ಗುಜರಾತ್‌ನ ಅಮ್ರೇಲಿಯಲ್ಲಿ ವ್ಯಕ್ತಿಯೊಬ್ಬರ ಮನೆಯ ಗೋಡೆಗೆ ಏರಿದ ಸಿಂಹ ಅಡುಗೆ ಕೋಣೆಯಲ್ಲಿ ಇಣುಕಿ ನೋಡಿದೆ. ಕೊವಯಾ ಪ್ರದೇಶದ ಹಮಿರ್‌ಭಾಯ್ ಲಖನೊತ್ರಾ ಅವರ ಮನೆಯಲ್ಲಿ ಈ ಘಟನೆ ನಡೆದಿದ್ದು, ಸಿಂಹ ಮನೆಯೊಳಗಿರುವ ವೀಡಿಯೋ ವೈರಲ್ ಆಗಿದೆ.
ಗುಜರಾತ್: ಗುಜರಾತ್‌ನ ಅಮ್ರೇಲಿ ಪ್ರದೇಶದಲ್ಲಿ ಏಷ್ಯಾಟಿಕ್ ಸಿಂಹಗಳು ಸಾಮಾನ್ಯ ಎನಿಸಿವೆ. ಜನರು ಓಡಾಡುವ ಜಾಗದಲ್ಲಿ ಇವುಗಳು ಕೂಡ ಶ್ವಾನಗಳು, ಹಸುಗಳಂತೆ ಓಡಾಡುತ್ತಾ ಸಾಮರಾಸ್ಯದಿಂದ ಬದುಕುತ್ತಿವೆ. ಇಲ್ಲಿಯ ಜನರಿಗೂ ಸಿಂಹಗಳೆಂದರೆ ಯಾವುದೇ ಭಯವಿಲ್ಲ, ಇಲ್ಲಿನ ಹೊಲಗಳಲ್ಲಿ ಕೃಷಿ ಕೆಲಸ ಮಾಡುವ ವೇಳೆ ಸಿಂಹಗಳು ಅಲ್ಲಲ್ಲಿ ಕಾಣಿಸಿಕೊಂಡು ತಮ್ಮಷ್ಟಕ್ಕೇ ತಾವಿರುತ್ತವೆ. ಮನುಷ್ಯರು ಕೂಡ ಅವುಗಳ ಸುದ್ದಿಗೆ ಹೋಗುವುದಿಲ್ಲ, ಅವುಗಳು ಕೂಡ ಮನುಷ್ಯರ ಸಹವಾಸಕ್ಕೆ ಬರುವುದಿಲ್ಲ, ಹೀಗಿರುವಾಗ ಸಿಂಹವೊಂದು ವ್ಯಕ್ತಿಯೊಬ್ಬರ ಮನೆಯ ಗೋಡೆಗೆ ಏರಿ, ಅಡುಗೆ ಕೋಣೆಯಲ್ಲಿ ಇಣುಕಿ ನೋಡುತ್ತಿರುವ ವೀಡಿಯೋವೊಂದು ಈಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.
ಗುಜರಾತ್‌ನ ಕೊವಯಾ ಪ್ರದೇಶದ ಮನೆಯೊಂದರಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ನಿವಾಸಿಯಾದ ಹಮಿರ್‌ಭಾಯ್ ಲಖನೊತ್ರಾ ಎಂಬುವವರ ಮನೆಯ ಗೋಡೆ ಏರಿದ ಸಿಂಹ ನಂತರ ಅಡುಗೆ ಮನೆಯಲ್ಲಿ ಇಣುಕಾಡಿ ನಂತರ ಒಳಗೆ ಬಂದಿದೆ. ಮಂಗಳವಾರ ರಾತ್ರಿ ಈ ಘಟನೆ ನಡೆದಿದ್ದು, ಸಿಂಹ ಮನೆಯೊಳಗಿರುವ ವೀಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಿದೆ. ಅಡುಗೆ ಮನೆಯ ಗೋಡೆಯ ಮೇಲೆ ಕುಳಿತು ಅಡುಗೆ ಮನೆಯೊಳಗೆ ಇಣುಕುತ್ತಿದ್ದ ಸಿಂಹದ ಸದ್ದು ಮನೆಯವರಿಗೂ ಕೇಳಿಸಿದೆ. ಮೊದಲಿಗೆ ಅವರು ಯಾವುದೋ ಬೆಕ್ಕು ಇರಬಹುದು ಎಂದು ಭಾವಿಸಿದ್ದಾರೆ. ಆದರೆ ಟಾರ್ಚ್ ಹಿಡಿದು ನೋಡಿದಾಗ ಅದು ಸಿಂಹ ಎಂಬುದು ತಿಳಿದು ಬಂದಿದ್ದು, ಅವರು ಹೌಹಾರಿದ್ದಾರೆ.
ವೀಡಿಯೋದಲ್ಲಿ ಜನ ಅಡುಗೆ ಮನೆಯ ಗೋಡೆಯ ಮೇಲೆ ಕುಳಿತ ಸಿಂಹದ ಮೇಲೆ ಟಾರ್ಚ್ ಲೈಟ್ ಬಿಡುತ್ತಿರುವುದನ್ನು ನೋಡಬಹುದು. ಬೆಳಕು ಮೊದಲಿಗೆ ಸಿಂಹದ ಬಾಲದ ಮೇಲೆ ಬಿದ್ದಿತು. ನಂತರ, ಅಲ್ಲಿ ಕುಳಿತಿದ್ದ ಸಿಂಹ ಮನೆಯೊಳಗೆ ಇಣುಕುತ್ತಿರುವುದನ್ನು ವೀಡಿಯೊ ಸೆರೆಹಿಡಿದಿದೆ. ಅದರ ಕಣ್ಣುಗಳು ಕತ್ತಲೆಯಲ್ಲಿ ಹೊಳೆಯುತ್ತಿದ್ದವು. ವರದಿಗಳ ಪ್ರಕಾರ, ಸಿಂಹವು ಹತ್ತಿರದ ಕಾಡಿನಿಂದ ತಪ್ಪಿಸಿಕೊಂಡು ಬಂದು ವಸತಿ ಪ್ರದೇಶದಲ್ಲಿ ಸುತ್ತಾಡಿ ಲಖನೋತ್ರ ಅವರ ಅಡುಗೆಮನೆಗೆ ಬಂದಿದೆ.
ವೀಡಿಯೋದಲ್ಲಿ ಕಾಣುವಂತೆ ಸಿಂಹವು ಯಾರ ಮೇಲೂ ದಾಳಿ ಮಾಡದೆ ಸುಮ್ಮನೆ ಕುಳಿತಿರುವುದು ಕಾಣುತ್ತಿದೆ. ಆದರೂ ದಾಳಿಯ ಭಯದಿಂದಾಗಿ, ಸಿಂಹ ಹೊರಬರುವುದನ್ನು ಖಚಿತಪಡಿಸಿಕೊಳ್ಳುವವರೆಗೂ ಕುಟುಂಬ ಸದಸ್ಯರು ತಮ್ಮ ಮನೆಯಿಂದ ಹೊರಗೆಯೇ ಇದ್ದರೂ. ಸ್ವಲ್ಪ ಸಮಯದ ನಂತರ ಸಿಂಹ ಯಾರಿಗೂ ಹಾನಿ ಮಾಡದೇ ಅದೇ ಮಾರ್ಗದ ಮೂಲಕ ಹೊರಟು ಹೋಗಿದೆ.
ಗುಜರಾತ್‌ನ ಕೆಲ ಪ್ರದೇಶಗಳಲ್ಲಿ ಸಿಂಹಗಳು ಸಾಮಾನ್ಯವಾಗಿವೆ. ಮತ್ತೊಂದು ವೀಡಿಯೊದಲ್ಲಿ, ಸಿಂಹವು ಸ್ಥಳೀಯ ದೇವಾಲಯದ ಬಳಿ ಅಲೆದಾಡುತ್ತಿರುವ ವೀಡಿಯೋವೊಂದು ವೈರಲ್ ಆಗಿದೆ. ಗುಜರಾತ್‌ನ ಅಮ್ರೇಲಿಯಲ್ಲಿರುವ ಲಕ್ಷ್ಮಿನಾರಾಯಣ ದೇವಾಲಯದ ಪಕ್ಕದಲ್ಲಿ ಪ್ರಾಣಿ ಆರಾಮವಾಗಿ ತಿರುಗಾಡುತ್ತಿರುವುದನ್ನು ತೋರಿಸುವ ವೀಡಿಯೊವನ್ನು ಟ್ವಿಟ್ಟರ್ ಬಳಕೆದಾರ @sphere10 ಎಂಬುವವರು ಈ ಹಿಂದೆ ಪೋಸ್ಟ್ ಮಾಡಿದ್ದರು.
ವೈರಲ್ ಆದ ಸಿಂಹದ ವೀಡಿಯೋ ಇಲ್ಲಿದೆ ನೋಡಿ:
અમરેલી- દેશની શાન ગણાતા સાવજો હવે જંગલમાં નહીં પરંતુ લોકોના ઘર સુધી પોંહચીયા pic.twitter.com/vJ8q90MfBS
— JKS_NEWS_GUJARATI (@news_jks)