ ತಮ್ಮ ಭೌತಿಕ ಉಪಸ್ಥಿತಿಯ ಮೇಲೆ ಅವಲಂಬಿತವಾಗಿರಬಾರದು ಎಂದು ವಾದಿಸಿದ್ದಾರೆ. ನಾನು 1992ರಿಂದ ಯುನೈಟೆಡ್ ಕಿಂಗ್‌ಡಮ್‌ನ (UK) ಶಾಶ್ವತ ನಿವಾಸಿಯಾಗಿದ್ದೇನೆ. ಬ್ರಿಟನ್‌ನಲ್ಲಿ ನಡೆಯುತ್ತಿರುವ ಕಾನೂನು ಪ್ರಕ್ರಿಯೆಗಳು ನನ್ನನ್ನು ಈ ದೇಶ ತೊರೆಯದಂತೆ ತಡೆದಿವೆ. ಹೀಗಿದ್ದರೂ ನನ್ನನ್ನು ಭಾರತಕ್ಕೆ ಬರಲು ನಿರಾಕರಿಸುತ್ತಿರುವ ಭಗೋಡ ಎಂದು ಕರೆಯಲಾಗುತ್ತಿದೆ. ಶಾಶ್ವತ ನಿವಾಸ ಮತ್ತು ಪೌರತ್ವದ ನಡುವಿನ ವ್ಯತ್ಯಾಸವನ್ನು ಜನರು ಅರ್ಥೈಸಿಕೊಳ್ಳಬೇಕು ಎಂದು ಹೇಳಿದ್ದಾರೆ.
ಭಾರತದಲ್ಲಿ 2018ರ ದೇಶಭ್ರಷ್ಟ ಆರ್ಥಿಕ ಅಪರಾಧಿಗಳ ಕಾಯ್ದೆಯಡಿಯಲ್ಲಿ ‘ದೇಶಭ್ರಷ್ಟ ಅಪರಾಧಿ’ ಎಂದು ಘೋಷಿಸಲ್ಪಟ್ಟ 15 ಜನರಲ್ಲಿ ವಿಜಯ್ ಮಲ್ಯ ಮತ್ತು ನೀರವ್ ಮೋದಿ ಪ್ರಮುಖರು. ಈ ವಿಚಾರವಾಗಿ ಬಾಂಬೆ ಹೈಕೋರ್ಟ್‌ನಲ್ಲಿ ಮಲ್ಯ ಸಲ್ಲಿಸಿರುವ ಅರ್ಜಿಯ ವಿಚಾರಣೆ ವೇಳೆ ನ್ಯಾಯಾಲಯವು ಅವರನ್ನು ತೀವ್ರ ತರಾಟೆಗೆ ತೆಗೆದುಕೊಂಡಿತ್ತು. "ನ್ಯಾಯಾಲಯದ ವಿಚಾರಣೆಗಳನ್ನು ಉದ್ದೇಶಪೂರ್ವಕವಾಗಿ ತಪ್ಪಿಸಿಕೊಳ್ಳುತ್ತಿರುವ ವ್ಯಕ್ತಿಗೆ ಯಾವುದೇ ತಡೆಯಾಜ್ಞೆ ಅಥವಾ ಪರಿಹಾರ ನೀಡಲು ಸಾಧ್ಯವಿಲ್ಲ" ಎಂದು ಹೇಳಿದ್ದ ಹೈಕೋರ್ಟ್, ಭಾರತಕ್ಕೆ ಹಿಂತಿರುಗುವ ಬಗ್ಗೆ ತಮ್ಮ ಸ್ಪಷ್ಟ ನಿಲುವನ್ನು ತಿಳಿಸಲು ಅಂತಿಮ ಅವಕಾಶವನ್ನು ನೀಡಿತ್ತು.
ಕರ್ನಾಟಕ, ಭಾರತ (India News) ಮತ್ತು ಜಗತ್ತಿನ ಕ್ಷಣಕ್ಷಣದ ಕನ್ನಡ ಸುದ್ದಿ (Kannada News) ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. ಬ್ರೇಕಿಂಗ್ ಸುದ್ದಿ (Latest Kannada News), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ (kannada news live) ಸಂಪೂರ್ಣ ಮಾಹಿತಿ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗು ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ